ಆ್ಯಪ್ನಗರ

ದೇವಸ್ಥಾನ ಧ್ವಜಕ್ಕೂ ಅಧಿಕಾರಿಗಳಿಂದ ಅಡ್ಡಿ: ಆಯೋಗಕ್ಕೆ ಬಿಜೆಪಿ ದೂರು

ರಾಜ್ಯದಲ್ಲಿ ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಯುವಂತಾಗಲು ಮತ್ತು ಚುನಾವಣಾ ಪ್ರಚಾರಕ್ಕೆ ಅಧಿಕಾರಿಗಳಿಂದ ಅಡ್ಡಿ-ತೊಂದರೆ ತಪ್ಪಿಸಲು ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.

Vijaya Karnataka Web 10 Apr 2018, 3:27 pm
ಬೆಂಗಳೂರು: ರಾಜ್ಯದಲ್ಲಿ ಮುಕ್ತ, ನ್ಯಾಯ ಸಮ್ಮತ ಹಾಗೂ ಶಾಂತಿಯುತ ಚುನಾವಣೆ ನಡೆಯುವಂತಾಗಲು ಮತ್ತು ಚುನಾವಣಾ ಪ್ರಚಾರಕ್ಕೆ ಅಧಿಕಾರಿಗಳಿಂದ ಅಡ್ಡಿ-ತೊಂದರೆ ತಪ್ಪಿಸಲು ಕ್ರಮ ತೆಗೆದುಕೊಳ್ಳುವಂತೆ ಬಿಜೆಪಿ ಚುನಾವಣಾ ಆಯೋಗಕ್ಕೆ ಮನವಿ ಮಾಡಿದೆ.
Vijaya Karnataka Web BJPO


ಬೆಂಗಳೂರಿನಲ್ಲಿ ಮಂಗಳವಾರ ಕೇಂದ್ರ ಸಚಿವರಾದ ಅನಂತಕುಮಾರ್, ಪ್ರಕಾಶ್ ಜಾವ್ಡೇಕರ್, ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಮುರಳೀಧರ್‌ರಾವ್, ಮಾಜಿ ಸಚಿವರಾದ ಆರ್.ಅಶೋಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ವಕ್ತಾರರಾದ ಅಶ್ವಥ್‌ನಾರಾಯಣ್, ಸಹ ವಕ್ತಾರರಾದ ಎಸ್.ಪ್ರಕಾಶ್, ಎ.ಹೆಚ್.ಆನಂದ್ ಅವರನ್ನೊಳಗೊಂಡ ನಿಯೋಗ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.

ಭೇಟಿ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಆರ್.ಅಶೋಕ ಅವರು, ಹಿಂದೂ ದೇವಾಲಯಗಳಲ್ಲಿ ಧ್ವಜಗಳನ್ನು ತೆಗೆಸುತ್ತಿರುವುದು ಪ್ರಸ್ತಾಪಿಸಲಾದ ವಿಷಯವನ್ನು ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಯಿತು. ಧಾರ್ಮಿಕ ಸ್ಥಳಗಳಲ್ಲಿ ಧ್ವಜಗಳನ್ನು ತೆಗೆಯಲು ಅವಕಾಶವಿಲ್ಲ. ಇಂತಹ ಯಾವುದೇ ಪ್ರಕರಣ ನಡೆದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.

ಕೊಡಗು, ದಕ್ಷಿಣಕನ್ನಡ, ಬೆಂಗಳೂರು, ಚಿಕ್ಕಮಗಳೂರು ಮತ್ತಿತರ ಜಿಲ್ಲೆಗಳಲ್ಲಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಗಡೀಪಾರು ಮಾಡುತ್ತಿರುವ ವಿಷಯವನ್ನು ಮುಖ್ಯ ಚುನಾವಣಾ ಅಧಿಕಾರಿಗಳ ಗಮನಕ್ಕೆ ತರಲಾಯಿತು. ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಮುಖ್ಯ ಚುನಾವಣಾಧಿಕಾರಿ ಹೇಳಿದ್ದಾರೆ.

ಪಕ್ಷದ ಕಾರ್ಯಕರ್ತರು ತಮ್ಮ ಮನೆ, ಕಟ್ಟಡಗಳ ಮೇಲೆ ಬರೆದಿರುವ ಪಕ್ಷದ ಪರ ಬರಹ ಹಾಗೂ ಪಕ್ಷದ ಧ್ವಜಗಳನ್ನು ಅಧಿಕಾರಿಗಳು ತೆಗೆಸುತ್ತಿರುವ ವಿಷಯವನ್ನು ಮುಖ್ಯ ಚುನಾವಣಾಧಿಕಾರಿಗಳ ಗಮನಕ್ಕೆ ತರಲಾಯಿತು. ಈ ವಿಷಯದಲ್ಲಿ ಮನೆ ಮಾಲೀಕರಿಗೆ ಅಧಿಕಾರಿಗಳು ಮೊದಲೇ ನೋಟಿಸ್ ನೀಡುವಂತೆ ಸೂಚಿಸಲಾಗುವುದು ಎಂಬುದಾಗಿ ಅವರು ಹೇಳಿದ್ದಾರೆ.

ಮುಷ್ಠಿಧಾನ್ಯ ಅಭಿಯಾನದಲ್ಲಿ ರೈತರಿಂದ ಸಂಗ್ರಹಿಸಿರುವ ಧಾನ್ಯದ ಅಡುಗೆಯ ಸಾಮೂಹಿಕ ಸೇವನೆ ಕಾರ್ಯಕ್ರಮಕ್ಕೆ ಅಧಿಕಾರಿಗಳಿಂದ ಅಡ್ಡಿಯಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಕಾಂಗ್ರೆಸ್ ಪಕ್ಷ ಅನೇಕ ಆಮಿಷಗಳನ್ನು ಒಡ್ಡಿ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ತಮಗೆ ಬೇಕಾದವರನ್ನು ಆಯಕಟ್ಟಿನ ಜಾಗದಲ್ಲಿ ಕೂರಿಸಿ ಚುನಾವಣೆ ಗೆಲ್ಲಲು ಹತಾಶ ಪ್ರಯತ್ನ ಮಾಡುತ್ತಿದೆ. ಈ ಅಧಿಕಾರಿಗಳು ಪಕ್ಷದ ಪ್ರಚಾರಕ್ಕೆ ಅಡ್ಡಿಯುಂಟು ಮಾಡಿ, ಕಾರ್ಯಕರ್ತರಿಗೆ ಅನಗತ್ಯ ಕಿರುಕುಳ ನೀಡುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಹೊಸಪೇಟೆಯಲ್ಲಿ ಇಂದು ಯಡಿಯೂರಪ್ಪ ಅವರಿದ್ದ ಹೆಲಿಕಾಪ್ಟರ್ ಇಳಿಯುವುದಕ್ಕೆ ಅಡ್ಡಿ ಪಡಿಸಲಾಗಿದೆ. ಹೆಲಿಕಾಪ್ಟರ್ ಇಳಿಯಲು ಮೊದಲೇ ಅನುಮತಿ ಪಡೆದಿದ್ದರೂ ಅನಗತ್ಯ ತೊಂದರೆ ನೀಡಲಾಗಿದೆ. ಈ ಎಲ್ಲ ವಿಷಯಗಳನ್ನು ಆಯೋಗದ ಗಮನಕ್ಕೆ ತರಲಾಗಿದೆ. ಯಾವುದೇ ನಿರ್ದಿಷ್ಟ ಪ್ರಕರಣಗಳಿದ್ದರೆ ‘ಸಮಾಧಾನ್ ವೆಬ್‌ಸೈಟ್‌ನಲ್ಲಿ ದೂರು ಸಲ್ಲಿಸುವಂತೆ ಮುಖ್ಯ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ ಎಂದು. ಅಶೋಕ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌