Please enable javascript.ಸಮಾಜಕ್ಕೇ ದೀವಿಗೆಯಾದ ಗುಣಧರನಂದಿ ಶ್ರೀ - ಸಮಾಜಕ್ಕೇ ದೀವಿಗೆಯಾದ ಗುಣಧರನಂದಿ ಶ್ರೀ - Vijay Karnataka

ಸಮಾಜಕ್ಕೇ ದೀವಿಗೆಯಾದ ಗುಣಧರನಂದಿ ಶ್ರೀ

ವಿಕ ಸುದ್ದಿಲೋಕ 16 Jun 2012, 5:00 am
Subscribe

ತಾಯಿಯ ವಾತ್ಸಲ್ಯ, ತಂದೆಯ ಪ್ರೀತಿಯೊಂದಿಗೆ ಆಟವಾಡುತ್ತ ಬೆಳೆಯಬೇಕಿದ್ದ ಈ ಬಾಲಕ ಎಂಟು ವರ್ಷದ ಎಳೆ ವಯಸ್ಸಿನಲ್ಲೇ ಅನಾಥ ಮಗು. ಅನಾರೋಗ್ಯಕ್ಕೆ ತುತ್ತಾಗಿದ್ದ. ತಂದೆ-ತಾಯಿ ಸಾವನ್ನಪ್ಪಿದ ನಂತರ ಈತನ ಬದುಕು ಹರಿದ ಚಿಂದಿಯಂತಾಗಿತ್ತು. ಅಕ್ಷರಶಃ ಆತ ದಿಕ್ಕಿಲ್ಲದವನಾಗಿದ್ದ.

ಸಮಾಜಕ್ಕೇ ದೀವಿಗೆಯಾದ ಗುಣಧರನಂದಿ ಶ್ರೀ
ಆನಂದ ಅಂಗಡಿ ಹುಬ್ಬಳ್ಳಿ



ತಾಯಿಯ ವಾತ್ಸಲ್ಯ, ತಂದೆಯ ಪ್ರೀತಿಯೊಂದಿಗೆ ಆಟವಾಡುತ್ತ ಬೆಳೆಯಬೇಕಿದ್ದ ಈ ಬಾಲಕ ಎಂಟು ವರ್ಷದ ಎಳೆ ವಯಸ್ಸಿನಲ್ಲೇ ಅನಾಥ ಮಗು. ಅನಾರೋಗ್ಯಕ್ಕೆ ತುತ್ತಾಗಿದ್ದ. ತಂದೆ-ತಾಯಿ ಸಾವನ್ನಪ್ಪಿದ ನಂತರ ಈತನ ಬದುಕು ಹರಿದ ಚಿಂದಿಯಂತಾಗಿತ್ತು. ಅಕ್ಷರಶಃ ಆತ ದಿಕ್ಕಿಲ್ಲದವನಾಗಿದ್ದ.

ಮೊದಲೇ ಕಿತ್ತು ತಿನ್ನುವ ಬಡತನ. ಕೇವಲ ಎರಡು ಎಕರೆ ಪಿತ್ರಾರ್ಜಿತ ಬರಡು ಜಮೀನು ಬದುಕಿಗಿದ್ದ ಆಸರೆ. ದಿನವೆಲ್ಲ ದುಡಿದು, ಬೇರೆಯವರ ಹೊಲದಲ್ಲಿ ಕೂಲಿ ಮಾಡಿದರೂ ಒಪ್ಪೊತ್ತಿನ ಊಟಕ್ಕೆ ಸಾಕಾಗುತ್ತಿರಲಿಲ್ಲ. ಪರಿಸ್ಥಿತಿ ಹೀಗಿರುವಾಗಲೇ ತಂದೆ-ತಾಯಿ ಇಹಲೋಕ ಯಾತ್ರೆ ಮುಗಿಸಿದ್ದರು. ಅನಾಥನಾದ ಬಾಲಕನಿಗೆ ಅಣ್ಣನೇ ಆಶ್ರಯ. ಆದರೂ ಕಷ್ಟಗಳು ಬೆಂಬಿಡದೇ ಬೇತಾಳನಂತೆ ಬೆನ್ನತ್ತಿದ್ದವು.

ಓದಿಗಿಂತ ಆಟದತ್ತಲೇ ಹೆಚ್ಚು ಗಮನ ಹರಿಸುತ್ತಿದ್ದ ಬಾಲಕ ಎರಡನೇ ತರಗತಿಯಲ್ಲಿ ಅನುತ್ತೀರ್ಣ. ಬೀದಿ ಬೀದಿ ಅಲೆಯುತ್ತ ಕಬಡ್ಡಿ , ಖೋಖೋ, ಚಿನ್ನಿದಾಂಡು ಆಡುತ್ತ, ಒಪ್ಪತ್ತು ಊಟ ಮಾಡಿದರೆ ಮತ್ತೊಂದು ಹೊತ್ತು ಉಪವಾಸ ಮಲಗುತ್ತಿದ್ದ. ಮುಂದೊಂದು ದಿನ ಗ್ರಾಮಕ್ಕೆ ಬಂದಿದ್ದ ಮುನಿಗಳೊಡನೆ ತಾನೂ ಮುನಿಯಾಗುತ್ತೇನೆಂದು ಓಡಿ ಹೋಗಿದ್ದ.

ಇದು ಯಾವುದೋ ಕಥೆ, ಕಾದಂಬರಿಯೋ, ಸಿನಿಮಾ ಕಥೆನೋ ಅಲ್ಲ; ಅಥವಾ ಇಂಗ್ಲಿಷ್ ಫಿಕ್ಷನ್‌ವೊಂದರ ತುಣುಕಲ್ಲ.

ಹುಬ್ಬಳ್ಳಿ ಸಮೀಪದ ವರೂರು ಗ್ರಾಮದಲ್ಲಿ ನವಗ್ರಹ ತೀರ್ಥ ಸ್ಥಾಪಿಸಿದ ಯುವಾಚಾರ್ಯ ಗುಣಧರನಂದಿ ಮಹಾರಾಜರು ತಮ್ಮ ಪೂರ್ವಾಶ್ರಮದಲ್ಲಿ ಅನುಭವಿಸಿದ ಕಷ್ಟಕರ ಘಟನೆಗಳ ಸ್ಯಾಂಪಲ್‌ಗಳಿವು.

ಪೂರ್ವಾಶ್ರಮದಲ್ಲಿ ಹತ್ತು ಹಲವಾರು ರೀತಿಯಲ್ಲಿ ಕಷ್ಟಪಟ್ಟಿದ್ದ ಮುನಿಶ್ರೀ ಗುಣಧರನಂದಿ ಮಹಾರಾಜರದ್ದು ಇಂದಿಗೂ ಕಷ್ಟದ ಬದುಕೇ. ಜೈನ ಧರ್ಮದ ಪರಂಪರೆಯಂತೆ ಒಪ್ಪತ್ತೇ ನೀರು ಹಾಗೂ ಆಹಾರ ಸೇವಿಸುವ ಮುನಿಶ್ರೀ, ವರ್ಷದಾದ್ಯಂತ ದೇಶಪರ್ಯಟನೆ ಮಾಡುತ್ತ ಮಳೆಗಾಲದ ನಾಲ್ಕು ತಿಂಗಳಲ್ಲಿ ಮಾತ್ರ ಒಂದೆಡೆ ನೆಲೆಸಿ ಚಾತುರ್ಮಾಸದ ಪೂಜಾ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೆ.

ಬಾಲ್ಯ ಜೀವನ
ಎಂಟು ವರ್ಷದವನಿದ್ದಾಗಲೇ ಬ್ರಹ್ಮಚರ್ಯ ವೃತ ಸ್ವೀಕರಿಸಿದ ಮುನಿಶ್ರೀ ಗುಣಧರನಂದಿಯವರ ಪೂರ್ವಾಶ್ರಮದ ಹೆಸರು ರಾಜು ಅಲಬುರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶಮನೆವಾಡಿ ಗ್ರಾಮದಲ್ಲಿ 20-9-1973ರಲ್ಲಿ ಜನನ. ನಿಂಗಪ್ಪ ಹಾಗೂ ಭಾಗ್ಯಾದೇವಿ ದಂಪತಿಯ ಕೊನೆಯ ಪುತ್ರ ಈ ರಾಜು. ತಂದೆಯಿಂದ ಬಳುವಳಿಯಾಗಿ ಬಂದಿದ್ದ ಕೃಷಿ ಮುಂದುವರೆಸಿದ್ದ ಅಣ್ಣ ಬಾಬಣ್ಣ ಕೆಲ ವರ್ಷಗಳ ಹಿಂದಷ್ಟೇ ಸಾವನ್ನಪ್ಪಿದ್ದಾರೆ. ಒಬ್ಬಳು ಅಕ್ಕ ಕಮಲಾ ಮಹಾರಾಷ್ಟ್ರದಲ್ಲಿದ್ದರೆ ಮತ್ತೊಬ್ಬ ಸಹೋದರಿ ಅಕ್ಕಾದೇವಿಯನ್ನು ಶಮನೆವಾಡಿಯಲ್ಲಿಯೇ ಮದುವೆ ಮಾಡಿಕೊಡಲಾಗಿದೆ.

ತಂದೆ-ತಾಯಿ ಕಳೆದುಕೊಂಡು ಅಣ್ಣನ ಮನೆಯಲ್ಲಿ ವಾಸವಿದ್ದ ರಾಜು ಬಾಲಕನಾಗಿದ್ದಾಗ ಅತಿ ದಡ್ಡ. ಓದಿದ್ದು ತಲೆಗೆ ಹೋಗುತ್ತಿರಲಿಲ್ಲ. ಮನೆಯಿಂದ ಹೊರಗಿರುವುದೇ ಈತನಿಗೆ ಇಷ್ಟ.

ಮನೆ ಬಿಟ್ಟು ಓಡಿದವರ ಸಾಲಿಗೆ
ಜಗತ್ತಿನ ಅನೇಕ ಮಹಾಪುರುಷರು ಬಾಲ್ಯದಲ್ಲಿ ಮನೆಬಿಟ್ಟು ಓಡಿ ಹೋದವರೇ ಆಗಿದ್ದಾರೆ. ಅಂಥವರ ಸಾಲಿಗೆ ಸೇರುತ್ತಾರೆ ಈ ನಮ್ಮ ಗುಣಧರ ನಂದಿ ಮಹಾರಾಜರು. ಚಾತುರ್ಮಾಸಕ್ಕಾಗಿ ಗಣಧರಾಚಾರ್ಯ ಶ್ರೀ ಕುಂಥುಸಾಗರ ಮುನಿಮಹಾರಾಜರ ಸಂಘ ಶಮನೆವಾಡಿ ಗ್ರಾಮಕ್ಕೆ ಕಾಲಿರಿಸಿತು. ನಾಲ್ಕು ತಿಂಗಳವರೆಗೆ ಗ್ರಾಮದಲ್ಲಿ ಪ್ರವಚನ, ಪೂಜೆಗಳು ನಡೆದವು. ದಿನದ ಹೆಚ್ಚಿನ ಸಮಯ ಮನೆಯಿಂದ ಹೊರಗೆ ಕಳೆಯುತ್ತಿದ್ದ ರಾಜು, ಮುನಿಗಳು ಗ್ರಾಮಕ್ಕೆ ಬಂದ ನಂತರ ಅವರೊಟ್ಟಿಗೇ ಇರತೊಡಗಿದ. ಪ್ರಾರಂಭದಲ್ಲಿ ದಿನಕ್ಕೆ ಐದಾರು ಬಾರಿ ಮುನಿಗಳಿದ್ದ ಸ್ಥಳಕ್ಕೆ ಹೋಗುತ್ತಿದ್ದ ರಾಜು, ಕಾಲಾನಂತರ ಅವರೊಟ್ಟಿಗೇ ಇರತೊಡಗಿದ. ಮುನಿಗಳ ಪೂಜೆ, ಪ್ರವಚನ, ಉಪವಾಸ ಪದ್ಧತಿ ರಾಜುನನ್ನು ಆಕರ್ಷಿಸಿದವು. ಬಾಲ್ಯದಿಂದಲೇ ಪ್ರೀತಿ, ವಾತ್ಸಲ್ಯದಿಂದ ವಂಚಿತನಾಗಿದ್ದ ರಾಜುನನ್ನು ಮುನಿಗಳ ಪ್ರೀತಿ ಆಕರ್ಷಿಸಿತು.

ನಾಲ್ಕು ತಿಂಗಳ ನಂತರ ಮುನಿಗಳ ಸಂಘ ಗ್ರಾಮದಿಂದ ಮತ್ತೆ ದೇಶ ಪರ್ಯಟನೆ ಪ್ರಾರಂಭಿಸಿದಾಗ ರಾಜು ಮನೆಯಲ್ಲಿ ಯಾರಿಗೂ ಹೇಳದೇ ಅವರೊಂದಿಗೆ ಕಾಲ್ಕಿತ್ತ. ಇದನ್ನರಿತ ಆತನ ಅಣ್ಣ ಹಾಗೂ ನೆರೆಹೊರೆಯವರು ರಾಜುನನ್ನು ಮರಳಿ ಗ್ರಾಮಕ್ಕೆ ಕರೆ ತಂದರು. ಆದರೂ ಮತ್ತೊಮ್ಮೆ ಮನೆಯಿಂದ ಓಡಿ ಹೋಗಿ ಮುನಿ ಸಂಘ ಸೇರಿದ್ದ ರಾಜುನನ್ನು ಸಂಬಂಧಿಕರು ಹೊಡೆದು, ಬಡೆದು ತಮ್ಮೊಂದಿಗೆ ಕರೆದುಕೊಂಡು ಬಂದರು.

ಮನೆಯಲ್ಲಿ ಇರದೇ, ಆಟಕ್ಕೂ ಹೋಗದೇ ಚಡಪಡಿಸುತ್ತಿದ್ದ ರಾಜು ತನ್ನ ಹಠಬಿಡದೇ ಮತ್ತೂ ಮನೆಯಿಂದ ಓಡಿ ಹೋಗಿ ಮುನಿ ಸಂಘ ಸೇರಿಕೊಂಡ. ಅಧ್ಯಾತ್ಮದತ್ತ ರಾಜುವಿನ ಆಸಕ್ತಿ ಕಂಡ ಕುಂಥುಸಾಗರ ಮುನಿಮಹಾರಾಜರು ಆತನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಆತನ ಕುಟುಂಬದವರ ಸಮ್ಮತಿ ಪಡೆದುಕೊಂಡರು. ಮುಂದಿನ ಒಂದು ತಿಂಗಳಲ್ಲಿ ಸದಲಗಾ ಗ್ರಾಮದಲ್ಲಿ ರಾಜುವಿಗೆ ಬ್ರಹ್ಮಚರ್ಯ ದೀಕ್ಷೆ ನೀಡಲಾಯಿತು.

ಇಂದಿರಾ ಗಾಂಧಿ ಮತ್ತು ಟಿವಿ ನೆನಪು
ಹುಟ್ಟಿನಿಂದ ಯಾವತ್ತೂ ಟಿವಿ ನೋಡದ ರಾಜು, ಮೊದಲ ಬಾರಿ ಟಿವಿ ನೋಡಿದ್ದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಸಾವನ್ನಪ್ಪಿದ್ದಾಗ. ಶಮನೆವಾಡಿಯಲ್ಲಿ ಒಂದೇ ಒಂದು ಟಿವಿ ಇದ್ದ ಮನೆ ಎದುರು ಅಂದಿನ ದಿನ ಇಡಿ ಗ್ರಾಮವೇ ಸೇರಿತ್ತು. ಆಗ ರಾಜು ದೂರದಿಂದಲೇ ಟಿವಿ ವೀಕ್ಷಿಸಿದ್ದ. ಅದೇ ಮೊದಲು ಹಾಗೂ ಕೊನೆ, ಅಂದಿನಿಂದ ಇದುವರೆಗೂ ಟಿವಿ ವೀಕ್ಷಿಸಿಲ್ಲ. ಜತೆಗೆ ಒಂದೇ ಒಂದು ಸಿನಿಮಾ ನೋಡಿಲ್ಲ. ಅತಿ ಬಡತನದಲ್ಲಿ ಕಾಲ ಕಳೆಯುತ್ತಿದ್ದ ರಾಜು ಹಾಗೂ ಆತನ ಕುಟುಂಬದವರಿಗೆ ಸಿನಿಮಾ, ನಾಟಕದಂತಹ ಮನರಂಜನೆಗೆ ಹಣ ವ್ಯಯಿಸಲು ಆಗುತ್ತಿರಲಿಲ್ಲ. ಬ್ರಹ್ಮಚಾರಿ ವೃತ ಸ್ವೀಕಾರ ನಂತರ ಇದುವರೆಗಿನ ಸಮಯದಲ್ಲಂತೂ ಸಿನಿಮಾ, ನಾಟಕ ವೀಕ್ಷಿಸಲು ಸಾಧ್ಯವೇ ಇಲ್ಲ. ಈಗೇನಿದ್ದರೂ ಪೂಜೆ, ಪುನಸ್ಕಾರ, ಪ್ರವಚನ, ಧ್ಯಾನ, ತಪ, ಅಧ್ಯಾತ್ಮ ಪುಸ್ತಕಗಳ ಓದು, ರಚನೆ, ದೇಶಪರ್ಯಟನೆಗಷ್ಟೇ ಸಮಯ ಮೀಸಲು.

ಗುಣಧರನಂದಿ ಮಹಾರಾಜರ ಅಣ್ಣನ ಮಗ ಜಿನ್ನಪ್ಪ ಇಂದಿಗೂ ಶಮನೆವಾಡಿಯಲ್ಲಿ ಕೃಷಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇಂದಿಗೂ ಆ ಕುಟುಂಬದ್ದು ಕಷ್ಟದ ಬದುಕು. ಭಟ್ಟಾರಕರಾಗಿ ದೀಕ್ಷೆ ಪಡೆದ ಇವರ ಅಣ್ಣನ ಮಗ ಧರ್ಮಸೇನ ಭಟ್ಟಾರಕರು ಅಮ್ಮಿನಭಾವಿ ಧರ್ಮಪೀಠ ಹಾಗೂ ವರೂರು ಶ್ರೀಕ್ಷೇತ್ರದ ಭಟ್ಟಾರಕರು.

ದೇಶ ಸಂಚಾರ ಮತ್ತು ದೀಕ್ಷೆ
ಪೂರ್ವಾಶ್ರಮದಲ್ಲಿ ಎರಡನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದ ರಾಜು, ಬ್ರಹ್ಮಚರ್ಯ ವೃತ ಸ್ವೀಕರಿಸಿದ ನಂತರ ಅಕ್ಷರ ಕಲಿಕೆಯಲ್ಲಿ ತಲ್ಲೀನರಾದರು. ಈ ಅವಧಿಯಲ್ಲಿ ಕುಂಥುಸಾಗರ ಮುನಿ ಸಂಘದೊಂದಿಗೆ ಚಾತುರ್ಮಾಸಕ್ಕಾಗಿ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ, ಬಿಹಾರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಪರ್ಯಟನೆ ಮಾಡಿದರು. ಮುನಿ ದೀಕ್ಷೆ ಪಡೆಯುವ ಸಮಯಕ್ಕೆ ತಾವು ಪರ್ಯಟನೆ ನಡೆಸಿದ ಎಲ್ಲ ರಾಜ್ಯಗಳಲ್ಲಿನ ಮಾತೃಭಾಷೆ ಕಲಿತರು. ಸದ್ಯ ಕನ್ನಡ, ಹಿಂದಿ, ಮರಾಠಿ, ತೆಲಗು, ಗುಜರಾತಿ ಸೇರಿದಂತೆ ಹತ್ತಕ್ಕೂ ಹೆಚ್ಚು ಭಾಷೆ ಮಾತನಾಡುತ್ತಾರೆ. ಕನ್ನಡ ಹಾಗೂ ಮರಾಠಿಯಲ್ಲಿ 20ಕ್ಕೂ ಹೆಚ್ಚು ಅಧ್ಯಾತ್ಮ ಪುಸ್ತಕ ಬರೆದಿದ್ದಾರೆ.

ಪೂರ್ವಾಶ್ರಮದ ರಾಜು 20-10-1988ರಂದು 15ನೇ ವರ್ಷದಲ್ಲಿ ಬಿಹಾರ ರಾಜ್ಯದ ಆರಾ ನಗರದಲ್ಲಿ ಕುಮಾರ ವಿಜಯನಂದಿ ಹೆಸರಿನಲ್ಲಿ ಕುಂಥುಸಾಗರ ಮಹಾರಾಜರಿಂದ ಕ್ಷುಲ್ಲಕ ಪದವಿ ಸ್ವೀಕರಿಸಿದರು. ನಂತರ ಮಾತೆ ಜಿನವಾಣಿ ಸೇವೆಯಲ್ಲಿ ತೊಡಗಿಕೊಂಡರು. 17ನೇ ವಯಸ್ಸಿನಲ್ಲಿ ಉತ್ತರ ಪ್ರದೇಶದ ಬಡೊತ ಎಂಬಲ್ಲಿ 8-2-1990ರಂದು ದಿಗಂಬರ ದೀಕ್ಷೆ ಪಡೆದುಕೊಂಡು, ಶ್ರೀ ಗುಣಧರನಂದಿ ಮುನಿಯೆಂದು ನಾಮಕರಣಗೊಂಡರು. 10-7-1994ರಂದು ರಾಜಸ್ಥಾನದ ಪ್ರತಾಪಗಢದಲ್ಲಿ ಉಪಾಧ್ಯಾಯ ಪದವಿ ಪಡೆದುಕೊಂಡರು.

ವರೂರು ನವಗ್ರಹ ತೀರ್ಥ
ಹುಬ್ಬಳ್ಳಿ ಸಮೀಪದ ವರೂರು ಗ್ರಾಮದಲ್ಲಿ 2005ಕ್ಕೆ ನವಗ್ರಹ ತೀರ್ಥದ ಕಾಮಗಾರಿ ಪ್ರಾರಂಭಿಸಿದ ಗುಣಧರನಂದಿ ಮುನಿಮಹಾರಾಜರು, 2007ಕ್ಕೆ ಪಂಚಕಲ್ಯಾಣ ಪೂಜೆ ನೆರವೇರಿಸಿದರು. ಆಚಾರ್ಯ ಗುಣಧರನಂದಿ ಮಹಾರಾಜರ ಹೆಸರಿನಲ್ಲಿ ಪ್ರಾಥಮಿಕ, ಪ್ರೌಢ ಶಾಲೆಗಳ ಜತೆಗೆ ಪದವಿ ಪೂರ್ವ, ಐಟಿಐ, ಡಿಪ್ಲೋಮಾ, ಎಂಜಿನಿಯರಿಂಗ್ ಕಾಲೇಜುಗಳನ್ನು ಕ್ಷೇತ್ರದಲ್ಲಿ ಪ್ರಾರಂಭಿಸಿರುವ ಮುನಿಗಳು, ಕ್ಷೇತ್ರದಲ್ಲಿ ಎಂಬಿಬಿಎಸ್ ಕಾಲೇಜು ಪ್ರಾರಂಭಿಸುವ ಗುರಿ ಇಟ್ಟುಕೊಂಡಿದ್ದಾರೆ.


* ಹುಟ್ಟೂರಲ್ಲಿ ಚಾತುರ್ಮಾಸ್ಯ
ಎಂಟನೇ ವಯಸ್ಸಿಗೆ ಹುಟ್ಟೂರು ಶಮನೇವಾಡಿಯಿಂದ ದೂರವಾಗಿದ್ದ ಪೂರ್ವಾಶ್ರಮದ ರಾಜು, 1999ರಲ್ಲಿ ಗುಣಧರನಂದಿ ಮುನಿಮಹಾರಾಜರಾಗಿ ಮರಳಿ ಕಾಲಿಟ್ಟರು. ದಶಕಗಳ ಹಿಂದೆ ತಮ್ಮ ಗುರು ಕುಂಥುಸಾಗರ ಮಹಾರಾಜರು ಚಾತುರ್ಮಾಸ ನಡೆಸಿದ್ದ ಶಮನೇವಾಡಿಯಲ್ಲಿ ಗುಣಧರನಂದಿ ಮುನಿಗಳು ಚಾತುರ್ಮಾಸ ನಡೆಸಿ, ನಾಲ್ಕು ತಿಂಗಳವರೆಗೆ ಪೂಜೆ, ಪ್ರವಚನ ಮತ್ತಿತರ ಧಾರ್ಮಿಕ ಕಾರ್ಯ ಕೈಗೊಂಡರು.

40 ಎಕರೆ ಪ್ರದೇಶದ ತೀರ್ಥ ಕ್ಷೇತ್ರ
ಹುಬ್ಬಳ್ಳಿ ಸಮೀಪದ ವರೂರು ಗ್ರಾಮದಲ್ಲಿ ನವಗ್ರಹ ತೀರ್ಥ ಕ್ಷೇತ್ರ ಸ್ಥಾಪಿಸಿದ ಖ್ಯಾತಿ ಮುನಿಶ್ರೀ ಗುಣಧರನಂದಿ ಮಹಾರಾಜರಗೆ ಸಲ್ಲುತ್ತದೆ.
ಸುಮಾರು 40 ಎಕರೆ ಪ್ರದೇಶದಲ್ಲಿ ನವಗ್ರಹಗಳ ಮೂರ್ತಿ, ಶಾಲಾ-ಕಾಲೇಜು, ಉದ್ಯಾನಗಳನ್ನು ಈ ನವಗ್ರಹ ತೀರ್ಥಕ್ಷೇತ್ರದಲ್ಲಿ ನಿರ್ಮಿಸಲಾಗಿದೆ.
ಇಷ್ಟೊಂದು ವಿಶಾಲವಾದ ಪ್ರದೇಶದಲ್ಲಿ ನವಗ್ರಹ ತೀರ್ಥ ಕ್ಷೇತ್ರ ಸ್ಥಾಪನೆಗೊಂಡಿದ್ದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಮನುಷ್ಯನ ಭವಿಷ್ಯಕ್ಕೆ ಗ್ರಹಗಳ ಕೊಡುಗೆ ಅಪಾರವೆಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ನಂಬಿಕೆ ಇದೆ. ಆದಕಾರಣ ನಿತ್ಯ ಪೂಜೆ ಮಾಡುವ ಮೂಲಕ ಮಾನವ ಕುಲದ ಜತೆಗೆ ಸಮಸ್ತ ಜೀವಿಗಳಿಗೆ ಉತ್ತಮ ಭವಿಷ್ಯ ಲಭಿಸಲೆಂಬ ಉದ್ದೇಶದಿಂದ ಒಂಬತ್ತು ಗ್ರಹಗಳು ಹಾಗೂ ಅವುಗಳ ಮೇಲೆ ಒಂಬತ್ತು ತೀರ್ಥಂಕರರನ್ನು ಸ್ಥಾಪಿಸಲಾಗಿದೆ.
ಸೂರ್ಯಗ್ರಹದ ಮೇಲೆ ಪದ್ಮಪ್ರಭು ತೀರ್ಥಂಕರರು, ಚಂದ್ರಗ್ರಹದ ಮೇಲೆ ಚಂದ್ರಪ್ರಭು, ಮಂಗಳ ಗ್ರಹದ ಮೇಲೆ ವಾಸುಪೂಜ್ಯ, ಬುಧಗ್ರಹದ ಮೇಲೆ ಮಲ್ಲಿನಾಥ, ಗುರುಗ್ರಹದ ಮೇಲೆ ಮಹಾವೀರ, ಶುಕ್ರಗ್ರಹದ ಮೇಲೆ ಪುಷ್ಪದಂತ, ಶನಿಗ್ರಹದ ಮೇಲೆ ಮುನಿಶ್ರೀನಾಥ, ಕೇತುಗ್ರಹದ ಮೇಲೆ ಪಾರ್ಶ್ವನಾಥ ಹಾಗೂ ರಾಹುಗ್ರಹದ ಮೇಲೆ ನೇಮಿನಾಥ ತೀರ್ಥಂಕರರನ್ನು ಸ್ಥಾಪಿಸಲಾಗಿದೆ.
ಗುರುಗ್ರಹದ ಮೇಲೆ ಸ್ಥಾಪಿಸಿರುವ ಮಹಾವೀರ ತೀರ್ಥಂಕರರ ಮೂರ್ತಿಗೆ ಪಾಕಿಸ್ತಾನ ಸಮೀಪದ ಬೆಟ್ಟದಿಂದ ದೊಡ್ಡ ಬಂಡೆ ತರಿಸಿರುವುದನ್ನು ಸ್ಮರಿಸಬಹುದು.




ಮುನಿಗಳ ಸದ್ಯದ ದಿನಚರಿ
ಬೆಳಗ್ಗೆ 4ಕ್ಕೆ ಏಳುವುದು, 5.30ರ ವರೆಗೆ ಧ್ಯಾನ, 6ಕ್ಕೆ ವಾಯುವಿಹಾರ, ಹಾಸ್ಟೆಲ್, ಕಾಲೇಜುಗಳ ಪರಿಶೀಲನೆ, 8ರ ವರೆಗೆ ಪೂಜೆ, 9ರಿಂದ ಭಕ್ತರ ಭೇಟಿ, 10ರಿಂದ 11ರ ಮಧ್ಯೆ ಆಹಾರ ಸೇವನೆ, ಮಧ್ಯಾಹ್ನ 12.30ರಿಂದ ಧ್ಯಾನ, ಜಪ, 2ರಿಂದ ವಿಶ್ರಾಂತಿ, 2ರಿಂದ ಸಂಜೆ 6ರ ವರೆಗೆ ಭಕ್ತರ ಭೇಟಿ.

* ವೈಯಕ್ತಿಕ ಪರಿಚಯ
ಪೂರ್ವಾಶ್ರಮದ ಹೆಸರು: ರಾಜು ಅಲಬುರೆ.
ತಂದೆ : ನಿಂಗಪ್ಪ
ತಾಯಿ : ಭಾಗ್ಯಾದೇವಿ
ಜನನ : 20-9-1973
ಹುಟ್ಟೂರು : ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಶಮನೆವಾಡಿ ಗ್ರಾಮ.
ಅಕ್ಕಂದಿರು : ಕಮಲಾ ಮತ್ತು ಅಕ್ಕಾದೇವಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ