Please enable javascript.ಕಾನೂನು, ಆಡಳಿತ ಯಂತ್ರಗಳಾಗಬಾರದಲ್ಲವೇ? - ಕಾನೂನು, ಆಡಳಿತ ಯಂತ್ರಗಳಾಗಬಾರದಲ್ಲವೇ? - Vijay Karnataka

ಕಾನೂನು, ಆಡಳಿತ ಯಂತ್ರಗಳಾಗಬಾರದಲ್ಲವೇ?

Vijaya Karnataka Web 19 Apr 2012, 5:36 am
Subscribe

ಕೊನೆಯ ಕ್ಷಣದಲ್ಲಿ ಸರಕಾರ ಉಲ್ಟಾ ಹೊಡೆಯಿತು. ಬಾಲ್ಯ ವಿವಾಹದ ಕಾರಣ ಮುಂದಿಟ್ಟು ಹುದ್ದೆ ನಿರಾಕರಿಸಿತು. ಎರಡು ಬಾರಿ ಪರೀಕ್ಷೆ ಬರೆದರೂ ಸರಕಾರದ್ದು ಇದೇ ಉತ್ತರ.

ಕಾನೂನು, ಆಡಳಿತ ಯಂತ್ರಗಳಾಗಬಾರದಲ್ಲವೇ?
* ಎ. ಕೃಷ್ಣ ಭಟ್
ಬಾಲ್ಯ ವಿವಾಹವಾಗಿದ್ದಾಳೆಂಬ ಕಾರಣಕ್ಕೆ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಗೆದ್ದ ಸರಕಾರಿ ಹುದ್ದೆಯನ್ನೇ ನಿರಾಕರಿಸುವ ಮಧ್ಯಪ್ರದೇಶ ಸರಕಾರದ ನಿರ್ಧಾರ ಮತ್ತು ಅದಕ್ಕೆ ಪೂರಕವಾಗಿ ಸ್ಪಂದಿಸಿರುವ ಹೈಕೋರ್ಟ್‌ನ ತೀರ್ಪು ಆಡಳಿತ ಮತ್ತು ಕೋರ್ಟ್ ವ್ಯವಸ್ಥೆಗಳ ಯಾಂತ್ರಿಕ ನಡವಳಿಕೆ ಮತ್ತು ಅಮಾನವೀಯ ವರ್ತನೆಗೆ ಸಾಕ್ಷಿ. ಒಂದು ಕಾನೂನಿನ ವಿವೇಚನಾರಹಿತ ಬಳಕೆಗೂ ಇದು ಉದಾಹರಣೆ.

ರತ್ನರಾಶಿ ಪಾಂಡೆಯನ್ನು 14ನೇ ವಯಸ್ಸಿನಲ್ಲಿ ಹೆತ್ತವರು ಮದುವೆ ಮಾಡಿಕೊಟ್ಟಿದ್ದರು. 13 ವರ್ಷಗಳ ಬಳಿಕ ದೈಹಿಕ, ಮಾನಸಿಕ ಹಿಂಸೆಯಿಂದ ನೊಂದು ವಿಚ್ಚೇದನೆ ಪಡೆದ ಪಾಂಡೆ ಇಬ್ಬರು ಮಕ್ಕಳ ತಾಯಿ. ಗಂಡನಿಂದ ಒಂದು ಪೈಸೆಯೂ ಮಾಸಾಶನ ಬರುತ್ತಿಲ್ಲ. ಹೀಗಿದ್ದರೂ ನೋವು, ಕಷ್ಟಗಳ ಮಹಾಪರಂಪರೆ ಮುಗಿದು ಅವರು ಹೊಸಬಾಳಿನ ನಿರೀಕ್ಷೆಯಲ್ಲಿದ್ದರು. ಯಾಕೆಂದರೆ, ಮಧ್ಯಪ್ರದೇಶ ರಾಜ್ಯ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ ಆಕೆ ಉತ್ತೀರ್ಣರಾಗಿದ್ದು ಮಾತ್ರವಲ್ಲ ಸಂದರ್ಶನದ ಮೂಲಕ ಹುದ್ದೆಯನ್ನು ಪಡೆದಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಸರಕಾರ ಉಲ್ಟಾ ಹೊಡೆಯಿತು. ಬಾಲ್ಯ ವಿವಾಹದ ಕಾರಣ ಮುಂದಿಟ್ಟು ಹುದ್ದೆ ನಿರಾಕರಿಸಿತು. ಎರಡು ಬಾರಿ ಪರೀಕ್ಷೆ ಬರೆದರೂ ಸರಕಾರದ್ದು ಇದೇ ಉತ್ತರ. ಸಾಲದ್ದಕ್ಕೆ ಮಧ್ಯಪ್ರದೇಶ ಹೈಕೋರ್ಟ್ ಕೂಡಾ ಸರಕಾರದ ನಿಲುವನ್ನೇ ಎತ್ತಿ ಹಿಡಿಯಿತು.

ಸರಕಾರ ಮತ್ತು ಹೈಕೋರ್ಟ್‌ಗಳು ಪಾಂಡೇ ವಿರುದ್ಧವಾಗಿ ನಿಲ್ಲಲು ಕಾರಣವಾದದ್ದು ಒಂದು ಕಾನೂನು. ಮಾ. 10, 2005ರಂದು ಜಾರಿಗೆ ಬಂದ ನಿಯಮ 6(5)ರ ಪ್ರಕಾರ, ಮದುವೆಗೆ ನಿಗದಿಯಾದ ಕನಿಷ್ಠ ವಯಸ್ಸಿಗಿಂತ ಮೊದಲು ವಿವಾಹವಾದ ಗಂಡಾಗಲೀ ಹೆಣ್ಣಾಗಲಿ ಸರಕಾರಿ ಹುದ್ದೆಗೆ ನೇಮಕಗೊಳ್ಳಲು ಅರ್ಹರಲ್ಲ ಎನ್ನುವುದೇ ಆ ನಿಯಮ. ಬಾಲ್ಯ ವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಸರಕಾರ ದಿಟ್ಟ ಹೆಜ್ಜೆ ಇಟ್ಟು ತಂದ ಕಾನೂನು ಇದು ಎನ್ನುವುದು ಸತ್ಯ. ಆದರೆ, ಕಾನೂನು ಎನ್ನುವುದು ಎಚ್ಚರಿಕೆಯಾಗಿ ಬಳಕೆಯಾಗಬೇಕು, ತಪ್ಪಿದರೆ ಶಿಕ್ಷೆಗೆ ಅವಕಾಶ ಇರಬೇಕು. ಆದರೆ, ಯಾವತ್ತೂ ಅಮಾನವೀಯವಾಗಿ ನಡೆದುಕೊಳ್ಳಬಾರದು.

ಮಧ್ಯಪ್ರದೇಶದಲ್ಲಿ ಆಗಿರುವುದು ಇದೇ. ರತ್ನರಾಶಿ ಪಾಂಡೆಗೆ ಮದುವೆಯಾಗಿದ್ದು 13 ವರ್ಷಗಳ ಹಿಂದೆ. ಸರಕಾರದ ಕಾನೂನು ಜಾರಿಗೆ ಬಂದಿದ್ದು 2005ರಲ್ಲಿ. ಹಾಗಿರುವಾಗ ಆಕೆಗೆ ಈ ಕಾನೂನೇ ಅನ್ವಯವಾಗುವುದಿಲ್ಲ. ಅಷ್ಟಕ್ಕೂ ಬಾಲ್ಯ ವಿವಾಹದ ಹೆಚ್ಚಿನ ಸಂದರ್ಭದಲ್ಲಿ ಹುಡುಗಿಯರು ಬಲಿಪಶುಗಳೇ ಹೊರತು ಅಪರಾಗಳಲ್ಲ. ಹೆತ್ತವರ ಬಲವಂತದಿಂದ ಮದುವೆಯಾಗಿರುವ ಹುಡುಗಿಯರು ಸಂಕಟಪಡುವುದೇ ಹೆಚ್ಚು. ಇಲ್ಲೂ ಆಗಿದ್ದು ಅದೇ. ಜತೆಗೆ, ಈಗ ಗಂಡನಿಂದಲೂ ದೂರವಾಗಿದ್ದಾಳೆ. ಇಂಥಹ ಮಹಿಳೆಗೆ ಖುದ್ದು ಸರಕಾರ ಮತ್ತೊಮ್ಮೆ ಶಿಕ್ಷೆ ನೀಡಲು ಹೊರಟಿದೆ.

ಇನ್ನೂ ಒಂದು ಪ್ರಮುಖ ವಿಚಾರವೆಂದರೆ, ಬಾಲ್ಯ ವಿವಾಹದ ಸಂಕಷ್ಟ, ಗಂಡನ ಮಾನಸಿಕ, ದೈಹಿಕ ಹಿಂಸೆ, ದಾರಿ ಕಾಣದ ಬದುಕಿನ ನಡುವೆಯೂ ಛಲ ಬಿಡದೆ ಓದಿದ ರತ್ನರಾಶಿ ಪಾಂಡೆ ಎರಡು ಬಾರಿ ಸರ್ವಿಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಹುದ್ದೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಆಕೆ ಬಾಲ್ಯ ವಿವಾಹವಾಗಿದ್ದಾರೆ ಎನ್ನುವುದನ್ನು ಅಷ್ಟು ಆಳಕ್ಕಿಳಿದು ಪರಿಶೀಲಿಸಿದ ಸರಕಾರ, ಆಕೆಯ ಸಾಧನೆಯನ್ನು ಯಾಕೆ ಮರೆತುಬಿಟ್ಟಿತು. ನಿಜವೆಂದರೆ, ಸರಕಾರ ಸಹಾನುಭೂತಿಯ ನೆಲೆಯಲ್ಲಾದರೂ ಆಕೆಯನ್ನು ಪ್ರೋತ್ಸಾಹಿಸಬೇಕಾಗಿತ್ತು.

ಈ ಅಡಳಿತ, ನ್ಯಾಯ ವ್ಯವಸ್ಥೆಗಳೇ ಹೀಗೆ, ಕೆಲವೊಮ್ಮೆ ವಿವೇಚನೆಯೇ ಇಲ್ಲದಂತೆ ವರ್ತಿಸುತ್ತವೆ. ಉತ್ತಮ ಉದ್ದೇಶದ ಕಾನೂನು ಯಾಂತ್ರಿಕ ಅಳವಡಿಕೆಯಿಂದಾಗಿ ತಿರುಗುಬಾಣವಾಗುತ್ತದೆ. ಒಂದು ವ್ಯವಸ್ಥೆಯಲ್ಲಿ ಎಲ್ಲವನ್ನೂ ಕೂಲಂಕಷವಾಗಿ ಪರಾಂಬರಿಸಲು ಕಷ್ಟವೆಂಬ ಕಾರಣಕ್ಕಾಗಿ ಸರಕಾರ ಆರಂಭದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಕಣ್ತಪ್ಪು ಎಂದು ಪರಿಗಣಿಸಬಹುದು. ಆದರೆ, ಎರಡನೇ ಬಾರಿ ನಿರಾಕರಿಸುವ, ಪ್ರಶ್ನಿಸಿದರೂ ತಿದ್ದಿಕೊಳ್ಳದ ನಿಲುವು ಅಮಾನವೀಯ. ಅದನ್ನು ಸಮರ್ಥಿಸಿದ ನ್ಯಾಯಾಲಯ ಕೂಡಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡದ್ದೇ ನಿಜ.

ಇದೀಗ ಸು.ಕೋರ್ಟ್ ಮಧ್ಯಪ್ರವೇಶ ಮಾಡಿರುವುದರಿಂದ ರತ್ನರಾಶಿ ಪಾಂಡೆಗೆ ನ್ಯಾಯ ಸಿಗುವ ನಿರೀಕ್ಷೆಗಳಿವೆ. ಮತ್ತು ಸಿಗಬೇಕು ಕೂಡಾ. ಇಲ್ಲವಾದರೆ, ತಾನು ಆಕ್ಷೇಪಿಸಲು ಸಾಧ್ಯವೇ ಇಲ್ಲದ, ಆಕ್ಷೇಪಣೆಗೆ ಅವಕಾಶವೇ ಇಲ್ಲದ ಕಾಲದಲ್ಲಿ ಬಾಲ್ಯ ವಿವಾಹವಾಗಿ ಅನ್ಯಾಯಕ್ಕೆ ಒಳಗಾದ, ಗಂಡನಿಂದಲೂ ನೆಮ್ಮದಿ ಸಿಗದ ಆಕೆಗೆ ಮತ್ತೊಮ್ಮೆ ಸರಕಾರ, ಕೋರ್ಟ್‌ಗಳೇ ಅನ್ಯಾಯ ಮಾಡಿದಂತಾಗುತ್ತದೆ.

ಎಲ್ಲಕ್ಕಿಂತ ಹೆಚ್ಚಾಗಿ ಆಡಳಿತ ವ್ಯವಸ್ಥೆ ಮಾನವೀಯವಾಗಬೇಕು, ಕಾನೂನಿನ ಸಾಧಕ-ಬಾಧಕಗಳನ್ನು ಪರಿಗಣಿಸಬೇಕು. ಇಲ್ಲವಾದರೆ, ಅತ್ಯಾಚಾರ ಮಾಡಿದವನಿಗೇ ಹೆಣ್ಮಗಳನ್ನು ಮದುವೆ ಮಾಡುವ, ಏಡ್ಸ್‌ಪೀಡಿತರ ಮಕ್ಕಳಿಗೆ ಶಾಲೆ ನಿರಾಕರಿಸುವ ಅಮಾನವೀಯ ಅಂಧಾ ಕಾನೂನಿಗೂ ನಾಗರಿಕ ಸಮಾಜದ ಕಾನೂನುಗಳಿಗೂ ವ್ಯತ್ಯಾಸವೇ ಇರುವುದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ