Please enable javascript.ಘನ ತ್ಯಾಜ್ಯ ವರ್ಗೀಕರಣಕ್ಕೂ ಖಾಸಗಿ ಸಹಭಾಗಿತ್ವ: ಪಾಲಿಕೆ ಆಯುಕ್ತ - ಘನ ತ್ಯಾಜ್ಯ ವರ್ಗೀಕರಣಕ್ಕೂ ಖಾಸಗಿ ಸಹಭಾಗಿತ್ವ: ಪಾಲಿಕೆ ಆಯುಕ್ತ - Vijay Karnataka

ಘನ ತ್ಯಾಜ್ಯ ವರ್ಗೀಕರಣಕ್ಕೂ ಖಾಸಗಿ ಸಹಭಾಗಿತ್ವ: ಪಾಲಿಕೆ ಆಯುಕ್ತ

ವಿಕ ಸುದ್ದಿಲೋಕ 30 Jun 2013, 4:58 am
Subscribe

ಘನ ತ್ಯಾಜ್ಯ ಸಂಸ್ಕರಣೆ ಹಾಗೂ ಮರುಬಳಕೆಗೆ ಐಟಿಸಿ ಸಂಸ್ಥೆ ಜತೆ ಖಾಸಗಿ ಸಹಭಾಗಿತ್ವಕ್ಕೆ ಬಿಬಿಎಂಪಿ ಮುಂದಾಗಿದೆ.

ಘನ ತ್ಯಾಜ್ಯ ವರ್ಗೀಕರಣಕ್ಕೂ ಖಾಸಗಿ ಸಹಭಾಗಿತ್ವ: ಪಾಲಿಕೆ ಆಯುಕ್ತ
ಬೆಂಗಳೂರು: ಘನ ತ್ಯಾಜ್ಯ ಸಂಸ್ಕರಣೆ ಹಾಗೂ ಮರುಬಳಕೆಗೆ ಐಟಿಸಿ ಸಂಸ್ಥೆ ಜತೆ ಖಾಸಗಿ ಸಹಭಾಗಿತ್ವಕ್ಕೆ ಬಿಬಿಎಂಪಿ ಮುಂದಾಗಿದೆ.

ನಗರದಲ್ಲಿ ಪ್ರತಿ ದಿನ ಸುಮಾರು ಐದು ಸಾವಿರ ಮೆಟ್ರಿಕ್ ಟನ್ ಕಸ ಉತ್ಪತ್ತಿಯಾಗುತ್ತಿದೆ. ಇದರಲ್ಲಿ ಶೇ. 30ರಷ್ಟು ಮರುಬಳಕೆಗೆ ಯೋಗ್ಯ ಎಂದು ಅಂದಾಜಿಸಲಾಗಿದೆ. ಹೀಗಾಗಿ ಪ್ಲಾಸ್ಟಿಕ್ ಸೇರಿದಂತೆ ಮತ್ತಿತರ ಘನ ತ್ಯಾಜ್ಯ ಸಂಸ್ಕರಣೆಗೆ ಐಟಿಸಿ ಸಂಸ್ಥೆಯು ಮುಂದೆ ಬಂದಿದೆ. ಇದಕ್ಕಾಗಿಯೇ ಇಟಲಿಯಿಂದ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳಲಾಗಿದೆ. ಐಟಿಸಿಯು ಮೊದಲ ಹಂತದಲ್ಲಿ ನಗರದ ಸುಮಾರು 12 ವಾರ್ಡ್‌ಗಳಲ್ಲಿ ಸಂಸ್ಕರಣ ಕೇಂದ್ರಗಳನ್ನು ಸ್ಥಾಪಿಸಲಿದ್ದು, ಪಾಲಿಕೆಯು ಜಾಗದ ವ್ಯವಸ್ಥೆ ಮಾಡಲಿದೆ.

ಈ ಕುರಿತು ಮಾಹಿತಿ ನೀಡಲು ಶನಿವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಎಂ. ಲಕ್ಷ್ಮೀನಾರಾಯಣ, ‘‘ಬಿಬಿಎಂಪಿ ಕೂಡ ಎಲ್ಲ ವಾರ್ಡ್‌ಗಳಲ್ಲಿ ಘನ ತ್ಯಾಜ್ಯ ಸಂಗ್ರಹಿಸುವ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಗೆ ಜಾರಿಗೆ ತಂದಿದೆ. ಮುಂದಿನ ಒಂದು ತಿಂಗಳಿನಲ್ಲಿ ಎಲ್ಲ ವಾರ್ಡ್‌ಗಳಲ್ಲೂ ಘನ ತ್ಯಾಜ್ಯ ಸಂಗ್ರಹಿಸುವ ಕೆಲಸ ವ್ಯವಸ್ಥಿತವಾಗಿ ಆರಂಭವಾಗಲಿದೆ. ಇದೇ ವೇಳೆ ಐಟಿಸಿ ಸಂಸ್ಥೆಯು ಪ್ಲಾಸ್ಟಿಕ್ ಸೇರಿದಂತೆ ಘನ ತ್ಯಾಜ್ಯ ಸಂಸ್ಕರಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ನಗರದಲ್ಲಿ ಪರಿಚಯಿಸಲಿದೆ. ಇದರಿಂದ ನಗರದ ತ್ಯಾಜ್ಯ ಸಮಸ್ಯೆಗೆ ಸಣ್ಣ ಮಟ್ಟಿನ ಪರಿಹಾರ ಸಿಗಲಿದೆ,’’ ಎಂದು ಭರವಸೆ ನೀಡಿದರು.

ಖಾಸಗಿ ಕಂಪನಿಗಳ ಜಾಗದಲ್ಲಿ ಪಾಲಿಕೆಯೇ ತಂತ್ರಜ್ಞಾನ ಅಳವಡಿಸಿಕೊಳ್ಳುವ ಸಾಧ್ಯತೆಯ ಕುರಿತ ಪ್ರಶ್ನೆಗೆ, ‘‘ದೂರಗಾಮಿ ನೆಲೆಯಲ್ಲಿ ಪಾಲಿಕೆಯೂ ಇಂತಹ ಮೂಲಸೌಕರ್ಯಗಳನ್ನು ಹೊಂದುವುದು ಅವಶ್ಯ. ಮೊದಲ ಬಾರಿಗೆ ವಿದೇಶಿ ತಂತ್ರಜ್ಞಾನ ಆಮದಾಗುತ್ತಿದೆ. ಹೀಗಾಗಿ ಇದೊಂದು ಪ್ರಾಯೋಗಿಕ ಪ್ರಕ್ರಿಯೆ ಅಷ್ಟೆ,’’ ಎಂದರು.

‘‘ಯೋಜನೆಯ ಅಡಿಯಲ್ಲಿ ಚಿಂದಿ ಆಯುವವರನ್ನು ರಾಯಭಾರಿಗಳನ್ನಾಗಿ ಆಯ್ದುಕೊಳ್ಳಲಾಗಿದೆ. ಮೂಲದಲ್ಲಿಯೇ ಘನ ತ್ಯಾಜ್ಯ ಸಂಸ್ಕರಿಸಿ ನೀಡುವುದರಿಂದ ಅವರ ಆರ್ಥಿಕ ಮಟ್ಟವೂ ವೃದ್ಧಿಯಾಗಲಿದೆ. ಅದಕ್ಕಾಗಿ ಸಂಸ್ಥೆಯು ಅವರಿಗೆ ತರಬೇತಿ ನೀಡಲಿದೆ,’’ ಎಂದು ಐಟಿಸಿಯ ಚಿತ್ತರಂಜನ್ ಧರ್ ತಿಳಿಸಿದರು.

‘‘ಜುಲೈ 13ರಂದು ಬಸವನಗುಡಿಯ ರಾಷ್ಟ್ರೀಯ ಕಾಲೇಜು ಮೈದಾನದಲ್ಲಿ ಮರುಸಂಸ್ಕರಣ ದಿನದ ವಾರ್ಷಿಕೋತ್ಸವನ್ನು ಆಯೋಜಿಸಲಾಗಿದೆ. ಅಂದು ಶಾಲಾ ಮಕ್ಕಳು ಸೇರಿದಂತೆ ಸಾವಿರಾರು ಜನರು ಪಾಲ್ಗೊಳ್ಳಲಿದ್ದಾರೆ. ಪ್ರತಿ ಮನೆಯಲ್ಲೂ ಮೂಲದಲ್ಲಿಯೇ ಕಸ ವಿಂಗಡಣೆಯ ಅರಿವು ಮೂಡಿಸಲು ಈ ಮೂಲಕ ಪ್ರಯತ್ನಿಸಲಾಗುವುದು,’’ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ