ಆ್ಯಪ್ನಗರ

ತಂತಿ: ಚಿಂತೆಯಲ್ಲಿ ವಿದ್ಯಾರ್ಥಿಗಳು !

ಶಾಲೆ ಕಟ್ಟಡದ ಮೇಲೆಯೇ ಉಯ್ಯಾಲೆಯಂತೆ ವಿದ್ಯುತ್‌ ತಂತಿ ಜೋತಾಡುತ್ತಿದೆ. ಸಹಜವಾಗಿಯೇ ಇದು ವಿದ್ಯಾರ್ಥಿಗಳ ನೆಮ್ಮದಿ ಕದಡಿದ್ದು, ತಂತಿ ಹರಿದುಬೀಳಬಹುದೆನ್ನುವ ಭೀತಿ ಅವರನ್ನು ಚಿಂತೆಗೆ ದೂಡಿದೆ.

ವಿಕ ಸುದ್ದಿಲೋಕ 16 Dec 2016, 9:00 am

ಪಿ.ವೀರೇಂದ್ರಗೌಡ, ಸಂಡೂರು

ಶಾಲೆ ಕಟ್ಟಡದ ಮೇಲೆಯೇ ಉಯ್ಯಾಲೆಯಂತೆ ವಿದ್ಯುತ್‌ ತಂತಿ ಜೋತಾಡುತ್ತಿದೆ. ಸಹಜವಾಗಿಯೇ ಇದು ವಿದ್ಯಾರ್ಥಿಗಳ ನೆಮ್ಮದಿ ಕದಡಿದ್ದು, ತಂತಿ ಹರಿದುಬೀಳಬಹುದೆನ್ನುವ ಭೀತಿ ಅವರನ್ನು ಚಿಂತೆಗೆ ದೂಡಿದೆ.

ತಾಲೂಕಿನ 10 ಕ್ಕೂ ಹೆಚ್ಚು ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಇಂತಹ ಸಮಸ್ಯೆಯಿದ್ದು, ವಿದ್ಯಾರ್ಥಿಗಳು ನಿತ್ಯ ಆತಂಕದಲ್ಲೇ ದಿನದೂಡುವಂತಾಗಿದೆ. ಶಾಲೆಗಳ ಮೇಲೆ ಜವರಾಯನಂತೆ ಕಾಡುವ ವಿದ್ಯುತ್‌ ತಂತಿ ಮಾರ್ಗಗಳಿರುವುದರಿಂದ ಪಾಲಕರು, ಶಿಕ್ಷಕರು ಆಗಾಗ ಮಕ್ಕಳಿಗೆ ಎಚ್ಚರಿಕೆ ನೀಡುವುದು ಮುಂದುವರಿದಿದೆ. ನೇತಾಡುವ ತಂತಿಯ ಬಗ್ಗೆ ಗಮನ ಸೆಳೆದರೂ ಜೆಸ್ಕಾಂ ಎಚ್ಚೆತ್ತುಕೊಳ್ಳದಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಎಲ್ಲೆಲ್ಲಿ ಸಮಸ್ಯೆ?: ಪಟ್ಟಣದ 16 ನೇ ವಾರ್ಡ್‌ ಮತ್ತು ಭಾಗ್ಯಜ್ಯೋತಿನಗರ ಸ.ಕಿ.ಪ್ರಾ.ಶಾಲೆ ಸೇರಿ ತಾಲೂಕಿನ ಚೋರನೂರು ಉರ್ದುಶಾಲೆ, ನಾಗೇನಹಳ್ಳಿ, ಹುಲಿಕುಂಟೆ-73 , ಗುಂಡ್ಲಹಳ್ಳಿ, ಹೊಸ ದರೋಜಿ, ತೋರಣಗಲ್ಲುನ ಘೋರ್ಪಡೆ ನಗರ, ಕೃಷ್ಣಾನಗರ, ಲಕ್ಷ್ಮೀಪುರ ಸೇರಿ 10 ಕ್ಕೂ ಹೆಚ್ಚು ಸರಕಾರಿ ಪ್ರೌಢಶಾಲೆ, ಪ್ರಾಥಮಿಕ ಶಾಲೆ ಆವರಣದಲ್ಲಿನ ವಿದ್ಯುತ್‌ ತಂತಿ ಮಾರ್ಗ ಹಾಗೂ ಪರಿವರ್ತಕಗಳು ಕಂಟಕದಂತಿವೆ. ಕಳೆದ ಒಂದು ದಶಕದಿಂದ ವಿದ್ಯಾರ್ಥಿಗಳು ಹಾಗೂ ಶಿಕ್ಷ ಕರನ್ನು ಭಯದಲ್ಲಿಯೇ ದಿನ ಕಳೆಯುತ್ತಿದ್ದಾರೆ. ವರ್ಷದ ಹಿಂದೆ ಹುಲಿಕುಂಟೆ -73 ರ ಸ.ಹಿ.ಪ್ರಾ.ಶಾಲೆಯ 7 ನೇ ತರಗತಿ ವಿದ್ಯಾರ್ಥಿ ಓಬಳೇಶನ ಮೇಲೆ ವಿದ್ಯುತ್‌ ತಂತಿ ಹರಿದು ಬಿದ್ದಿತ್ತು. ಬಾಲಕ ಕಿರುಚಿಕೊಂಡ ಕಾರಣಕ್ಕೆ ಗ್ರಾಮಸ್ಥರು ತಂತಿ ಮಾರ್ಗದ ಡಿವೋಲ್‌ ಕಟ್ಟಿಗೆಯಿಂದ ಕೆಡವಿ ಅಪಾಯ ತಪ್ಪಿಸಿದ್ದರು.

ಜೆಸ್ಕಾಂ ಜಾಣತನ:ಮಾರ್ಗ ತೆರವುಗೊಳಿಸುವುದಕ್ಕೆ ಜೆಸ್ಕಾಂ ಒತ್ತು ಕೊಟ್ಟಿಲ್ಲ. ಶಾಲೆಗಳ ಕಟ್ಟಡ ನಿರ್ಮಾಣಕ್ಕೂ ಮೊದಲೇ ತಂತಿ ಮಾರ್ಗ ಸ್ಥಾಪನೆಯಾಗಿದೆ. ತಂತಿ ಮಾರ್ಗದ ಕೆಳಗೆ ಶಾಲಾ ಕೊಠಡಿ, ಕಾಂಪೌಡ್‌ ನಿರ್ಮಾಣ ಮಾಡಿರುವುದು ಶಿಕ್ಷ ಣ ಇಲಾಖೆಯ ಲೋಪ ಎನ್ನುವ ಕಾರಣ ನೀಡಲಾಗುತ್ತಿದೆ. ಶಿಕ್ಷ ಣ ಇಲಾಖೆ ಅಗತ್ಯ ಅನುದಾನ ನೀಡಿದಲ್ಲಿ ತಂತಿ ಮಾರ್ಗ ಸ್ಥಳಾಂತರಕ್ಕೆ ಕ್ರಮ ವಹಿಸಲಾಗುವುದು ಎಂದು ಜೆಸ್ಕಾಂ ಜಾಣತನ ಪ್ರದರ್ಶಿಸುತ್ತಿದೆ. ತಿಂಗಳ ಪ್ರಗತಿ ಪರಿಶೀಲನೆ ಸಭೆ, ತ್ರೈ ಮಾಸಿಕ ಪ್ರಗತಿ ಪರಿಶೀಲನೆ ಸಭೆ ಸೇರಿ ನಾನಾ ಸಭೆಗಳಲ್ಲಿ ಈ ಬಗ್ಗೆ ಬಿಸಿ ಚರ್ಚೆಯಾದರೂ ಸಮಸ್ಯೆಯಾಗಿ ಹಸಿಯಾಗೇ ಉಳಿದಿದೆ.

ಮರು ಸರ್ವೆ ಶುರು: ಸಂಸದೀಯ ಕಾರ್ಯದರ್ಶಿ ಈ.ತುಕಾರಾಮ ಸೂಚನೆ ಮೇರೆಗೆ ಇತ್ತೀಚೆಗೆ ಜೆಸ್ಕಾಂ ಬೊಮ್ಮಗಟ್ಟ ಸರಕಾರಿ ಮಾದರಿ ಹಿ.ಪ್ರಾ.ಶಾಲೆ ಆವರಣದ ಕಂಬ ಮತ್ತು ತಂತಿ ಮಾರ್ಗ ಬದಲಿಸಲಾಗಿದೆ. ಯರಯ್ಯನಹಳ್ಳಿ, ವಡೇರಹಳ್ಳಿ, ಚೋರನೂರು ಆಶ್ರಯ ಕಾಲೊನಿಯ ಸ.ಹಿ.ಪ್ರಾ.ಶಾಲೆ ಆವರಣದ ತಂತಿ ಮಾರ್ಗವೂ ಬದಲಾಗಿದ್ದು, ತಲಾ 1.50 ಲಕ್ಷ ರೂ.ವ್ಯಯಿಸಲಾಗಿದೆ. ಉಳಿದ ಶಾಲೆಗಳ ತಂತಿ ಮಾರ್ಗಗಳ ಬದಲಾವಣೆಗೆ ಮರು ಸರ್ವೆ ಪ್ರಾರಂಭಿಸಲಾಗಿದೆ ಎನ್ನುವ ಜೆಸ್ಕಾಂ ಅಧಿಕಾರಿಗಳು, ಸ್ಪಷ್ಟ ಕಾಲ ಮಿತಿ ನೀಡುತ್ತಿಲ್ಲ.

....

ಕೈ ಹಿಡಿಯದ ಯೋಜನೆ

ಪೂರಕ ವೆಂಬಂತೆ ವರ್ಷದ ಹಿಂದೆ ಕೇಂದ್ರ ಸರಕಾರದ ದೀನ್‌ ದಯಾಳ್‌ ಉಪಾಧ್ಯಾಯ ಯೋಜನೆಯಡಿ ಶಾಲೆ ಆವರಣದಲ್ಲಿನ ತಂತಿ ಮಾರ್ಗ, ಪರಿವರ್ತಕ, ಕಂಬಗಳ ಸ್ಥಳಾಂತರಕ್ಕೆ ಯೋಜನೆ ರೂಪಿಸಿ ಕೇಂದ್ರಕ್ಕೆ ಸಲ್ಲಿಸಲಾಗಿತ್ತು. ಯೋಜನೆಯಡಿ ಶಾಲೆ ಆವರಣದಲ್ಲಿನ ತಂತಿ ಮಾರ್ಗ ತೆರವಿಗೆ ಅವಕಾಶವಿಲ್ಲ ಎಂದು ವರದಿ ತಿರಸ್ಕೃತವಾಯಿತು.

------

ಸರಕಾರಿ ಶಾಲೆ ಕಾಂಪೌಡ್‌ ಹತ್ರ ಇರೊ ಟಿಸಿ ಮಳೆಗಾಲದಲ್ಲಿ ಕಿಡಿಕಾರುತ್ತದೆ. ವಿದ್ಯಾರ್ಥಿಗಳು ಬೆದರುತ್ತಾರೆ. ಮಳೆಗಾಲಕ್ಕೂ ಮೊದಲೇ ಟಿಸಿ ಬೇರೆ ಕಡೆ ಹಾಕಿದ್ರೆ ಅನುಕೂಲವಾಗುತ್ತದೆ.

-ಪಿ.ಶಾಂತಕುಮಾರ್‌, ಲಕ್ಷ್ಮಿಪುರ ನಿವಾಸಿ

.............................

ಇವರೆಲ್ಲ ಏನಂತಾರೆ.....

ಕೃಷ್ಣಾನಗರ ಶಾಲೆ ಆವರಣದ ತಂತಿ ಮಾರ್ಗ, ಲಕ್ಷ್ಮಿಪುರ ಸರಕಾರಿ ಶಾಲೆಯ ಮುಂದಿನ ಪರಿವರ್ತಕಗಳು ಅಪಾಯಕಾರಿಯಾಗಿವೆ. ಬೊಮ್ಮಗಟ್ಟ, ಯರಯ್ಯನಹಳ್ಳಿ, ವಡೇರಹಳ್ಳಿ, ಚೋರನೂರು ಶಾಲೆ ಆವರಣದ ತಂತಿ ಮಾರ್ಗ ಬದಲಾಯಿಸಿದ ಕುರಿತು ಜೆಸ್ಕಾಂ ಈವರೆಗೆ ನಮಗೆ ಮಾಹಿತಿ ನೀಡಿಲ್ಲ. ಈ ಬಗ್ಗೆ ಸಂಬಂಧಿಸಿದ ಶಾಲೆಯ

ಮುಖ್ಯಗುರುಗಳಿಂದ ವರದಿ ಪಡೆಯುತ್ತೇನೆ.

-ಮೌನೇಶ ಬಡಿಗೇರ್‌, ಬಿಇಒ.ಸಂಡೂರು

........

ಪುರಸಭೆ ವ್ಯಾಪ್ತಿಯ ಲಕ್ಷ್ಮಿಪುರದ ಸರಕಾರಿ ಶಾಲೆ ಕಾಂಪೌಂಡ್‌ಗೆ ಹೊಂದಿಕೊಂಡ ವಿದ್ಯುತ್‌ ಪರಿವರ್ತಕ ಸ್ಥಳಾಂತರಕ್ಕಾಗಿ 2015-16 ನೇ ಸಾಲಿನ ಎಸ್‌ಎಫ್‌ಸಿ ಅನುದಾನದಲ್ಲಿ 2.50 ಲಕ್ಷ ರೂ., ಕಾಯ್ದಿರಿಸಲಾಗಿದೆ. ಜೆಸ್ಕಾಂನವರು ಸ್ಥಳ ಸೂಚಿಸಿದ ಕೂಡಲೇ ಟಿಸಿ ಸ್ಥಳಾಂತರ ಕಾಮಗಾರಿ ಪ್ರಾರಂಭಿಸಲಾಗುವುದು.

-ಅರುಣ್‌ ಪಾಟೀಲ್‌, ಜೆಇ, ಪುರಸಭೆ, ಸಂಡೂರು

........

ಬೊಮ್ಮಗಟ್ಟ, ಯರಯ್ಯನಹಳ್ಳಿ, ವಡೇರಹಳ್ಳಿ, ಚೋರನೂರು ಶಾಲೆ ಆವರಣದ ತಂತಿ ಮಾರ್ಗ ಬದಲಾಯಿಸಿದೆ. ಉಳಿದ ಶಾಲೆಗಳ ಆವರಣದ ತಂತಿ ಮಾರ್ಗ, ಕಂಬ, ಟಿಸಿ ಸ್ಥಳಾಂತರಕ್ಕೆ ಮರು ಸರ್ವೆ ಮಾಡುತ್ತೇವೆ. ಲಕ್ಷ್ಮಿಪುರ ಶಾಲೆ ಕಾಂಪೌಡ್‌ಗೆ ಹೊಂದಿಕೊಂಡ ಟಿಸಿಯನ್ನು ಸ್ಥಳಾಂತರಿಸಲು ಪುರಸಭೆ ಆಡಳಿತ ಒಪ್ಪಿದೆ.

-ಉಮೇಶ್‌ಕುಮಾರ್‌, ಎಇಇ, ಜೆಸ್ಕಾಂ. ಸಂಡೂರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ