Please enable javascript.ಗ್ರೇಡೆಡ್ ಬಸ್ ಸೇವೆಗಳ ಬಗ್ಗೆ ಬಹಿರಂಗ ಚರ್ಚೆ - ಗ್ರೇಡೆಡ್ ಬಸ್ ಸೇವೆಗಳ ಬಗ್ಗೆ ಬಹಿರಂಗ ಚರ್ಚೆ - Vijay Karnataka

ಗ್ರೇಡೆಡ್ ಬಸ್ ಸೇವೆಗಳ ಬಗ್ಗೆ ಬಹಿರಂಗ ಚರ್ಚೆ

Vijaya Karnataka Web 21 Dec 2014, 4:28 am
Subscribe

ನಗರದಲ್ಲಿ ವೋಲ್ವೊ, ಸುವರ್ಣ, ಟ್ರಂಕ್, ವಾಯುವಜ್ರ, ಅಟಲ್ ಸಾರಿಗೆಯಂತಹ ಗ್ರೇಡೆಡ್ (ನಾನಾ ಶ್ರೇಣಿ) ಬಸ್‌ಗಳ ವ್ಯವಸ್ಥೆಯನ್ನು ರದ್ದುಪಡಿಸಿ, ಎಲ್ಲಾ ಸಾರ್ವಜನಿಕರಿಗೆ ಒಂದೇ ತೆರನಾದ ಉತ್ತಮ ಸೌಲಭ್ಯಗಳುಳ್ಳ ಒಂದು ಸಾಮಾನ್ಯ ಸಾರಿಗೆ ಸೇವೆ ಇರಲಿ. ಅದರಲ್ಲೂ ಶ್ರೀಮಂತರಿಗೆ ಅನುಕೂಲಕರವಾಗಿರುವ ದುಬಾರಿ ಬೆಲೆಯ ವೋಲ್ವೊ ಬಸ್‌ಗಳ ಸೌಲಭ್ಯ ಬೇಡವೇ ಬೇಡ ಎಂಬ ಒತ್ತಾಯವನ್ನು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಸರಕಾರದ ಮುಂದಿಟ್ಟಿದೆ.

ಗ್ರೇಡೆಡ್ ಬಸ್ ಸೇವೆಗಳ ಬಗ್ಗೆ ಬಹಿರಂಗ ಚರ್ಚೆ
ಬೆಂಗಳೂರು: ನಗರದಲ್ಲಿ ವೋಲ್ವೊ, ಸುವರ್ಣ, ಟ್ರಂಕ್, ವಾಯುವಜ್ರ, ಅಟಲ್ ಸಾರಿಗೆಯಂತಹ ಗ್ರೇಡೆಡ್ (ನಾನಾ ಶ್ರೇಣಿ) ಬಸ್‌ಗಳ ವ್ಯವಸ್ಥೆಯನ್ನು ರದ್ದುಪಡಿಸಿ, ಎಲ್ಲಾ ಸಾರ್ವಜನಿಕರಿಗೆ ಒಂದೇ ತೆರನಾದ ಉತ್ತಮ ಸೌಲಭ್ಯಗಳುಳ್ಳ ಒಂದು ಸಾಮಾನ್ಯ ಸಾರಿಗೆ ಸೇವೆ ಇರಲಿ. ಅದರಲ್ಲೂ ಶ್ರೀಮಂತರಿಗೆ ಅನುಕೂಲಕರವಾಗಿರುವ ದುಬಾರಿ ಬೆಲೆಯ ವೋಲ್ವೊ ಬಸ್‌ಗಳ ಸೌಲಭ್ಯ ಬೇಡವೇ ಬೇಡ ಎಂಬ ಒತ್ತಾಯವನ್ನು ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಸರಕಾರದ ಮುಂದಿಟ್ಟಿದೆ.

ಬೆಂಗಳೂರು ಬಸ್ ಪ್ರಯಾಣಿಕರ ವೇದಿಕೆ ಇನ್‌ಫೆಂಟ್ರಿ ರಸ್ತೆಯ ವಿಶ್ರಾಂತಿ ನಿಲಯಂನಲ್ಲಿ ‘ಅಂಥ ಬಸ್ ಇಂಥ ಬಸ್’ ಶೀರ್ಷಿಕೆಯಡಿ ನಗರದಲ್ಲಿ ಗ್ರೇಡೆಡ್ ಬಸ್ ಸೇವೆಗಳ ಬಗ್ಗೆ ಶನಿವಾರ ಬಹಿರಂಗ ಚರ್ಚೆ ಆಯೋಜಿಸಿತ್ತು.

ಈ ವೇಳೆ ಸಾರ್ವಜನಿಕರಾದ ಪುಷ್ಪಾ, ರಾಧಾ, ವಿನಯ್, ಪೂಜಾ ಮತ್ತಿತರರು, ‘‘ಮೆಜೆಸ್ಟಿಕ್ ಮತ್ತು ವೈಟ್‌ಫೀಲ್ಡ್ ನಡುವೆ ಪ್ರಯಾಣಿಸುವ ಬಸ್ ಮಾರ್ಗ ಸಂಖ್ಯೆ 335ರಲ್ಲಿ ಟೆಕ್ಕಿಗಳು ಮತ್ತು ಐಟಿ ಕ್ಷೇತ್ರದಲ್ಲಿಲ್ಲದ ಇತರೆ ನೂರಾರು ಪ್ರಯಾಣಿಕರು ಸಂಚರಿಸುತ್ತಾರೆ. ಆದರೆ ಈ ಮಾರ್ಗದಲ್ಲಿ ಬಿಎಂಟಿಸಿ ಸಂಸ್ಥೆಯು 47 ಎಸಿ ಬಸ್‌ಗಳನ್ನು ಸೇವೆಗಿಳಿಸಿದರೆ, ಕೇವಲ 12 ಸಾಧಾರಣ ಬಸ್‌ಗಳನ್ನು ಸೇವೆಗಿಳಿಸಿದೆ. ಇದರಿಂದ ಸಾಮಾನ್ಯ ಪ್ರಯಾಣಿಕರು ದುಬಾರಿ ಹಣ ಕೊಟ್ಟು ವೋಲ್ವೊದಲ್ಲಿ ಪ್ರಯಾಣಿಸಲು ತೊಂದರೆಯಾಗುತ್ತಿದೆ. ಸಾಮಾನ್ಯ ಬಸ್‌ಗಳ ಸಂಖ್ಯೆ ಕಡಿಮೆಯಿರುವುದರಿಂದ ಆ ಬಸ್‌ಗಳಿಗಾಗಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಸ್ಯೆಗಳು ನಗರದ ನಾನಾ ಭಾಗಗಳಲ್ಲಿದೆ,’’ಎಂದರು.

‘‘ಸರಕಾರಕ್ಕೆ ಲಾಭ ಮಾಡುವ ಉದ್ದೇಶವಿದೆಯೇ ಹೊರತು ಸಾರ್ವಜನಿಕರಿಗೆ ಒಳ್ಳೆಯ ಸೇವೆ ನೀಡುವ ಉದ್ದೇಶವಿಲ್ಲ. ಕಂಪನಿ, ಕಾಲೇಜು ಹಾಗೂ ಸಂಸ್ಥೆಗಳಿಗೆ ಬಸ್‌ಗಳನ್ನು ನೀಡುತ್ತಿರುವುದರಿಂದ ಅದು ಸಾಬೀತಾಗುತ್ತಿದೆ. ಶ್ರೀಮಂತ ವರ್ಗಕ್ಕಾಗಿ ಕೋಟ್ಯಂತರ ರೂ. ಖರ್ಚು ಮಾಡಿ ಹವಾನಿಯಂತ್ರಿತ ಬಸ್‌ಗಳನ್ನು ಬಿಡುತ್ತದೆ. ಆದರೆ ಲಕ್ಷಾಂತರ ಜನ ಸಂಚರಿಸುವ ಬಡ ಹಾಗೂ ಮಧ್ಯಮ ವರ್ಗಕ್ಕೆ ಬಸ್‌ಗಳ ಕೊರತೆ ಮಾಡುತ್ತದೆ. ಕೆಲವು ಮಾರ್ಗಗಳಲ್ಲಿ ತೀರಾ ಜನಸಂದಣಿಯಿರುತ್ತದೆ. ಆದ್ದರಿಂದ ಸರಕಾರ ಕೂಡಲೇ ಇತ್ತ ಗಮನ ಹರಿಸಿ ವೋಲ್ವೊ ಮತ್ತಿತರ ಶ್ರೇಣಿಯಾಧಾರಿತ ಬಸ್‌ಗಳನ್ನು ರದ್ದುಪಡಿಸಿ, ಮಕ್ಕಳು, ವಯಸ್ಕರು, ಮಹಿಳೆಯರು, ವೃದ್ಧರು, ಬಡ-ಶ್ರೀಮಂತರೆಂಬ ಬೇಧವಿಲ್ಲದೆ ಎಲ್ಲಾ ವರ್ಗದವರಿಗೂ ಗುಣಮಟ್ಟದ, ಕಡಿಮೆ ಬೆಲೆಯ, ಸಮೂಹ ಸಾರಿಗೆಯನ್ನು ಕಲ್ಪಿಸಲಿ,’’ ಎಂದು ಒತ್ತಾಯಿಸಿದರು.

ಅಧಿಕಾರಿಗಳ ಪ್ರತಿಕ್ರಿಯೆ ಸಾರ್ವಜನಿಕರ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿದ ಸಾರಿಗೆ ವಿಭಾಗದ ಸಹಾಯಕ ಸಾರಿಗೆ ವ್ಯವಸ್ಥಾಪಕಿ (ದೂರುಗಳ ಉಸ್ತುವಾರಿ) ಶ್ಯಾಮಲಾ ಮಾತನಾಡಿ, ‘‘ಗ್ರೇಡೆಡ್ ಬಸ್‌ಗಳನ್ನು ಬಿಡುವುದು/ರದ್ದುಪಡಿಸುವುದು ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿದ ವಿಷಯ,’’ ಎಂದು ಹೇಳಿ ಜಾರಿಕೊಂಡರು. ಕೊನೆಗೆ ನೆರೆದಿದ್ದವರು ‘‘ಸಾರ್ವಜನಿಕರಿಂದ ಬರುತ್ತಿರುವ ದೂರಿದು. ಇದನ್ನು ಸ್ವೀಕರಿಸಿ ಮೇಲಧಿಕಾರಿಗಳಿಗೆ ತಲುಪಿಸುವುದು ನಿಮ್ಮ ಜವಾಬ್ದಾರಿ,’’ ಎಂದರು. ಆಗ ತಲುಪಿಸುವುದಾಗಿ ಭರವಸೆ ನೀಡಿದರು.

ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮತ್ತು ಉದ್ಯೋಗಿಗಳ ಒಕ್ಕೂಟದ ಜಂಟಿ ಕಾರ್ಯದರ್ಶಿ ಎಸ್. ನಾಗರಾಜು ಮಾತನಾಡಿ, ‘‘ನಗರದಲ್ಲಿ ಒಂದೇ ತೆರನಾದ ಸೇವೆ ಕಲ್ಪಿಸುವ ಅಗತ್ಯವಿದೆ. ಆದರೆ ಸರಕಾರಕ್ಕೆ ಇಚ್ಛಾಶಕ್ತಿಯ ಕೊರತೆಯಿದೆ. ಲಾಭ ಮಾಡುವ ಉದ್ದೇಶ ಹೊಂದಿದೆಯೇ ಹೊರತು, ಸಾರ್ವಜನಿಕರ ಹಿತವಲ್ಲ. ಹೀಗಾಗಿಯೇ ನೀತಿ-ನಿಯಮಗಳನ್ನು ಗಾಳಿಗೆ ತೂರಿದೆ,’’ ಎಂದು ಆರೋಪಿಸಿದರು.

ಹೊರವರ್ತುಲ ರಸ್ತೆ ಕಂಪನಿಗಳ ಸಂಘದ ಸ್ಥಾಪಕ ಕಾರ್ಯದರ್ಶಿ ಎಸ್. ವಿಶ್ವನಾಥ್, ಗುಬ್ಬಿ ಲ್ಯಾಬ್ಸ್ ಸ್ಥಾಪಕ ನಿರ್ದೇಶಕ ಡಾ. ಎಚ್.ಎಸ್. ಸುಧೀರ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

2012-13ರ ಮಾಹಿತಿ ಪ್ರಕಾರ ನಗರದಲ್ಲಿ ಸಾಮಾನ್ಯ ಬಸ್‌ಗಳ ಸೇವೆಯು 2 ಸಾವಿರ ರೂಟ್‌ಗಳಿವೆ ಇದರಲ್ಲಿ ಪ್ರಯಾಣ ದರವು ಕನಿಷ್ಠ 6 ರೂ. ನಿಂದ ಗರಿಷ್ಠ 44 ರೂ.ವರೆಗಿದೆ. ಇವು ಶೇ.85ರಷ್ಟಿವೆ. ಇನ್ನು ಎಸಿ ಬಸ್‌ಗಳು 95 ರೂಟ್‌ಗಳಲ್ಲಿದ್ದು, ಶೇ.15ರಷ್ಟಿವೆ. ಇದರಲ್ಲಿ ಕನಿಷ್ಠ 15 ರೂ.ನಿಂದ 130 ರೂ.ವರೆಗೆ ಪ್ರಯಾಣ ದರವಿದೆ. ಅಟಲ್ ಸಾರಿಗೆ 19 ರೂಟ್‌ಗಳಲ್ಲಿದೆ. ದೇಶದ ಯಾವ ಭಾಗದಲ್ಲೂ ಬೆಂಗಳೂರಿನಷ್ಟು ದುಬಾರಿ ಸಾರಿಗೆಯಿಲ್ಲ.ಹೀಗಾಗಿ ನಾನಾ ಗ್ರೇಡೆಡ್ ವ್ಯವಸ್ಥೆಯ ಬಸ್‌ಗಳನ್ನು ರದ್ದುಪಡಿಸಿ, ಎಲ್ಲರೂ ಕಡಿಮೆ ದರದಲ್ಲಿ ಆರಾಮವಾಗಿ ಪ್ರಯಾಣಿಸುವಂತಹ ಒಂದು ಬಗೆಯ ಸೇವೆಯನ್ನು ಕಲ್ಪಿಸಲಿ ಎಂದು ಆಯೋಜಕರಾದ ವಿನಯ್ ಶ್ರೀನಿವಾಸ್ ಒತ್ತಾಯಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ