ಆ್ಯಪ್ನಗರ

ಮೀಸಲಾತಿಗಾಗಿ ಮರಾಠಾ ಸಮಾಜದ ಶಕ್ತಿ ಪ್ರದರ್ಶನ

ಗಾಳಿಯಲ್ಲಿ ತೇಲಾಡಿದ ಸಹಸ್ರಾರು ಭಗವಾಧ್ವಜಗಳು, ಕೇಸರಿಮಯವಾದ ಇಡೀ ಬೀದರ್‌ ನಗರ, ಎಲ್ಲೆಡೆ ಮಾತಾ ಜೀಜಾವು, ಶಿವರಾಯ ಹೆಸರಲ್ಲಿ ಮೊಳಗಿದ ಘೋಷಣೆಗಳು. ಮೀಸಲಾತಿಗಾಗಿ ಒಂದಾದ ಮರಾಠಾ ಸಮಾಜ. ನಗರದ ಪಾಪನಾಶ ಗೇಟ್‌ನಿಂದ ಡಿಸಿ ಕಚೇರಿವರೆಗೆ ಕಂಡು ಬಂದ ಸಹಸ್ರಾರು ಜನರ ಸಾಲು.

ವಿಕ ಸುದ್ದಿಲೋಕ 20 Oct 2016, 4:36 pm

ಬೀದರ್‌: ಗಾಳಿಯಲ್ಲಿ ತೇಲಾಡಿದ ಸಹಸ್ರಾರು ಭಗವಾಧ್ವಜಗಳು, ಕೇಸರಿಮಯವಾದ ಇಡೀ ಬೀದರ್‌ ನಗರ, ಎಲ್ಲೆಡೆ ಮಾತಾ ಜೀಜಾವು, ಶಿವರಾಯ ಹೆಸರಲ್ಲಿ ಮೊಳಗಿದ ಘೋಷಣೆಗಳು. ಮೀಸಲಾತಿಗಾಗಿ ಒಂದಾದ ಮರಾಠಾ ಸಮಾಜ. ನಗರದ ಪಾಪನಾಶ ಗೇಟ್‌ನಿಂದ ಡಿಸಿ ಕಚೇರಿವರೆಗೆ ಕಂಡು ಬಂದ ಸಹಸ್ರಾರು ಜನರ ಸಾಲು.

ಜಿಲ್ಲೆಯ ಸಕಲ ಮರಾಠಾ ಸಮಾಜದಿಂದ ಬುಧವಾರ ಮರಾಠಾ ಸಮಾಜವನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕು ಎಂಬುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗಾಗಿ ನಡೆದ 'ಮೀಸಲಾತಿಗಾಗಿ ಮರಾಠಾ ಕ್ರಾಂತಿ (ಮೂಕ) ಮೋರ್ಚಾ'ದಲ್ಲಿ ಕಂಡು ಬಂದ ಕೆಲ ಚಟುವಟಿಕೆಗಳಿವು. ಪಾಪನಾಶ ಮಂದಿರ ಗೇಟ್‌ ಬಳಿ ಸೇರಿದ ಸಹಸ್ರಾರು ಜನರು ಪಾದಯಾತ್ರೆಯ ಮೂಲಕ ಮೌನವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿದರು.

ಡಿಸಿ ಕಚೇರಿ ಎದುರು ಮರಾಠಾ ಸಮಾಜದ 11 ಬಾಲಕಿಯರು ಸಮಾಜವನ್ನು ಉದ್ದೇಶಿಸಿ ಮಾತನಾಡಿದರು. ''ಕರ್ನಾಟಕ ರಾಜ್ಯದ ಹಿಂದುಳಿದ ವರ್ಗಗಳ ಆಯೋಗದ ಶಿಫಾರಸಿನಂತೆ ಮರಾಠಾ ಸಮಾಜವನ್ನು 2ಎ ಪ್ರವರ್ಗಕ್ಕೆ ಸೇರಿಸಬೇಕು ಅಥವಾ ನಮ್ಮ ಸಮಾಜಕ್ಕೆ ಪ್ರತ್ಯೇಕ ಪ್ರವರ್ಗ ನೀಡಿ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಬೇಕು'' ಎಂದು ಬಾಲಕಿಯರು ಆಗ್ರಹಿಸಿದರು.

ಕಳೆದ ನಾಲ್ಕು ವರ್ಷ ಬೀದರ್‌ನಲ್ಲಿ ಬರಗಾಲವಿದ್ದು, ರೈತರ ಬೆಳೆ ಪರಿಹಾರ ನೀಡಬೇಕು. ಅನ್ನದಾತರ ಸಾಲ ಮನ್ನಾ ಮಾಡಬೇಕು. ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಘೋಷಿಸಬೇಕು ಮತ್ತು ಸ್ವಾಮಿನಾಥನ್‌ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಒತ್ತಾಯ ಮಾಡಿದರು.

ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲೂಕಿನ ಹೊದಿಗೆರೆಯಲ್ಲಿನ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಷಹಾಜಿರಾಜೇ ಭೋಸ್ಲೇ ಅವರ ಸಮಾಧಿ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಮತ್ತು ತೀರ್ಥ ಸ್ಥಳ ಎಂದು ಘೋಷಿಸಬೇಕು. ಅದನ್ನು ಪ್ರವಾಸಿ ತಾಣವಾಗಿಸಲು ಅಭಿವೃದ್ಧಿ ಕಾರ‍್ಯಗಳನ್ನು ರಾಜ್ಯ ಸರಕಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ರಾಜರ್ಷಿ ಶಾಹು ಮಹಾರಾಜ ಮರಾಠಾ ವಿಕಾಸ ಮಂಡಳಿ ಸ್ಥಾಪಿಸಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಬೇಕು. ಮರಾಠಾ ಯುವಕರಿಗೆ ಉದ್ಯೋಗ ಕಲ್ಪಿಸಬೇಕು. ಇದಕ್ಕಾಗಿ ಪ್ರತಿ ಜಿಲ್ಲೆಯಲ್ಲಿ ರಾಜರ್ಷಿ ಶಾಹು ಮಹಾರಾಜ ವೃತ್ತಿ ಕೌಶಲ ತರಬೇತಿ ಕೇಂದ್ರ ಆರಂಭಿಸಬೇಕು.ಮರಾಠಿ ಭಾಷೆಯನ್ನು ಅಲ್ಪ ಸಂಖ್ಯಾತರ ಭಾಷೆ ಎಂದು ಪರಿಗಣಿಸಿ, ಭಾಷೆಯ ಅಭಿವೃದ್ಧಿಗೆ ಸೌಲಭ್ಯಗಳನ್ನು ನೀಡಬೇಕೆಂದರು.

ಜಿಲ್ಲಾ ಮತ್ತು ತಾಲೂಕು ಸ್ಥಳಗಳಲ್ಲಿ ಮರಾಠಾ ಸಮಾಜದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ಗೃಹಗಳನ್ನು ಆರಂಭಿಸಬೇಕು. ಕೆಪಿಎಸ್ಸಿ ಮತ್ತು ಇತರೆ ನಿಗಮ ಮಂಡಳಿಗಳಲ್ಲಿ ಮರಾಠಾ ಸಮಾಜದವರನ್ನು ಅಧ್ಯಕ್ಷ/ ನಿರ್ದೇಶಕರನ್ನಾಗಿ ನೇಮಿಸಿ ಪ್ರಾತಿನಿಧಿತ್ವ ನೀಡಬೇಕು. ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ದಿನವಾದ ಫೆ. 19ರಂದು ಸರಕಾರಿ ರಜೆ ಘೋಷಿಸಿ, ತಾಲೂಕಿಗೊಂದು ಮರಾಠಾ ಸಮುದಾಯ ಭವನ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ಬೀದರ್‌ ಜಿಲ್ಲೆಯ ಬಸವಕಲ್ಯಾಣ, ಔರಾದ್‌ ಮತ್ತು ಹುಮನಾಬಾದ್‌ಗಳಲ್ಲಿ ಶಿವಾಜಿ ಮಹಾರಾಜರ ಅಶ್ವಾರೂಢ ಪುತ್ಥಳಿ ಪ್ರತಿಷ್ಠಾಪಿಸಬೇಕು ಎಂದು ಒತ್ತಾಯಿಸಿ, ಸಹಾಯಕ ಆಯುಕ್ತ ವೆಂಕಟರಾಜಾ ಅವರ ಮೂಲಕ ಮುಖ್ಯಮಂತ್ರಿಗಳಿಗೆ 11 ಬಾಲಕಿಯರು ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಎಸಿ ವೆಂಕಟರಾಜಾ ಅವರು, ಡಿಸಿ ಪರವಾಗಿ ಮನವಿ ಸ್ವೀಕರಿಸಿದ್ದೇನೆ. ಇದನ್ನು ಸಿಎಂಗೆ, ಸರಕಾರಕ್ಕೆ ತಲುಪಿಸುವೆ ಎಂದರು.

ಇದಕ್ಕೂ ಮುನ್ನ ಬಾಲಕಿ ಅಂಜಲಿ ಬಿರಾದಾರ್‌ ಮಾತನಾಡಿ, ಮಹಾರಾಷ್ಟ್ರದ ಅಹ್ಮದನಗರ ಜಿಲ್ಲೆಯ ಕೋರ್ಪಡಿಯಲ್ಲಿ ಮರಾಠಾ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಇಂತಹ ಘಟನೆಗಳನ್ನು ಸಮಾಜ ಸಹಿಸುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಸರಕಾರ ಇದನ್ನ ಗಂಭೀರವಾಗಿ ಪರಿಗಣಿಸಬೇಕು. ಹೆಣ್ಣು ಮಕ್ಕಳಿಗೆ ಭದ್ರತೆ ನೀಡಬೇಕು ಎಂದು ಕೋರಿದರು.

ಜಿಲ್ಲೆಯ ಸಕಲ ಮರಾಠಾ ಸಮಾಜದ ಪರವಾಗಿ ಸಮಾಜದ ಬಾಲಕಿಯರಾದ ರಾಜಶ್ರೀ ವಿ ಪಾಟೀಲ್‌, ಜೀಜಾವು ಎನ್‌. ಗಣೇಶ್‌, ಅಂಜಲಿ ಬಿರಾದಾರ್‌, ವೈಷ್ಣವಿ ಪಿ. ಪಾಟೀಲ, ನಿಖಿತಾ ವಾಡಿಕರ್‌, ಪದ್ಮಾ ಶ. ಪವಾರ್‌, ಕಲ್ಲೇಶ್ವರಿ ಕಾರಭಾರಿ, ಪಲ್ಲವಿ ಡಿ. ಪಾಟೀಲ್‌, ಅದಿಥಿ ಪಿ. ಪಾಟೀಲ್‌, ಸಂಧ್ಯಾರಾಣಿ ಆರ್‌. ರಾವಣಗಾವೆ, ವೈಷ್ಣವಿ ಹಂಗರಗೆ ಇದ್ದರು.

...

ವಿವಿಧ ಬೇಡಿಕೆಗಳು

*ದಾವಣಗೆರೆ ಹೊದಿಗೆರೆಯಲ್ಲಿನ ಷಹಾಜಿರಾಜೇ ಭೋಸ್ಲೆ ಸಮಾಧಿ ಸ್ಥಳ ರಾಷ್ಟ್ರೀಯ ಸ್ಮಾರಕ ಮತ್ತು ತೀರ್ಥ ಸ್ಥಳ ಘೋಷಿಸಿ, ಪ್ರವಾಸಿ ತಾಣವಾಗಿಸಬೇಕು

*ಪ್ರತಿ ಜಿಲ್ಲೆಯಲ್ಲಿ ರಾಜರ್ಷಿ ಶಾಹು ಮಹಾರಾಜ ವೃತ್ತಿ ಕೌಶಲ ತರಬೇತಿ ಕೇಂದ್ರ ಆರಂಭಿಸಬೇಕು

*ಮರಾಠಿ ಭಾಷೆಯನ್ನು ಅಲ್ಪ ಸಂಖ್ಯಾತರ ಭಾಷೆ ಎಂದು ಪರಿಗಣಿಸಿ, ಭಾಷೆಯ ಅಭಿವೃದ್ಧಿಗೆ ಸೌಲಭ್ಯ ನೀಡಬೇಕು

*ಜಿಲ್ಲಾ ಮತ್ತು ತಾಲೂಕು ಸ್ಥಳಗಳಲ್ಲಿ ಮರಾಠಾ ಸಮಾಜದ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗಾಗಿ ಪ್ರತ್ಯೇಕ ವಸತಿ ಗೃಹ

*ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ದಿನವಾದ ಫೆ. 19ರಂದು ಸರಕಾರಿ ರಜೆ ಘೋಷಿಸಿ, ತಾಲೂಕಿಗೊಂದು ಮರಾಠಾ ಸಮುದಾಯ ಭವನ ನಿರ್ಮಿಸಬೇಕು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ