ಆ್ಯಪ್ನಗರ

ಅಯೋಧ್ಯೆಯ ರಾಮನಿಗೆ 'ಮಾದಪ್ಪ' ಸೀಮೆಯ ಕಲ್ಲು..! ಚಾಮರಾಜನಗರದ ಹೆಗ್ಗಳಿಕೆ..!

ರಾಮ ಮಂದಿರದ ಎರಡನೇ ಹಂತದ ಕಾಮಗಾರಿಗೆ ಕೊಳ್ಳೇಗಾಲ ಗಡಿ ಭಾಗದ ಕಪ್ಪು ಕಲ್ಲು ಬಳಸಲಾಗುತ್ತಿದೆ ಎಂಬುದಾಗಿ ಟ್ರಸ್ಟ್‌ ಕಾರ್ಯದರ್ಶಿ ಅವರು ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ಕೊಳ್ಳೇಗಾಲ ಭಾಗದಲ್ಲಿ ಗ್ರಾನೈಟ್‌ ಕ್ವಾರಿಗಳನ್ನು ನಿರ್ಬಂಧಿಸಿ ಹಲವು ವರ್ಷಗಳೇ ಉರುಳಿವೆ.

Vijaya Karnataka 24 Sep 2021, 2:12 pm

ಹೈಲೈಟ್ಸ್‌:

  • ರಾಮ ಮಂದಿರ ನಿರ್ಮಾಣ ಟ್ರಸ್ಟ್‌ ಕಾರ್ಯದರ್ಶಿಯ ಅಭಿಮಾನದ ಹೇಳಿಕೆ
  • ಚಾಮರಾಜನಗರದಲ್ಲಿ ನೇರವಾಗಿ ಕಪ್ಪು ಕಲ್ಲು ಖರೀದಿ ಮಾಡಿಲ್ಲ
  • ಹೊಸೂರಿನ ಮಳಿಗೆಗಳಿಂದ ಕಲ್ಲು ಖರೀದಿಸಿರಬಹುದು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web temple
ಅಯೋಧ್ಯೆಯ ರಾಮನಿಗೆ 'ಮಾದಪ್ಪ' ಸೀಮೆಯ ಕಲ್ಲು..! ಚಾಮರಾಜನಗರದ ಹೆಗ್ಗಳಿಕೆ..!
ಫಾಲಲೋಚನ ಆರಾಧ್ಯ
ಚಾಮರಾಜನಗರ:
ಈಗಾಗಲೇ ವಿದೇಶಗಳಿಗೆ ರಫ್ತಾಗುತ್ತಿರುವ ಚಾಮರಾಜನಗರ ಜಿಲ್ಲೆಯ ಉತ್ಕೃಷ್ಟ ಗುಣಮಟ್ಟದ ಕಪ್ಪು ಕಲ್ಲು (ಬ್ಲ್ಯಾಕ್‌ ಗ್ರಾನೈಟ್‌) ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ರಾಮಮಂದಿರಕ್ಕೂ ಬಳಕೆಯಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಮಮಂದಿರದ ಎರಡನೇ ಹಂತದ ಕಾಮಗಾರಿ ಶುರುವಾಗಿದ್ದು, ಮಂದಿರದ ಸ್ತಂಭಗಳಿಗೆ ಚಾಮರಾಜನಗರ ಜಿಲ್ಲೆಯ ಕಪ್ಪು ಕಲ್ಲನ್ನು ಬಳಕೆ ಮಾಡಲಾಗುತ್ತಿದೆ ಎಂಬುದಾಗಿ ಮಂದಿರ ನಿರ್ಮಾಣ ಟ್ರಸ್ಟ್‌ ಕಾರ್ಯದರ್ಶಿಯವರೇ ಹೇಳಿಕೊಂಡಿದ್ದಾರೆ.

ಹೀಗಾಗಿ ಈ ವಿಚಾರ ಜಿಲ್ಲೆಯ ಜನತೆಯಲ್ಲಿ ಕುತೂಹಲ ಕೆರಳಿಸಿದೆಯಲ್ಲದೇ ಸಾಕಷ್ಟು ಮಂದಿಯ ಸಂತಸಕ್ಕೂ ಕಾರಣವಾಗಿದೆ. ಜಿಲ್ಲೆಯ ಬ್ಲ್ಯಾಕ್‌ ಗ್ರಾನೈಟ್‌ಗೆ ವಿದೇಶಗಳಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಅದರಲ್ಲೂ ಚಾ.ನಗರ ತಾಲೂಕಿನ ಜ್ಯೋತಿ ಗೌಡನ ಪುರ, ಕೊತ್ತಲ ವಾಡಿ ಭಾಗದ ಕಲ್ಲಿನ ಗುಣಮಟ್ಟ ಉತ್ಕೃಷ್ಟ ಮಟ್ಟದಾಗಿದ್ದು, ಬೇಡಿಕೆಗೆ ಕಾರಣ ಎನ್ನುತ್ತಾರೆ ಗಣಿ ಮಾಲೀಕರು.

ರಾಮ ಮಂದಿರದ ಎರಡನೇ ಹಂತದ ಕಾಮಗಾರಿಗೆ ಕೊಳ್ಳೇಗಾಲ ಗಡಿ ಭಾಗದ ಕಪ್ಪು ಕಲ್ಲು ಬಳಸಲಾಗುತ್ತಿದೆ ಎಂಬುದಾಗಿ ಟ್ರಸ್ಟ್‌ ಕಾರ್ಯದರ್ಶಿ ಅವರು ಸುದ್ದಿ ಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ. ಆದರೆ, ಕೊಳ್ಳೇಗಾಲ ಭಾಗದಲ್ಲಿ ಗ್ರಾನೈಟ್‌ ಕ್ವಾರಿಗಳನ್ನು ನಿರ್ಬಂಧಿಸಿ ಹಲವು ವರ್ಷಗಳೇ ಉರುಳಿವೆ. ಹೀಗಿರುವಾಗ ಆ ಭಾಗದ ಕಲ್ಲನ್ನು ಹೇಗೆ ಬಳಕೆ ಮಾಡಲು ಸಾಧ್ಯ ಎಂಬ ಪ್ರಶ್ನೆಯೂ ಇದೇ ವೇಳೆ ಮೂಡಿದೆ.

ಅಯೋಧ್ಯಾ ಶ್ರೀರಾಮಮಂದಿರಕ್ಕೆ ಕೊಳ್ಳೆಗಾಲದ ಗ್ರ್ಯಾನೈಟ್‌..! 2ನೇ ಹಂತದ ಅಡಿಪಾಯದಲ್ಲಿ ಬಳಕೆ..
ನೇರವಾಗಿ ಖರೀದಿಸಿಲ್ಲ: ಈ ಕುರಿತು ಚಾ.ನಗರ ಜಿಲ್ಲಾ ಗ್ರಾನೈಟ್‌ ಮಾಲೀಕರ ಸಂಘದ ಅಧ್ಯಕ್ಷರಾದ ಜಿ. ಎಂ. ಹೆಗಡೆ ಅವರು ಪ್ರತಿಕ್ರಿಯಿಸುವುದು ಹೀಗೆ, 'ಕೊಳ್ಳೇಗಾಲ ಭಾಗದಲ್ಲಿ ಸದ್ಯ ಯಾವುದೇ ಕ್ವಾರಿಗಳಿಲ್ಲ. ರಾಮಮಂದಿರ ನಿರ್ಮಾಣಕ್ಕೆ ನಮ್ಮ ಜಿಲ್ಲೆಯ ಕ್ವಾರಿಗಳಿಂದ ನೇರವಾಗಿ ಕಲ್ಲನ್ನು ಖರೀದಿ ಮಾಡಿದ ಬಗ್ಗೆ ಮಾಹಿತಿ ಇಲ್ಲ. ಈ ಹಿಂದೆ ಒಂದು ಕಾರ್ಖಾನೆಯವರೆಗೆ ಕರೆ ಮಾಡಿ ವಿಚಾರಿಸಲಾಗಿತ್ತು. ಬಳಿಕ ಯಾರೂ ಸಹ ಖರೀದಿಗೆ ಬರಲಿಲ್ಲ' ಎಂದು ಹೇಳಿದರು.

ಅಯೋಧ್ಯಾ ರಾಮಮಂದಿರ ಕಾಮಗಾರಿ: 2023ರ ಡಿಸೆಂಬರ್‌ ಒಳಗೆ ರಾಮಲಲ್ಲಾ ದರ್ಶನ ಭಾಗ್ಯ..!
ಹೊಸೂರು ಮಳಿಗೆಗಳಿಂದ?: ಆದರೆ, ಅವರು ನೀಡಿದ ಮತ್ತೊಂದು ಮಾಹಿತಿ ಏನೆಂದರೆ, 'ತಮಿಳುನಾಡಿನ ಹೊಸೂರು ಹಾಗೂ ಆ ಭಾಗದಲ್ಲಿರುವ ಗ್ರಾನೈಟ್‌ ಶೋರೂಂಗಳಿಗೆ ನಮ್ಮ ಭಾಗದಿಂದ ಕಪ್ಪು ಶಿಲೆಯ ಸ್ಲ್ಯಾಬ್‌ಗಳು ಪೂರೈಕೆಯಾಗುತ್ತವೆ. ಇವು ಸಾಕಷ್ಟು ಗುಣಮಟ್ಟದಿಂದ ಕೂಡಿದ್ದಾಗಿದೆ. ಹೀಗಾಗಿ ಆ ಶೋರೂಂಗಳಿಂದ ರಾಮಮಂದಿರಕ್ಕೆ ಸ್ಲ್ಯಾಬ್‌ಗಳನ್ನು ಖರೀದಿಸಿ ಹೋಗಿರಬೇಕು. ಇದು ಯಾವ ಭಾಗದ ಕಲ್ಲು ಎಂದು ಕೇಳಿದವರಿಗೆ ಚಾ.ನಗರ - ಕೊಳ್ಳೇಗಾಲ ಭಾಗದ್ದು ಎಂದು ಶೋರೂಂನವರು ಹೇಳಿರಬೇಕು. ಹೀಗಾಗಿ ಟ್ರಸ್ಟ್‌ ಕಾರ್ಯದರ್ಶಿ ನಮ್ಮೀ ಭಾಗದ ಹೆಸರು ಹೇಳಿರಬಹುದು' ಎಂಬುದು ಹೆಗಡೆ ಅವರ ಅಭಿಪ್ರಾಯ.

ನಮ್ಮ ಜಿಲ್ಲೆಯ ಕಪ್ಪು ಕಲ್ಲಿನ ಕಾರ್ಖಾನೆಗಳಿಂದಾಗಲಿ, ಕ್ವಾರಿಗಳಿಂದ ನೇರವಾಗಿ ರಾಮಮಂದಿರ ನಿರ್ಮಾಣಕ್ಕೆ ಕಲ್ಲು ಖರೀದಿಸಿಲ್ಲ. ಆದರೆ, ಹೊಸೂರು ಶೋರೂಂಗಳಿಗೆ ನಮ್ಮ ಜಿಲ್ಲೆಯಿಂದ ಸಾಕಷ್ಟು ಕಪ್ಪು ಕಲ್ಲಿನ ಸ್ಲ್ಯಾಬ್‌ಗಳು ಪೂರೈಕೆಯಾಗುತ್ತಿದ್ದು, ಅಲ್ಲಿಂದ ಮಂದಿರ ನಿರ್ಮಾಣ ಟ್ರಸ್ಟ್‌ನವರು ಖರೀದಿಸಿರುವ ಸಾಧ್ಯತೆ ಇದೆ.
ಜಿ. ಎಂ. ಹೆಗಡೆ, ಅಧ್ಯಕ್ಷರು, ಜಿಲ್ಲಾ ಗ್ರಾನೈಟ್‌ ಮಾಲೀಕರ ಸಂಘ

ಕಪ್ಪು ಶಿಲೆ ವಿದೇಶಗಳಿಗೂ ರಫ್ತು

ಅರಣ್ಯ ಪ್ರದೇಶ ಹೊರತುಪಡಿಸಿ ಉಳಿದೆಡೆ ಅನುಮತಿ ಪಡೆದು ಹೊರ ತೆಗೆಯಲಾಗುತ್ತಿರುವ ಜಿಲ್ಲೆಯ ಕಪ್ಪು ಶಿಲೆಯನ್ನು ಚೀನಾ, ಸ್ಪೈನ್‌, ಅಮೆರಿಕಾ, ಇಟಲಿ ಮತ್ತು ಜಪಾನ್‌ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಜಿಲ್ಲೆಯ ಕಪ್ಪು ಶಿಲೆ ವಿಶಿಷ್ಟವಾಗಿದ್ದು, ಪ್ರಪಂಚದಾದ್ಯಂತ ಹೆಚ್ಚಿನ ಬೇಡಿಕೆ ಇದೆ.

ಜಿಲ್ಲೆಯ ಕಳೆದ 8 ವರ್ಷದ ಅಂಕಿ, ಅಂಶಗಳನ್ನು ವಿಶ್ಲೇಷಿಸಿದಾಗ ಜಿಲ್ಲೆಯಲ್ಲಿ ಸುಮಾರು 338 ಎಕರೆ ವಿಸ್ತೀರ್ಣದಷ್ಟು ಪ್ರದೇಶದಲ್ಲಿ (ಕಪ್ಪು ಶಿಲೆ 218 ಎಕರೆ) ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಹೀಗೆ ಅನುಮತಿ ಪಡೆದವರು ಕಲ್ಲನ್ನು ಹೊರ ತೆಗೆದು, ಸಾಗಣೆ ಮಾಡಿಕೊಂಡು 114 ಕೋಟಿ ರೂ. ರಾಜಧನವನ್ನು ಸರಕಾರಕ್ಕೆ ಪಾವತಿಸಿದ್ದಾರೆ ಎಂಬುದು ಗಮನಾರ್ಹ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ