ಆ್ಯಪ್ನಗರ

ಚಿನ್ನಾಭರಣ ಕಳವು ಮಾಡುತ್ತಿದ್ದವನ ಬಂಧನ

ರಾತ್ರಿ ವೇಳೆ ಕಿಟಕಿ ಮುಖಾಂತರ ಬಾಗಿಲು ತೆರೆದು, ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Vijaya Karnataka Web 11 May 2016, 4:00 am

ಬೆಂಗಳೂರು: ರಾತ್ರಿ ವೇಳೆ ಕಿಟಕಿ ಮುಖಾಂತರ ಬಾಗಿಲು ತೆರೆದು, ಚಿನ್ನಾಭರಣ ಕಳವು ಮಾಡುತ್ತಿದ್ದ ಆರೋಪಿಯನ್ನು ಬನಶಂಕರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರಣ್ಯಪುರ ನಿವಾಸಿ ಲಿಂಗರಾಜು (35) ಬಂಧಿತ. ಆರೋಪಿಯಿಂದ ಸುಮಾರು 8 ಲಕ್ಷ ರೂ. ಮೌಲ್ಯದ 265 ಗ್ರಾಂ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಕೊಳ್ಳೇಗಾಲ ಮೂಲದ ಆರೋಪಿ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದ. ನಿರುದ್ಯೋಗಿಯಾಗಿದ್ದ ಈತ ಕಳವು ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾನೆ. ರಾತ್ರಿ ವೇಳೆ ರಸ್ತೆಗಳಲ್ಲಿ ಸಂಚರಿಸುವುದು, ಕಿಟಕಿ ತೆರೆದಿರುವ ಮನೆ ಗುರುತಿಸಿ ಅಲ್ಲಿಗೆ ಹೋಗುವುದು, ಒಂದು ವೇಳೆ ಕಿಟಕಿ ಪಕ್ಕ ಮಹಿಳೆ ಮಲಗಿದ್ದರೆ ಸರ ದೋಚುವುದು ಮಾಡುತ್ತಿದ್ದ. ಈತನಿಗೆ ಮೂವರು ಮಕ್ಕಳಿದ್ದು, ಕಳವು ಮಾಡಲು ಪತ್ನಿ ಸಹ ಸಹಕರಿಸುತ್ತಿದ್ದಳು ಎನ್ನಲಾಗಿದೆ. ಆದರೆ, ಸದ್ಯ ಅವರು ಎಲ್ಲಿದ್ದಾರೆ ಎಂಬ ಬಗ್ಗೆ ಆರೋಪಿ ಮಾಹಿತಿ ನೀಡಿಲ್ಲ.

ಒಂದು ವೇಳೆ ಎರಡು ಅಥವಾ ಮೂರು ದಿನ ಆತ ಮನೆಗೆ ಹಿಂತಿರುಗದಿದ್ದಲ್ಲಿ ಪತ್ನಿ ಮನೆ ಖಾಲಿ ಮಾಡಿಕೊಂಡು ಹೋಗುತ್ತಾರೆ. ಹಾಗಾಗಿ ಮನೆ ಬಳಿ ಹೋಗಿ ಪರಿಶೀಲಿಸಿದ್ದರೂ ಆತನ ಕುಟುಂಬ ಸದಸ್ಯರು ಪತ್ತೆಯಾಗಿಲ್ಲ.

ಕೊಳ್ಳೇಗಾಲ ಮೂಲದ ಈತ ಅಲ್ಲಿಯೂ ಇಂತಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದು, ಅಲ್ಲಿನ ಪೊಲೀಸರು ಬಂಧಿಸಿದ್ದರು. ಜಾಮೀನು ಪಡೆದು ಹೊರಬಂದ ನಂತರ ಮೈಸೂರಿನಲ್ಲಿ ನೆಲೆಸಿದ್ದ. ಅಲ್ಲಿಯೂ ಸಿಕ್ಕಿಕೊಂಡ ನಂತರ ಬೆಂಗಳೂರು ಸೇರಿದ್ದ.

ಕಳವು ಮಾಡಿದ ಚಿನ್ನಾಭರಣಗಳನ್ನು ಚಿನ್ನದ ವ್ಯಾಪಾರಿಗಳಿಗೆ ಮಾರಾಟ ಮಾಡಿ ಹಣ ಪಡೆಯುತ್ತಿದ್ದ. ಬಂದ ಹಣದಿಂದ ಜೀವನ ಸಾಗಿಸುತ್ತ ಮೋಜು ಮಾಡುತ್ತಿದ್ದರು. ಆರೋಪಿಯ ಬಂಧನದಿಂದ ಬನಶಂಕರಿ ಹಾಗೂ ಗಿರಿನಗರ ಠಾಣೆಯಲ್ಲಿ ದಾಖಲಾಗಿರುವ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ.

ಆರೋಪಿಯು ಈ ಹಿಂದೆ ಬೆಂಗಳೂರಿನ ಗಂಗಮ್ಮನ ಗುಡಿ, ಕಲಾಸಿ ಪಾಳ್ಯ, ಚೆನ್ನಮ್ಮನ ಕೆರೆ, ಜಯನಗರ, ವಿದ್ಯಾರಣ್ಯಪುರ, ದಾವಣಗೆರೆ ಜಿಲ್ಲೆಯ ವಿದ್ಯಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವುದು ತನಿಖೆ ವೇಳೆ ತಿಳಿದುಬಂದಿದೆ. ಹೆಚ್ಚಿನ ವಿಚಾರಣೆಗಾಗಿ ಆರೋಪಿಯನ್ನು ಪೊಲೀಸ್‌ ವಶಕ್ಕೆ ಪಡೆಯಲಾಗಿದೆ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ