Please enable javascript.ಕಿಡ್ಸ್ ಕ್ರಾಫ್ಟ್: ಮಾವಿನ ವಾಟೆ ಅಕ್ವೇರಿಯಂ - Kids' Craft - Vijay Karnataka

ಕಿಡ್ಸ್ ಕ್ರಾಫ್ಟ್: ಮಾವಿನ ವಾಟೆ ಅಕ್ವೇರಿಯಂ

Vijaya Karnataka Web 13 Mar 2016, 4:36 am
Subscribe

ಸಕ್ಕರೆಗುತ್ತಿಯಂಥ ಸಿಹಿ ಮಾವಿನ ಹಣ್ಣನ್ನು ತಿಂದು ಅದರ ವಾಟೆಯನ್ನು ಕಸದ ಬುಟ್ಟಿಗೆ ಎಸೆಯುವವರೇ ಹೆಚ್ಚು. ಆದರೆ ನಾವು ಮನಸ್ಸು ಮಾಡಿದರೆ ಈ ಪುಟ್ಟ ಪುಟ್ಟ ವಾಟೆಯಿಂದ ಚೆಂದನೆಯ ಅಲಂಕಾರಿಕ ವಸ್ತುಗಳನ್ನು ಮಾಡಲು ಸಾಧ್ಯವಿದೆ

kids craft
ಕಿಡ್ಸ್ ಕ್ರಾಫ್ಟ್: ಮಾವಿನ ವಾಟೆ ಅಕ್ವೇರಿಯಂ
ಸಕ್ಕರೆಗುತ್ತಿಯಂಥ ಸಿಹಿ ಮಾವಿನ ಹಣ್ಣನ್ನು ತಿಂದು ಅದರ ವಾಟೆಯನ್ನು ಕಸದ ಬುಟ್ಟಿಗೆ ಎಸೆಯುವವರೇ ಹೆಚ್ಚು. ಆದರೆ ನಾವು ಮನಸ್ಸು ಮಾಡಿದರೆ ಈ ಪುಟ್ಟ ಪುಟ್ಟ ವಾಟೆಯಿಂದ ಚೆಂದನೆಯ ಅಲಂಕಾರಿಕ ವಸ್ತುಗಳನ್ನು ಮಾಡಲು ಸಾಧ್ಯವಿದೆ. ಇಲ್ಲಿ ನಿಮಗೆ ವಾಟೆಯಿಂದ ಮೀನು ಮಾಡಿ ಅಕ್ವೇರಿಯಂ ತಯಾರಿಸುವ ವಿಧಾನವನ್ನು ನೀಡಲಾಗಿದೆ.

ಬೇಕಾಗುವ ಸಾಮಗ್ರಿ

ಸಕ್ಕರೆಗುತ್ತಿ ಮಾವಿನ ಹಣ್ಣಿನ ವಾಟೆ-5, ವಿವಿಧ ಬಣ್ಣಗಳ ವಾಟರ್ ಪೇಂಟ್‌ಗಳು, ಬ್ರಶ್, ಒಂದೆರಡು ಬಣ್ಣಗಳ ಸ್ಕೆಚ್ ಪೆನ್‌ಗಳು, ಆಯಾತಾಕಾರದ ರಟ್ಟಿನ ದಪ್ಪನೆಯ ಡಬ್ಬ, ಸ್ವಲ್ಪ ಸ್ಯಾಂಡ್ ಪೇಪರ್, ಬಬಲ್ಸ್ ಇರುವ ಬಿಳಿ ಪ್ಯಾಕಿಂಗ್ ಪೇಪರ್ (ಮೊಬೈಲ್ ಟೀವಿಗಳಿಗೆ ಪ್ಯಾಕ್ ಮಾಡಿರುವ ಮೆತ್ತನೆಯ ಹಾಳೆ), ಪಾರದರ್ಶಕವಾದ ತೆಳು ಪ್ಲಾಸ್ಟಿಕ್ ಪೇಪರ್, ಒಂದು ಬಿಳಿ ಪೇಪರ್, ಡಬಲ್ ಸ್ಟಿಕ್ಕರ್, ಅಂಟು, ಸೆಲ್ಲೊ ಟೇಪ್.

ಮಾಡುವ ವಿಧಾನ

1. ಚೆನ್ನಾಗಿ ರಸ ಹಿಂಡಿದ ವಾಟೆಯನ್ನು ನಲ್ಲಿ ನೀರಿನ ಕೆಳಗಿಟ್ಟುಕೊಂಡು ಹಳೆಯ ಟೂತ್ ಬ್ರಶ್‌ನಿಂದ ಅದರ ನಾರನ್ನೆಲ್ಲಾ ಚೆನ್ನಾಗಿ ಉಜ್ಜಿ, ಅಂಟಿಕೊಂಡಿರುವ ರಸ ಹೋಗುವಂತೆ ತೊಳೆಯಿರಿ.

2. ಬಳಿಕ ವಾಟೆಗಳನ್ನು ಬಿಸಿಲಿನಲ್ಲಿ ಎರಡೂ ಕಡೆ ಒಣಗಿಸಿ. ಇದಕ್ಕಿಂತ ಮೊದಲು ವಾಟೆಗಳನ್ನು ಒಂದು ಬಟ್ಟೆಯಿಂದ ಒರೆಸಿ ಇಟ್ಟರೆ ಬೇಗ ಒಣಗುತ್ತದೆ.

3. ಒಣಗಿದ ನಂತರ ವಾಟೆಯಲ್ಲಿರುವ ನಾರನ್ನು ಬಾಚಣಿಗೆಯಿಂದ ಬಾಚಿ ನೆಟ್ಟಗೆ ಮಾಡಿ ವಿವಿಧ ರೀತಿಯ ಮೀನುಗಳ ಆಕಾರಕ್ಕೆ ಬರುವಂತೆ ಮಾಡಿ.

4. ವಾಟರ್ ಪೇಂಟ್ ಮತ್ತು ಬ್ರಶ್‌ನಿಂದ ಮಾವಿನ ಹಣ್ಣಿನ ತೊಟ್ಟಿರುವ ಕಡೆ ಮೀನಿನ ಬಾಯಿಯಂತೆ, ಸ್ವಲ್ಪ ಹಿಂದಕ್ಕೆ ಕಣ್ಣು, ಅದರ ರೆಕ್ಕೆಗಳಿಗೆ ಬೇರೆ ಬೇರೆ ಬಣ್ಣಗಳಿಂದ ವಿವಿಧ ಡಿಸೈನ್‌ಗಳಲ್ಲಿ ಮೈ ಭಾಗಕ್ಕೆ ವಾಟರ್ ಪೇಂಟ್ ಮಾಡಿ ಒಣಗಿಸಿ. ಸಣ್ಣ ವಾಟೆಯಿದ್ದರೆ ಮೀನಿನ ಮರಿಯಂತೆ ಪೇಂಟ್ ಮಾಡಿ.

5. ಈಗ ರಟ್ಟಿನ ಡಬ್ಬಿಯ ಒಳಗೆ ಬಿಳಿ ಪೇಪರ್ ಅಂಟಿಸಿ. ಕೆಳಗಡೆ ಸ್ಯಾಂಡ್ ಪೇಪರನ್ನು ಸ್ವಲ್ಪ ಅಂಕುಡೊಂಕಾಗಿ ಕತ್ತರಿಸಿ ಅಂಟಿಸಿದರೆ ಅಕ್ವೇರಿಯಂ ಬಾಕ್ಸ್ ಒಳಗಡೆ ಮರಳು ಹಾಸಿದಂತೆ ಕಾಣುತ್ತದೆ.

6. ಅದರ ಮೇಲಿರುವ ಬಿಳಿ ಕಾಗದದ ಮೇಲೆ ನೀರಿನ ಅಲೆಗಳಂತೆ ನೀಲಿ ಸ್ಕೆಚ್ ಪೆನ್‌ನಿಂದ ಬರೆಯಿರಿ. ಜೊತೆಗೆ ವಿವಿಧ ರೀತಿಯ ಸಣ್ಣ ಗಿಡಗಳು, ಎಲೆಗಳ ಚಿತ್ರ ಬರೆಯಿರಿ. ಕೆಂಪು, ಹಳದಿ ಬಣ್ಣದ ಪೆನ್‌ನಿಂದ ಹೂವುಗಳನ್ನು ಬರೆಯಿರಿ.

7. ಇದರ ಮೇಲೆ ಬಬಲ್ಸ್ ಪೇಪರ್ ಇಟ್ಟು ಅಂಚಿನ ಸುತ್ತಾ ಸೆಲ್ಲೊ ಟೇಪ್‌ನಿಂದ ಅಂಟಿಸಿ. ಈಗ ಪ್ರತಿ ಮೀನಿನ ಕೆಳಗೆ ಡಬಲ್ ಸ್ಟಿಕ್ಕರ್ ಅಂಟಿಸಿ ಬಾಕ್ಸ್ ಒಳಗಡೆ ನಿಮಗಿಷ್ಟವಾದ ರೀತಿಯಲ್ಲಿ ಅಂಟಿಸಿ.

8. ಕೊನೆಗೆ ಬಾಕ್ಸ್‌ನ ಅಂಚಿನ ಮೇಲೆ ಸುತ್ತಲೂ ಡಿಸೈನ್ ಬಿಡಿಸಿ. ನಂತರ ಇದರ ಮೇಲೆ ತೆಳು ಪಾರದರ್ಶಕವಾದ ಪ್ಲಾಸ್ಟಿಕ್ ಪೇಪರ್ ಅಂಟಿಸಿ. ಮೇಲಿನಿಂದ ಒಂದು ತೂತು ಮಾಡಿ ವಯರ್ ತೂರಿಸಿ ನೀಲಿ ಬಣ್ಣದ ಸಣ್ಣ ಬಲ್ಪ್ ಹಾಕಿ. ಈಗ ಮೀನಿನ ಅಕ್ವೇರಿಯಂ ರೆಡಿ.

- ಲೀಲಾ ಚಂದ್ರಶೇಖರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ