ಆ್ಯಪ್ನಗರ

ಕಾರಂಜಾ ಜಲಾಶಯಕ್ಕೆ ಸಚಿವ ಖಂಡ್ರೆ ಭೇಟಿ

ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಬಹುತೇಕ ಭರ್ತಿಯಾಗುವ ಹಂತಕ್ಕೆ ತಲುಪಿರುವ ಕಾರಂಜಾ ಜಲಾಶಯಕ್ಕೆ ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ ಭೇಟಿ ನೀಡಿ, ಜಲಾಶಯದ ನೀರಿನ ಮಟ್ಟ ಪರಿಶೀಲನೆ ನಡೆಸಿದರು.

ವಿಕ ಸುದ್ದಿಲೋಕ 3 Oct 2016, 4:51 pm

ಬೀದರ್‌:ಜಿಲ್ಲೆಯಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಬಹುತೇಕ ಭರ್ತಿಯಾಗುವ ಹಂತಕ್ಕೆ ತಲುಪಿರುವ ಕಾರಂಜಾ ಜಲಾಶಯಕ್ಕೆ ಶನಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್‌ ಖಂಡ್ರೆ ಭೇಟಿ ನೀಡಿ, ಜಲಾಶಯದ ನೀರಿನ ಮಟ್ಟ ಪರಿಶೀಲನೆ ನಡೆಸಿದರು.

7.69 ಟಿಎಂಸಿ ಸಾಮರ್ಥ್ಯ‌ದ ಜಲಾಶಯದಲ್ಲೀಗ 6.1 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯದ ಗರಿಷ್ಠ ಮಟ್ಟ 588.15 ಅಡಿಗಳಷ್ಟಿದ್ದು, ಅ.1ರಂದು ನೀರಿನ ಮಟ್ಟವು 583.26 ಅಡಿಗಳಷ್ಟು ದಾಖಲಾಗಿದೆ. 4500 ಕ್ಯೂಸೆಕ್‌ ಒಳ ಹರಿವು ಇದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳು ಸಚಿವರಿಗೆ ತಿಳಿಸಿದರು.

ಇನ್ನು ಎರಡು ದಿನ ಹೀಗೆಯೇ ಮಳೆ ಮುಂದುವರಿದರೆ ಇಲ್ಲವೇ ತೆಲಂಗಾಣ ಸೇರಿದಂತೆ ಇನ್ನಿತರೆ ಪ್ರದೇಶದಿಂದ ನೀರು ಹರಿದು ಬಂದರೆ ಅನಿವಾರ್ಯವಾಗಿ ಜಲಾಶಯದ ನೀರು ಕಾಲುವೆಗಳಿಗೆ ಬಿಡುವ ಸಂದರ್ಭ ಬರುತ್ತದೆ. ಇದರಿಂದ ರೈತರ ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆಗಳಿವೆ. ನೀರು ಬಿಡದಿದ್ದರೆ ನದಿ ದಡದ ಗ್ರಾಮಗಳಿಗೆ ಹಿನ್ನೀರು ನುಗ್ಗಿ ಹಾನಿಯಾಗುವ ಸಾಧ್ಯತೆಗಳಿವೆ ಎಂದೂ ಸಚಿವ ಖಂಡ್ರೆ ವಿವರಿಸಿದರು.

ಜನರಿಗೆ ಅಧಿಕಾರಿಗಳು ಮುನ್ನೆಚ್ಚರಿಕೆಯ ಸೂಚನೆ ನೀಡಬೇಕು. ಜಲಾಶಯದ ಹಿನ್ನೀರು ನದಿ ದಡದಲ್ಲಿರುವ ಯಾವ ಯಾವ ಗ್ರಾಮಗಳಿಗೆ ನುಗ್ಗುತ್ತದೆ ? ಅಲ್ಲಿ ಎಷ್ಟು ಹಾನಿಯಾಗುತ್ತದೆ ಎಂಬುದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಪರಿಶೀಲನೆ ಮಾಡಬೇಕು ಎಂದು ಸೂಚಿಸಿದರು.

ಅಲ್ಲಿನ ಮನೆಗಳನ್ನು ಕೂಡಲೇ ಬೇರೆಡೆ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡಬೇಕು ಎಂದೂ ಸಂಬಂಧಿಸಿದ ಅಧಿಕಾರಿಗಳಿಗೆ ಸಚಿವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಬಳಿಕ ಹಿನ್ನೀರಿನ ಭೀತಿಯಲ್ಲಿರುವ ಡಾಕುಳಗಿ ಗ್ರಾಮಕ್ಕೆ ಭೇಟಿ ನೀಡಿ, ಮಳೆ ನಿರಂತರವಾಗಿ ಸುರಿದು ಅನಿವಾರ್ಯ ಸ್ಥಿತಿ ಎದುರಾದರೆ ನದಿ ದಡದ ಕೆಲವು ಮನೆಗಳ ಸ್ಥಳಾಂತರಕ್ಕೆ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.

ಬಳಿಕ ಸಚಿವರು ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಕಾರಂಜಾ ಜಲಾಶಯದ ಹಿನ್ನೀರಿನಿಂದ ಉಂಟಾಗುತ್ತಿರುವ ನಾನಾ ಸಮಸ್ಯೆಗಳನ್ನು ಪರಿಶೀಲಿಸಿದರು. ಜಿಲಾಧಿಕಾರಿ ಅನುರಾಗ್‌ ತಿವಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪ್ರಕಾಶ್‌ ಅಮೃತ್‌ ನಿಕಮ್‌, ತಹಸೀಲ್ದಾರರು, ಕಾರಂಜಾ ಜಲಾಶಯದ ಅಧಿಕಾರಿಗಳು ಹಾಗೂ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ