ಆ್ಯಪ್ನಗರ

ಕಾಡಿನಲ್ಲಿ ಕಳೆದ ರಾತ್ರಿ

ಮಲೆನಾಡಿನ ಸುಂದರ ತಾಣಗಳನ್ನು ಕಣ್ತುಂಬಿಸಿಕೊಳ್ಳಬೇಕು ಅಂತಲೇ ಕುಟುಂಬ ಸಮೇತ ಹೊರಟಿದ್ದು ಚಿಕ್ಕ ಮಗಳೂರಿನ ಕಾಡು ಹಾದಿಯಲ್ಲಿ.

Vijaya Karnataka Web 31 Jul 2016, 4:00 am

ಮಲೆನಾಡಿನ ಸುಂದರ ತಾಣಗಳನ್ನು ಕಣ್ತುಂಬಿಸಿಕೊಳ್ಳಬೇಕು ಅಂತಲೇ ಕುಟುಂಬ ಸಮೇತ ಹೊರಟಿದ್ದು ಚಿಕ್ಕ ಮಗಳೂರಿನ ಕಾಡು ಹಾದಿಯಲ್ಲಿ.

ಅಲ್ಲಿನ ಸುಂದರ ಪರಿಸರದ ಸೊಬಗನ್ನು ಸವಿದು ಕೊನೆಗೆ ಬಾಬಬುಡನ್‌ಗಿರಿಗೆ ಬಂದೆವು.ಆಗಲೇ ಕತ್ತಲಾಗಿತ್ತು. ಗೊತ್ತಿಲ್ಲದ ಊರಲ್ಲಿ ಹೀಗೆ ಕತ್ತಲಲ್ಲಿ ಅಲೆಯುವುದು ಬೇಡವೆಂದುಕೊಂಡು ವಾಪಸ್‌ ಚಿಕ್ಕಮಗಳೂರಿಗೆ ಹೊರಟೆವು. ಸುಮಾರು ಹದಿನೈದು ಕಿ.ಮೀ.ನಷ್ಟು ದಾರಿ ಕ್ರಮಿಸಿದ್ದೆವು. ಅಷ್ಟರಲ್ಲಿ ಜೋರಾಗಿ ಸದ್ದಾಯಿತು. ನೋಡಿದರೆ ನಾವು ಪ್ರಯಾಣಿಸುತ್ತಿದ್ದ ವಾಹನದ ಟೈರ್‌ ಪಂಕ್ಚರ್‌. ಟೈರ್‌ ಬದಲಿಸಿದರೆ ಎಲ್ಲವೂ ಸರಿ ಹೋಗುತ್ತದೆ ಎಂದುಕೊಂಡೆವು. ಆದರೆ ಹಾಗಾಗಲೇ ಇಲ್ಲ. ಬದಲಿ ಟೈರ್‌ ವ್ಯವಸ್ಥೆ ಇಲ್ಲ ಅಂದ ವಾಹನ ಚಾಲಕ. ನಾವೆಲ್ಲ ವಾಹನದಿಂದ ಕೆಳಗಿಳಿದು ನೋಡಿದರೆ ಏನೇನೂ ಕಾಣದಷ್ಟು ಕಗ್ಗತ್ತಲು. ಮೊದಲೇ ಚಳಿಗಾಲವಾದ್ದರಿಂದ ಮೈಕೊರೆಯುವಷ್ಟು ಚಳಿ. ವ್ಯಾನಿನ ಲೈಟಿನಲ್ಲಿ ಹೊರಗೆ ನೋಡಿದರೆ ರಸ್ತೆಯ ಒಂದು ಕಡೆ ಎತ್ತರದ ಬೆಟ್ಟದ ಸಾಲುಗಳಾದರೆ ಇನ್ನೊಂದು ಕಡೆ ಆಳದ ಪ್ರಪಾತ. ಆಗ ಧೈರ್ಯ ಮಾಡಿ ನಮ್ಮ ಅಣ್ಣ ದೊಡ್ಡಪ್ಪನ ಮಗ ಹೀಗೆ ಕೆಲವರು ಯಾವುದಾದರೂ ಮನೆ ಸಿಕ್ಕರೆ ಸಹಾಯ ಕೇಳಬಹುದೆಂದು ಟಾರ್ಚ್‌ ತೆಗೆದುಕೊಂಡು ಹೋದರು. ಸ್ವಲ್ಪ ಸಮಯದ ನಂತರ ಅವರಿಗೆ ದಾರಿಯಲ್ಲಿ ಯಾವುದೋ ಪ್ರಾಣಿ ಓಡಿದಂತೆ ಕಂಡು ಹೆದರಿ ವಾಪಸ್‌ ಬಂದರು. ಎಲ್ಲರೂ ಏನು ಮಾಡುವುದೆಂದು ತೋಚದೆ ವ್ಯಾನಿನಲ್ಲಿ ಸುಮ್ಮನೆ ಕುಳಿತೆವು. ನಮ್ಮ ಪುಣ್ಯಕ್ಕೆ ಪ್ರವಾಸಕ್ಕೆಂದು ತಂದಿದ್ದ ಊಟ ಸ್ವಲ್ಪ ಉಳಿದಿತ್ತು. ಅದು ಮಕ್ಕಳಿಗೆ ಸಾಕಾಯಿತು. ಆ ಹೊತ್ತಲ್ಲಿ ಯಾರನ್ನೂ ಸಂಪರ್ಕಿಸಲು ಸಾಧ್ಯವಾಗಲೇ ಇಲ್ಲ. ಯಾವ ವಾಹನವೂ ಕೂಡ ಓಡಾಡುತ್ತಿರಲಿಲ್ಲ. ಸಂಪೂರ್ಣ ನಿರ್ಜನ ಪ್ರದೇಶವಾಗಿತ್ತು. ಅಂದು ಎಲ್ಲರೂ ಜೀವ ಕೈಯಲ್ಲಿ ಹಿಡಿದುಕೊಂಡು ರಾತ್ರಿಯನ್ನು ಕಳೆದೆವು. ಬೆಳಗ್ಗೆ ಕಾಫಿ ತೋಟಕ್ಕೆ ಹೋಗುತ್ತಿದ್ದ ಜೀಪು ಸಿಕ್ಕಿದ್ದರಿಂದ ಅವರ ಸಹಾಯ ಕೇಳಿ ವ್ಯಾನಿನ ಚಾಲಕ ಟೈರ್‌ ಪಂಕ್ಚರ್‌ ಹಾಕಿಸಿಕೊಂಡು ಬಂದ.

ಎಷ್ಟೊತ್ತಾದರೂ ಮನೆ ತಲುಪದ್ದರಿಂದ ಗಾಬರಿಗೊಂಡ ನಮ್ಮ ಅಪ್ಪ ಪೊಲೀಸ್‌ ಠಾಣೆ ಹಾಗೂ ಪತ್ರಿಕೆಯವರಿಗೆ ಏನಾದರೂ ವಿಷಯ ಗೊತ್ತಿರಬಹುದೆಂದು ರಾತ್ರಿಯೆಲ್ಲಾ ನಿದ್ದೆಗೆಟ್ಟು ವಿಚಾರಿಸಿದ್ದರಂತೆ. ಕೊನೆಗೆ ಬೆಳಗ್ಗೆ ಎಲ್ಲರೂ ಬಂದದ್ದನ್ನು ಕಂಡು ಅವರಿಗೆ ನಮ್ಮ ಮೇಲೆ ಕೋಪ ಉಕ್ಕಿ ಬಂತು. ಅದೇ ತರಹ ಯಾವುದೇ ಅವಘಡ ಸಂಭವಿಸಲಿಲ್ಲವಲ್ಲ ಎನ್ನುವ ಸಮಾಧಾನದಿಂದಲೇ ನಮ್ಮನ್ನು ಸ್ವಾಗತಿಸಿದರು. ಇದಾದ ನಂತರ ಕುಟುಂಬ ಸಮೇತ ಪ್ರವಾಸ ಹೋದಾಗಲೆಲ್ಲಾ ಈ ಘಟನೆ ನೆನಪಿಗೆ ಬರುತ್ತದೆ.

- ಸವಿತಾ ಸಚ್ಚಿದಾನಂದ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ