Please enable javascript.ಸ್ವಯಂ ನಿವೃತ್ತಿಗೆ ಐಜಿಪಿ ಹೊಸೂರ್ ಪತ್ರ - ಸ್ವಯಂ ನಿವೃತ್ತಿಗೆ ಐಜಿಪಿ ಹೊಸೂರ್ ಪತ್ರ - Vijay Karnataka

ಸ್ವಯಂ ನಿವೃತ್ತಿಗೆ ಐಜಿಪಿ ಹೊಸೂರ್ ಪತ್ರ

ವಿಕ ಸುದ್ದಿಲೋಕ 21 Sep 2013, 4:55 am
Subscribe

ಹಿರಿಯ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸೂರ್ ಅವರು ಸೇವೆಯಿಂದ ಸ್ವಯಂ ನಿವೃತ್ತಿ ಪಡೆಯಲು ಬಯಸಿದ್ದಾರೆ.

ಸ್ವಯಂ ನಿವೃತ್ತಿಗೆ ಐಜಿಪಿ ಹೊಸೂರ್ ಪತ್ರ
ಬೆಂಗಳೂರು: ಹಿರಿಯ ಪೊಲೀಸ್ ಅಧಿಕಾರಿ ಗೋಪಾಲ್ ಬಿ. ಹೊಸೂರ್ ಅವರು ಸೇವೆಯಿಂದ ಸ್ವಯಂ ನಿವೃತ್ತಿ ಪಡೆಯಲು ಬಯಸಿದ್ದಾರೆ.

ಸರಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಅವರಿಗೆ ಸೆ.17ರಂದು ಪತ್ರ ಬರೆದಿರುವ ಹೊಸೂರ್, ತಮ್ಮನ್ನು ಸೇವೆಯಿಂದ ಮುಕ್ತಿಗೊಳಿಸುವಂತೆ ಮನವಿ ಮಾಡಿದ್ದಾರೆ. ಇನ್ನೂ ಅವರ ಸೇವಾವಧಿ 2014ರ ಮಾರ್ಚ್ ವರೆಗೆ ಇದ್ದರೂ, ಹೊಸೂರ್ ಏಕಾಏಕಿ ಸ್ವಯಂ ನಿವೃತ್ತಿ ಬಯಸಿ ಸರಕಾರಕ್ಕೆ ಪತ್ರಬರೆದಿರುವುದು ಪೊಲೀಸ್ ಇಲಾಖೆಯಲ್ಲಿ ಅಚ್ಚರಿ ಮೂಡಿಸಿದೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಗುಪ್ತಚರ ಇಲಾಖೆಯಲ್ಲಿ ಮುಖ್ಯಸ್ಥರಾಗಿದ್ದ ಅವರು, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಅವಧಿಯಲ್ಲೂ ಕೆಲಸ ಮಾಡಿದ್ದರು.

ಗುಪ್ತದಳದಂತಹ ಅಯಕಟ್ಟಿನ ವಿಭಾಗಕ್ಕೆ ಮುಖ್ಯಸ್ಥರಾಗಿದ್ದ ಹೊಸೂರ್ ಅವರನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಗೃಹರಕ್ಷಕದಳ ಮತ್ತು ನಾಗರಿಕ ರಕ್ಷಣೆ ಇಲಾಖೆಗೆ ವರ್ಗಾವಣೆ ಮಾಡಿತ್ತು. ಇದರಿಂದ ಸಹಜವಾಗಿಯೇ ಗೋಪಾಲ್ ಹೊಸೂರ್ ಅವರು ಬೇಸರಗೊಂಡಿದ್ದರು ಎನ್ನಲಾಗಿದೆ.

ಕೆಲ ಖಾಸಗಿ ವ್ಯವಹಾರಗಳಲ್ಲಿ ಹೊಸೂರ್ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದರಿಂದ ನೊಂದ ಅವರು, ಇದೀಗ ಸ್ವಯಂ ನಿವೃತ್ತಿ ಪಡೆಯಲು ಮುಂದಾಗಿದ್ದಾರೆ. ಆದರೆ, ಅವರ ಸ್ವಯಂನಿವೃತ್ತಿ ಪತ್ರವನ್ನು ಅಂಗೀಕರಿಸಲು ಸರಕಾರಕ್ಕೆ ಮೂರು ತಿಂಗಳ ಕಾಲಾವಕಾಶ ಇರುತ್ತದೆ.

ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಗೋಪಾಲ್ ಬಿ. ಹೊಸೂರ್ ಸಹ ಒಬ್ಬರು. 1980ರಲ್ಲಿ ಇಲಾಖೆಗೆ ಸೇರಿದ ಅವರು, ಅರಸೀಕೆರೆಯಲ್ಲಿ ಡಿವೈಎಸ್ಪಿಯಾಗಿ ತಮ್ಮ ಸೇವೆ ಆರಂಭಿಸಿದ್ದರು. ನಂತರ ಹಲವು ಕಡೆ ಕೆಲಸ ಮಾಡಿ ಬೆಂಗಳೂರಿನಲ್ಲಿ ಕೇಂದ್ರ ವಿಭಾಗದ ಡಿಸಿಪಿಯಾಗಿದ್ದರು. ಡಿಐಜಿ ಹುದ್ದೆಗೆ ಬಡ್ತಿ ಪಡೆದ ಹೊಸೂರ್, ಸಿಎಆರ್‌ನಲ್ಲಿ ಕರ್ತವ್ಯ ನಿರ್ವಹಿಸಿ ಹಲವು ಸುಧಾರಣೆಗಳನ್ನು ತಂದರು. ನಗರದಲ್ಲಿ ಜಂಟಿ ಪೊಲೀಸ್ ಆಯುಕ್ತರಾಗಿ ಬಹುಮುಖ್ಯ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಮುಖ್ಯಪಾತ್ರ ವಹಿಸಿದ್ದರು.

ಕಾಡುಗಳ್ಳ ವೀರಪ್ಪನ್ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿಶೇಷ ಕಾರ್ಯಾಪಡೆಯಲ್ಲಿದ್ದ ಹೊಸೂರ್, ವೀರಪ್ಪನ ಅಡಗುದಾಣಗಳನ್ನು ಪತ್ತೆಹಚ್ಚಿ ಆತನ ಸಹಚರರನ್ನು ಬಗ್ಗುಬಡಿದಿದ್ದರು. ಕಾರ್ಯಾಚರಣೆ ವೇಳೆ ವೀರಪ್ಪನ್ ಹಾರಿಸಿದ್ದ ಗುಂಡು ಹೊಸೂರ್ ಅವರ ಕುತ್ತಿಗೆ ಸೀಳಿಕೊಂಡು ಹೋಗಿತ್ತು. ಪವಾಡದಂತೆ ಅವರು ಪಾರಾಗಿದ್ದರು. ನಕ್ಸಲ್, ಭೂಗತಚಟುವಟಿಕೆ, ಹಾಗೂ ರಾಜ್ಯಕ್ಕೆ ಹೊರಭಾಗಗಳಿಂದ ಬರುತ್ತಿದ್ದ ಶಂಕಿತ ಉಗ್ರರ ಕುರಿತು ಮಾಹಿತಿ ನೀಡಿ ನಡೆಯಬಹುದಾಗಿದ್ದ ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದರು.

ಕೆಲಸ ಮಾಡುವ ಉತ್ಸಾಹ ಇನ್ನೂ ಇದೆ. ಆದರೆ, ಸಾರ್ವಜನಿಕ ಜೀವನದಲ್ಲಿ ಸೇವೆ ಮಾಡುವ ಉದ್ದೇಶದಿಂದ ನಿವೃತ್ತಿ ಪಡೆಯಲು ಬಯಸಿದ್ದೇನೆ. ಇದರಲ್ಲಿ ವಿಶೇಷ ಕಾರಣವೇನೂ ಇಲ್ಲ. ಇಲಾಖೆಯಲ್ಲಿ 39 ವರ್ಷ ಸೇವೆ ಸಲ್ಲಿಸಿದ್ದೇನೆ. ಸಂತೃಪ್ತಿ ಇದೆ.
- ಗೋಪಾಲ್ ಬಿ. ಹೊಸೂರ್, ಐಜಿಪಿ, ಗೃಹರಕ್ಷಕದಳ ಮತ್ತು ನಾಗರಿಕ ರಕ್ಷಣೆ ಇಲಾಖೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ