Please enable javascript.ಸ್ವಿಸ್ ಬ್ಯಾಂಕ್ ಹಣ: ಭಾರತಕ್ಕೆ 61ನೇ ಸ್ಥಾನ - Swiss bank money: India ranked 61 - Vijay Karnataka

ಸ್ವಿಸ್ ಬ್ಯಾಂಕ್ ಹಣ: ಭಾರತಕ್ಕೆ 61ನೇ ಸ್ಥಾನ

ವಿಕ ಸುದ್ದಿಲೋಕ 22 Jun 2015, 4:44 am
Subscribe

ಸ್ವಿಸ್ ಬ್ಯಾಂಕ್‌ಗಳಲ್ಲಿ ವಿದೇಶಿಯರು ಹೊಂದಿರುವ ಹಣದ ಪಟ್ಟಿಯಲ್ಲಿ ಭಾರತ 61ನೇ ಸ್ಥಾನಕ್ಕೆ ಕುಸಿದಿದೆ. ಸ್ವಿಜರ್‌ಲೆಂಡ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇರುವ 1.6 ಲಕ್ಷ ಕೋಟಿ ಡಾಲರ್ ಜಾಗತಿಕ ಸಂಪತ್ತಿನ ಪೈಕಿ ಭಾರತದ ಪಾಲು ಕೇವಲ ಶೇ.0.123(12,615 ಕೋಟಿ ರೂ.)ರಷ್ಟಿದೆ. ಆದರೆ, ಬ್ರಿಟನ್ ಮತ್ತು ಅಮೆರಿಕ ಮೊದಲೆರಡು ಸ್ಥಾನದಲ್ಲಿವೆ.

swiss bank money india ranked 61
ಸ್ವಿಸ್ ಬ್ಯಾಂಕ್ ಹಣ: ಭಾರತಕ್ಕೆ 61ನೇ ಸ್ಥಾನ
ಜುರಿಚ್: ಸ್ವಿಸ್ ಬ್ಯಾಂಕ್‌ಗಳಲ್ಲಿ ವಿದೇಶಿಯರು ಹೊಂದಿರುವ ಹಣದ ಪಟ್ಟಿಯಲ್ಲಿ ಭಾರತ 61ನೇ ಸ್ಥಾನಕ್ಕೆ ಕುಸಿದಿದೆ. ಸ್ವಿಜರ್‌ಲೆಂಡ್ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇರುವ 1.6 ಲಕ್ಷ ಕೋಟಿ ಡಾಲರ್ ಜಾಗತಿಕ ಸಂಪತ್ತಿನ ಪೈಕಿ ಭಾರತದ ಪಾಲು ಕೇವಲ ಶೇ.0.123(12,615 ಕೋಟಿ ರೂ.)ರಷ್ಟಿದೆ. ಆದರೆ, ಬ್ರಿಟನ್ ಮತ್ತು ಅಮೆರಿಕ ಮೊದಲೆರಡು ಸ್ಥಾನದಲ್ಲಿವೆ. ವೆಸ್ಟ್ ಇಂಡೀಸ್ 3, ಗರ್ನ್‌ಸೆ 4, ಜರ್ಮನಿ 5, ಬಹಮಾಸ್ 6, ಲಕ್ಸಮ್‌ಬರ್ಗ್ 7, ಫ್ರಾನ್ಸ್ 8, ಜೆರ್ಸಿ 9 ಮತ್ತು ಹಾಂಕಾಂಗ್ 10ನೇ ಸ್ಥಾನದಲ್ಲಿದೆ. ಪಾಕಿಸ್ತಾನ 73ನೇ ಸ್ಥಾನ ಪಡೆದಿದೆ.

ಗಮನಾರ್ಹ ಸಂಗತಿ ಎಂದರೆ, ದೊಡ್ಡ ಬ್ಯಾಂಕ್‌ಗಳೆನಿಸಿರುವ ಯುಬಿಎಸ್ ಮತ್ತು ‘ಕ್ರೆಡಿಟ್ ಸ್ಯೂಸ್’ಗಳಲ್ಲೇ ವಿದೇಶಿಯರು ಹೊಂದಿರುವ ಒಟ್ಟು ಸ್ವತ್ತಿನ ಸುಮಾರು ಶೇ.70ರಷ್ಟು ಭಾಗ ಇದೆ. ಈ ಎರಡು ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಹಣದ ಪಾಲು ಶೇ.82ರಷ್ಟಿದೆ.

ಸ್ವಿಜರ್‌ಲೆಂಡ್‌ನ ಕೇಂದ್ರ ಬ್ಯಾಂಕ್ ‘ಸ್ವಿಸ್ ನ್ಯಾಷನಲ್ ಬ್ಯಾಂಕ್’ ಇತ್ತೀಚೆಗೆ ಬಿಡುಗಡೆ ಮಾಡಿರುವ ದತ್ತಾಂಶದ ಪ್ರಕಾರ, ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರು ಇಟ್ಟಿರುವ ಹಣದಲ್ಲಿ ಶೇ.10ರಷ್ಟು ಕಡಿಮೆಯಾಗಿ, 1.98 ಶತಕೋಟಿ ಡಾಲರ್(12,615 ಕೋಟಿ ರೂ.)ಗೆ ತಗ್ಗಿದೆ.

ಸ್ವಿಸ್ ನ್ಯಾಷನಲ್ ಬ್ಯಾಂಕ್ ಹೇಳುತ್ತಿರುವ ಪ್ರಕಾರ, ಸ್ವಿಜರ್‌ಲೆಂಡ್ ಬ್ಯಾಂಕ್‌ಗಳಲ್ಲಿರುವ ಗ್ರಾಹಕರ ಬಾಕಿ ಹಣ ಇದಾಗಿದೆ. ಅಂದರೆ, ಸ್ವಿಸ್ ಬ್ಯಾಂಕ್‌ಗಳ ಬಾಧ್ಯತೆಯ ಮೊತ್ತ ಇದು. ಇದೊಂದು ಅಧಿಕೃತ ಅಂಕಿಅಂಶವೇ ಹೊರತು ವ್ಯಾಪಕ ಚರ್ಚೆಗೆ ಗ್ರಾಸವಾಗಿರುವ ಭಾರತೀಯರ ಕಪ್ಪು ಹಣದ ಮೊತ್ತ ಅಲ್ಲ. ಜತೆಗೆ, ಭಾರತೀಯರು ಅಥವಾ ಇತರರು ಸಂಸ್ಥೆಗಳ ಹೆಸರಿನಲ್ಲಿ ಹೊಂದಿರಬಹುದಾದ ಹಣ ಇದರಲ್ಲಿ ಸೇರಿಲ್ಲ ಎಂದು ಸ್ವಿಸ್ ನ್ಯಾಷನಲ್ ಬ್ಯಾಂಕ್ ಸ್ಪಷ್ಟಪಡಿಸಿದೆ.

ಸ್ವಿಸ್ ನ್ಯಾಷನಲ್ ಬ್ಯಾಂಕ್‌ನ ಇತ್ತೀಚಿನ ದತ್ತಾಂಶದ ವಿಶ್ಲೇಷಣೆಯ ಪ್ರಕಾರ, ಸ್ವಿಸ್‌ನ ದೊಡ್ಡ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣ 1.48 ಶತಕೋಟಿ ಸ್ವಿಸ್ ಫ್ರಾಂಕ್‌ನಷ್ಟಿದೆ. ಕಳೆದ ವರ್ಷ ಅದು 1.36 ಶತಕೋಟಿ ಸ್ವಿಸ್ ಫ್ರಾಂಕ್ ಇತ್ತು.

2014ರ ಅಂತ್ಯದ ವೇಳೆಗೆ ಸ್ವಿಜರ್‌ಲೆಂಡ್‌ನಲ್ಲಿ ಒಟ್ಟು 275 ಬ್ಯಾಂಕ್‌ಗಳು ಕಾರ್ಯಾಚರಣೆ ನಡೆಸುತ್ತಿದ್ದವು. ಅವುಗಳಲ್ಲಿ ಯುಬಿಎಸ್ ಮತ್ತು ಕ್ರೆಡಿಟ್ ಸ್ಯೂಸ್ ಅನ್ನು ದೊಡ್ಡ ಬ್ಯಾಂಕ್‌ಗಳೆಂದು ವರ್ಗೀಕರಿಸಲಾಗಿದೆ. ಇವಲ್ಲದೆ, ವಿದೇಶಿ ನಿಯಂತ್ರಣದ ಬ್ಯಾಂಕ್‌ಗಳು ಸಹ ಸ್ವಿಜರ್‌ಲೆಂಡ್‌ನಲ್ಲಿ ಕಾರ್ಯ ನಿರ್ವಹಿಸುತ್ತಿವೆ.

ಇವೆರಡು ದೊಡ್ಡ ಬ್ಯಾಂಕ್‌ಗಳಲ್ಲಿ ಪಾಕಿಸ್ತಾನ ಇಟ್ಟಿರುವ ಹಣ 472 ದಶಲಕ್ಷ ಸ್ವಿಸ್ ಫ್ರಾಂಕ್‌ನಷ್ಟಿದೆ. ಪಾಕಿಸ್ತಾನ ಸ್ವಿಜರ್‌ಲೆಂಡ್‌ನ ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 1.3 ಶತಕೋಟಿ ಸ್ವಿಸ್ ಫ್ರಾಂಕ್ ಹಣ ಹೊಂದಿದೆ.

ಬ್ರಿಟನ್ ರಾಷ್ಟ್ರವೊಂದೇ ಸ್ವಿಸ್ ಬ್ಯಾಂಕ್‌ಗಳಲ್ಲಿರುವ ವಿದೇಶಿಯರ ಒಟ್ಟು ಹಣದ ಶೇ.22 ಪಾಲು ಹೊಂದಿದೆ. ಟಾಪ್ ಸ್ಥಾನದಲ್ಲಿರುವ ನಾಲ್ಕು ರಾಷ್ಟ್ರಗಳು ಒಟ್ಟು ಸಂಪತ್ತಿನ ಶೇ.50ಕ್ಕಿಂತ ಹೆಚ್ಚಿನ ಹಣ ಹೊಂದಿವೆ ಎಂಬುದು ಗಮನಾರ್ಹ. 2014ರ ಅಂತ್ಯಕ್ಕೆ ಅನ್ವಯವಾಗುವಂತೆ, ಅವುಗಳ ಒಟ್ಟು ಹಣದ ಮೊತ್ತ 102 ಲಕ್ಷ ಕೋಟಿ ರೂ.ಇದೆ.

8.2 ಶತಕೋಟಿ ಸ್ವಿಸ್ ಫ್ರಾಂಕ್ ಹಣ ಇಟ್ಟಿರುವ ಚೀನಾ 26ನೇ ಸ್ಥಾನದಲ್ಲಿದೆ. ಸಿಂಗಾಪುರ, ಇಟಲಿ, ಜಪಾನ್, ಆಸ್ಟ್ರೇಲಿಯಾ, ರಷ್ಯಾ, ಸಂಯುಕ್ತ ಅರಬ್ ಎಮಿರೇಟ್ಸ್, ಸೌದಿ ಅರೇಬಿಯಾ, ನೆದರ್‌ಲ್ಯಾಂಡ್ಸ್, ಬೆಲ್ಜಿಯಂ, ಸ್ಪೇನ್, ಇಸ್ರೇಲ್ ಮತ್ತು ಸೈಪ್ರಸ್ ರಾಷ್ಟ್ರಗಳು ಭಾರತಕ್ಕಿಂತ ಹೆಚ್ಚಿನ ಸ್ವತ್ತು ಹೊಂದಿವೆ.

2014ರ ಅಂತ್ಯಕ್ಕೆ ಅನ್ವಯವಾಗುವಂತೆ, ಸ್ವಿಸ್ ಬ್ಯಾಂಕ್‌ಗಳಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು 854 ಶತಕೋಟಿ ಸ್ವಿಸ್ ಫ್ರಾಂಕ್, ಸಾಗರದಾಚೆಯ ಕೇಂದ್ರಗಳು 415 ಶತಕೋಟಿ ಸ್ವಿಸ್ ಫ್ರಾಂಕ್ ಹಾಗೂ ಅಭಿವೃದ್ಧಿಶೀಲ ರಾಷ್ಟ್ರಗಳು ಒಟ್ಟಾರೆ 207 ಶತಕೋಟಿ ಸ್ವಿಸ್ ಫ್ರಾಂಕ್ ಹಣ ಹೊಂದಿವೆ.

ಐರೋಪ್ಯ ಒಕ್ಕೂಟ 900 ಶತಕೋಟಿ ಸ್ವಿಸ್ ಫ್ರಾಂಕ್, ಏಷ್ಯಾ-ಪೆಸಿಫಿಕ್ ವಲಯ 500 ಶತಕೋಟಿ ಸ್ವಿಸ್ ಫ್ರಾಂಕ್ ಹಣ ಇಟ್ಟಿದೆ. ಅಮೆರಿಕ ಒಂದೇ 244 ಶತಕೋಟಿ ಸ್ವಿಸ್ ಫ್ರಾಂಕ್ ಹಣ ಹೊಂದಿದೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ