Please enable javascript.Onion Price Drop: ಬೆಲೆ ಕುಸಿತ, ಈರುಳ್ಳಿ ಬೆಳಗಾರರು ಕಂಗಾಲು - onion crops price drop loss to farmers in ballari - Vijay Karnataka

Onion Price Drop: ಬೆಲೆ ಕುಸಿತ, ಈರುಳ್ಳಿ ಬೆಳಗಾರರು ಕಂಗಾಲು

Vijaya Karnataka Web 21 Mar 2023, 8:31 am
Subscribe

Onion Price Drop: ಈರುಳ್ಳಿ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಈರುಳ್ಳಿ ಫಸಲು ಕಟಾವು ಮಾಡದಿರುವಾಗ 1,500 ರಿಂದ 2 ಸಾವಿರ ರೂ.ಗೆ ಕ್ವಿಂಟಲ್ ಈರುಳ್ಳಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ರೈತರ ಫಸಲು ಬಂದಿದ್ದು, ಕಟಾವು ಹೆಚ್ಚಾಗಿದೆ ಆದರೆ ಬೆಲೆ ಕಡಿಮೆಗಾಗಿದೆ ಎಂದು ಅನ್ನದಾತ ಕಳವಳಗೊಂಡಿದ್ದಾನೆ.

ಹೈಲೈಟ್ಸ್‌:

  • ಈರುಳ್ಳಿ ಬೆಳೆಗಾರರಿಗೆ ನಷ್ಟ, 500-600 ರೂ.ಗೆ ಕ್ವಿಂಟಲ್‌ ಈರುಳ್ಳಿ ಮಾರಾಟ
  • ಸ್ಥಳೀಯವಾಗಿ ಎಪಿಎಂಸಿ ಮಾರುಕಟ್ಟೆ ಇಲ್ಲ
  • ಖರ್ಚು ಹೆಚ್ಚಾಗುತ್ತಿದೆ ಖರ್ಚಿಗೆ ತಕ್ಕ ಬೆಲೆ ಸಿಗುತ್ತಿಲ್ಲ, ಕಂಗಾಲಾದ ಅನ್ನದಾತ

Onion
Onion
ಬೆಲವರದಿ. ಪಿ.ವೀರೇಂದ್ರಗೌಡ
ಬಳ್ಳಾರಿ:
ಮಾರುಕಟ್ಟೆಯಲ್ಲಿ ಬೆಲೆ ಪಾತಾಳಕ್ಕೆ ಕುಸಿದ ಪರಿಣಾಮ ತಾಲೂಕು ವ್ಯಾಪ್ತಿಯಲ್ಲಿಈರುಳ್ಳಿ ಬೆಳೆದ ರೈತ ಸಮೂಹ ಕಂಗಾಲಾಗಿದೆ. ಸರಕಾರದ ಹಲವು ಯೋಜನೆಗಳಿದ್ದರೂ ಇಚ್ಛಾಶಕ್ತಿ, ಮಾಹಿತಿಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕೆಲ ತಿಂಗಳ ಹಿಂದೆ ಈರುಳ್ಳಿ ಫಸಲು ಕಟಾವು ಮಾಡಿಲ್ಲದಿರುವಾಗ 1,500 ರಿಂದ 2 ಸಾವಿರ ರೂ.ಗೆ ಕ್ವಿಂಟಲ್‌ ಈರುಳ್ಳಿ ಮಾರಾಟ ಮಾಡಲಾಗುತ್ತಿತ್ತು. ಇದೀಗ ರೈತರ ಫಸಲು ಬಂದಿದ್ದು, ಕಟಾವು ಹೆಚ್ಚಾಗಿದೆ. ಜತೆಗೆ ಮಹಾರಾಷ್ಟ್ರದ ಪುಣೆಯ ಈರುಳ್ಳಿ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಪರಿಣಾಮ ರೈತರು 500-600 ರೂ.ಗೆ ಕ್ವಿಂಟಲ್‌ ಈರುಳ್ಳಿ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುತ್ತಿದ್ದಾರೆ.

ಈರುಳ್ಳಿ ಬೆಳೆಗಾಗುವ ಖರ್ಚು
ಪ್ರತಿ ಎಕರೆ ಈರುಳ್ಳಿಯನ್ನು ಜಮೀನಿನಲ್ಲಿ ಬೀಜ ಚೆಲ್ಲಿ ಬೆಳೆದರೆ 40-45 ಸಾವಿರ ರೂ. ಖರ್ಚು ಬರುತ್ತದೆ. ಸಸಿ ಮಾಡಿ ನಾಟಿ ಮಾಡಿದಲ್ಲಿ ಮಡಿ ಎಳೆಯುವುದು, ಸಸಿ ನಾಟಿ ಮಾಡುವುದು ಸೇರಿ ಇತರೆ ಖರ್ಚುಗಳು ಸೇರಿ ಎಕರೆಗೆ 60-65 ಸಾವಿರ ರೂ. ಖರ್ಚು ಬರುತ್ತದೆ. ರೋಗಬಾಧೆ ಕಾಣಿಸಿಕೊಂಡಾಗ ಔಷಧ ಸಿಂಪಡಣೆಗೆ ಖರ್ಚುಗಳಿವೆ. ವೈಜ್ಞಾನಿಕವಾಗಿ ಆರೈಕೆ ಮಾಡಿ ಬೆಳೆಸಿದಲ್ಲಿ ಬೀಜ ಚೆಲ್ಲಿದರೆ ಪ್ರತಿ ಎಕರೆಗೆ 8-12 ಮೆ.ಟನ್‌, ಸಸಿ ನಾಟಿ ಮಾಡಿದರೆ ಎಕರೆಗೆ 10-13 ಮೆ.ಟನ್‌ ಈರುಳ್ಳಿ ಫಸಲು ಪಡೆಯಬಹುದಾಗಿದೆ.
ಬೀದರ್: ರಸ್ತೆಯುದ್ದಕ್ಕೂ ಆಲಿಕಲ್ಲು ರಾಶಿ, ಮಳೆಗೆ 9000 ಕೋಳಿಗಳ ಸಾವು, ಸಿಡಿಲಿಗೆ ವ್ಯಕ್ತಿ ಬಲಿ

ಎಪಿಎಂಸಿ ಮಾರುಕಟ್ಟೆ ಇಲ್ಲ

ಬಳ್ಳಾರಿ ರೆಡ್‌ ಹಾಗೂ ಸ್ಥಳೀಯ ಈರುಳ್ಳಿ ತಳಿಗಳನ್ನು ರೈತರು ಹೆಚ್ಚಾಗಿ ಬೆಳೆಯುತ್ತಾರೆ. ಸ್ಥಳೀಯವಾಗಿ ಎಪಿಎಂಸಿ ಮಾರುಕಟ್ಟೆ ಇಲ್ಲ. ಪರಿಣಾಮ ಸ್ಥಳೀಯ ದಲ್ಲಾಳಿಗಳು, ಹೊಸಪೇಟೆ, ಕೂಡ್ಲಿಗಿ ಭಾಗದ ಖರೀದಿದಾರರು ಈರುಳ್ಳಿ ಖರೀದಿಸಿ ಸಾಗಿಸುತ್ತಾರೆ. ಇನ್ನು ಕೆಲ ರೈತರು ದೂರದ ದಾವಣಗೆರೆ, ಬಳ್ಳಾರಿ ಮಾರುಕಟ್ಟೆಗೆ ಸಾಗಿಸಿ ಮಾರಾಟ ಮಾಡಿದ್ದರೂ ಸಾಗಣೆ ವೆಚ್ಚವೂ ಮೈಮೇಲೆ ಬೀಳುತ್ತಿದೆ. ಪರಿಣಾಮ ಸಿಕ್ಕಷ್ಟು ಸಿಗಲಿ ಎಂಬ ಭಾವದೊಂದಿಗೆ ಸ್ಥಳೀಯ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಹಲವು ಯೋಜನೆ
ಈರುಳ್ಳಿ ಬೆಳೆಗಾರರದಿಗೆ ಹನಿ ನೀರಾವರಿ ಯೋಜನೆ ಅಳವಡಿಕೆ ಮಾಡಿಕೊಳ್ಳಲು ತೋಟಗಾರಿಕೆ ಇಲಾಖೆಯಿಂದ ಪ್ರತಿ ಕುಟುಂಬಕ್ಕೆ 5 ಎಕರೆ ಪ್ರದೇಶದಲ್ಲಿಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಇತರರಿಗೆ ಶೇ.75, ಎಸ್ಸಿ, ಎಸ್ಟಿ ಸಮುದಾಯದ ರೈತರಿಗೆ ಶೆ.90 ರಷ್ಟು ಸಹಾಯ ಧನವನ್ನು ರಾಷ್ಟ್ರೀಯ ತೋಟಗಾರಿಕೆ ಮಿಷನ್‌ ಯೋಜನೆಯಡಿ ನೀಡಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ50-60 ಅರ್ಜಿಗಳನ್ನು ರೈತರು ತೋಟಗಾರಿಕೆ ಇಲಾಖೆಗೆ ಸಲ್ಲಿಸಿದೆ.
Crop loss: ದ್ರಾಕ್ಷಿಗೆ ಹುಳಿ ಹಿಂಡಿದ ಮಳೆ, ಅಕಾಲಿಕ ವರುಣಾರ್ಭಟಕ್ಕೆ ಅಪಾರ ಬೆಳೆ ಹಾನಿ
ಈರುಳ್ಳಿ ಬೆಲೆ ಕುಸಿತವಾದಾಗ ರೈತರು ಬೇಕಾ ಬಿಟ್ಟಿ ಬೆಲೆಗೆ ಮಾರಾಟ ಮಾಡಿ ನಷ್ಟಕ್ಕೀಡಾಗಬಾರದು ಎಂದು ಈರುಳ್ಳಿ ಸಂಗ್ರಹಣೆ ಘಟಕ ನಿರ್ಮಾಣಕ್ಕೂ ಇಲಾಖೆಯಿಂದ 87,500 ರೂ. ಸಹಾಯ ಧನ ಆಧಾರಿತವಾಗಿ ನೀಡಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ50 ಜನ ರೈತರು ಈರುಳ್ಳಿ ಸಂಗ್ರಹಣೆ ಘಟಕ ನಿರ್ಮಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ಈರುಳ್ಳಿ ಬೆಲೆ ಕುಸಿತ ರೈತರ ಕಣ್ಣಲ್ಲಿನೀರು ತರಿಸಿದ್ದು, ಉತ್ತಮ ಬೆಲೆ ಸಿಗಬೇಕಿದೆ ಎಂದು ರೈತರು ಕಾಯುತ್ತಿದ್ದಾರೆ.

ಈರುಳ್ಳಿ ನಾಟಿ

ತಾಲೂಕಿನ ಸಂಡೂರು ಹೋಬಳಿ ಕೆಂಪು ಮಣ್ಣಿನಿಂದ ಕೂಡಿದ್ದು, ಈರುಳ್ಳಿ ಬೆಳೆಯಲು ಉತ್ತಮ ಫಲವತ್ತತೆ ಹೊಂದಿದೆ. ಸಂಡೂರು, ಭುಜಂಗನಗರ, ಲಕ್ಷಿತ್ರ್ಮಪುರ, ಕೃಷ್ಣಾನಗರ, ದೌಲತ್‌ಪುರ, ಸುಶೀಲಾನಗರದಲ್ಲಿಅತಿಹೆಚ್ಚು ಈರುಳ್ಳಿ ಬೆಳೆ ಬೆಳೆಯಲಾಗುತ್ತದೆ. ಜತೆಗೆ ಚೋರನೂರು, ಬೊಮ್ಮಗಟ್ಟ ಪ್ರದೇಶದಲ್ಲಿಒಂದಷ್ಟು ಈರುಳ್ಳಿ ಬೆಳೆಯಲಾಗುತ್ತದೆ. ಒಟ್ಟಾರೆಯಾಗಿ ಹಿಂಗಾರಿನಲ್ಲಿ750 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿಈರುಳ್ಳಿ ನಾಟಿ ಮಾಡಲಾಗಿದೆ.

ಇದೀಗ ರೈತರ ಈರುಳ್ಳಿ ಬೆಳೆ ಸಂಪೂರ್ಣ ಕಟಾವಿಗೆ ಬಂದಿದೆ. ಮಾರುಕಟ್ಟೆಯಲ್ಲಿಪ್ರತಿ ಕ್ವಿಂಟಲ್‌ಗೆ ಕೇವಲ 500-600 ರೂ. ಬೆಲೆ ಕುಸಿದಿದೆ. ಸಾಲ ಮಾಡಿ ಈರುಳ್ಳಿ ಬೆಳೆದ ರೈತರು ಬೆಲೆ ಸಿಗುವವರೆಗೆ ಕಾಯುವಷ್ಟು ಆರ್ಥಿಕ ಭದ್ರತೆ ಹೊಂದಿಲ್ಲ. ಕಡಿಮೆ ಬೆಲೆಗೆ ಮಾರಾಟ ಮಾಡಿ ಕೈ ಸುಟ್ಟುಕೊಳ್ಳುತ್ತಿದ್ದಾರೆ. ಸರಕಾರ ಈರುಳ್ಳಿಗೆ ಸೂಕ್ತ ಬೆಂಬಲ ಬೆಲೆ ನೀಡಿ ರೈತರನ್ನು ಕಾಪಾಡಬೇಕು ಎಂದು ಸಂಡೂರು ತಾಲೂಕಿನ ದೌಲತ್‌ಪುರದ ರಾಜ್ಯ ಹಸಿರು ರೈತ ಸಂಘದ ಜಿಲ್ಲಾಕಾರ್ಯಾಧ್ಯಕ್ಷರಾದ ಶ್ರೀಪಾದ ಸ್ವಾಮಿ ಆಗ್ರಹಿಸಿದ್ದಾರೆ.

ಬೆಳೆಗಾರರು ಈರುಳ್ಳಿ ಬೆಲೆ ಕುಸಿದಾಗ ಸೂಕ್ತ ಬೆಲೆ ಸಿಗುವವರೆಗೆ ಸಂಗ್ರಹಿಸಿಡಲು ಸಂಗ್ರಹಣೆ ಘಟಕ ನಿರ್ಮಾಣಕ್ಕಾಗಿ ಇಲಾಖೆ 85,700 ರೂ. ಸಹಾಯ ಧನ ನೀಡುತ್ತದೆ. ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಬಯಸಿದ ರೈತರು ಜುಲೈ ಒಳಗಾಗಿ ಅರ್ಜಿ ಸಲ್ಲಿಸಿದಲ್ಲಿಅಕ್ಟೋಬರ್‌ ಒಳಗಾಗಿ ಸೌಲಭ್ಯ ಪಡೆಯಬಹುದಾಗಿದೆ. ಈರುಳ್ಳಿ ಸಂಗ್ರಹಣೆ ಘಟಕ, ಹನಿ ನೀರಾವರಿ ಯೋಜನೆಯಡಿ ಎಲ್ಲ ರೈತರು ಅರ್ಜಿ ಸಲ್ಲಿಸಬಹುದಾಗಿದೆ. ಅನುದಾನ ಲಭ್ಯತೆ ಆಧಾರದಲ್ಲಿಸಹಾಯ ಧನ ನೀಡಲಾಗುತ್ತದೆ ಎಂದು ಸಂಡೂರಿನ ಎಡಿ, ತೋಟಗಾರಿಕೆ ಇಲಾಖೆಯ ಹನುಮಪ್ಪ ನಾಯಕ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ