ಆ್ಯಪ್ನಗರ

ಹಸಿರು ಹಂಚುವುದರಲ್ಲಿ ಖುಷಿ ಕಂಡ ವಿಕಲಚೇತನ

ಧಾರವಾಡ: ರಸ್ತೆ ಅಪಘಾತದಿಂದ ಕೈ ಮತ್ತು ಕಾಲಿನ ಅಂಗ ವೈಕಲ್ಯಕ್ಕೆ ಒಳಗಾದ ವ್ಯಕ್ತಿಯೊಬ್ಬರು ಕಳೆದ 35 ವರ್ಷಗಳಿಂದ ತಮ್ಮ ಜೀವನವನ್ನು ಪರಿಸರ ಸಂರಕ್ಷಣೆಗೆ ಮುಡುಪಾಗಿಟ್ಟಿದ್ದಾರೆ. ಮನೆಯ ಆವರಣದಲ್ಲಿ ವಿವಿಧ ಗಿಡ ಹಾಗೂ ಔಷಧಿಯ ಸಸ್ಯಗಳನ್ನು ಬೆಳೆಸಿರುವ ಇವರು ಆಯುರ್ವೇದ ತಜ್ಞರೂ ಹೌದು..!

ವಿಕ ಸುದ್ದಿಲೋಕ 5 Jun 2017, 4:00 am

ಧಾರವಾಡ: ರಸ್ತೆ ಅಪಘಾತದಿಂದ ಕೈ ಮತ್ತು ಕಾಲಿನ ಅಂಗ ವೈಕಲ್ಯಕ್ಕೆ ಒಳಗಾದ ವ್ಯಕ್ತಿಯೊಬ್ಬರು ಕಳೆದ 35 ವರ್ಷಗಳಿಂದ ತಮ್ಮ ಜೀವನವನ್ನು ಪರಿಸರ ಸಂರಕ್ಷಣೆಗೆ ಮುಡುಪಾಗಿಟ್ಟಿದ್ದಾರೆ. ಮನೆಯ ಆವರಣದಲ್ಲಿ ವಿವಿಧ ಗಿಡ ಹಾಗೂ ಔಷಧಿಯ ಸಸ್ಯಗಳನ್ನು ಬೆಳೆಸಿರುವ ಇವರು ಆಯುರ್ವೇದ ತಜ್ಞರೂ ಹೌದು..!

ಧಾರವಾಡದ ಕಿತ್ತೂರ ಚನ್ನಮ್ಮ ಪಾರ್ಕ್‌ ಹತ್ತಿರ ತಾವರಗೇರಿ ನರ್ಸಿಂಗ್‌ ಹೋಂ ಕಾಲನಿಯ ನಿವಾಸಿ ಹಾಗೂ ಆಯುರ್ವೇದ ತಜ್ಞರೂ ಆದ ಡಾ.ಸಿದ್ಧಲಿಂಗಸ್ವಾಮಿ ಪುರಾಣಿಕಮಠ ಅವರೇ ಸಾಧಕರು. ಕಳೆದ 20 ವರ್ಷಗಳ ಹಿಂದೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಅಂಗವೈಕಲ್ಯರಾದರು. ಮನೆಯಿಂದ ಹೊರ ಹೋಗಲು ಸಾಧ್ಯವಾಗದ ಕಾರಣ ಮನೆಯಲ್ಲಿಯೇ ಇದ್ದು ಏನಾದರೂ ಮಾಡಬೇಕೆಂದು ಹಸಿರು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಇದೀಗ ಮನೆಯ ಸುತ್ತ ಮುತ್ತಲಿನ ಆವರಣದಲ್ಲಿ ಅಮೃತ ಬಳ್ಳಿ, ನೆಲ್ಲಿಕಾಯಿ, ಲೋಳಸರ, ತುಳಸಿ, ಮಾವು, ಪತ್ರಿಗಿಡ ಸೇರಿದಂತೆ 100ಕ್ಕೂ ಅಧಿಕ ಗಿಡ ಹಾಗೂ ಔಷಧ ಸಸ್ಯಗಳನ್ನು ಬೆಳೆಸಿದ್ದಾರೆ. ಆ ಮೂಲಕ ಪರಿಸರ ಹಾಗೂ ಆಯುರ್ವೇದ ಔಷಧಿ ಪದ್ಧತಿ ಬಗ್ಗೆ ಯುವ ಜನತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಪ್ರತಿ ವರ್ಷ 300 ಸಸಿಗಳ ವಿತರಣೆ: ವಿಶ್ವಪರಿಸರ ದಿನಾಚರಣೆ, ಸ್ವಾತಂತ್ರ್ಯ ದಿನಾಚರಣೆ, ಮಹಾತ್ಮರ ಪುಣ್ಯತಿಥಿ ಸೇರಿದಂತೆ ವಿಶೇಷ ದಿನಾಚರಣೆಯಲ್ಲಿ ಡಾ. ಪುರಾಣಿಮಠ ಅವರು ಸಾರ್ವಜನಿಕರಿಗೆ ಉಚಿತ ಸಸಿಗಳ ವಿತರಣೆ ಮಾಡುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕಳೆದ 10 ವಷಗಳಿಂದ ಪ್ರತಿ ವರ್ಷ 300ಕ್ಕೂ ಅಧಿಕ ಸಸಿಗಳನ್ನು ಉಚಿತವಾಗಿ ವಿತರಿಸುವ ಜತೆಗೆ ಪರಿಸರ ಸಂರಕ್ಷಣೆ ಬಗ್ಗೆ ತಿಳುವಳಿಕೆ ನೀಡುತ್ತಿದ್ದಾರೆ. ಅರಣ್ಯ ನಾಶದಿಂದ ಮಾನವನಿಗೆ ಉಳಿಗಾಲವಿಲ್ಲ ಎಂಬ ಅಂಶವನ್ನು ಅಕ್ಷರಶಃ ಮನಮುಟ್ಟುವಂತೆ ತಿಳಿಸಿಕೊಡುವ ಕಾರ್ಯವನ್ನು ಡಾ.ಪುರಾಣಿಕಮಠರು ಮಾಡುತ್ತಿದ್ದು, ಒಬ್ಬ ಆದರ್ಶ ಪರಿಸರವಾದಿ.

ಪರಿಸರ ಜಾಗೃತಿ ಫಲಕಗಳು: ಪ್ರತಿಯೊಬ್ಬರಿಗೂ ಪರಿಸರದ ಬಗ್ಗೆ ಕಾಳಜಿ ಬರುವಂತೆ ಮಾಡುವ ನಿಟ್ಟಿನಲ್ಲಿ ಮನೆಯ ಆವರಣದಲ್ಲಿರುವ ಗಿಡಗಳಿಗೆ ಪರಿಸರ ಜಾಗೃತಿ ಫಲಕಗಳನ್ನು ಹಾಕಿದ್ದಾರೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯಕರ್ತವ್ಯವಾಗಿದೆ. ಪರಿಸರ ರಕ್ಷಣೆಗೆ ಕೆಲವೊಂದಿಷ್ಟು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತರಬೇಕು. ಸರಕಾರಗಳು ಯಾವುದೇ ಕಾರಣಕ್ಕೂ ಅರಣ್ಯ ನಾಶಕ್ಕೆ ಅನುವು ಮಾಡಿಕೊಡಬಾರದು. ಗಿಡ ಹೆಚ್ಚು ಬೆಳೆಸಿದಷ್ಟು ಭೂಮಿಯ ಉಷ್ಣಾಂಶ ಕಡಿಮೆಯಾಗುತ್ತದೆ ಎಂಬುದು ಸೇರಿದಂತೆ ವಿವಿಧ ಮಾಹಿತಿಯನ್ನು ಡಾ.ಪುರಾಣಿಕಮಠ ಸಾರ್ವಜನಿಕರಿಗೆ ನೀಡುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ