Please enable javascript.ಮರ್ಕಟ ಮನ ಎಂದರೇನು,ನಿಮ್ಮದು ಮಂಗನಂತಹ ಚಂಚಲ ಮನಸ್ಸು ಎನ್ನುವುದುನ್ನು ತಿಳಿಸುವ ಲಕ್ಷಣಗಳಿವು - these are the possible signs of a monkey mind - Vijay Karnataka

ನಿಮ್ಮದು ಮಂಗನಂತಹ ಚಂಚಲ ಮನಸ್ಸು ಎನ್ನುವುದುನ್ನು ತಿಳಿಸುವ ಲಕ್ಷಣಗಳಿವು

Authored byರಜತಾ | Produced byಸೋಮನಗೌಡ | Vijaya Karnataka Web 2 Mar 2024, 10:30 am
Subscribe

ನಮ್ಮ ಮನಸ್ಸು ವಿಷಯದಿಂದ ವಿಷಯಕ್ಕೆ ಹಾರುತ್ತಾ ಹೋಗುವ ಪರಿಯನ್ನೇ ಹಿರಿಯರು ಮನವೆಂಬ ಮರ್ಕಟ ಎಂದು ಹೇಳಿದ್ದಾರೆ. ಇದರಿಂದ ಏಕಾಗ್ರತೆ ಸಾಧ್ಯವಾಗದೇ ಕೈಗೊಂಡ ಕಾರ್ಯ ನೆರವೇರುವುದಿಲ್ಲ.

these are the possible signs of a monkey mind
ನಿಮ್ಮದು ಮಂಗನಂತಹ ಚಂಚಲ ಮನಸ್ಸು ಎನ್ನುವುದುನ್ನು ತಿಳಿಸುವ ಲಕ್ಷಣಗಳಿವು
ಮರ್ಕಟ ಮನವೆಂದರೇನು ಇದು ಏಕಾಗ್ರತೆಗೆ ವಿರುದ್ದವಾಗಿದೆ. ಈ ಸ್ಥಿತಿ ಇರುವ ವ್ಯಕ್ತಿಗಳ ಮನಸ್ಸು ಒಂದು ವಿಷಯದತ್ತ ಕೇಂದ್ರೀಕೃತಗೊಳ್ಳದೇ ಹಲವಾರು ವಿಷಯಗಳಿಗೆ ಬದಲಾಗುತ್ತಾ ಹೋಗುತ್ತದೆ. ಯಾವುದೇ ಸ್ಥಿತಿಯಲ್ಲಿ, ಯಾವುದೇ ವಿಷಯದಲ್ಲಿ ಇವರು ಪೂರ್ಣವಾದ ಮಾಹಿತಿಯನ್ನು ಪಡೆಯಲಾರರು ಅಥವಾ ಸೂಕ್ತ ನಿರ್ಧಾರವನ್ನೂ ಕೈಗೊಳ್ಳಲಾರರು. ಪರಿಣಾಮದಲ್ಲಿ ಜೀವನದಲ್ಲಿ ಏನನ್ನೂ ಕಲಿಯದೇ ಹೋಗುತ್ತಾರೆ ಮತ್ತು ಇವರಿಗೆ ನಿದ್ದೆ ಮಾಡುವುದೂ ಕಷ್ಟಕರವಾಗುತ್ತದೆ. ಮನಸ್ಸಿನಲ್ಲಿ ಚದುರಿದ ಆಲೋಚನೆಗಳು, ಆತಂಕ, ಚಂಚಲತೆ ಮತ್ತು ಇನ್ನೂ ಹಲವು ಋಣಾತ್ಮಕ ಚಿಂತನೆಗಳೇ ತುಂಬಿರುತ್ತವೆ. ಒಟ್ಟಾರೆ ಮನ ಪ್ರಕ್ಷುಬ್ಧಗೊಂಡಿದೆ ಎಂದು ಹೇಳಬಹುದು.

ಚದುರಿದ ಆಲೋಚನೆಗಳು

ಚದುರಿದ ಆಲೋಚನೆಗಳು

ನಮ್ಮ ಮನಸ್ಸು ಸದಾ ಒಂದಲ್ಲಾ ಒಂದು ವಿಷಯದಲ್ಲಿ ತೊಡಗಿಸಿಕೊಂಡೇ ಇರುತ್ತದೆ. ಇದನ್ನೇ ನಾವು ಆಲೋಚನೆ ಎಂದು ಕರೆಯುತ್ತೇವೆ. ಆರೋಗ್ಯಕರ ಮನಸ್ಸಿನಲ್ಲಿ ಒಂದು ವಿಷಯದ ಕುರಿತ ಆಲೋಚನೆ ಅದಕ್ಕೆ ಸಂಬಂಧಿಸಿದ ವಿಷಯಗಳ ಕುರಿತೇ ಇದ್ದರೆ ಇದು ಆರೋಗ್ಯಕರ. ಅದರ ಬದಲಿಗೆ, ಈ ಕ್ಷಣ ಒಂದು ಆಲೋಚನೆ, ಮರುಕ್ಷಣ ಹಿಂದಿನ ಆಲೋಚನೆಗೆ ಸಂಬಂಧವೇ ಇಲ್ಲದ ಇನ್ನೊಂದು ವಿಷಯದ ಆಲೋಚನೆ ಎದುರಾದರೆ ಇದು ಮರ್ಕಟ ಮನದ ಸೂಚನೆಯಾಗಿದೆ. ಈ ವ್ಯಕ್ತಿಗಳು ಅತಿ ಹೆಚ್ಚು ಮೆದುಳಿಗೆ ಕೆಲಸ ನೀಡುವ ಮೂಲಕ ವಿಪರೀತ ದಣಿಯುತ್ತಾರೆ. ಅಲ್ಲದೇ ಇವರಿಂದ ಸೂಕ್ತ ನಿರ್ಧಾರಗಳನ್ನು ಪಡೆಯಲಾಗದು. ಪರಿಣಾಮವಾಗಿ ಇವರು ಯಾವುದೇ ಸಾಧನೆಯಾಗಲೀ ಯಶಸ್ಸು ಆಗಲೀ ಕಲಿಯುವಿಕೆಯೇ ಆಗಲಿ ಏನನ್ನೂ ಮಾಡದ ಸ್ಥಿತಿಯಲ್ಲಿರುತ್ತಾರೆ.



ಒಂದು ವೇಳೆ ನಿಮ್ಮ ಮನವೂ ಮರ್ಕಟ ಮನವಾಗಿದ್ದರೆ ಈ ಆಲೋಚನೆಗಳು ಸತತ ಬದಲಾಗುವುದನ್ನು ನಿಲ್ಲಿಸಲು ಸುಲಭವಾದ ಒಂದೇ ವಿಷಯದ ಕುರಿತು ಯೋಚಿಸಲು ಪ್ರಾರಂಭಿಸಿ. ನಿತ್ಯವೂ ಕೆಲವು ಕ್ಷಣಗಳನ್ನು ಶಾಂತವಾಗಿ ಕುಳಿತು ನಿಮ್ಮ ಆಲೋಚನೆಗಳನ್ನು ಯಾವುದೇ ನಿರ್ಣಯಕ್ಕೆ ಬಾರದಂತೆ ಮುಂದುವರೆಸಿ. ಎಂದಿನಂತೆ ಬೇರೆ ವಿಷಯದ ಯೋಚನೆ ಬಂದ ತಕ್ಷಣವೇ, ಇದನ್ನು ಆಮೇಲೆ ನೋಡೋಣ, ಎಂದು ನಿಮ್ಮ ಮನಸ್ಸಿಗೆ ನಿರ್ದೇಶನ ನೀಡಿ. ಸ್ವಲ್ಪ ಸಮಯದ ನಂತರ, ನೀವು ಆಲೋಚನೆಗಳ ಸತತ ಬೇರ್ಪಡುವಿಕೆಯಿಂದ ವಿಮುಖರಾಗುವುದನ್ನು ಕಲಿತುಕೊಳ್ಳುತ್ತೀರಿ.
ಇದನ್ನೂ ಓದಿ:ನೆನಪಿನ ಶಕ್ತಿ ಹೆಚ್ಚಿಸಲು ಬಾದಾಮಿ ಮಾತ್ರವಲ್ಲ ಈ ಡ್ರೈಫ್ರೂಟ್ಸ್‌ಗಳೂ ಬೆಸ್ಟ್‌

ಆತಂಕಿತ ಮತ್ತು ಚಂಚಲ ಮನಸ್ಸು

ಆತಂಕಿತ ಮತ್ತು ಚಂಚಲ ಮನಸ್ಸು

ಮರ್ಕಟ ಮನಸ್ಸಿನ ವ್ಯಕ್ತಿಗಳು ಸದಾ ಆತಂಕದಲ್ಲಿರುತ್ತಾರೆ ಮತ್ತು ಇವರ ಮನಸ್ಸೂ ಚಂಚಲವಾಗಿರುತ್ತದೆ. ಇವರ ಮನಸ್ಸಿನಲ್ಲಿ ಬರುವ ಆಲೋಚನೆಗಳೆಲ್ಲಾ ಕೆಟ್ಟ ಸಂಗತಿಯಲ್ಲಿ ಕೊನೆಗೊಳ್ಳುವಂತಹದ್ದೇ ಆಗಿರುತ್ತವೆ. ಇಲ್ಲದ ಸಲ್ಲದುದನ್ನು ಊಹಿಸಿಕೊಂದು ಇವರು ಚಿಂತಿತರಾಗಿರುತ್ತಾರೆ. ಇದೆಲ್ಲದಕ್ಕೂ ತಾನೇ ಕಾರಣ ಎಂಬ ತಪ್ಪಿತಸ್ಥ ಭಾವನೆಯೂ ಇವರಿಗೆ ಇರುತ್ತದೆ.
ಈ ಸ್ಥಿತಿ ಅತಿ ಅಪಾಯಕಾರಿಯಾಗಿದ್ದು ದಿನೇ ದಿನೇ ಇವರ ಮನಃಸ್ಥಿತಿ ಆಧೋಗತಿಗೆ ಇಳಿಯುತ್ತಾ ಹೋಗುತ್ತದೆ ಹಾಗೂ ಇದರ ಪರಿಣಾಮವೂ ಗಾಬರಿ ಪಡಿಸುವಂತಹದ್ದೇ ಇರುತ್ತದೆ.

ಈ ಸ್ಥಿತಿಯನ್ನು ಸರಿಪಡಿಸುವುದು ಅತಿ ಅಗತ್ಯವಾಗಿದೆ. ನಿಮ್ಮ ದಿನಚರಿಯಲ್ಲಿ ಸಾಕಷ್ಟು ವಿಶ್ರಾಂತಿಯನ್ನು ಅಳವಡಿಸಿಕೊಳ್ಳಬೇಕು ಹಾಗೂ ನಿಮ್ಮ ಯೋಚನೆಗಳ ಕೊನೆಯಲ್ಲಿ ಬರುವ ಋಣಾತ್ಮಕ ಚಿಂತನೆಗಳನ್ನೆಲ್ಲಾ ಧನಾತ್ಮಕ ಪರಿಣಾಮಕ್ಕೆ ಬದಲಿಸಿಕೊಳ್ಳಬೇಕು. ದೀರ್ಘ ಉಸಿರಾಟದ ವ್ಯಾಯಾಮಗಳು, ಸರಳವಾದ ಸ್ನಾಯುಗಳನ್ನು ಸಡಿಲಿಸುವ ವ್ಯಾಯಾಮಗಳು, ತಜ್ಞರ ನಿರ್ದೇಶನದಲ್ಲಿ ನಿರ್ವಹಿಸಬಹುದಾದ ಧ್ಯಾನ ಮೊದಲಾದವು ಈ ಸ್ಥಿತಿಯಿಂದ ಹೊರತರುತ್ತವೆ ಹಾಗೂ ಶಾಂತತೆಯ ಭಾವನೆಯನ್ನು ಉತ್ತೇಜಿಸುತ್ತವೆ.

ಅತಿ ಚಂಚಲತೆ, ಕಡಿಮೆ ಏಕಾಗ್ರತೆ

ಅತಿ ಚಂಚಲತೆ, ಕಡಿಮೆ ಏಕಾಗ್ರತೆ

ಮರ್ಕಟ ಮನಸ್ಸಿನ ಜನರ ಮನಸ್ಸನ್ನು ಇನ್ನಷ್ಟು ವ್ಯಗ್ರಗೊಳಿಸುವ ಸಾಧನವೆಂದರೆ ಸ್ಮಾರ್ಟ್ ಫೋನ್ ಮತ್ತು ಸಾಮಾಜಿಕ ಜಾಲತಾಣಗಳು. ಪ್ರತಿ ಕ್ಷಣಕ್ಕೊಮ್ಮೆ ಬರುವ ನೋಟಿಫಿಕೇಶನ್‌ಅನ್ನು ಇವರು ಯಾವುದೋ ಆಪತ್ತಿನ ಸೂಚನೆ ಬಂದಿದೆ ಎಂಬಂತೆ ಪರಿಗಣಿಸಿ ಉದ್ವೇಗಕ್ಕೆ ಒಳಗಾಗುತ್ತಾರೆ. ಅಷ್ಟೇ ಅಲ್ಲ, ಇಂದು ಲಭಿಸುತ್ತಿರುವ ಆಗಾಧ ಮಾಹಿತಿಯಲ್ಲಿ ಯಾವುದು ತನಗೆ ತಪ್ಪಿ ಹೋಗುತ್ತದೆಯೋ ಎಂಬ ಆತಂಕ ಈ ಮನಸ್ಸನ್ನು ಇನ್ನಷ್ಟು ವ್ಯಗ್ರಗೊಳಿಸುತ್ತದೆ.

ಈ ಸ್ಥಿತಿಯಿಂದ ಹೊರಬರಲು ಸಾಕಷ್ಟು ಶಿಸ್ತಿನ ಅಗತ್ಯವಿದೆ. ಮೊದಲಾಗಿ ನಿಮ್ಮ ಕರ್ತವ್ಯ ಮತ್ತು ಕಾರ್ಯಗಳನ್ನು ಪಟ್ಟಿ ಮಾಡಿ ಇದಕ್ಕೆ ಆದ್ಯತೆಗಳನ್ನು ನೀಡಿ. ಎಲ್ಲಿಯವರೆಗೂ ಈ ಕರ್ತವ್ಯ ಮತ್ತು ಕಾರ್ಯಗಳನ್ನು ಪೂರ್ಣಗೊಳಿಸುವುದಿಲ್ಲವೋ ಅಲ್ಲಿಯವರೆಗೂ ಮೊಬೈಲ್ ನೋಡದಿರಿ. ನಿಮ್ಮ ದಿನದ ಅವಧಿಯಲ್ಲಿ ಪ್ರಮುಖ ಕಾರ್ಯಗಳಿಗೆ ಪ್ರಥಮವಾಗಿ ಆದ್ಯತೆ ನೀಡಿ ಪೂರ್ಣಗೊಳಿಸಿ. ಅಲ್ಲಿಯವರೆಗೂ ನಿಮ್ಮ ಮನಸ್ಸನ್ನು ಸೆಳೆಯುವ ಮೊಬೈಲಿನ ನೋಟಿಫಿಕೇಶ‌ನ್‌ಅನ್ನು ಸದ್ದಿಲ್ಲದಂತೆ (ಮ್ಯೂಟ್) ಮಾಡಿ.
ಇದನ್ನೂ ಓದಿ: ಮೆದುಳಿಗೆ ಹಾನಿಮಾಡುವ ನಿಮ್ಮ ಈ ಅಭ್ಯಾಸಗಳನ್ನು ಈಗ್ಲೇ ಬದಲಿಸೋದು ಒಳ್ಳೆಯದು

ಯಾವಾಗಲೂ ಮಾನಸಿಕವಾಗಿ ದಣಿದಿರುವುದು

ಯಾವಾಗಲೂ ಮಾನಸಿಕವಾಗಿ ದಣಿದಿರುವುದು

ಮರ್ಕಟ ಮನದ ಜನರು ಸದಾ ದಣಿದೇ ಇರುತ್ತಾರೆ. ದಿನದ ಯಾವುದೋ ವಿಷಯದ ಬಗ್ಗೆ ಅತಿಯಾದ ಚಿಂತನೆಯಿಂದಾಗಿ ಅತಿಯಾದ ಮಾನಸಿಕ ಒತ್ತಡ ಮತ್ತು ದಣಿವು ಎದುರಾಗಬಹುದು. ಇದರಿಂದ ಪಾರಾಗಲು, ಮೊದಲಾಗಿ ನಿಮ್ಮ ಮನಸ್ಸನ್ನು ದಣಿಯದಂತೆ ಮಾಡಲು ಶಾಂತವಾಗಲು ಬಿಡಬೇಕು. ಇದಕ್ಕೆ ನೆರವಾಗುವ ಸ್ವತಃ ಮಾಡಬಹುದಾದ ಕೆಲಸಗಳನ್ನು ಮಾಡಬಹುದು. ಸಾಕಷ್ಟು ನಿದ್ದೆ, ನಿಯಮಿತ ವ್ಯಾಯಾಮ ಮಾಡುತ್ತಿರಬೇಕು ಮತ್ತು ಪೌಷ್ಟಿಕ ಆಹಾರವನ್ನೂ ಸೇವಿಸಬೇಕು. ನಿಮ್ಮ ದಿನನಿತ್ಯದ ಕೆಲಸಗಳ ಹೊರತಾಗಿ ನಿಮಗೆ ಹೊಸದಾಗಿರುವ ಯಾವುದಾದರೂ ಒಂದು ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ಅಲ್ಲದೇ ನಿಮಗಾಗಿ ನೀವು ಸಮಯ ನೀಡಿಕೊಳ್ಳುವ ಮೂಲಕ ಮರ್ಕಟ ಮನಸ್ಸನ್ನು ಶಾಂತಗೊಳಿಸಬಹುದು.

ಅತಿಯಾದ ಮುಂದೂಡುವಿಕೆ

ಅತಿಯಾದ ಮುಂದೂಡುವಿಕೆ

ಮರ್ಕಟ ಮನದ ಇನ್ನೊಂದು ಲಕ್ಷಣವೆಂದರೆ ಮುಂದೂಡುವಿಕೆ. ಈ ವ್ಯಕ್ತಿಗಳು ಅತ್ಯಂತ ಕಡೆಯ ಕ್ಷಣದವರೆಗೂ ಆ ಕೆಲಸವನ್ನು ಮುಂದೂಡುತ್ತಾ ಬರುತ್ತಾರೆ. ಹೀಗೆ ಮಾಡುವುದರಿಂದ ಇದು ಮನಸ್ಸಿನ ಒತ್ತಡವನ್ನು ಹೆಚ್ಚಿಸಿ ಇನ್ನಷ್ಟು ವ್ಯಗ್ರಗೊಳಿಸುತ್ತದೆ. ಕಟ್ಟ ಕಡೆಯ ಕ್ಷಣದಲ್ಲಿ ಇದನ್ನು ಪೂರ್ಣಗೊಳಿಸಬೇಕಾದ ಧಾವಂತದಿಂದ ಮನಸ್ಸಿನ ಒತ್ತಡ ಇನ್ನಷ್ಟು ಹೆಚ್ಚುತ್ತದೆ ಹಾಗೂ ಪರೋಕ್ಷ ಪರಿಣಾಮಗಳು ಇನ್ನೂ ಹೆಚ್ಚಿನದಾಗಬಹುದು.

ಮುಂದೂಡುವಿಕೆಯ ಅಭ್ಯಾಸ ನಿಮಗಿದ್ದರೆ ಇದನ್ನು ಸರಿಪಡಿಸಲು ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ನಿಮ್ಮ ಕಾರ್ಯಗಳನ್ನು ಅತಿ ಮುಖ್ಯ, ಮುಖ್ಯ ಮತ್ತು ಸಾಮಾನ್ಯ ಎಂದು ವರ್ಗೀಕರಿಸಿ ಆದ್ಯತೆಯ ಪ್ರಕಾರ ಮುಗಿಸಿಕೊಳ್ಳುತ್ತಾ ಬರಬೇಕು. ಒಂದು ಸಮಯದಲ್ಲಿ ಒಂದೇ ಕೆಲಸ ಮಾಡಬೇಕು. ಪ್ರತಿ ಕೆಲಸವನ್ನೂ ಅದಕ್ಕೆ ತಗಲುವ ಸಮಯವನ್ನು ಆಧರಿಸಿ ಗುರಿಗಳನ್ನು ಹಮ್ಮಿಕೊಳ್ಳಬೇಕು ಹಾಗೂ ನೀವು ಮಾಡುವ ಕಾರ್ಯಗಳು ಈ ಸಮಯದ ಒಳಗೇ ಮುಗಿಯುವಂತೆ ನಿರ್ವಹಿಸಬೇಕು. ತನ್ಮೂಲಕ ನಿಮಗೆ ನೀವೇ ಒಂದು ಕಟ್ಟುಪಾಡನ್ನು ವಿಧಿಸಿಕೊಂಡು ಕಾರ್ಯ ನಿರ್ವಹಿಸುವ ಮೂಲಕ ಅಷ್ಟೂ ಹೊತ್ತು ಬೇರೆ ಆಲೋಚನೆಗಳು ಮನಕ್ಕೆ ಬಾರದಂತೆ ನೋಡಿಕೊಳ್ಳಬೇಕು.
ಇದನ್ನೂ ಓದಿ: ಪಾರ್ಶ್ವವಾಯು ಸಂಭವಿಸುವ ಮುನ್ನ ಈ ಕೆಲವು ಲಕ್ಷಣಗಳು ಗೋಚರಿಸುತ್ತವಂತೆ

ವರ್ತಮಾನ ಕಾಲದಲ್ಲಿ ಗಮನ ಹರಿಸಲು ಸಾಧ್ಯವಾಗದೇ ಹೋಗುವುದು

ವರ್ತಮಾನ ಕಾಲದಲ್ಲಿ ಗಮನ ಹರಿಸಲು ಸಾಧ್ಯವಾಗದೇ ಹೋಗುವುದು

ಈ ವ್ಯಕ್ತಿಗಳ ಮನಸ್ಸು ಹಿಂದಿನ ವಿಷಯಗಳ ಮತ್ತು ಆಗಿ ಹೋಗಿದ್ದ ಸಂಗತಿಗಳನ್ನೇ ಮೆಲುಕು ಹಾಕುತ್ತಿರುತ್ತದೆ. ಇವರಿಗೆ ಭವಿಷ್ಯದ ದೂರದೃಷ್ಟಿಯ ಕೊರತೆ ಇರುತ್ತದೆ ಹಾಗೂ ಇಂದಿನ ದಿನದಲ್ಲಿ ಮುಂದಿನ ದಿನಕ್ಕಾಗಿ ಏನನ್ನು ಮಾಡಬೇಕೋ ಅದನ್ನು ಮಾಡದೇ ಹೋಗುತ್ತದೆ. ಉದಾಹರಣೆಗೆ ನಿಮ್ಮ ಗ್ರಾಹಕ ಒಬ್ಬರನ್ನು ಭೇಟಿಯಾಗಬೇಕಿದ್ದು ನಿಮ್ಮ ಮನ ಇದು ಸಾಧ್ಯವಾಗದಂತಹ ಯೋಚನೆಗಳನ್ನುಯೋಚಿಸುತ್ತದೆ.

ಇದರಿಂದ ಹೊರಬರಲು, ಮೊದಲಾಗಿ ಸರಳವಾದ ಮತ್ತು ಸುಲಭದ ಕೆಲಸಗಳನ್ನು ಮಾಡಿ ಮುಗಿಸಿ. ಬಳಿಕವೇ ಇತರ ಕಾರ್ಯಗಳನ್ನು ನಿರ್ವಹಿಸಿ. ಆದಷ್ಟೂ ಮಟ್ಟಿಗೆ ಧ್ಯಾನವನ್ನು ಅನುಸರಿಸಿ. ಮನಸ್ಸು ಬೇರೆಡೆಗೆ ಹೊರಳದೇ ಇರಲು, ನೀವು ಈಗ ಯಾವ ವಿಷಯದ ಮೇಲೆ ಗಮನ ಹರಿಸಬೇಕಿತ್ತೋ, ಅದೇ ವಿಷಯದ ಬಗ್ಗೆ ಸತತವಾಗಿ ಮೆಲುಕು ಹಾಕುವಂತೆ ಮಾಡಬೇಕು. ನೀವು ಹಾಗೆ ಮಾಡುವಾಗ, ಒಂದೇ ವಿಷಯದ ಬಗ್ಗೆ ಯೋಚಿಸಿ ಮತ್ತು ಅದನ್ನು ನಿಮ್ಮ ಮನಸ್ಸಿನಲ್ಲಿ ಸಾಧ್ಯವಾದಷ್ಟು ಪುನರಾವರ್ತಿಸಿ. ನಿಮ್ಮ ಉಸಿರಾಟ, ಸಂವೇದನೆಗಳು, ದೃಶ್ಯಗಳು ಮತ್ತು ಸುತ್ತ ಮುತ್ತಲಿಂದ ಬರುತ್ತಿರುವ ಶಬ್ದಗಳ ಬಗ್ಗೆ ಗಮನ ಹರಿಸಲು ಮರೆಯದಿರಿ.

ಸುಲಭವಾಗಿ ನಿದ್ದೆ ಬಾರದೇ ಇರುವುದು

ಸುಲಭವಾಗಿ ನಿದ್ದೆ ಬಾರದೇ ಇರುವುದು

ನಿದ್ರೆಯ ಕೊರತೆಗೆ ಹಲವು ಗಂಭೀರ ಅನಾರೋಗ್ಯಗಳೂ ಕಾರಣವಾಗಬಹುದು. ಹಲವಾರು ಆಲೋಚನೆಗಳು ಮತ್ತು ಚಿಂತನೆಗಳು ಮನಸ್ಸಿನಲ್ಲಿ ಬರುತ್ತಾ ಇರುತ್ತವೆ ಹಾಗೂ ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಜಿಗಿಯಲು ಬಯಸುವ ಚಡಪಡಿಕೆಯ ಮನಸ್ಸು ನಿಮ್ಮ ನಿದ್ರೆಯನ್ನು ಭಂಗಗೊಳಿಸಬಹುದು. ರಾತ್ರಿಯಿಡೀ ಮಲಗಲು ಮತ್ತು ವಿಶ್ರಾಂತಿ ಪಡೆಯುವುದು ಕಷ್ಟವಾಗುತ್ತದೆ. ಇದು ಸುಖನಿದ್ರೆ ಮತ್ತು ವಿಶ್ರಾಂತಿಯ ಕೊರತೆಗೆ ಕಾರಣವಾಗುವುದಲ್ಲದೆ, ಮರುದಿನ ಮಾನಸಿಕ ಕಿರಿರಿ ಮತ್ತು ಆಯಾಸಕ್ಕೂ ಕಾರಣವಾಗುತ್ತದೆ, ಇದು ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ಆದ್ದರಿಂದ, ಈ ರೀತಿಯ ಸಮಯದಲ್ಲಿ ಮರ್ಕಟ ಮನವನ್ನು ಸಂತೈಸಲು, ನಿಮಗೆ ಸೂಕ್ತವಾದ ದಿನಚರಿ ಒಂದನ್ನು ನೀವೇ ರೂಪಿಸಿಕೊಳ್ಳಬೇಕು. ಮಲಗುವ ಕೋಣೆಯ ಬೆಳಕು ಅತಿ ಕಡಿಮೆ ಇರಲಿ. ಮನಸ್ಸನ್ನು ಮುದಗೊಳಿಸಲು ನೆರವಾಗುವ ಸಂಗೀತವನ್ನು ಆಲಿಸಿ. ಮಲಗುವ ಮುನ್ನ ನಿದ್ದೆ ಕೆಡಿಸುವ ಕೆಫೀನ್‌ಅನ್ನು ಸೇವಿಸದಿರಿ ಅಥವಾ ಟೀವಿ ರೇಡಿಯೋ ಮೊದಲಾದ ಮಾಧ್ಯಮಗಳನ್ನು ನೋಡದಿರಿ / ಕೇಳದಿರಿ.

ರಜತಾ
ಲೇಖಕರ ಬಗ್ಗೆ
ರಜತಾ
ರಜತ ಬಂಗೇರ ಅವರು ಒಂದು ದಶಕದ ಅನುಭವ ಹೊಂದಿರುವ ಅನುಭವಿ ಪತ್ರಕರ್ತರಾಗಿದ್ದಾರೆ. ಮುದ್ರಣ ಮಾಧ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಇವರು ಲೈಫ್‌ಸ್ಟೈಲ್ ಪತ್ರಕರ್ತರಾಗಿ ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿದರು. ಆರೋಗ್ಯ , ಅಡುಗೆ, ಫ್ಯಾಷನ್ ಮತ್ತು ಪ್ರಯಾಣದ ಬಗ್ಗೆ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿಹೊಂದಿರುವ ಇವರು ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ. ಪ್ರಸ್ತುತ, ರಜತ ಅವರು ನಮ್ಮ ಲೈಫ್‌ಸ್ಟೈಲ್ ಸಂಪಾದಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಕಳೆದ ಎಂಟು ವರ್ಷಗಳಿಂದ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಸ್ಥಾನದಲ್ಲಿ, ಉನ್ನತ-ಗುಣಮಟ್ಟದ ವಿಷಯವನ್ನು ಓದುಗರಿಗೆ ಒದಗಿಸುತ್ತಿದ್ದಾರೆ. ಉದಯೋನ್ಮುಖ ಪ್ರವೃತ್ತಿಗಳನ್ನು ಗುರುತಿಸುವ ಮತ್ತು ಉತ್ತಮ ಲೇಖನಗಳನ್ನು ರಚಿಸುವ ಇವರು ನಮ್ಮ ಸಂಸ್ಥೆಯ ಪ್ರಮುಖ ಲೈಫ್‌ಸ್ಟೈಲ್ ಪತ್ರಕರ್ತರಲ್ಲಿ ಒಬ್ಬರೆಂದು ಖ್ಯಾತಿಯನ್ನು ಗಳಿಸಿದ್ದಾರೆ. ಕೆಲಸವನ್ನು ಹೊರತುಪಡಿಸಿ, ರಜತ ಹೊಸ ಸ್ಥಳಗಳನ್ನು ಅನ್ವೇಷಿಸಲು ಮತ್ತು ತನ್ನ ಪ್ರಯಾಣದ ಮೂಲಕ ವಿಭಿನ್ನ ಸಂಸ್ಕೃತಿಗಳನ್ನು ಅನುಭವಿಸುವುದನ್ನು ಆನಂದಿಸುತ್ತಾರೆ. ಅವರು ಅತ್ಯಾಸಕ್ತಿಯ ನೃತ್ಯಗಾರ್ತಿಯೂ ಆಗಿದ್ದು, ಶಾಸ್ತ್ರೀಯ ಭಾರತೀಯ ನೃತ್ಯ ಪ್ರಕಾರಗಳಲ್ಲಿ ನಿರ್ದಿಷ್ಟ ಆಸಕ್ತಿಯನ್ನು ಹೊಂದಿದ್ದಾರೆ. ಈ ಹವ್ಯಾಸಗಳು ಅವರ ಬರವಣಿಗೆಯನ್ನು ಪ್ರೇರೇಪಿಸುತ್ತವೆ... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ