Please enable javascript.ಪಡಿತರ ಚೀಟಿಗೆ ಆಧಾರ್‌ ಲಿಂಕ್‌: 15ರವರೆಗೆ ಗಡುವು - Aadhar seeding to Anna bhaagya scheme: 15th last date - Vijay Karnataka

ಪಡಿತರ ಚೀಟಿಗೆ ಆಧಾರ್‌ ಲಿಂಕ್‌: 15ರವರೆಗೆ ಗಡುವು

Vijaya Karnataka Web 3 May 2016, 9:00 am
Subscribe

ಜೋಡಣೆ ಆಗದಿದ್ದರೆ ಪಡಿತರ ವಿತರಣೆ ಸ್ಥಗಿತ | ಪಡಿತರ ಚೀಟಿಯಲ್ಲಿ ಕುಟುಂಬದ ಒಬ್ಬ ಸದಸ್ಯರದಾದರೂ ಸಂಖ್ಯ ಸೇರಿಸಬೇಕು ವಿಕ ಸುದ್ದಿಲೋಕ, ಚಾಮರಾಜನಗರ ರಾಜ್ಯ ಸರಕಾರದ ಅನ್ನಭಾಗ್ಯ ...

aadhar seeding to anna bhaagya scheme 15th last date
ಪಡಿತರ ಚೀಟಿಗೆ ಆಧಾರ್‌ ಲಿಂಕ್‌: 15ರವರೆಗೆ ಗಡುವು

ಚಾಮರಾಜನಗರ: ರಾಜ್ಯ ಸರಕಾರದ ಅನ್ನಭಾಗ್ಯ ಯೋಜನೆಯ ಉಪಯೋಗ ಪಡೆಯುತ್ತಿರುವ ಪಡಿತರದಾರರು ಮೇ 15ರೊಳಗೆ ಆಧಾರ್‌ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಜೋಡಣೆ ಮಾಡಿಕೊಳ್ಳುವುದು ಕಡ್ಡಾಯ. ಇಲ್ಲವಾದರೆ ಪಡಿತರ ಪದಾರ್ಥ ಸ್ಥಗಿತ ಖಚಿತ. ಈಗಾಗಲೇ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಇಂಥ ಸೂಚನೆಯನ್ನು ಹೊರಡಿಸಿದ್ದು, ಕಡ್ಡಾಯವಾಗಿ ಆಧಾರ್‌ ಸಂಖ್ಯೆಯನ್ನು ಜೋಡಣೆ ಮಾಡಿಕೊಳ್ಳಬೇಕಿದೆ. ಪಡಿತರ ಚೀಟಿಯಲ್ಲಿ ಯಾರಾರ‍ಯರ ಹೆಸರಿದೆಯೋ ಅವರೆಲ್ಲರ ಆಧಾರ್‌ ಸಂಖ್ಯೆಯನ್ನು ನಮೂದು ಮಾಡಿಕೊಳ್ಳಬೇಕು.

ಮೇ 15ರೊಳಗೆ ಕನಿಷ್ಠ ಒಂದು ಕುಟುಂಬದ ಪಡಿತರ ಚೀಟಿಯಲ್ಲಿ ಒಬ್ಬ ಸದಸ್ಯರಾದರೂ ಆಧಾರ್‌ ಸಂಖ್ಯೆಯನ್ನು ನಮೂದು ಮಾಡಬೇಕು. ಇಲ್ಲವಾದರೆ ಪಡಿತರ ಚೀಟಿಯಿದ್ದರೂ ಅನ್ನಭಾಗದ ಯೋಜನೆಯ ಫಲ ಸಿಗಲಾರದು. ಹೀಗೆಂದು ಇಲಾಖೆ ಸರಕಾರದ ಕಾರ್ಯದರ್ಶಿ ಹರ್ಷಗುಪ್ತಾ ಆದೇಶ ಹೊರಡಿಸಿದ್ದಾರೆ.

ಕೇಂದ್ರ ಸರಕಾರ ಜಾರಿಗೊಳಿಸಿರುವ ಆಧಾರ್‌ ಕಾಯ್ದೆ 2016ರ ಸೆಕ್ಷನ್‌ 7ರ ಅನ್ವಯ ಸರಕಾರದ ಕೆಲವು ಸವಲತ್ತು ಮತ್ತು ಸೇವೆಗಳನ್ನು ಶ್ರೀಸಾಮಾನ್ಯರು ಪಡೆಯಲು ಆಧಾರ್‌ ಸಂಖ್ಯೆ ನೀಡುವುದು ಅಗತ್ಯ.

ಅದರಲ್ಲಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ನೀಡಲಾಗುವ ಸಹಾಯಧನಯುಕ್ತ ಆಹಾರ ಧಾನ್ಯ ಹಂಚಿಕೆಗಾಗಿ ನೀಡಲಾಗಿರುವ ಪಡಿತರ ಚೀಟಿಯೂ ಸೇರಿದೆ.

ಪ್ರಗತಿ ಕಡಿಮೆ: ಹಾಗೆ ನೋಡಿದರೆ ಜಿಲ್ಲೆಯಲ್ಲಿ ಪಡಿತರ ಚೀಟಿಯೊಂದಿಗೆ ಆಧಾರ್‌ ಲಿಂಕ್‌ ಮಾಡಿರುವವರ ಸಂಖ್ಯೆ ತುಂಬ ಕಡಿಮೆ. ಉಳಿದಿರುವ ಲಕ್ಷಾಂತರ ಮಂದಿ ಆಧಾರ್‌ ಲಿಂಕ್‌ ಮಾಡಲು ಇನ್ನು ಸಾಕಷ್ಟು ಸಮಯಬೇಕಾಗಬಹುದು. ಆದರೆ ಆಹಾರ ಇಲಾಖೆ ಪ್ರಕಾರ ಇನ್ನು ಉಳಿದಿರುವುದು 12 ದಿನ .

ಜಿಲ್ಲೆಯಲ್ಲಿ ಒಟ್ಟು 2,85,140 ಪಡಿತರ ಚೀಟಿಗಳಿವೆ. ಈ ಪೈಕಿ 1,09,454 ಕಾರ್ಡ್‌ಗಳಿಗೆ ಆಧಾರ್‌ ಲಿಂಕ್‌ ಆಗಿದೆ. ಇನ್ನು 1,75,686 ಕಾರ್ಡ್‌ಗಳಿಗೆ ಇನ್ನು ಆಧಾರ್‌ ಲಿಂಕ್‌ ಆಗೇ ಇಲ್ಲ.

ಇನ್ನು ಪಡಿತರ ಚೀಟಿಯಲ್ಲಿ ಹೆಸರಿರುವವರ ಸಂಖ್ಯೆ 11,07987. ಆದರೆ ಈ ಪೈಕಿ ಆಧಾರ್‌ ಸಂಖ್ಯೆಯನ್ನು ಕೊಟ್ಟಿರುವವರು ಕೇವಲ 3,69,029 ಮಾತ್ರ. ಹಾಗಾಗಿ ಇನ್ನು 7,38,958 ಮಂದಿ ತಮ್ಮ ಆಧಾರ್‌ ಸಂಖ್ಯೆಯನ್ನು ಪಡಿತರ ಚೀಟಿಯೊಂದಿಗೆ ಜೋಡಿಸಬೇಕಾಗಿದೆ.

ಇಷ್ಟೊಂದು ಇನ್ನುಳಿದಿರುವ 12 ದಿನಗಳಲ್ಲಿ ಆಧಾರ್‌ ಸಂಖ್ಯೆ ಕೊಡುತ್ತಾರಾ? ಎಂಬ ಪ್ರಶ್ನೆ ಎದುರಾಗಿದೆ. ಆದರೆ ಈಗಿರುವ ಸೂಚನೆ ಪ್ರಕಾರ ಕೊಡಲೇಬೇಕು. ಒಂದು ಕುಟುಂಬದಲ್ಲಿ ಕನಿಷ್ಠ ಒಬ್ಬರಾದರೂ ಆಧಾರ್‌ ಸಂಖ್ಯೆ ಕೊಡಲಿಲ್ಲವಾದರೆ ಅಕ್ಕಿ ಸೇರಿದಂತೆ ಪಡಿತರ ಚೀಟಿಗೆ ಸಿಗುವ ಯಾವುದೇ ಪದಾರ್ಥಗಳನ್ನು ಕೊಡುವುದಿಲ್ಲ ಎನ್ನುತ್ತಾರೆ ಆಹಾರ ಇಲಾಖೆ ಅಧಿಕಾರಿಗಳು.

ಪ್ರಕ್ರಿಯೆ ಸುಲಭ: ಹೀಗೆ ಪಡಿತರ ಚೀಟಿಯೊಂದಿಗೆ ತಮ್ಮಲ್ಲಿರುವ ಆಧಾರ್‌ ಸಂಖ್ಯೆಯನ್ನು ಲಿಂಕ್‌ ಮಾಡಲು ಕಷ್ಟಪಡಬೇಕಿಲ್ಲ. ಯಾರ ಬಳಿಗೂ ಹೋಗಬೇಕಿಲ್ಲ. ಪಡಿತರ ಚೀಟಿದಾರರು ತಮ್ಮ ಮೊಬೈಲ್‌ ಬಳಸಿಕೊಂಡೇ ಎಸ್‌ಎಂಎಸ್‌ ಮೂಲಕ ಆಧಾರ್‌ ಸಂಖ್ಯೆಗಳನ್ನು ಇಲಾಖೆಯ ಮೊಬೈಲ್‌ಗೆ ಕಳುಹಿಸಬೇಕು. ಇದಕ್ಕೂ ಮೊದಲು ತಮ್ಮ ಮೊಬೈಲ್‌ ಸಂಖ್ಯೆಯನ್ನು ನೋಂದಣಿ ಮಾಡಿಸಿಕೊಳ್ಳಬೇಕು. ಒಂದು ಮೊಬೈಲ್‌ ನಂಬರ್‌ನ್ನು ಒಂದು ಕುಟುಂಬದ ಪಡಿತರ ಚೀಟಿಗಷ್ಟೇ ಬಳಸಬಹುದು.

ಆಧಾರ್‌ ಕಾರ್ಡ್‌ ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸಿದವರು ಆಧಾರ್‌ ಸಂಖ್ಯೆ ದೊರೆತಿಲ್ಲವಾದರೆ 21 ಅಂಕಿಯ ಇಐಡಿ(ಆಧಾರ್‌ ಎನ್‌ರೋಲ್‌ಮೆಂಟ್‌ ನಂಬರ್‌) ಸಂಖ್ಯೆಯನ್ನು ಸಹ ನೀಡಬಹುದು.

ಮೊಬೈಲ್‌ ಹೊರತಾಗಿಯೂ ಗ್ರಾಮೀಣ ಭಾಗದವರು ಗ್ರಾಮ ಪಂಚಾಯಿತಿ ಕಚೇರಿ, ಅಟಲ್‌ ಜನಸ್ನೇಹಿ ಕೇಂದ್ರಗಳಲ್ಲಿ ಹಾಗೂ ನಗರ/ಪಟ್ಟಣ ಪ್ರದೇಶಗಳ ಜನರು ನಿಗದಿತ ಖಾಸಗಿ ಫ್ರಾಂಚೈಸಿಗಳಲ್ಲಿ ಲಭ್ಯವಿರುವ ಆನ್‌ಲೈನ್‌ ತಂತ್ರಾಂಶ ಬಳಿಸಿ ಆಧಾರ್‌ ಸಂಖ್ಯೆ ನೀಡಬಹುದು. ಇದಕ್ಕಾಗಿ ಪಡಿತರ ಚೀಟಿದಾರರು 10 ರೂ. ಶುಲ್ಕ ಪಾವತಿಸಬೇಕು. ಅದಕ್ಕೆ ಪಂಚಾಯಿತಿ, ಫ್ರಾಂಚೈಸಿಗಳ ಸಿಬ್ಬಂದಿ ಸ್ವೀಕೃತಿ ಪತ್ರ ಸಿಗಲಿದೆ.

ಎಸ್‌ಎಂಎಸ್‌ ವ್ಯವಸ್ಥೆ

ಪಡಿತರ ಚೀಟಿಗೆ ಕುಟುಂಬದ ಮುಖ್ಯಸ್ಥರ ಅಥವಾ ಒಬ್ಬ ಸದಸ್ಯರ ಮೊಬೈಲ್‌ ಸಂಖ್ಯೆಯನ್ನು ನೋಂದಾಯಿಸಿಕೊಂಡ ಬಳಿಕ ಕುಟುಂಬದ ಎಲ್ಲ ಸದಸ್ಯರ ಸಂಖ್ಯೆಗಳನ್ನು ಒಂದೊಂದಾಗಿ ಟೈಪ್‌ ಮಾಡಿ ಇಲಾಖೆಯ ಮೊಬೈಲ್‌ಗೆ (9731979899) ಕಳುಹಿಸಬೇಕು.

ಮೊದಲು ಮೊಬೈಲ್‌ ಸಂಖ್ಯೆ ನೋಂದಣಿಗಾಗಿ ‘RCMOBRC number’ ಟೈಪ್‌ ಮಾಡಿ 9731979899ಗೆ ಎಸ್‌ಎಂಎಸ್‌ ಕಳುಹಿಸಬೇಕು. ಆಗ ಮೊಬೈಲ್‌ ಸಂಖ್ಯೆಯನ್ನು ನಿಮ್ಮ ಪಡಿತರ ಚೀಟಿ ಸಂಖ್ಯೆಗೆ ನೋಂದಾಯಿಸಲಾಗಿದೆ ಎಂದು ಪ್ರತಿಕ್ರಿಯೆ(ರಿಪ್ಲೇ ಎಸ್‌ಎಂಎಸ್‌) ಬರುತ್ತದೆ. ಬಳಿಕ ಎಲ್ಲ ಸದಸ್ಯರ 12 ಅಂಕಿಗಳ ಆಧಾರ್‌ ಸಂಖ್ಯೆಯನ್ನು ‘RCUIDUID number’ ಮಾದರಿಯಲ್ಲಿ ಕಳುಹಿಸಬೇಕು.

ಇದು ಸರಕಾರದ ಆದೇಶವಾದ್ದರಿಂದ ಪಡಿತರದಾರರೆಲ್ಲ ಕಡ್ಡಾಯವಾಗಿ ತಮ್ಮ ಆಧಾರ್‌ ಸಂಖ್ಯೆಯನ್ನು ನಮೂದಿಸಲೇಬೇಕು. ಎಲ್ಲ ಸಾಧ್ಯವಾಗದಿದ್ದರೆ ಸದ್ಯಕ್ಕೆ ಪಡಿತರ ಕುಟುಂಬದಲ್ಲಿನ ಯಾರೊಬ್ಬರಾದರೂ ಆಧಾರ್‌ ನೀಡಬೇಕು. ಇಲ್ಲವಾದರೆ ಮೇ 15ರ ನಂತರ ಪಡಿತರ ಪದಾರ್ಥ ಸ್ಥಗಿತಗೊಳ್ಳಲಿದೆ.

- ರಾಚಪ್ಪ, ಪ್ರಭಾರ ಉಪ ನಿರ್ದೇಶಕರು, ಆಹಾರ, ನಾಗರಿಕ ಸರಬರಾಜು ಇಲಾಖೆ

ಹೊಸ ಅರ್ಜಿ ಸಲ್ಲಿಕೆ

ಪಡಿತರ ಚೀಟಿ ಬಯಸಿ ಹೊಸದಾಗಿ ಅರ್ಜಿ ಸಲ್ಲಿಸುವವರು ಅರ್ಜಿಯೊಂದಿಗೆ ತಮ್ಮ ಮನೆಯ ವಿಳಾಸ, ವಿದ್ಯುತ್‌ ಬಿಲ್‌ನ ಆರ್‌ಆರ್‌ ನಂಬರ್‌, ಕುಟುಂಬದ ಎಲ್ಲ ಸದಸ್ಯರು ಆಧಾರ್‌ ಸಂಖ್ಯೆ, 18 ವರ್ಷ ಮೇಲ್ಪಟ್ಟವರ ಮತದಾರರ ಗುರುತಿನ ಚೀಟಿ ನೀಡಬೇಕು. ಗ್ರಾಮೀಣ ಪ್ರದೇಶವರು ಆರ್‌ಆರ್‌ ಬಿಲ್‌ ಬದಲಿಗೆ ಮನೆಯ ಆಸ್ತಿ ಸಂಖ್ಯೆ ಸಲ್ಲಿಸಬೇಕು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ