ಆ್ಯಪ್ನಗರ

ಜಿಎಸ್‌ಟಿಯಿಂದ ರಾಜ್ಯಕ್ಕೆ ಲಾಭ

ಸಂತೋಷ್‌ ಸಸಿಹಿತ್ಲು ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮುಂದಿನ ವರ್ಷದ ಏಪ್ರಿಲ್‌ 1ರಿಂದ ಜಾರಿಗೆ ಬರಲು ಬಹುತೇಕ ವೇದಿಕೆ ಸಿದ್ಧವಾಗಿದೆ...

Vijaya Karnataka Web 29 Oct 2016, 4:00 am

* ವಾಗೀಶ್‌ ಕುಮಾರ್‌ ಜಿ. ಎ.

ಬಹು ನಿರೀಕ್ಷಿತ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮುಂದಿನ ವರ್ಷದ ಏಪ್ರಿಲ್‌ 1ರಿಂದ ಜಾರಿಗೆ ಬರಲು ಬಹುತೇಕ ವೇದಿಕೆ ಸಿದ್ಧವಾಗಿದೆ. ಈ ಏಕ ರೂಪದ ತೆರಿಗೆ ವ್ಯವಸ್ಥೆಯಿಂದ ಕರ್ನಾಟಕದಂತಹ ರಾಜ್ಯದಲ್ಲಿ ಕಟ್ಟಡ ನಿರ್ಮಾಣ ಖರ್ಚು ಕಡಿಮೆಯಾಗಲಿದೆ ಎಂದು ರಿಯಾಲ್ಟಿ ರೇಟಿಂಗ್‌ ಏಜೆನ್ಸಿ ಐಸಿಆರ್‌ಎ ಅಭಿಪ್ರಾಯ ಪಟ್ಟಿದೆ. ಒಟ್ಟಾರೆ ಜಿಎಸ್‌ಟಿ ಯಾವ ರೀತಿ ಪ್ರಭಾವ ಬೀರಲಿದೆ ಎಂಬ ವಿಶ್ಲೇಷಣೆಯನ್ನು ಅದು ಮಾಡಿದೆ.

ಸರಕು ಮತ್ತು ಸೇವಾ ತೆರಿಗೆ ನೀತಿಯು ಈಗಿರುವ ವ್ಯಾಟ್‌ ಮತ್ತು ಸೇವಾ ತೆರಿಗೆಯನ್ನು ಇಲ್ಲವಾಗಿಸುತ್ತದೆ. ಪ್ರಸಕ್ತ ಶೇ. 18ರ ತೆರಿಗೆ ವಿಧಿಸಲು ಜಿಎಸ್‌ಟಿ ಸಮಿತಿ ಶಿಫಾರಸು ಮಾಡಿದ್ದು, ಇದರಿಂದ ರಿಯಲ್‌ ಎಸ್ಟೇಟ್‌ ಕ್ಷೇತ್ರಕ್ಕೆ ಅಂದರೆ ಮನೆಗಳ ಬೆಲೆಯ ಮೇಲೆ ದೊಡ್ಡ ಪ್ರಮಾಣದ ಪ್ರಭಾವ ಉಂಟಾಗಲಾರದು ಎಂದು ರಿಯಾಲ್ಟಿ ರೇಟಿಂಗ್‌ ಏಜೆನ್ಸಿ ಐಸಿಆರ್‌ಎ ಹೇಳಿದೆ. ಆದರೆ ಕರ್ನಾಟಕದಂತಹ ರಾಜ್ಯದಲ್ಲಿ ಪ್ರಾಜೆಕ್ಟ್ ವೆಚ್ಚ ಕಡಿಮೆಯಾಗಲಿದ್ದರೆ, ಮಹರಾಷ್ಟ್ರ, ಹರಿಯಾಣದಂತಹ ರಾಜ್ಯಗಳಲ್ಲಿ ಅಷ್ಟೇನೂ ಲಾಭ ಆಗದು ಎಂದು ಅದು ಹೇಳಿದೆ.

ಅತಿ ನಿರೀಕ್ಷೆ ಬೇಡ

'ವರ್ಕ್‌ ಕಾಂಟ್ರಾಕ್ಟ್ ಸೇರಿದಂತೆ ಸೇವೆಗಳು ಕೂಡ ಜಿಎಸ್‌ಟಿ ಶೇ. 18ರ ತೆರಿಗೆ ಮಿತಿಯೊಳಗೆ ಬರುತ್ತದೆ. ಈ ಜಿಎಸ್‌ಟಿ ದರವುವಸತಿ ರಿಯಲ್‌ ಎಸ್ಟೇಟ್‌ ಬೆಲೆಯ ಮೇಲೆ ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆಯಿಲ್ಲ. ನಾನಾ ರಾಜ್ಯಗಳು ಇದುವರೆಗೆ ಅನುಸರಿಸುತ್ತಿರುವ ತೆರಿಗೆ ನೀತಿಗಳು ಇದಕ್ಕೆ ಕಾರಣ'ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇತ್ತೀಚೆಗಷ್ಟೇ ಜಿಎಸ್‌ಟಿ ಸಮಿತಿಯ ಸಭೆ ಮುಕ್ತಾಯಗೊಂಡಿದ್ದು, ಹಣಕಾಸು ಸಚಿವಾಲಯವು ನಾಲ್ಕು ಹಂತದ ಜಿಎಸ್‌ಟಿ ತೆರಿಗೆಯನ್ನು ಶಿಫಾರಸು ಮಾಡಿದೆ. ಇದರಲ್ಲಿ ಶೇ. 6, ಶೇ. 12, ಶೇ. 18 ಮತ್ತು ಶೇ. 26 ದರ ಸೇರಿದೆ. ' ಬಹುತೇಕ ರಾಜ್ಯಗಳಲ್ಲಿ ನಿರ್ಮಾಣ ಹಂತದ ಕಟ್ಟಡಗಳಿಗೆ ಜಾರಿಯಲ್ಲಿರುವ ವ್ಯಾಟ್‌ ಮತ್ತು ಸೇವಾ ತೆರಿಗೆಯಿಂದ ಶೇ. 18ರ ಜಿಎಸ್‌ಟಿ ಹೆಚ್ಚಿದೆ' ಎಂದು ಐಸಿಆರ್‌ಎ ಹೇಳಿದೆ.

ಪ್ರಸಕ್ತ ತೆರಿಗೆ ನೀತಿಯಡಿ ಡೆವಲಪರ್‌ ಪಾವತಿ ಮಾಡುವ ನಿರ್ಮಾಣ ಸಾಮಗ್ರಿಗಳ ಮೇಲೆ ಪಾವತಿ ಮಾಡುವ ಸೀಮಾ ಸುಂಕ, ಕೇಂದ್ರ ಸೇವಾ ತೆರಿಗೆ (ಸಿಎಸ್‌ಟಿ) ಮೊದಲಾದ ಅಂತಿಮವಾಗಿ ಗ್ರಾಹಕರ ಮೇಲೆ ಹೊರೆಯಾಗುವ ಪರೋಕ್ಷ ತೆರಿಗೆಗಳು ಇರುವುದಿಲ್ಲ. ಹೀಗಾಗಿ ಸರಿಯಾದ ರೀತಿಯಲ್ಲಿ ಜಿಎಸ್‌ಟಿಯನ್ನು ಬಳಕೆ ಮಾಡಿಕೊಂಡರೆ ಒಟ್ಟಾರೆ ನಿರ್ಮಾಣ ವೆಚ್ಚ ಕಡಿಮೆಯಾಗಲಿದೆ ಎಂದು ಐಸಿಆರ್‌ಎ ಅಭಿಪ್ರಾಯ ಪಟ್ಟಿದೆ.

ರಾಜ್ಯಕ್ಕೆ ಲಾಭ

ಕರ್ನಾಟಕದಂತಹ ರಾಜ್ಯದಲ್ಲಿ ಅಂತಿಮವಾಗಿ ಗ್ರಾಹಕರಿಗೆ ಜಿಎಸ್‌ಟಿಯಿಂದ ಲಾಭವಾಗುವುದು ನಿಶ್ಚಿತ. ಆದರೆ ಹರಿಯಾಣ, ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಪ್ರಾಪರ್ಟಿ ಬೆಲೆ ಏರಿಕೆಯಾಗಲಿದೆ. ಹೀಗಾಗಿ ದೇಶ ಮಟ್ಟದಲ್ಲಿ ಹೇಳುವುದಾದರೆ ಜಿಎಸ್‌ಟಿಯಿಂದ ರಿಯಲ್‌ ಎಸ್ಟೇಟ್‌ ಬೆಲೆ ಗಣನೀಯ ಇಳಿಕೆ ಕಾಣಲು ಸಾಧ್ಯವಿಲ್ಲ ಎಂದು ವರದಿ ಹೇಳಿದೆ. ರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೇಲಿನ ಪ್ರಮುಖ ಪರೋಕ್ಷ ತೆರಿಗೆಗಳೆಂದರೆ ಸೀಮಾ ಸುಂಕ, ಮೌಲ್ಯವರ್ಧಿತ ತೆರಿಗೆ ಮತ್ತು ಸೇವಾ ತೆರಿಗೆಯಾಗಿದೆ. ಹೊಸ ತೆರಿಗೆ ನೀತಿಯಡಿ ಇವೆಲ್ಲವೂ ಜಿಎಸ್‌ಟಿಯೊಟ್ಟಿಗೆ ಸೇರಲಿದೆ. ಆದಾಗ್ಯೂ ಪ್ರತಿ ರಾಜ್ಯವೂ ಸೇವೆ ಮತ್ತು ವ್ಯಾಟ್‌ ದರ ನಿಗದಿಗೆ ತನ್ನದೇ ಆದ ನೀತಿಯನ್ನು ಅನುಸರಿಸುತ್ತಿದೆ. ಇದರಿಂದ ರಾಜ್ಯದಿಂದ ರಾಜ್ಯಕ್ಕೆ ಇದರಲ್ಲಿ ವ್ಯತ್ಯಾಸವಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕ್ರೆಡೈ ಬೆಂಗಳೂರು ಕಾರ್ಯದರ್ಶಿ ಸುರೇಶ್‌ ಹರಿ, ಜಿಎಸ್‌ಟಿ ಶೇ. 18ರಲ್ಲಿ ಜಾರಿಯಾದರೆ ಖಚಿತವಾಗಿಯೂ ನಿರ್ಮಾಣ ವೆಚ್ಚ ಕಡಿಮೆಯಾಗಿ, ಒಟ್ಟಾರೆ ಪ್ರಾಪರ್ಟಿ ಬೆಲೆಯಲ್ಲಿ ಒಂದಿಷ್ಟು ಇಳಿಕೆಯಾಗುತ್ತದೆ ನಿಜ. ಆದರೆ ರಾಜ್ಯ ಸರಕಾರಗಳು ಸ್ಟ್ಯಾಂಪ್‌ಡ್ಯೂಟಿ ಸೇರಿದಂತೆ ಇತರ ವೆಚ್ಚವನ್ನು ಏರಿಸುವ ಮೂಲಕ ಹಿಂಬಾಗಿಲಿನಿಂದ ಹೊರೆ ಹೇರಿದರೆ ಆಗ ಪರಿಸ್ಥಿತಿ ಸುಧಾರಣೆ ಆಗಲು ಸಾಧ್ಯವಿಲ್ಲ ಎಂದು ಹೇಳಿದರು.

'ಜಿಎಸ್‌ಟಿ ಶಿಫಾರಸಿನಲ್ಲಿ ಸ್ಟ್ಯಾಂಪ್‌ಡ್ಯೂಟಿ, ರಿಜಿಸ್ಪ್ರೇಷನ್‌ ಶುಲ್ಕವನ್ನು ಕನಿಷ್ಠಗೊಳಿಸಲು ಸೂಚಿಸಲಾಗಿದೆ. ಆದರೆ ಕೆಲವು ರಾಜ್ಯಗಳು ಮಾತ್ರ ಅದನ್ನು ಪಾಲಿಸಿವೆ. ಮಾರ್ಗದರ್ಶಿ ದರ ಹೆಚ್ಚಳ ಸೇರಿದಂತೆ ಹಲವು ವಿಚಾರಗಳಲ್ಲಿ ಏರಿಕೆಯಾದರೆ ಆಗ ಜಿಎಸ್‌ಟಿ ಶೇ. 18ರಷ್ಟಿದ್ದರೂ ಏನೂ ಲಾಭ ಆಗುವುದಿಲ್ಲ. ಆದಾಗ್ಯೂ, ಪ್ರಸಕ್ತ ವ್ಯಾಟ್‌, ಸೀಮಾ ಸುಂಕ ಮತ್ತು ಸೇವಾ ತೆರಿಗೆಗಳು ಒಟ್ಟು ಸೇರಿ ರಾಜ್ಯದಲ್ಲಿ ಸುಮಾರು ಶೇ. 22ರಷ್ಟು ತೆರಿಗೆ ಹೇರಿಕೆಯಾಗುತ್ತದೆ. ಆದರೆ ಜಿಎಸ್‌ಟಿ ಶೇ. 18ರಲ್ಲೇ ಉಳಿದು ಕೊಂಡರೆ ಆಗ ಲಾಭ ಆಗಲಿದೆ' ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಡೀಮ್ಡ್‌ಡ್‌ ಸರ್ವಿಸ್‌

ಜಿಎಸ್‌ಟಿ ಕಾನೂನಿನಡಿಯಲ್ಲಿ ಕಟ್ಟಡ ನಿರ್ಮಾಣ ಅಥವಾ ನಿರ್ಮಾಣ ಕಾಮಗಾರಿ ಒಪ್ಪಂದವು 'ಉದ್ದೇಶಿತ ಸೇವೆ ಪೂರೈಕೆ' (ಡೀಮ್ಡ್‌ಡ್‌ ಸಪ್ಲೈ ಆಫ್‌ ಸರ್ವಿಸ್‌) ವ್ಯಾಖ್ಯಾನದಡಿ ಬರುತ್ತದೆ. ಇದು ಜಿಎಸ್‌ಟಿಯ ಅನ್ವಯದ ಕುರಿತು ಸ್ಪಷ್ಟತೆ ಹಾಗೂ ಎಲ್ಲಾ ರಾಜ್ಯಗಳ ಪರೋಕ್ಷ ತೆರಿಗೆ ನೀತಿಯಲ್ಲಿ ಏಕರೂಪತೆಯನ್ನು ತರಲಿದೆ. ಕಾರ್ಮಿಕರ ವೇತನ, ಸಾಮಗ್ರಿ ಮತ್ತು ಇತರ ಸೇವೆಗಳಿಗೆ ಡೆವಲಪರ್‌ ಪಾವತಿಸಿದ ಜಿಎಸ್‌ಟಿಯು ಇನ್‌ಪುಟ್‌ ಕ್ರೆಡಿಟ್‌ ಆಗಿ (ಖರೀದಿಸುವ ಸರಕಿಗೆ ನೀಡುವ ತೆರಿಗೆ) ಪರಿಗಣಿಸಲ್ಪಡುತ್ತದೆ. ಇಷ್ಟೆಲ್ಲಾ ಆದರೂ ಜಿಎಸ್‌ಟಿ ಜಾರಿಯು ಒಂದು ಸಕಾರಾತ್ಮಕ ಹೆಜ್ಜೆಯಾಗಿದ್ದು, ದೇಶಾದ್ಯಂತ ಏಕರೂಪದ ತೆರಿಗೆ ಜಾರಿಯ ಮೂಲಕ ರಿಯಾಲ್ಟಿ ಸೇರಿದಂತೆ ಎಲ್ಲಾ ವ್ಯವಹಾರಗಳು ಸುಗಮವಾಗಿ ಸಾಗುವಂತೆ ಮಾಡಲು ನೆರವಾಗುತ್ತದೆ ಎಂದು ಐಸಿಆರ್‌ಎ ಉಪಾಧ್ಯಕ್ಷ ಶುಭಂ ಜೈನ್‌ ಅಭಿಪ್ರಾಯ ಪಟ್ಟಿದ್ದಾರೆ.

ಕರ್ನಾಟಕದಂತಹ ರಾಜ್ಯದಲ್ಲಿ ಅಂತಿಮವಾಗಿ ಗ್ರಾಹಕರಿಗೆ ಜಿಎಸ್‌ಟಿಯಿಂದ ಲಾಭವಾಗುವುದು ನಿಶ್ಚಿತ. ಆದರೆ ಹರಿಯಾಣ, ಮಹಾರಾಷ್ಟ್ರದಂತಹ ರಾಜ್ಯಗಳಲ್ಲಿ ಪ್ರಾಪರ್ಟಿ ಬೆಲೆ ಏರಿಕೆಯಾಗಲಿದೆ.

- ಐಸಿಆರ್‌ಎ, ರಿಯಾಲ್ಟಿ ರೇಟಿಂಗ್‌ ಏಜೆನ್ಸಿ

ವ್ಯಾಟ್‌, ಸೀಮಾ ಸುಂಕ ಮತ್ತು ಸೇವಾ ತೆರಿಗೆಗಳು ಒಟ್ಟು ಸೇರಿ ರಾಜ್ಯದಲ್ಲಿ ಸುಮಾರು ಶೇ. 22ರಷ್ಟು ತೆರಿಗೆಯಿದೆ. ಹೀಗಾಗಿ ಜಿಎಸ್‌ಟಿ ಶೇ. 18ರಲ್ಲೇ ಉಳಿಸಿಕೊಂಡರೆ ಲಾಭ ಆಗಲಿದೆ'

- ಸುರೇಶ್‌ ಹರಿ, ಕ್ರೆಡೈ ಬೆಂಗಳೂರು ಕಾರ್ಯದರ್ಶಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ