Please enable javascript.ಮಲಂಪುಳ, ಕೇರಳದ ಬೃಂದಾವನ! - ಮಲಂಪುಳ, ಕೇರಳದ ಬೃಂದಾವನ! - Vijay Karnataka

ಮಲಂಪುಳ, ಕೇರಳದ ಬೃಂದಾವನ!

Vijaya Karnataka Web 17 Mar 2012, 5:33 am
Subscribe

ಪಶ್ಚಿಮ ಘಟ್ಟದ ಪುಟ್ಟ ಪರ್ವತಗಳ ನಡುವೆ ಲಾಸ್ಯವಾಡುವ ಹಸಿರು ನೀರಿನ ಬಹತ್ ಜಲಾಶಯ. ಅಡ್ಡಗಟ್ಟಿದ ಅಣೆಕಟ್ಟಿನ ಮೂಲಕ ಧುಮ್ಮಿಕ್ಕುವ ಜಲಧಾರೆ. ಆ ಅದ್ಭುತ ಸೌಂದರ್ಯವನ್ನು ಕಣ್ಣಲ್ಲಿ ತುಂಬಿಕೊಳ್ಳಲು ಹಚ್ಚಹಸಿರ ಉದ್ಯಾನ. ತಣ್ಣಗೆ ಹರಿವ ನೀರನ್ನು ದಾಟಲೊಂದು ಸುಂದರ ತೂಗುಸೇತುವೆ. ಇವಿಷ್ಟೂ ಸೌಂದರ್ಯವನ್ನು ಒಂದೇ ತೆಕ್ಕೆಯಲ್ಲಿ ಕಣ್ತುಂಬಿಕೊಳ್ಳಲು ಅವಕಾಶ ನೀಡುವ ಅತ್ಯಪೂರ್ವ ರೋಪ್‌ವೇ...

ಮಲಂಪುಳ, ಕೇರಳದ ಬೃಂದಾವನ!

ಎ. ಕಷ್ಣ ಭಟ್
ಪಶ್ಚಿಮ ಘಟ್ಟದ ಪುಟ್ಟ ಪರ್ವತಗಳ ನಡುವೆ ಲಾಸ್ಯವಾಡುವ ಹಸಿರು ನೀರಿನ ಬಹತ್ ಜಲಾಶಯ. ಅಡ್ಡಗಟ್ಟಿದ ಅಣೆಕಟ್ಟಿನ ಮೂಲಕ ಧುಮ್ಮಿಕ್ಕುವ ಜಲಧಾರೆ. ಆ ಅದ್ಭುತ ಸೌಂದರ್ಯವನ್ನು ಕಣ್ಣಲ್ಲಿ ತುಂಬಿಕೊಳ್ಳಲು ಹಚ್ಚಹಸಿರ ಉದ್ಯಾನ. ತಣ್ಣಗೆ ಹರಿವ ನೀರನ್ನು ದಾಟಲೊಂದು ಸುಂದರ ತೂಗುಸೇತುವೆ. ಇವಿಷ್ಟೂ ಸೌಂದರ್ಯವನ್ನು ಒಂದೇ ತೆಕ್ಕೆಯಲ್ಲಿ ಕಣ್ತುಂಬಿಕೊಳ್ಳಲು ಅವಕಾಶ ನೀಡುವ ಅತ್ಯಪೂರ್ವ ರೋಪ್‌ವೇ ...

ಪುಟ್ಟ ಮಕ್ಕಳಿಂದ ಹಿಡಿದು ಆಗ ತಾನೇ ಮದುವೆಯಾದ ನವಜೋಡಿವರೆಗೆ, ಮಕ್ಕಳಾಗಿ ಬದುಕಿನ ಸುಮಧುರ ಸೆಕೆಂಡ್ ಇನ್ನಿಂಗ್ಸ್‌ನ ಖುಷಿಯಲ್ಲಿರುವ ಮಧ್ಯವಯಸ್ಕರಿಂದ ವದ್ಧಯವರೆಗೆ, ಸಾಹಸಿ ಯುವಕ-ಯುವತಿಯರಿಗೆ ಹೀಗೆ ಏಕಕಾಲದಲ್ಲಿ ಎಲ್ಲರನ್ನೂ ಖುಷಿಪಡಿಸಬಲ್ಲ ಸ್ಥಳ ಇದು.

ಊರಿನ ಹೆಸರು ಮಲಂಪುಳ. ಪಾಲಕ್ಕಾಡ್‌ನಿಂದ ಹತ್ತು ಕಿ.ಮೀ. ದೂರದಲ್ಲಿ ಪ. ಘಟ್ಟದ ತಪ್ಪಲಲ್ಲಿ ಹರಡಿಕೊಂಡಿರುವ ಇದು ಕೇರಳದ ಬೃಂದಾವನವೆಂದೇ ಪ್ರಸಿದ್ಧ. ಮೈಸೂರಿನ ಬೃಂದಾವನವಿದ್ದ ಹಾಗೆ.

ಪರಮ ಸೌಂದರ್ಯದ ರಾಶಿಯ ಕೇಂದ್ರಬಿಂದು ಮಲಂಪುಳ ಅಣೆಕಟ್ಟು. ಗೊತ್ತಿರಲಿ, ಇದು ಕೇರಳದ ಅತಿ ಉದ್ದದ ಭರತಪುಳ ನದಿ ಘಟ್ಟದಿಂದ ಇಳಿದು ಬರುತ್ತಿದ್ದಂತೆಯೇ ಕಟ್ಟಿದ ತಡೆ. ಇದು ಕೇರಳದ ಎರಡನೇ ಅತಿ ದೊಡ್ಡ ಜಲಾಶಯ. ಬರೋಬ್ಬರಿ ಎರಡು ಕಿ.ಮೀ. ಉದ್ದದ ಅಣೆಕಟ್ಟಿನ ಪಕ್ಕದಲ್ಲೇ ಪುಟ್ಟದೊಂದು ಜಲವಿದ್ಯುತ್ ಯೋಜನೆ ಇದೆ. ಅಣೆಕಟ್ಟು ಇಡೀ ಪಾಲಕ್ಕಾಡ್‌ಗೆ ಜೀವಜಲವನ್ನು ನೀಡುತ್ತದೆ. ಕೇರಳದಲ್ಲೇ ಅತ್ಯಂತ ಹೆಚ್ಚು ಅಕ್ಕಿ ಬೆಳೆಯುವ ನಾಡಾಗಿ ಪಾಲಕ್ಕಾಡ್ ಗಮನ ಸೆಳೆಯುವಂತಾಗಲು ಕಾರಣವಾಗಿದ್ದೇ ಈ ಮಲಂಪುಳ ಡ್ಯಾಮ್.

ಡ್ಯಾಮ್‌ನ ಮೇಲೆ ನಡೆದುಹೋಗುತ್ತಿದ್ದಂತೆಯೇ ಒಂದು ಕಡೆ ದೂರದವರೆಗೆ ಹರಡಿರುವ ಜಲರಾಶಿ. ಅದರಾಚೆಗೆ ಪರ್ವತ ಶ್ರೇಣಿ. ಇನ್ನೊಂದು ಕಡೆಯಲ್ಲಿ ವಿಶಾಲ ಗಾರ್ಡನ್. ನೋಡಿದಷ್ಟೂ ಮುಗಿಯದ ಚೆಲುವಿನ ಖನಿ.

ಪ್ರಮುಖ ಪ್ರವಾಸಿ ತಾಣ
ಕೇರಳದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಲಂಪುಳ ಹಲವು ಅಚ್ಚರಿಗಳನ್ನು ಮಡಿಲಲ್ಲಿ ಇಟ್ಟುಕೊಂಡಿದೆ. ಪ್ರಾಕತಿಕ ಮತ್ತು ಮಾನವ ನಿರ್ಮಿತ ವಿಸ್ಮಯಗಳ ತೊಟ್ಟಿಲು. ಕ್ರಿಯಾಶೀಲತೆಯ ಮತ್ತೊಂದು ಮಜಲು.

ಸ್ನೇಕ್ ಪಾರ್ಕ್: ಮಲಂಪುಳಂನದು ಅತ್ಯಪೂರ್ವ ಉರಗೋದ್ಯಾನ. ಅರಣ್ಯ ಇಲಾಖೆಯೇ ನೋಡಿಕೊಳ್ಳುತ್ತಿರುವ ಇಲ್ಲಿ ಹಾವುಗಳನ್ನು ಗೂಡೊಳಗೆ ಹಾಕದೆ ಅವುಗಳ ಪಾಡಿಗೆ ಬಿಟ್ಟಿರುವುದು ವಿಶೇಷ. ತೆರೆದ ಜಾಗದಲ್ಲಿ ನೆಟ್ ಬೇಲಿಯ ಒಳಗೆ ಮರಗಳ ಮೇಲೆ ಅವುಗಳಿಗೆ ಬೇಕಾದಂತೆ ಬದುಕಬಲ್ಲ ಸ್ವಾತಂತ್ರ್ಯ. ಬೇರೆಲ್ಲೂ ಕಾಣದ ಹಲವು ಹಾವುಗಳು ಇಲ್ಲಿವೆ. ದುರ್ಬಲ ಹದಯಿಗಳು ಒಳಗೆ ಬರಬೇಡಿ ಎಂದು ಟಿಕೆಟ್ ಕೌಂಟರ್‌ನಲ್ಲೇ ಹೇಳಲಾಗುತ್ತದೆ!

ತಿರುವಿನ ಡ್ಯಾಮ್: ಅಣೆಕಟ್ಟಿನ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗಲು ಬರೋಬ್ಬರಿ 45 ನಿಮಿಷ ಬೇಕು. ಇದು ನೇರಾನೇರ ದಾರಿ ಅಲ್ಲ. ಹಲವು ತಿರುವುಗಳಿವೆ. ಫೋಟೋ ಕ್ಲಿಕ್ಕಿಸುವವರ ಪಾಲಿಗೆ ಸ್ವರ್ಗ.

ಗಾರ್ಡನ್: ತಂಪನೆ ಅನುಭವ ನೀಡುವ ವಿಶಾಲ ಪಾರ್ಕ್‌ನಲ್ಲಿ ಅತ್ಯಂತ ಸುಂದರ ಪ್ರಾಕತಿಕ ಕೆತ್ತನೆಗಳು, ಚೆಂದನೆ ವಿನ್ಯಾಸಗಳಿವೆ. ಅಲ್ಲಲ್ಲಿ ಕುಳಿತುಕೊಳ್ಳಲು ನೆರಳಿನ ಆಸರೆ. ಬೇಕೆಂದರೆ ಮೇಲೆ ಹತ್ತಿ ಕುಳಿತುಕೊಳ್ಳಲು ಕಲ್ಲುಗಳಿವೆ. ಐವತ್ತು ಮಂದಿ ಕುಳಿತುಕೊಳ್ಳಬಹುದಾದ ರೌಂಡ್ ಟೇಬಲ್, ಇಬ್ಬರೇ ಕುಳಿತು ಪಿಸುಗುಡಲೂ ಜಾಗವಿದೆ. ಮೀನಿನ ರೂಪದ ಅಕ್ವೇರಿಯಂ, ಅಲ್ಲಲ್ಲಿ ನೀರಿನ ಕಾರಂಜಿ ಮನಸ್ಸನ್ನು ಪ್ರಫುಲ್ಲಗೊಳಿಸುತ್ತವೆ.

ಧಾರೆಯಾಗಿ ಇಳಿವ ನೀರು ಉದ್ಯಾನವನ್ನು ಇಬ್ಬಾಗ ಮಾಡುತ್ತದೆ. ಎರಡೂ ದಡಗಳನ್ನು ಸೇರಿಸುವುದು ಒಂದು ತೂಗುಸೇತುವೆ. ಅದರಲ್ಲಿ ನಿಂತು ನೀರಿನ ರಭಸವನ್ನು ನೋಡುವುದೇ ಚೆಂದ. ಫೋಟೋ ಪಾಯಿಂಟ್ ಕೂಡ.

ರೋಪ್ ವೇ: ಇಡೀ ಮಲಂಪುಳಂನ ಸೌಂದರ್ಯ ಮತ್ತು ವಿಶಿಷ್ಟತೆಗೆ ಶಿಖರ ಪ್ರಾಯವಾಗಿರುವುದು ರೋಪ್ ವೇ. ದಕ್ಷಿಣ ಭಾರತದಲ್ಲೇ ಮೊತ್ತ ಮೊದಲ ರೋಪ್ ವೇ ಪಶ್ಚಿಮ ಘಟ್ಟ, ನೀರರಾಶಿ, ಉದ್ಯಾನದ ಅಪೂರ್ವ ಸೌಂದರ್ಯದ ವೈಮಾನಿಕ ನೋಟದ ಜತೆಗೆ ಅದ್ಭುತ ಥ್ರಿಲ್.

ಜೋಡಿಯಾಗಿ ಕುಳಿತು ಆಕಾಶ ಮಾರ್ಗದಲ್ಲಿ ಸಾಗುತ್ತಾ ಉದ್ಯಾನದ ಚೆಲುವನ್ನು ಕಣ್ತುಂಬಿಕೊಳ್ಳುವುದು, ನದಿ ದಾಟುವುದು ಎದೆ ಝಲ್ಲೆನಿಸುವ ಅನುಭವ. ನಿರಂತರವಾಗಿ ಸುತ್ತು ಹೊಡೆಯುತ್ತಿರುವ ಈ ರೋಪ್ ವೇಯ ಕ್ಯಾಬಿನ್‌ನ್ನು ಹತ್ತಿ-ಇಳಿಯುವುದೂ ಒಂದು ಸಾಹಸ!

ಒಂದೂವರೆ ಕಿ.ಮೀ. ದೂರದಲ್ಲಿ ಜಲಾಶಯದ ಮತ್ತೊಂದು ಭಾಗದಲ್ಲಿ ಹುಚ್ಚು ಹಿಡಿಸುವ ಫ್ಯಾಂಟಸಿ ಪಾರ್ಕ್ ಇದೆ. ವೈವಿಧ್ಯಮಯ ಬೋಟಿಂಗ್ ಸಂಭ್ರಮವಿದೆ. ಅನತಿ ದೂರದಲ್ಲಿ ಟಿಪ್ಪು ಸುಲ್ತಾನನ ಕೋಟೆ ಇದೆ. ಕಲ್ಲುಗಳೇ ಅರಳಿ ಕಾವ್ಯವಾದ ರಾಕ್ ಗಾರ್ಡನ್ ಇದೆ.

ಒಂದಿಡೀ ಕುಟುಂಬ ಜತೆಯಾಗಿ ಕುಣಿದು ಕುಪ್ಪಳಿಸಬಹುದಾದ ಫ್ಯಾಮಿಲಿ ಟೂರಿಸ್ಟ್ ಸ್ಪಾಟ್ ಇದು. ಕೇರಳದ ಕಡೆಗೆ ಯಾವತ್ತಾದರೂ ಹೋಗುವುದಿದ್ದರೆ ಇಲ್ಲಿಗೆ ಭೇಟಿ ನೀಡಲು ಮರೆಯಬೇಡಿ.

ಇಲ್ಲಿದ್ದಾಳೆ ಯಕ್ಷಿ
ಮಲಂಪುಳ ಉದ್ಯಾನದಲ್ಲಿ ನಡೆದು ಹೋಗುತ್ತಿದ್ದರೆ ತಟ್ಟನೆ ತಡೆದು ನಿಲ್ಲಿಸುವುದು ಬಹತ್ ಶಿಲಾ ಮೂರ್ತಿ. ಅದು ಯಕ್ಷಿ ಪ್ರತಿಮೆಯಂತೆ. ತಲೆ ಪಕ್ಕದಲ್ಲಿ ಕೈಯಿಟ್ಟು ಕಾಲುಗಳನ್ನು ಅರ್ಧ ಮಡಚಿ ಕುಳಿತಂತಿರುವ ಈ ಶಿಲ್ಪ ಏಕ ಶಿಲಾ ಸಷ್ಟಿ. ಕನ್ನೈ ಕನ್ನಿರಾಮನ್ ಎಂಬ ಕೇರಳದ ಪ್ರಖ್ಯಾತ ಶಿಲ್ಪಿ ಕೆತ್ತಿದ ಕತಿಯಂತೆ ಇದು.

ತ್ರೆಡ್ ಗಾರ್ಡನ್!
ಗಾರ್ಡನ್‌ನಲ್ಲಿ ಅಪರೂಪದ ಹೂಗಳ ಲೋಕವಿದ್ದರೆ ಇನ್ನಷ್ಟು ಕೌತುಕದ ಹೂವುಗಳು ಇರುವುದು ತ್ರೆಡ್ ಗಾರ್ಡನ್‌ನಲ್ಲಿ. ಇಲ್ಲಿರುವ ಹೂವು, ಗಿಡ ಯಾವುದೂ ರಿಯಲ್ ಅಲ್ಲ. ಹಾಗಂತ ಹೇಳಲು ಸಾಧ್ಯವೇ ಇಲ್ಲ. ಕೇವಲ ನೂಲಿನಿಂದ ಅತ್ಯಂತ ನಾಜೂಕಾಗಿ ಮಾಡಿರುವ ಈ ಸಸ್ಯಕಾಶಿ, ಒಂದು ದಾರದ ಸಷ್ಟಿ ಎಂದರೆ ಪ್ರತ್ಯಕ್ಷ ನಂಬಲೇಬೇಕು.

ಎಲ್ಲಿದೆ ಮಲಂಪುಳ?:
ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಮಲಂಲಪುಳ, ಪಾಲಕ್ಕಾಡ್‌ನಿಂದ 10 ಕಿ.ಮೀ. ದೂರವಿದೆ. ಕೊಚ್ಚಿಯಿಂದ ಪಾಲಕ್ಕಾಡ್‌ಗೆ 96 ಕಿ.ಮೀ ದೂರ ಇದೆ. ಇನ್ನು ಕಣ್ಣೂರು ಕಡೆಯಿಂದ ಹೊರಟರೆ, 229 ಕಿ.ಮೀ. ದೂರವಾಗುತ್ತದೆ. ಪಾಲಕ್ಕಾಡ್-ಮಲಂಪುಳ ಎರಡೂ ಕಡೆ ವಸತಿ ಸೌಲಭ್ಯವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ