Please enable javascript.ತುಂಗಭದ್ರಾ ಐಸಿಸಿ ಸಭೆ 23ಕ್ಕೆ - Tungabhadra ICC Meeting 23 - Vijay Karnataka

ತುಂಗಭದ್ರಾ ಐಸಿಸಿ ಸಭೆ 23ಕ್ಕೆ

ವಿಕ ಸುದ್ದಿಲೋಕ 21 Jul 2015, 8:10 am
Subscribe

ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹಂಚಿಕೆ ಕುರಿತು ಚರ್ಚಿಸಲು ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ, ಬೆಂಗಳೂರಿನ ವಿಕಾಸ ಸೌಧದಲ್ಲಿ ಜುಲೈ 23ರ ಮಧ್ಯಾಹ್ನ 4.30ಕ್ಕೆ ಜರುಗಲಿದೆ ಎಂದು ಮುನಿರಾಬಾದ್‌ನ ನೀರಾವರಿ ಇಲಾಖೆಯ ಮೂಲಗಳು ತಿಳಿಸಿವೆ.

tungabhadra icc meeting 23
ತುಂಗಭದ್ರಾ ಐಸಿಸಿ ಸಭೆ 23ಕ್ಕೆ
ಹೊಸಪೇಟೆ; ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಹಂಚಿಕೆ ಕುರಿತು ಚರ್ಚಿಸಲು ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ, ಬೆಂಗಳೂರಿನ ವಿಕಾಸ ಸೌಧದಲ್ಲಿ ಜುಲೈ 23ರ ಮಧ್ಯಾಹ್ನ 4.30ಕ್ಕೆ ಜರುಗಲಿದೆ ಎಂದು ಮುನಿರಾಬಾದ್‌ನ ನೀರಾವರಿ ಇಲಾಖೆಯ ಮೂಲಗಳು ತಿಳಿಸಿವೆ.

ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ್ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಈ ಸಭೆಯಲ್ಲಿ ತುಂಗಭದ್ರಾ ಜಲಾಶಯದಿಂದ ರಾಜ್ಯದ ತ್ರಿವಳಿ ಜಿಲ್ಲೆಗಳ ಕಾಲುವೆಗಳಿಗೆ ನೀರು ಹಂಚಿಕೆ ಕುರಿತು ನಿರ್ಧಾರ ಕೈಗೊಳ್ಳಲಿದ್ದು, ಈ ಭಾಗದ ರೈತರಲ್ಲಿ ಹಸಿರಿನ ಕನಸು ಮೂಡಿದೆ.

ತುಂಗಭದ್ರಾ ಜಲಾಶಯದ ಒಳ ಹರಿವು ಸದ್ಯ ಉತ್ತಮ ಸ್ಥಿತಿಯಲ್ಲಿದೆ. ಜಲಾಶಯದಲ್ಲಿ ಜುಲೈ 20ರಂದು 43.118 ಟಿಎಂಸಿ ನೀರು ಸಂಗ್ರಹಗೊಂಡಿದೆ. ಜಲಾಶಯದಲ್ಲಿ ಕಳೆದ ವರ್ಷ ಜುಲೈ 20ರಂದು 30.735 ಟಿಎಂಸಿ ನೀರು ಸಂಗ್ರಹವಿತ್ತು. ತುಂಗಭದ್ರಾ ಜಲಾಶಯದಿಂದ ರಾಜ್ಯದ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳು ಸೇರಿ ಆಂಧ್ರಪ್ರದೇಶದ ಕರ್ನೂಲು, ಕಡಪ ಮತ್ತು ಅನಂತಪುರ ಜಿಲ್ಲೆಗಳಿಗೂ ನೀರು ಒದಗಿಸಲಾಗುತ್ತದೆ. ಕುಡಿಯುವ ನೀರಿಗಾಗಿ ತೆಲಂಗಾಣ ಕೂಡ ಆಂಧ್ರಪ್ರದೇಶದಿಂದ ಈ ಸಲ ಐದು ಟಿಎಂಸಿ ನೀರು ಪಡೆದುಕೊಳ್ಳಲಿದೆ. ವಾರ್ಷಿಕ ಅಂದಾಜು 148 ಟಿಎಂಸಿ ನೀರು, ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಲಿದ್ದು, ಈ ಪೈಕಿ 97 ಟಿಎಂಸಿ ನೀರು ರಾಜ್ಯಕ್ಕೆ ದೊರೆಯಲಿದೆ. ಉಳಿದ 51 ಟಿಎಂಸಿ ನೀರು ಆಂಧ್ರಪ್ರದೇಶ ಪಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ನೀರಿನ ಹಂಚಿಕೆ ಹೀಗೆ: ರಾಜ್ಯದ ಪಾಲಿನ 97 ಟಿಎಂಸಿ ನೀರಿನಲ್ಲಿ ಜಲಾಶಯದ ಎಡದಂಡೆ ಕಾಲುವೆಗಳಿಗೆ 62.7 ಟಿಎಂಸಿ ನೀರು ಹರಿಸಲಾಗುತ್ತದೆ. ಬಲದಂಡೆ ಕೆಳಮಟ್ಟದ ಕಾಲುವೆಗೆ 12.8 ಟಿಎಂಸಿ ಮತ್ತು ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಮುಂಗಾರು ಹಂಗಾಮಿನಲ್ಲಿ 11.8 ಟಿಎಂಸಿ ನೀರು ಹರಿಸಲಾಗುತ್ತದೆ. ಇನ್ನೂ ವಿಜಯನಗರ ಕಾಲದ ರಾಯ, ಬಸವ ಕಾಲುವೆಗಳಿಗೆ 4.7 ಟಿಎಂಸಿ ನೀರು, ತುಂಗಭದ್ರಾ ನದಿಗೆ 1.67 ಟಿಎಂಸಿ ನೀರು ಹರಿಬಿಡಲಾಗುತ್ತದೆ. ಏತನೀರಾವರಿ, ಕೈಗಾರಿಕೆಗಳಿಗೆ 3.29 ಟಿಎಂಸಿ ನೀರು ದೊರೆಯಲಿದೆ ಎಂದು ಕೊಪ್ಪಳದ ಮುನಿರಾಬಾದ್‌ನ ನೀರಾವರಿ ಇಲಾಖೆ ಮೂಲಗಳು ಖಚಿತಪಡಿಸಿವೆ.

ಇಷ್ಟು ಪ್ರದೇಶ ನೀರಾವರಿ: ತುಂಗಭದ್ರಾ ಜಲಾಶಯದಿಂದ ರಾಜ್ಯದ ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಗಳ 3.5ಲಕ್ಷ ಹೆಕ್ಟೇರ್ ಕೃಷಿ ಪ್ರದೇಶ ಹಾಗೂ ಆಂಧ್ರಪ್ರದೇಶದ ಕರ್ನೂಲು, ಕಡಪ ಮತ್ತು ಅನಂತಪುರ ಜಿಲ್ಲೆಗಳ 1.46 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ನೀರು ಪಡೆಯಲಾಗುತ್ತದೆ. ಉಭಯ ರಾಜ್ಯಗಳ ಆರು ಜಿಲ್ಲೆಗಳ ಕುಡಿವ ನೀರಿಗೂ ಜಲಾಶಯವನ್ನೇ ನೆಚ್ಚಿಕೊಳ್ಳಲಾಗಿದೆ. ಜತೆಗೆ ತೆಲಂಗಾಣ ಕೂಡ ಐದು ಟಿಎಂಸಿ ನೀರನ್ನು ಜಲಾಶಯದಿಂದ ಈ ಸಲ ಪಡೆಯುವ ಸಾಧ್ಯತೆಯಿದೆ ಎಂದು ಮುನಿರಾಬಾದ್‌ನ ನೀರಾವರಿ ಇಲಾಖೆಯ ವಿಶ್ವಸನೀಯ ಮೂಲಗಳು ‘ವಿಜಯ ಕರ್ನಾಟಕ’ಕ್ಕೆ ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ