ಆ್ಯಪ್ನಗರ

ಬಸವಣ್ಣ ಜಗತ್ತಿನ ದೊಡ್ಡ ಪ್ರವಾದಿ

ಬಸವಣ್ಣ ಜಗತ್ತಿನ ದೊಡ್ಡ ಪ್ರವಾದಿ ಎಂದು ಬೈಲೂರು-ಮುಂಡರಗಿಯ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಪ್ರಭು ತೋಂಟದಾರ್ಯಸ್ವಾಮಿ ಹೇಳಿದರು.

Vijaya Karnataka 5 Feb 2018, 5:00 am

ಕಡೂರು:ಬಸವಣ್ಣ ಜಗತ್ತಿನ ದೊಡ್ಡ ಪ್ರವಾದಿ ಎಂದು ಬೈಲೂರು-ಮುಂಡರಗಿಯ ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಪ್ರಭು ತೋಂಟದಾರ್ಯಸ್ವಾಮಿ ಹೇಳಿದರು.

ತಾಲೂಕಿನ ದೇವನೂರಿನ ಬಳಿಯ ಲಕ್ಮೀಸಾಗರ ಗ್ರಾಮದಲ್ಲಿ ಸಂತೃಪ್ತಿ ಸಿರಿಧಾನ್ಯಗಳ ಸಂಸ್ಕರಣಾ ಘಟಕವನ್ನು ಭಾನುವಾರ ಅವರು ಉದ್ಘಾಟಿಸಿ ನಂತರ ಏರ್ಪಡಿಸಿದ್ದ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಬುದ್ಧ, ಮಹಾವೀರ, ಶಂಕರಾಚಾರ್ಯ, ಮಧ್ವಾಚಾರ್ಯ, ರಾಮಾನುಜಚಾರ್ಯ, ಪೈಗಂಬರ್‌ ಮುಂತಾದ ಮಹಾತ್ಮರು ಬೋಧಿಸಿದ ವಿಚಾರಕ್ಕಿಂತ ಬಸವಣ್ಣನ ವಿಚಾರಧಾರೆ ಬಿನ್ನವಾದದ್ದು ಎಂದು ಹೇಳಿದರು.

ಅನ್ನ, ಅರಿವು, ಅರಿವೆ, ಆಶ್ರಯ ಮತ್ತು ಔಷಧದ ಅಗತ್ಯವನ್ನು ಸಾರಿ ಹೇಳುವ ಕಾಯ ತತ್ವವನ್ನು ಜಗತ್ತಿಗೆ ಸಾರಿದ ಬಸವಣ್ಣ ಕೃಷಿಯ ಬಗ್ಗೆ ಆಲೋಚಿಸಿದ ಮಾಡಿದ ಮೊದಲ ಚಿಂತಕ. ಗ್ರಾಮ ಸ್ವ ರಾಜ್ಯದ ಕಲ್ಪನೆ ಗಾಂಧಿ ಅವರಿಗೆ ಬಸವಣ್ಣನಿಂದ ಬಂದಿದೆ ಎಂದರು.

ಮಠ, ಮಂದಿರ, ದೇವರು, ಧರ್ಮ ಎಲ್ಲವೂ ಸುಳ್ಳು. ಅನ್ನ ನಿಜವಾದ ಧರ್ಮ. ಅದು ಮನುಷ್ಯ ಹುಟ್ಟಿದಾಗಿನಿಂದ ಸಾಯುವವರೆಗೆ ಜತೆಯಲ್ಲಿಯೇ ಸಾಗುತ್ತದೆ. ಆಹಾರ ದೇವರ ಮೊದಲ ಸೃಷ್ಟಿ. ಧರ್ಮ ಮನುಷ್ಯನ ಸೃಷ್ಟಿ ಎಂದರು.

ಎಲ್ಲಾ ತಾಂತ್ರಿಕತೆ ಮುಗಿದ ಮೇಲೆ ಮೂಲ ತಾಂತ್ರಿಕತೆಗೆ ಮಹತ್ವ ಸಿಕ್ಕಿದೆ. ಪರಿಣಾಮವಾಗಿ ಸಿರಿಧಾನ್ಯದ ಆಹಾರ ಪದಾರ್ಥ ಸೇವನೆಗೆ ಜನರು ಮುಂದಾಗುತ್ತಿದ್ದಾರೆ. ಮುಂದಿನ 50 ವರ್ಷದಲ್ಲಿ ಆಹಾರದ ಕೊರತೆಯಾಗುತ್ತದೆ. ಆಗ ರೈತನಿಗೆ ಕಿಮ್ಮತ್ತು ಬರುತ್ತದೆ ಎಂದು ತಿಳಿಸಿದರು.

ಆಂತರಿಕ ಭದ್ರತಾ ವಿಭಾಗದ ಎಸ್ಪಿ ಎಸ್‌.ಎನ್‌.ಸಿದ್ದರಾಮಪ್ಪ ಮಾತನಾಡಿ, ಏಳು ಸಾವಿರ ವರ್ಷದ ಹಿಂದೆ ಸಿರಿಧಾನ್ಯದ ಬಳಕೆ ಇತ್ತು ಎಂಬುದು ಸಂಶೋಧನೆಯಿಂದ ಪತ್ತೆಯಾಗಿದೆ. ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿದೆ. ಜನರಿಗೆ ಇದರ ಮಹತ್ವ ಈಗ ಬಂದಿರುವುದು ಆರೋಗ್ಯದ ಲಕ್ಷ ಣ ಎಂದರು.

ಬೆಂಗಳೂರು ಕೃಷಿ ವಿವಿಯ ಯೋಜನಾ ನಿರ್ದೇಶಕ ಡಾ.ಪ್ರಭಾಕರ್‌ ಮಾತನಾಡಿ, ನಾಸಿಕ್‌ ಮತ್ತು ಗುಜರಾತ್‌ನಲ್ಲಿ ಸಿರಿಧಾನ್ಯದ ಹಲವು ಸಂಸ್ಕರಣಾ ಘಟಕವಿದೆ. ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಜಪಾನ್‌ ತಾಂತ್ರಿಕತೆಯಲ್ಲಿ ಸಂಸ್ಕರಣಾ ಘಟಕ ಈ ಗ್ರಾಮದಲ್ಲಿ ಆರಂಭವಾಗುತ್ತಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.

ಸಾಹಿತಿ ಚಟ್ನಳ್ಳಿ ಮಹೇಶ್‌ ಮಾತನಾಡಿ, ಚರಿತ್ರೆ ಪುನಾರಾವರ್ತನೆಯಾಗುತ್ತಿದೆ. ಸಿರಿಧಾನ್ಯಕ್ಕೆ ಸುವರ್ಣ ಕಾಲ ಬರುತ್ತಿದೆ. ಕೃಷಿ ಧರ್ಮ ಎಲ್ಲರ ಧರ್ಮವಾಗಲಿ. ನಿಸರ್ಗ ಅರಿತು ಮನುಷ್ಯ ಬದುಕಬೇಕು ಎಂದು ತಿಳಿಸಿದರು.

ಸಿರಿಧಾನ್ಯ ಘಟಕದ ಮಾಲೀಕ ಕೊಪ್ಪಲು ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯ ಅಭಿಯಂತರ ಬಿ.ಗುರುಪ್ರಸಾದ್‌, ಕೃಷಿ ವಿವಿಯ ಹಿರಿಯ ಕ್ಷೇತ್ರ ಅಧೀಕ್ಷ ಕ ಡಾ.ಬಿ.ಬೋರಯ್ಯ, ತುಮಕೂರಿನ ಮಣ್ಣು ಮತ್ತು ಕೃಷಿ ರಾಸಾಯನಶಾಸ್ತ್ರ ತಜ್ಞ ಡಾ.ಎಚ್‌.ಆರ್‌.ಯೋಗೀಶ್ವರ, ನಿವೃತ್ತ ನ್ಯಾಯಾಧೀಶ ಕೆಂಪೇಗೌಡ, ಹೊಸಳ್ಳಿ ತಿಮ್ಮಯ್ಯ, ಸಿದ್ದರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ