ಆ್ಯಪ್ನಗರ

ದೀಪಾವಳಿ ಹಬ್ಬಕ್ಕೂ ಬೆಲೆಯೇರಿಕೆಯ ಬಿಸಿ; ಪಟಾಕಿ ದರ ಶೇ 30ರಷ್ಟು ಏರಿಕೆ! ಕಳೆಗುಂದಿದ ವ್ಯಾಪಾರ

ಒಂದೆಡೆ ಕೋವಿಡ್‌, ಜನರ ಖರೀದಿ ಶಕ್ತಿಯನ್ನು ಕಸಿದುಕೊಂಡಿದ್ದರೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ವಿದೇಶದಿಂದ ಬರಬೇಕಾದ ಕಚ್ಚಾವಸ್ತುಗಳು ಬಾರದಿರುವ ಹಿನ್ನೆಲೆಯಲ್ಲಿ ಪಟಾಕಿ ದರ ಕೂಡ ಕಳೆದ ವರ್ಷಕ್ಕಿಂತ ಈ ವರ್ಷ ಶೇ.30ರಷ್ಟು ಅಧಿಕವಾಗಿದೆ. ಜತೆಗೆ ಪಟಾಕಿ ಮಳಿಗೆಗಳ ಸಂಖ್ಯೆ ಕೂಡ ಕಡಿಮೆಯಾಗಿವೆ. ಕಳೆದ ನಾಲ್ಕು ದಿನಗಳಿಂದ ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು ಮಳೆ ಬರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಪಟಾಕಿ ಖರೀದಿಗೆ ಗ್ರಾಹಕರು ಮುಂದಾಗುತ್ತಿಲ್ಲ.

Vijaya Karnataka 3 Nov 2021, 7:10 am

ಹೈಲೈಟ್ಸ್‌:

  • ದೀಪಾವಳಿ ಹಬ್ಬಕ್ಕೆ ಬೆಲೆ ಏರಿಕೆ ಬಿಸಿ
  • ಕಚ್ಛಾವಸ್ತುಗಳ ಕೊರತೆಯಿಂದ ಪಟಾಕಿ ದರ ಏರಿಕೆ
  • ದೇಶದೆಲ್ಲೆಡೆ ಪಟಾಕಿ ದರ ಶೇ 30ರಷ್ಟು ಏರಿಕೆ
  • ಮಳೆ, ಕೋವಿಡ್‌ ಹೊಡೆತ, ಬೆಲೆ ಏರಿಕೆಯಿಂದ ಕಳೆಗುಂದಿದ ಪಟಾಕಿ ವ್ಯಾಪಾರ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web fireworks
ಮಹಾಬಲೇಶ್ವರ ಕಲ್ಕಣಿ
ಬೆಂಗಳೂರು: ಈ ಬಾರಿ ದೀಪಾವಳಿ ಹಬ್ಬಕ್ಕೆ ಪಟಾಕಿ ವ್ಯಾಪಾರ ಕಳೆಗುಂದಿದೆ. ಹಬ್ಬ ಸಮೀಪಿಸಿದರೂ ಗ್ರಾಹಕರು ಪಟಾಕಿ ಮಳಿಗೆಗಳತ್ತ ಸುಳಿಯಲು ಹಿಂದೆ ಮುಂದೆ ನೋಡುತ್ತಿದ್ದಾರೆ.
ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಸಂಪೂರ್ಣ ಮೋಡ ಕವಿದ ವಾತಾವರಣವಿದ್ದು ಮಳೆ ಬರುವ ನಿರೀಕ್ಷೆ ಇರುವ ಹಿನ್ನೆಲೆಯಲ್ಲಿ ಪಟಾಕಿ ಖರೀದಿಗೆ ಗ್ರಾಹಕರು ಮುಂದಾಗುತ್ತಿಲ್ಲ. ಒಂದೆಡೆ ಕೋವಿಡ್‌, ಜನರ ಖರೀದಿ ಶಕ್ತಿಯನ್ನು ಕಸಿದುಕೊಂಡಿದ್ದರೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆಯೂ ಏರಿಕೆಯಾಗಿದೆ. ವಿದೇಶದಿಂದ ಬರಬೇಕಾದ ಕಚ್ಚಾವಸ್ತುಗಳು ಬಾರದಿರುವ ಹಿನ್ನೆಲೆಯಲ್ಲಿ ಪಟಾಕಿ ದರ ಕೂಡ ಕಳೆದ ವರ್ಷಕ್ಕಿಂತ ಈ ವರ್ಷ ಶೇ.30ರಷ್ಟು ಅಧಿಕವಾಗಿದೆ. ಜತೆಗೆ ಪಟಾಕಿ ಮಳಿಗೆಗಳ ಸಂಖ್ಯೆ ಕೂಡ ಕಡಿಮೆಯಾಗಿವೆ.
ಬಿಬಿಎಂಪಿಗೆ ಸೇರಿದ 59 ಮೈದಾನಗಳಲ್ಲಿ 3 ದಿನ ಪಟಾಕಿ ಮಾರಾಟಕ್ಕೆ ಅನುಮತಿ; ಏನಿವೆ ನಿಯಮಗಳು?
ಪರಿಸರ ಜಾಗೃತಿ:
ಪರಿಸರ ಕಾಳಜಿಯೂ ಖರೀದಿ ಕಡಿಮೆಯಾಗಲು ಮತ್ತೊಂದು ಕಾರಣವಾಗಿದೆ. ಈ ಹಿಂದೆ ಸಾವಿರಾರು ರೂ. ಪಟಾಕಿ ಖರೀದಿ ಮಾಡುತ್ತಿದ್ದ ವ್ಯಕ್ತಿ ಐನೂರು ರೂ. ಪಟಾಕಿ ಖರೀದಿ ಮಾಡುತ್ತಿದ್ದಾನೆ. ಹಲವರು ಪಟಾಕಿ ಖರೀದಿ ಮಾಡುವುದನ್ನೇ ನಿಲ್ಲಿಸಿದ್ದಾರೆ. ‘ಸಾಂಪ್ರದಾಯಿಕವಾಗಿ ಪಟಾಕಿ ಹೊಡೆಯಬೇಕು ಎನ್ನುವುದಕ್ಕೆ ಪಟಾಕಿ ಖರೀದಿ ಮಾಡುತ್ತಿದ್ದೇನೆ. ಪಟಾಕಿ ಸಿಡಿಸುವ ಯಾವುದೇ ಹುಮ್ಮಸ್ಸಿಲ್ಲ. ಮಾಲಿನ್ಯ ದೃಷ್ಟಿಯಿಂದಲೂ ಹೆಚ್ಚು ಪಟಾಕಿ ತೆಗೆದುಕೊಳ್ಳುತ್ತಿಲ್ಲ’ ಎನ್ನುತ್ತಾರೆ ಗ್ರಾಹಕ ಲಕ್ಷ್ಮೀನಾರಾಯಣ.

ಹಸಿರು ಪಟಾಕಿ ಜತೆ ಸಾಧಾರಣ ಪಟಾಕಿಗಳೂ ಇವೆ:
2018ರಲ್ಲಿ ಸುಪ್ರೀಂಕೋರ್ಟ್‌ ವಾಯುಮಾಲಿನ್ಯ ನಿಯಂತ್ರಣ ನಿಟ್ಟಿನಲ್ಲಿ ಸಾಧಾರಣ ಪಟಾಕಿ ನಿಷೇಧಿಸಿ ಹಸಿರು ಪಟಾಕಿ ಬಳಸುವಂತೆ ಆದೇಶ ನೀಡಿತ್ತು. ಸಾಧಾರಣ ಪಟಾಕಿಯಲ್ಲಿ ಬಳಸುವ ಲಿಥಿಯಂ ಹಾಗೂ ಬೇರಿಯಂ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಿತ್ತು. ಸುಪ್ರೀಂ ಆದೇಶ ನೀಡಿ ಮೂರು ವರ್ಷಗಳಾದರೂ ಅವುಗಳು ಅಂಗಡಿಗಳಿಂದ ತೊಲಗಿಲ್ಲ. ಈಗಲೂ ಮಳಿಗೆಗಳಲ್ಲಿ ಶೇ.50ರಷ್ಟು ಸಾಧಾರಣ ಪಟಾಕಿಗಳೇ ಕಾಣಿಸುತ್ತಿವೆ.
ಈ ಬಾರಿ ಹಸಿರು ಪಟಾಕಿಗಳು ಬಲು ದುಬಾರಿ; ಪಟಾಕಿ ದರದಿಂದ ಗ್ರಾಹಕರ ಜೇಬಿಗೆ ಹೊರೆ
ಆರೋಗ್ಯ ಕಾಳಜಿಯೂ ಹೆಚ್ಚಿದೆ
ಪರಿಸರದ ಕಾಳಜಿಯ ಜತೆ ಆರೋಗ್ಯ ಕಾಳಜಿಯೂ ಜನರಲ್ಲಿ ಹೆಚ್ಚಿದ್ದು, ಪಟಾಕಿ ಖರೀದಿ ಮಾಡಲು ಹಿಂಜರಿಯುವಂತೆ ಮಾಡಿದೆ. ಬಹಳಷ್ಟು ಜನರು ಕಣ್ಣುಗಳನ್ನು ಕಳೆದುಕೊಂಡರೆ, ಕೆಲವರು ಉಸಿರಾಟ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲೂ ಪಟಾಕಿ ಬಗ್ಗೆ ಜನರು ಅಷ್ಟೊಂದು ಆಸಕ್ತಿ ತೋರುತ್ತಿಲ್ಲ. ‘ಪಟಾಕಿ ಹೊಗೆಯು ದೇಹದ ಮೇಲೆ ಹಲವು ಅಡ್ಡ ಪರಿಣಾಮಗಳನ್ನು ಉಂಟು ಮಾಡಲಿದೆ. ಅದರಲ್ಲೂ ಈಗಾಗಲೇ ಶ್ವಾಸಕೋಶದ ಸಮಸ್ಯೆ ಹೊಂದಿರುವವರಿಗೆ ಪಟಾಕಿ ಹೊಗೆ ಮಾರಕವಾಗಬಹುದು. ಹೀಗಾಗಿ, ರಾಸಾಯನಿಕಯುಕ್ತ ಪಟಾಕಿ ಸಿಡಿಸುವುದನ್ನು ನಿಯಂತ್ರಿಸಬೇಕು. ಈಗ ಮಳೆಯಾಗುತ್ತಿರುವುದರಿಂದ ವಾತಾವರಣ ತಂಪಾಗಿದೆ. ಇದು ಪಟಾಕಿ ಹೊಗೆಗೆ ಇನ್ನಷ್ಟು ಪೂರಕವಾಗಿ ಉಸಿರಾಟದ ಮೇಲೆ ಪರಿಣಾಮ ಬೀರಬಹುದು. ಹೀಗಾಗಿ, ರಾಸಾಯನಿಕಯುಕ್ತ ಪಟಾಕಿ ಸಿಡಿಸುವುದರಿಂದ ದೂರ ಇರುವುದು ಒಳ್ಳೆಯದು’ ಎನ್ನುತ್ತಾರೆ ಫೋರ್ಟಿಸ್‌ ಆಸ್ಪತ್ರೆ ಪಲ್ಮನರಿ ಡಿಸೀಸ್‌ ನಿರ್ದೇಶಕ ಡಾ. ವಿವೇಕ್‌ ಆನಂದ್‌ ಪಡೆಗಲ್‌.
ನಾವು ಯಾವುದೇ ಸಮುದಾಯದ ವಿರುದ್ಧ ಇಲ್ಲ; ಪಟಾಕಿ ನಿಷೇಧ ಸಂಪೂರ್ಣ ಜಾರಿಗೆ ಸುಪ್ರೀಂ ಅಭಿಮತ
ಈ ವರ್ಷ ಪಟಾಕಿ ದರ ದುಬಾರಿಯಾಗಿರುವುದು ಮತ್ತು ಮಳೆಯ ವಾತಾವರಣ ಇರುವುದರಿಂದ ಗ್ರಾಹಕರು ಹೆಚ್ಚಾಗಿ ಬರುತ್ತಿಲ್ಲ. ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಹಸಿರು ಪಟಾಕಿಯನ್ನು ಮಾತ್ರ ಮಾರಾಟ ಮಾಡುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಪಟಾಕಿ ಮಾರಾಟ ಕಡಿಮೆಯಾಗುತ್ತಿದೆ. ಇನ್ನೂ ಎರಡು ಮೂರು ದಿನಗಳ ಹಿಂದೆಯೇ ಸರಕಾರ ಅನುಮತಿ ನೀಡಿದ್ದರೆ ವ್ಯಾಪಾರಕ್ಕೆ ಸ್ವಲ್ಪ ಅನುಕೂಲವಾಗುತ್ತಿತ್ತು.
- ಯೋಗೀಶ್‌, ಸುವರ್ಣ ಕರ್ನಾಟಕ ಪಟಾಕಿ ವರ್ತಕರ ಸಂಘದ ಕಾರ್ಯದರ್ಶಿ

ಕಳೆದ ಎರಡು ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿನ ಮಾಲಿನ್ಯ ಪ್ರಮಾಣ ತುಸು ತಗ್ಗಿದೆ. ಜನರಲ್ಲಿ ಪರಿಸರ ಜಾಗೃತಿ ಜತೆ ಉಂಟಾಗಿದೆ. ಹಸಿರು ಪಟಾಕಿಗಳು ಕೂಡ ಪರಿಸರ ಮಾಲಿನ್ಯ ತಡೆಗಟ್ಟುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತಿವೆ.
-ಮಧುಸೂದನ್‌, ಹಿರಿಯ ಪರಿಸರ ಅಧಿಕಾರಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ