ಆ್ಯಪ್ನಗರ

ಮಕ್ಕಳ ಕಥೆ: ಕಾಗೆ ಕೊಟ್ಟ ಸಲಹೆ

ದೊಡ್ಡ ಬೆಟ್ಟದ ತಪ್ಪಲಿನಲ್ಲಿರುವ ಉತ್ತನಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ನಾಲ್ಕು ನಾಯಿಗಳಿದ್ದವು...

Vijaya Karnataka 16 Jun 2019, 12:00 am
ಬನ್ನೂರು ಕೆ.ರಾಜು
Vijaya Karnataka Web kids story1111


ದೊಡ್ಡ ಬೆಟ್ಟದ ತಪ್ಪಲಿನಲ್ಲಿರುವ ಉತ್ತನಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ನಾಲ್ಕು ನಾಯಿಗಳಿದ್ದವು. ಅವು ಒಂದೇ ಕಡೆ ಇದ್ದರೂ ಒಂದನ್ನು ಕಂಡರೆ ಮತ್ತೊಂದಕ್ಕೆ ಆಗುತ್ತಿರಲಿಲ್ಲ. ಸದಾ ಒಂದಕ್ಕೊಂದು ದ್ವೇಷದಿಂದ ಕಚ್ಚಾಡುತ್ತಿದ್ದವು. ಆದರೂ ಅವು ಜೊತೆಯಲ್ಲೇ ಇರುತ್ತಿದ್ದವು. ಜೊತೆಯಲ್ಲೇ ಮಲಗುತ್ತಿದ್ದವು. ಕಚ್ಚಾಡಿಕೊಂಡು ಜೊತೆಯಲ್ಲೇ ತಿನ್ನುತ್ತಿದ್ದವು.

ಒಮ್ಮೆ ದೊಡ್ಡ ಬೆಟ್ಟದ ಮೇಲಿದ್ದ ಹಸಿದ ಚಿರತೆಯೊಂದು ಆಹಾರ ಹುಡುಕಿ ಉತ್ತನಹಳ್ಳಿಗೆ ಬಂತು. ಅಲ್ಲಿ ನಾಲ್ಕು ನಾಯಿಗಳನ್ನು ಕಂಡೊಡನೆ ಅದರ ಬಾಯಲ್ಲಿ ನೀರೂರತೊಡಗಿತು. 'ಅಬ್ಬಾ, ನಾನಿಂದು ಬೆಟ್ಟದಿಂದ ಕೆಳಗಿಳಿದು ಬಂದದಕ್ಕೆ ಸಾರ್ಥಕವಾಯಿತು. ಒಳ್ಳೆ ಬೇಟೆಗಳೇ ನನ್ನ ಕಣ್ಣ ಮುಂದಿವೆ' ಎಂದು ನಾಯಿಗಳನ್ನು ಬೇಟೆಯಾಡಲು ಹೊಂಚು ಹಾಕಿತು. ಅವುಗಳು ಕಚ್ಚಾಡುತ್ತಿದ್ದಾಗ ಚಿರತೆ ಅವುಗಳ ಮೇಲೆ ಎಗರಿತು.

ದಿಢೀರನೆ ದಾಳಿ ಮಾಡಿದ ಚಿರತೆಯನ್ನು ನೋಡಿ ಹೆದರಿದ ನಾಲ್ಕೂ ನಾಯಿಗಳು ಒಂದೊಂದು ಕಡೆ ದಿಕ್ಕಾಪಾಲಾಗಿ ಓಡಿದವು. ಓಡಿ ಓಡಿ ಸುಸ್ತಾದ ಒಂದು ನಾಯಿ ಚಿರತೆ ಬಾಯಿಗೆ ಸಿಕ್ಕಿಬಿತ್ತು. ಚಿರತೆ ಅದನ್ನು ಕಚ್ಚಿಕೊಂಡು ಬೆಟ್ಟದ ಮೇಲಕ್ಕೆ ಹೋಗಿ ತಿಂದು ಮುಗಿಸಿ 'ಇನ್ನೂ ಮೂರು ನಾಯಿಗಳಿವೆ. ದಿನಕ್ಕೊಂದರಂತೆ ಬೇಟೆಯಾಡಿದರೂ ಇನ್ನೂ ಮೂರು ದಿನ ನನಗೆ ಆಹಾರದ ಕೊರತೆಯಿಲ್ಲ' ಎಂದು ಬೆಟ್ಟದ ಮೇಲೆ ಗೊರಕೆ ಹೊಡೆಯುತ್ತಾ ಆರಾಮವಾಗಿ ಮಲಗಿಕೊಂಡಿತು.

ಇತ್ತ ಚಿರತೆಗೆ ಹೆದರಿ ದಿಕ್ಕೆಟ್ಟು ಎತ್ತೆತ್ತಲೋ ಓಡಿ ಹೋಗಿದ್ದ ಮೂರು ನಾಯಿಗಳೂ ಒಂದು ಕಡೆ ಸೇರಿ ಚಿರತೆ ಬಾಯಿಗೆ ತುತ್ತಾದ ಇದುವರೆಗೆ ತಮ್ಮೊಡನಿದ್ದ ನಾಯಿಯ ಸಾವಿಗೆ ದುಃಖಿಸಿದವು. ಆ ಚಿರತೆ ಮತ್ತೆ ಇಲ್ಲಿಗೆ ತಮ್ಮನ್ನು ತಿನ್ನಲು ಬಂದೇ ಬರುತ್ತದೆಂದು ಊಹಿಸಿಕೊಂಡೇ ಮೂರು ನಾಯಿಗಳು ಭಯದಿಂದ ನಡುಗತೊಡಗಿದವು. ಹೆದರಿಕೆಯಿಂದ ಅವು ರಾತ್ರಿಯಿಡೀ ನಿದ್ರೆ ಮಾಡಲಿಲ್ಲ. ಬೆಳಗಾಗುತ್ತಿದ್ದಂತೆಯೇ ಅವು ಒಂದು ಮರದ ಕೆಳಗೆ ಸೇರಿಕೊಂಡು ಚಿರತೆಯಿಂದ ತಮ್ಮ ಪ್ರಾಣಗಳನ್ನು ಉಳಿಸಿಕೊಳ್ಳುವುದರ ಬಗ್ಗೆ ಚಿಂತಿಸತೊಡಗಿದವು.

ಈ ನಾಯಿಗಳ ಮಾತುಗಳನ್ನು ಕೇಳಿಸಿಕೊಂಡ ಕಾಗೆಯೊಂದು 'ಮೂರ್ಖ ನಾಯಿಗಳೆ, ನೀವು ಕಚ್ಚಾಡುವುದನ್ನು ಬಿಟ್ಟು ಒಗ್ಗಟ್ಟಾಗಿ ನಿನ್ನೆಯೇ ಆ ಚಿರತೆ ಮೇಲೆ ಪ್ರತಿದಾಳಿ ನಡೆಸಿದ್ದರೆ ನಿಮ್ಮೊಡನಿದ್ದ ಆ ನಾಯಿಯೂ ಬದುಕುಳಿಯುತ್ತಿತ್ತು. ಒಗ್ಗಟ್ಟಿಲ್ಲದೆ ನೀವೇ ಅದನ್ನು ಚಿರತೆ ಬಾಯಿಗೆ ತಳ್ಳಿದಿರಿ. ನೀವು ಮೂವರೂ ಕಚ್ಚಾಡುವುದನ್ನು ಬಿಟ್ಟು ಇನ್ನಾದರೂ ಒಗ್ಗಟ್ಟಾಗಿ ಆ ಚಿರತೆಯನ್ನು ಎದುರಿಸಿ ನಿಮ್ಮ ಜೀವ ಉಳಿಸಿಕೊಳ್ಳಿ' ಎಂದು ಹೇಳಿತು.

ಕಾಗೆಯ ಮಾತು ಕೇಳಿ ಮೂರು ನಾಯಿಗಳಿಗೂ ಜ್ಞಾನೋದಯವಾಯಿತು. ಆ ನಾಯಿಗಳು ಚಿರತೆಯನ್ನು ಎದುರಿಸಲು ಸಿದ್ಧವಾಗುತ್ತಿದ್ದಂತೆಯೇ ಚಿರತೆ ಅವುಗಳ ಮೇಲೆ ದಾಳಿ ಮಾಡಿತು. ತಕ್ಷ ಣ ಮೂರು ನಾಯಿಗಳೂ ಒಂದಾಗಿ ಅದರ ಮೇಲೆ ಪ್ರತಿದಾಳಿ ನಡೆಸಿದವು. ಇದನ್ನು ನೀರಿಕ್ಷಿಸದ ಚಿರತೆ ತತ್ತರಿಸಿ ಹೋಯಿತು. ಒಂದೇ ಸಮನೆ ಮೂರು ನಾಯಿಗಳೂ ಚಿರತೆಯನ್ನು ಕಚ್ಚ ತೊಡಗಿದಾಗ ಸದ್ಯ ತನ್ನ ಪ್ರಾಣ ಉಳಿಸಿಕೊಂಡರೆ ಸಾಕೆಂದು ಚಿರತೆ ಭಯದಿಂದ ಬೆಟ್ಟದತ್ತ ಓಡಿತು. ತಮ್ಮ ಒಗ್ಗಟ್ಟಿನ ಶಕ್ತಿಗೆ ತಾವೇ ಮೆಚ್ಚಿಕೊಂಡ ಮೂರು ನಾಯಿಗಳೂ ಸಲಹೆ ಕೊಟ್ಟ ಕಾಗೆಗೆ ಮನಸ್ಸಿನಲ್ಲೇ ವಂದಿಸಿದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ