Please enable javascript.ಕೃಷಿ ಹೊಂಡಕ್ಕೆ ಆದ್ಯತೆ ಕೊಡಿ - ಕೃಷಿ ಹೊಂಡಕ್ಕೆ ಆದ್ಯತೆ ಕೊಡಿ - Vijay Karnataka

ಕೃಷಿ ಹೊಂಡಕ್ಕೆ ಆದ್ಯತೆ ಕೊಡಿ

ವಿಕ ಸುದ್ದಿಲೋಕ 28 Jun 2016, 9:00 am
Subscribe

ಕಬ್ಬಿನ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಅಣಬೆ ಬೆಳೆ ಬೆಳೆಯಲು ಸಾಲ ಸೌಲಭ್ಯ ದೊರೆಯುತ್ತದೆಯೇ ? ಕೃಷಿ ಮತ್ತು ತೋಟಗಾರಿಕೆ ಇಲಾಖೆ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಯಾಕೆ ತಲುಪುತ್ತಿಲ್ಲ.

ಕೃಷಿ ಹೊಂಡಕ್ಕೆ ಆದ್ಯತೆ ಕೊಡಿ

ಬಳ್ಳಾರಿ; ಕಬ್ಬಿನ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಅಣಬೆ ಬೆಳೆ ಬೆಳೆಯಲು ಸಾಲ ಸೌಲಭ್ಯ ದೊರೆಯುತ್ತದೆಯೇ ? ಕೃಷಿ ಮತ್ತು ತೋಟಗಾರಿಕೆ ಇಲಾಖೆ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಯಾಕೆ ತಲುಪುತ್ತಿಲ್ಲ. ಬೆಳೆನಷ್ಟ ಪರಿಹಾರ, ವಿಮಾ ಯೋಜನೆ ಗೊಂದಲದ ಗೂಡಾಗಿವೆ. ಮುಂಗಾರು ಹಂಗಾಮಿಗೆ ಇಲಾಖೆಗಳ ಕ್ರಮಗಳೇನು ಎಂದು ವಿಜಯ ಕರ್ನಾಟಕ ಫೋನ್‌ಇನ್‌ ಕಾರ್ಯಕ್ರಮಕ್ಕೆ ಕರೆ ಮಾಡಿದ ರೈತರು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್‌ ಹಾಗೂ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಚಿದಾನಂದ.ಪಿ.ಜಿ ಅವರಿಗೆ ಪ್ರಶೆÜ್ನಗಳ ಸುರಿಮಳೆಗೈದರು. ರೈತರ ಪ್ರಶ್ನೆಗಳನ್ನು ಸಾವಧಾನವಾಗಿ ಕೇಳಿಸಿಕೊಂಡ ಅಧಿಕಾರಿಗಳು ಭರವಸೆಯ ಉತ್ತರದ ಜತೆಗೆ, ಮುಂಗಾರು ಹಂಗಾಮಿನ ಬಿತ್ತನೆ ಹಾದಿಯಲ್ಲಿರುವ ರೈತರ ಗೊಂದಲ ನಿವಾರಿಸಲು ಯತ್ನಿಸಿದರು.

ಕೃಷಿ ಹೊಂಡಕ್ಕೆ ಆದ್ಯತೆ ಕೊಡಿ; ಹಿರೇಹಡಗಲಿ ರೈತ ಸೋಮಶೇಖರ ಕರೆ ಮಾಡಿ, ಕೃಷಿಹೊಂಡದ ಬಗ್ಗೆ ಆಸಕ್ತಿ ತೋರಿದರೂ, ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎನ್ನುವ ಪ್ರಶ್ನೆಗೆ, ಪ್ರತಿಕ್ರಿಯಿಸಿದ ಕೃಷಿ ಜೆಡಿ ಶರಣಪ್ಪ , ಸರಕಾರ 2400 ಕೃಷಿ ಹೊಂಡಕ್ಕೆ ಅವಕಾಶ ನೀಡಿದೆ. ಆದರೆ, ರೈತರ ಆಸಕ್ತಿ ಹೆಚ್ಚಿದ್ದರಿಂದ 4400 ಕೃಷಿ ಹೊಂಡದ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಹೆಚ್ಚಿನ ಅನುದಾನಕ್ಕೆ ಸರಕಾರಕ್ಕೆ ಬೇಡಿಕೆ ಇಟ್ಟಿದ್ದೇವೆ. ಅನುದಾನ ಬಂದ ಮೇಲೆ ಹೊಸ ಕೃಷಿ ಹೊಂಡ ರಚನೆಗೆ ಅದ್ಯತೆ ನೀಡುತ್ತೇವೆ. ಅನುದಾನ ಬಂದ ಮೇಲೆ ಬಾಕಿ ಹಣ ರೈತರಿಗೆ ನೀಡಲಾಗುವುದೆಂದು ತಿಳಿಸಿದರು.

'ಪೇಮೆಂಟ್‌ ಸರೀಗೆ ಸಿಗ್ತಿಲ್ಲ'; ನಮ್ಮ ಜಮೀನಿನಲ್ಲಿ ಕಬ್ಬು ಬೆಳೆದಿದ್ದೆವು.ಆದರೆ, ಪೇಮೆಂಟ್‌ ಸರೀಗೆ ಸಿಗ್ಲಿಲ್ಲ. ಹಿಂಗಾಗಿ ಉದ್ದು ಬೆಳೆಯಬೇಕೆಂದಿದ್ದೇನೆ. ಈ ಬಗ್ಗೆ ಮಾಹಿತಿ ನೀಡಬೇಕೆಂದು ಅಮರಾವತಿ ರೈತ ವೆಂಕಟೇಶ್‌ ಪ್ರಶ್ನೆಗೆ, ಕೃಷಿ ಇಲಾಖೆಯ ಜೆಡಿ ಶರಣಪ್ಪ ಅವರು ಪ್ರತಿಕ್ರಿಯಿಸಿ, ಉದ್ದು ಬೆಳೆಗೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಉದ್ದಿನ ಬೀಜ ರೈತ ಸಂಪರ್ಕ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ರಸಗೊಬ್ಬರ ಕಡಿಮೆ ಬಳಕೆ ಮಾಡಬೇಕು. ಒಂದು ಎಕರೆಗೆ ಒಂದು ಬ್ಯಾಗ್‌ ಮಾತ್ರ ಹಾಕಬೇಕೆಂದು ಸಲಹೆ ನೀಡಿದರು.

ರೈತ ಸಿರಿಯಲ್ಲಿ ನುಗ್ಗೆ ಬೆಳೆಗೆ ಅವಕಾಶ; 2ಎಕರೆ ಜಮೀನಿನಲ್ಲಿ ರೈತ ಸಿರಿಯೋಜನೆಯಡಿ ನುಗ್ಗೆ ಬೆಳೆಯಬೇಕೆಂಬ ಉದ್ದೇಶ ಹೊಂದಿದ್ದೇನೆ ಅನುಕೂಲ ಮಾಡಿಕೊಡಿ ಎಂದು ಗೆಣಿಕೆಹಾಳ್‌ ರೈತ ದೊಡ್ಡಬಸಪ್ಪ ಅವರ ಕರೆಗೆ, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ ಅವರು ಪ್ರತಿಕ್ರಿಯಿಸಿ, ರೈತಸಿರಿ ಯೋಜನೆಯಡಿ ನುಗ್ಗೆ ಬೆಳೆಸುವುದಕ್ಕೆ ಅವಕಾಶವಿದ್ದು, ಗ್ರಾಮಸಭೆಯಲ್ಲಿ ಅನುಮೋದನೆಯಾಗಿದ್ದರೆ, ಎನ್‌ಎಂಆರ್‌ ಜನರೇಟ್‌ ಮಾಡಿ, ಗುಂಡಿ ಅಗೆಯುವುದಕ್ಕೆ ಮುಂದಾಗಿ. ಸೋಗಿ ಮತ್ತು ಮಾಲ್ವಿ ಫಾರ್ಮ್‌ಗಳಲ್ಲಿ ನುಗ್ಗೆ ಗಿಡಗಳಿದ್ದು, ವಿತರಿಸಲಾಗುವುದೆಂದು ತಿಳಿಸಿದರು.

ಅಣಬೆಗೂ ಸಹಾಯಧನ, ಸಾಲಸೌಲಭ್ಯ; ಅಣಬೆ ಬೆಳೆ ಬೆಳೆಸಲು ತೋಟಗಾರಿಕೆ ಇಲಾಖೆಯಲ್ಲಿ ಸಾಲ ಸೌಲಭ್ಯಕ್ಕೆ ಅವಕಾಶವಿದೆಯೇ ಎಂಬ ಸಿಂದಿಗೇರಿ ಪರಿಶುರಾಮ ಅವರ ಕರೆಗೆ ಉತ್ತರಿಸಿದ ತೋಟಗಾರಿಕೆ ಇಲಾಖೆಯ ಚಿದಾನಂದಪ್ಪ , ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ಸಹಾಯಧನಕ್ಕೆ ಅವಕಾಶಗಳಿವೆ. ಸಾಲ ಸೌಲಭ್ಯವು ಸಿಗುತ್ತದೆ ಎಂದರು.

ಶಾಸಕರ ಮನೆಯಲ್ಲಿ ಫಲಾನುಭವಿಗಳ ಪಟ್ಟಿ; ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಪ್ರಮುಖ ಯೋಜನೆಗಳ ಫಲಾನುಭವಿಗಳ ಆಯ್ಕೆಪಟ್ಟಿ ಶಾಸಕರ ತೋಟದ ಮನೆಯಲ್ಲಿ ಸಿದ್ಧವಾಗುತ್ತದೆ. ಇದರಿಂದಾಗಿ ಸಾಮಾನ್ಯ ರೈತರಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ಹಂಪಾಪಟ್ಟಣ ತಾ.ಪಂ. ಸದಸ್ಯ ಬುಡ್ಡಿ ಬಸವರಾಜ್‌ ಎರಡು ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಇದಕ್ಕೆ ಪ್ರತಿಕ್ರಿಯಿಸಿದ ಅವರು, ಈ ರೀತಿಯಾಗಿ ಫಲಾನುಭವಿಗಳ ಪಟ್ಟಿಯನ್ನು ಆಯ್ಕೆ ಮಾಡುವುದಕ್ಕೆ ಬರುವುದಿಲ್ಲ. ಸೌಲಭ್ಯ ಬೇಕಾದರೆ, ಇಲಾಖೆ ಕಚೇರಿಗಳಿಗೆ ಅರ್ಜಿ ಸಲ್ಲಿಸಬೇಕು. ಅರ್ಹತೆ ಇದ್ದವರಿಗೆ ಸೌಲಭ್ಯ ಒದಗಿಸಲಾಗುತ್ತದೆ. ಯೋಜನೆ ರೈತರಿಗೆ ಒದಗಿಸುವಲ್ಲಿ ಯಾವುದೇ ಪಕ್ಷಬೇಧ ಇರುವುದಿಲ್ಲ ಎಂದು ಉತ್ತರಿಸಿದರು.

ಕಂದಾಯ ಇಲಾಖೆಯೊಂದಿಗೆ ಚರ್ಚೆ; 'ವೀಳ್ಯದೆಲೆ ಹಾನಿಯಾದಾಗ ನೀವೇ ಬಂದು ನೋಡಿಕೊಂಡು ಹೋಗಿದ್ದೀರಿ ಸಾಹೇಬ್ರೆ ಇನ್ನೂ ಪರಿಹಾರ ತಲುಪಿಲ್ಲ' ಎಂದು ಬಾಚಿಗೊಂಡನಹಳ್ಳಿಯ ರೈತ ವಿರೂಪಾಕ್ಷಪ್ಪ ಹೊಸಗೇರಿಯವರ ಪ್ರಶ್ನೆಗೆ, ತೋಟಗಾರಿಕೆ ಇಲಾಖೆಯ ಡಿಡಿ ಚಿದಾನಂದಪ್ಪ , ಭೇಟಿ ಕೊಟ್ಟ ಮರುದಿನವೇ ಹಾನಿಯ ಕುರಿತಾಗಿ ವರದಿ ನೀಡಲಾಗಿದೆ. ಜಿಲ್ಲಾ ಧಿಕಾರಿಗಳು ಹಾನಿಯ ಕುರಿತಾಗಿ 25 ಲಕ್ಷ ರೂ. ಅನುದಾನವನ್ನು ತಹಸೀಲ್ದಾರ್‌ ಖಾತೆಗೆ ಜಮಾ ಮಾಡಲಾಗಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ತಹಸೀಲ್ದಾರ್‌ ಅವರನ್ನು ಸಂಪರ್ಕಿಸುವುದಾಗಿ ತಿಳಿಸಿದರು.

ಪಾಲಿಹೌಸ್‌ಗೆ ಹೆಚ್ಚಿನ ಒತ್ತು ನೀಡಿ; ಜಿಲ್ಲೆಯಲ್ಲಿ ಗ್ರೀನ್‌ಹೌಸ್‌, ಪಾಲಿಹೌಸ್‌ಗೆ ಆದ್ಯತೆ ಕಡಿಮೆಯಾಗುತ್ತಿದೆ. ಹಿಂಗಾರು ಬೆಳೆ ಹಾನಿಯ ಪರಿಹಾರವನ್ನು ವಿತರಣೆ ಮಾಡಿಲ್ಲ ಎಂದು ಬಳ್ಳಾರಿ ಅಣ್ಣಾ ಫೌಂಡೇಶನ್‌ ಅಧ್ಯಕ್ಷ ರಾಜಶೇಖರ್‌ ಪ್ರಶ್ನೆಗೆ, ತೋಟಗಾರಿಕೆ ಇಲಾಖೆಯ ಚಿದಾನಂದಪ್ಪ ಪ್ರತಿಕ್ರಿಯಿಸಿ, ಪಾಲಿಹೌಸ್‌ಗೆ ಆದ್ಯತೆ ನೀಡಲಾಗಿದೆ. ಗುರಿಗಿಂತ ಶೇ.10ರಷ್ಟು ಹೆಚ್ಚು ಸಾಧನೆ ಮಾಡಿದ್ದೇವೆ ಎಂದರು. ಕೃಷಿ ಇಲಾಖೆಯ ಶರಣಪ್ಪ ಮಾತನಾಡಿ, ಹಿಂಗಾರು ಬೆಳೆ ನಷ್ಟದ ಪರಿಹಾರವನ್ನು ವಿತರಣೆ ಮಾಡಲಾಗಿದೆ. ಇನ್ನೂ ಕೃಷಿ ಇಲಾಖೆಯ ಯೋಜನೆ ಪ್ರಚಾರದ ಉದ್ದೇಶದಿಂದಾಗಿ ಕೃಷಿ ಅಭಿಯಾನವನ್ನು ಹಮಿಕೊಳ್ಳಲಾಗಿದೆ ಎಂದರು.

'ಕರೆಂಟ್‌ ಸಮಸ್ಯೆಗೆ ಸಾಕಾಗಿ ಹೋಗಿದೆ'; 'ಪಂಪ್‌ಸೆಟ್‌ ಆಧರಿತ ರೈತರಿಗೆ ಕರೆಂಟ್‌ ಸಮಸ್ಯೆ ಕಾಡುತ್ತಿದೆ. ಸ್ವಲ್ಪ ಕರೆಂಟ್‌ನವರಿಗೆ ಹೇಳ್ರೀ' ಎಂದು ಮಾಲ್ವಿಯ ಅಖಂಡ ಬಸವರಾಜ ಅವರ ಪ್ರಶ್ನೆಗೆ ಜೆಡಿ ಶರಣಪ್ಪ ಉತ್ತರಿಸಿ, ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ, ನೀವು ಜೆಸ್ಕಾಂನವರಿಗೆ ಕೇಳಿದ್ರೆ ಸರಿಯಾದ ಉತ್ತರ ಸಿಗುತ್ತದೆ ಎಂದರು.

'ಪ್ರಚಾರಕ್ಕೆ ಮುಖಂಡರನ್ನು ಬಳಸಿಕೊಳ್ಳಿ'; ಬಾಳೆ ಮತ್ತು ಮಾವು ಬೆಳೆಯುವ ರೈತರ ನೆರವಿಗೆ ತೋಟಗಾರಿಕೆ ಇಲಾಖೆ ಏನು ಕ್ರಮ ಕೈಗೊಂಡಿದೆ. ಯೋಜನೆಗಳ ಪ್ರಚಾರವೇ ಆಗುತ್ತಿಲ್ಲ? ಯೋಜನೆ ಪ್ರಚಾರದಲ್ಲಿ ರೈತ ಮುಖಂಡರನ್ನು ತೊಡಗಿಸಿಕೊಳ್ಳಿ ಎಂದು ರೈತ ಸಂಘದ ನಾಯ್ಡುರವರ ಮಾತಿಗೆ ಉತ್ತರಿಸಿದ ತೋಟಗಾರಿಕೆ ಇಲಾಖೆಯ ಚಿದಾನಂದಪ್ಪ, ಬಾಳೆ ಮತ್ತು ಮಾವಿಗೆ ಎನ್‌ಎಚ್‌ಎಂ ಯೋಜನೆಯಡಿ ಸಹಾಯಧನ ನೀಡಲು ಅವಕಾಶವಿದೆ. ಮುಂದಿನ ದಿನಗಳಲ್ಲಿ ಯೋಜನೆ ಪ್ರಚಾರದಲ್ಲಿ ರೈತ ಸಂಘದವರನ್ನು ತೊಡಗಿಸಿಕೊಳ್ಳುತ್ತೇವೆ ಎಂದರು.

ಸಹಕಾರಿ ಸಂಘಕ್ಕೂ ಫರ್ಟಿಲೈಜರ್‌ ಪರವಾನಗಿ ಅವಕಾಶ

ರೈತರೆಲ್ಲ ಕೂಡಿಕೊಂಡು ಕೋ-ಆಪರೇಟಿವ್‌ ಸೊಸೈಟಿ ಹುಟ್ಟುಹಾಕಿದ್ದೇವೆ. ಇದಕ್ಕೆ ಫರ್ಟಿಲೈಜರ್‌ ಲೈಸೆನ್ಸ್‌ ಸಿಗುವುದೇ ಎಂಬ ಗೆಣಿಕೆಹಾಳ್‌ ದೊಡ್ಡಬಸಪ್ಪರವರ ಪ್ರಶ್ನೆಗೆ, ಕೃಷಿ ಇಲಾಖೆಯ ಅಧಿಕಾರಿ ಪ್ರತಿಕ್ರಿಯಿಸಿ, ಸರಕಾರದ ತಿದ್ದುಪಡಿಯ ನಿಯಮಾವಳಿಯ ಪ್ರಕಾರ ಸಹಕಾರ ಸಂಘಗಳಿಗೆ ಫರ್ಟಿಲೈಜರ್‌ ಲೈಸೆನ್ಸ್‌ ನೀಡಲು ಅವಕಾಶವಿದೆ. ನೀವು ಕಚೇರಿಗೆ ಬಂದರೆ ಸಂಪೂರ್ಣ ಮಾಹಿತಿ ಪಡೆಯಬಹುದು ಎಂದರು.

ಈರುಳ್ಳಿ ಶೇಖರಣೆಗೆ ಸಹಾಯಧನ

ಈರುಳ್ಳಿ ಬೆಳೆದ ಮೇಲೆ ಶೇಖರಣೆಗೆ ಸಮಸ್ಯೆ ಎದುರಿಸಬೇಕಿದೆ ಎಂದು ಬನ್ನಿಗೋಳದ ಮೋಹನರೆಡ್ಡಿ ಅವರು ಕರೆ ಮಾಡಿ ಗಮನಕ್ಕೆ ತಂದಾಗ, ಪ್ರತಿಕ್ರಿಯಿಸಿದ ತೋಟಗಾರಿಕೆ ಇಲಾಖೆ ಅಧಿಕಾರಿ, ಈರುಳ್ಳಿ ಶೇಖರಣೆಗೆ ಎನ್‌ಎಚ್‌ಎಂ ಯೋಜನೆಯಡಿ ಸಹಾಯಧನ ಇದೆ. ಈ ಬಗ್ಗೆ ಇಲಾಖೆಯಲ್ಲಿ ಮಾಹಿತಿ ನೀಡಲಾಗುತ್ತದೆ ಎಂದರು.

ಎಸ್‌ಸಿ ಮತ್ತು ಎಸ್‌ಟಿಗೆ ಶೇ.75ರಷ್ಟು ಬೀಜ ಸಬ್ಸಿಡಿ

ಬಿತ್ತನೆಯ ಬೀಜದಲ್ಲಿ ಎಸ್‌ಸಿ ಮತ್ತು ಎಸ್‌ಟಿ ಸಮುದಾಯದವರಿಗೆ ಏನು ಸೌಲಭ್ಯವಿದೆ ಎಂದು ಸಣಾಪುರದ ಹನುಮಂತಪ್ಪನ ಪ್ರಶ್ನೆಗೆ ಕೃಷಿ ಜೆಡಿ ಶರಣಪ್ಪ, ಪ್ರತಿಯೊಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಬಿತ್ತನೆ ಬೀಜಗಳನ್ನು ಶೇ.75ರಷ್ಟು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಆಗಸ್ಟ್‌ ಅಂತ್ಯದವರೆಗೆ ವಿತರಿಸಲಾಗುತ್ತದೆ ಎಂದು ತಿಳಿಸಿದರು.

ಎಂಸಿಎಫ್‌ ಮತ್ತು ಸ್ಪೀಕ್‌ ಗೊಬ್ಬರಕ್ಕೆ ಬೇಡಿಕೆ

ಬೊಮ್ಮಗಟ್ಟದ ರಮೇಶ್‌ ಅವರು ಕರೆ ಮಾಡಿ, ಸೊಸೈಟಿಗಳಲ್ಲಿ ಎಂಸಿಎಫ್‌ ಮತ್ತು ಸ್ಪಿಕ್‌ ಗೊಬ್ಬರ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಂತೆ, ಇದಕ್ಕೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಪ್ರತಿಕ್ರಿಯಿಸಿ ಸೊಸೈಟಿಯಲ್ಲಿ ಯಾವುದೇ ಕಳಪೆ ಗೊಬ್ಬರ ವಿತರಣೆ ಮಾಡುತ್ತಿಲ್ಲ. ಮಂಗಳ ಮತ್ತು ಸ್ಪಿಕ್‌ ಗೊಬ್ಬರ ಸಿಗುತ್ತಿದೆ. ಎಲ್ಲ ಗೊಬ್ಬರದಲ್ಲಿ ಎನ್‌ಪಿಕೆ ಅಂಶಗಳು ಇರುತ್ತವೆ. ನೀವು ಯಾವುದಾದರೂ ಬಳಕೆ ಮಾಡಬಹುದೆಂದು ಮಾಹಿತಿ ನೀಡಿದರು.

'ಜೆಸ್ಕಾಂ ಫೋನ್‌ಇನ್‌ ಆಯೋಜಿಸಿ'

ಮಾಲ್ವಿ ಬಸವರಾಜ್‌ ಅವರು ಕರೆಮಾಡಿ ಪತ್ರಿಕೆಯು ಎಲ್ಲರ ಫೋನ್‌ಇನ್‌ ಕಾರ್ಯಕ್ರಮ ಆಯೋಜಿಸುತ್ತಿದೆ, ದಯವಿಟ್ಟು ಜೆಸ್ಕಾಂ ಅಧಿಕಾರಿಗಳ ಫೋನ್‌ಇನ್‌ ಕಾರ್ಯಕ್ರಮ ಮಾಡುವಂತೆ ಮನವಿ ಮಾಡಿದರು.

------

ಬಾಕ್ಸ್‌

'ವಿಕ'ಕ್ಕೆ ಕರೆಗಳ ಮಹಾಪೂರ

ಸೋಮವಾರ 'ವಿಜಯ ಕರ್ನಾಟಕ' ಕಚೇರಿಯಲ್ಲಿ 9.30ರಿಂದ10.30ರವರೆಗೆ ಫೋನ್‌ ಇನ್‌ ಕಾರ್ಯಕ್ರಮ ಆಯೋಜಿಸಲಾಗಿತ್ತು. 9 ಗಂಟೆಯಿಂದಲೇ ಕರೆಗಳು ಬರುವುದಕ್ಕೆ ಆರಂಭವಾಯಿತು. ಸುಮಾರು 30ಕ್ಕೂ ಹೆಚ್ಚು ಕರೆಗಳು ಬಂದವು, ಇದರಲ್ಲಿ 21 ಕರೆಗಳಿಗೆ ಅಧಿಕಾರಿಗಳು ಉತ್ತರಿಸಿದರು. ನಿಗದಿತ ಸಮಯ ಮುಗಿದ ನಂತರವೂ ಕರೆಗಳು ಮುಂದುವರಿದಿದ್ದವು. ತೋಟಗಾರಿಕೆ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ರೈತರ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿ, ಹೆಚ್ಚಿನ ಮಾಹಿತಿ ಒದಗಿಸಿದರು. ರೈತರೊಂದಿಗೆ ಮುಂಗಾರು ಹಂಗಾಮಿನಲ್ಲಿ ಅಗತ್ಯ ಮಾಹಿತಿ ಹಂಚಿಕೊಳ್ಳಲು ವೇದಿಕೆ ಕಲ್ಪಿಸಿದ 'ವಿಜಯ ಕರ್ನಾಟಕ' ಪತ್ರಿಕೆಗೆ ಎರಡು ಇಲಾಖೆಗಳ ಅಧಿಕಾರಿಗಳು ಧನ್ಯವಾದ ಹೇಳಿದರು.

----

ಕರೆ ಮಾಡಿದವರು

ವೆಂಕಟೇಶ್‌ ಅಮರಾವತಿ, ಚೋರನೂರು ಸಂಡೂರಪ್ಪ, ಗೆಣಿಕೆಹಾಳ್‌ ದೊಡ್ಡಬಸಪ್ಪ, ಸಿಂದಿಗೇರಿ ಪರಶುರಾಮ, ಬುಡ್ಡಿ ಬಸವರಾಜ್‌, ಬಾಚಿಗೊಂಡನಹಳ್ಳಿಯ ಹೊಸಗೇರಿಯ ವಿರೂಪಾಕ್ಷಪ್ಪ, ತಂಬ್ರಳ್ಳಿ ಶಾರದಮ್ಮ, ಸೀಗೇನಹಳ್ಳಿ ಶೇಷರೆಡ್ಡಿ, ಹಿರೇಹಡಗಲಿಯ ಸೋಮಶೇಖರ್‌ ಹಲಗೇರಿ, ಮಾಲ್ವಿ ಅಖಂಡ ಬಸವರಾಜ, ಸಂಡೂರಿನ ನಾಯ್ಡು, ಬಳ್ಳಾರಿಯ ರಾಜಶೇಖರ್‌, ಬನ್ನಿಗೋಳ ಕೊಟ್ರೇಶ್‌, ಗೆಣಿಕೆಹಾಳ್‌ ಬಸಪ್ಪ, ಬನ್ನಿಗೋಳ್‌ ಮೋಹನರೆಡ್ಡಿ, ಮಾಗಳ ಉಮೇಶ್‌ಗೌಡ, ಸಣಾಪುರ ಹನುಮಂತಪ್ಪ, ಬೊಮ್ಮಘಟ್ಟ ರಮೇಶ್‌, ಹಿರೇಕುಂಬಳಗುಂಟೆಯ ಚಂದ್ರಪ್ಪ ಸೇರಿದಂತೆ ಇತರರು ಕರೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ