ಆ್ಯಪ್ನಗರ

ಭಕ್ತರ ಪಾಲಿನ ಕಾಮಧೇನು ಸಪ್ತಾಪೂರ ಆಂಜನೇಯ

ಧಾರವಾಡ : ವ್ಯಾಸರಾಯರ ಕಾಲದಲ್ಲಿ ಸ್ಥಾಪಿತವಾದ ಇಲ್ಲಿನ ಸಪ್ತಾಪೂರದ (ಕವಿವಿ) ರೈಲ್ವೆ ಗೇಟ್‌ನ ಆಂಜನೇಯ ದೇವಸ್ಥಾನವೂ ಭಕ್ತರ ಪಾಲಿನ ಕಾಮಧೇನುವಾಗಿದೆ.

ವಿಕ ಸುದ್ದಿಲೋಕ 1 Jul 2017, 4:30 am

ಧಾರವಾಡ : ವ್ಯಾಸರಾಯರ ಕಾಲದಲ್ಲಿ ಸ್ಥಾಪಿತವಾದ ಇಲ್ಲಿನ ಸಪ್ತಾಪೂರದ (ಕವಿವಿ) ರೈಲ್ವೆ ಗೇಟ್‌ನ ಆಂಜನೇಯ ದೇವಸ್ಥಾನವೂ ಭಕ್ತರ ಪಾಲಿನ ಕಾಮಧೇನುವಾಗಿದೆ.

ಸುಮಾರು 500ಕ್ಕೂ ಅಧಿಕ ವರ್ಷಗಳ ಹಿಂದೇಯೇ ಈ ದೇವಸ್ಥಾನ ನಿರ್ಮಿಸಲಾಗಿದ್ದು, ನಂತರ ಆರ್‌.ಎಸ್‌. ದೇಸಾಯಿ ಅವರ ಒಡೆತನಕ್ಕೆ ಸೇರಿದ ಸ್ಥಳವಾದ್ದರಿಂದ ಅವರ ಕುಟುಂಬದವರು 1980ರ ವರೆಗೆ ಧರ್ಮದರ್ಶಿಗಳಾಗಿ ಸೇವೆ ಸಲ್ಲಿಸಿದರು. ಸದ್ಯ ಡಾ.ಬಿ.ಆರ್‌.ದೇಶಪಾಂಡೆ ಅವರು ಧರ್ಮದರ್ಶಿಗಳಾಗಿ ಕಾರ್ಯ ನಿರ್ವಹಿಸುತ್ತಿದ್ದು, ದೇವಸ್ಥಾನದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ನೆಹರುನಗರ, ಶ್ರೀನಗರ, ಶಿವಗಿರಿ, ಪಾವಟೆನಗರ ಸೇರಿದಂತೆ ವಿವಿಧೆಡೆಯಿಂದ ಪ್ರತಿ ಶನಿವಾರ ಮತ್ತು ಗುರುವಾರ ಆಂಜನೇಯನ ದರ್ಶನಕ್ಕೆ ಭಕ್ತರ ದಂಡೇ ಆಗಮಿಸುತ್ತದೆ. ಹಲವಾರು ಭಕ್ತರು ಆಂಜನೇಯನಿಗೆ ಭಕ್ತಿಯಿಂದ ಸೇವೆಗೈದು ತಮ್ಮ ಇಷ್ಟಾರ್ಥ ಈಡೇರಿಸಿಕೊಂಡ ಉದಾಹರಣೆಗಳಿವೆ.

ಕರಿ ಕಲ್ಲಿನ ಆಂಜನೇಯ:

ಹಚ್ಚ ಹಸಿರಿನ ವಾತಾವರಣದಲ್ಲಿರುವ ಸಪ್ತಾಪೂರ ರೈಲ್ವೆ ಗೇಟ್‌ನ ಆಂಜನೇಯ ದೇವಸ್ಥಾನದ ಗರ್ಭಗುಡಿಯಲ್ಲಿ ಕರಿ ಕಲ್ಲಿನಿಂದ ನಿರ್ಮಿಸಿದ ಅಭಯ ಹಸ್ತ ಆಂಜನೇಯ ನೋಡಲು ಅತ್ಯಂತ್ಯ ಸುಂದರವಾಗಿದೆ. ಸೊಂಟದ ಮೇಲೆ ಕೈ ಇಟ್ಟುಕೊಂಡ ರೀತಿಯಲ್ಲಿ ನಿಂತಿರುವ ಆಂಜನೇಯ ಮತ್ತೊಂದು ಕೈಯಿಂದ ಭಕ್ತರಿಗೆ ಅಭಯ ಹಸ್ತ ನೀಡಿದ್ದಾನೆ. ಆಂಜನೇಯ ದೇವಸ್ಥಾನದ ಎದುರಿನ ಗರ್ಭಗುಡಿಯಲ್ಲಿ ಮೂವರು ಯಥಿಗಳಾದ ಶ್ರೀಮದ್‌ ಜಯತೀರ್ಥರು, ಶ್ರೀಮದ್‌ ರಾಘವೇಂದ್ರತೀರ್ಥರ ಹಾಗೂ ವಾದಿರಾಜರ (ಮೃತಿಕಾ) ಬೃಂದಾವನ ಇರುವುದು ವಿಶೇಷವಾಗಿದೆ. ಪ್ರತಿವರ್ಷ ಹನುಮ ಜಯಂತಿ ಅಂಗವಾಗಿ ರಥೋತ್ಸವ ಹಾಗೂ ಫಲ್ಲಕ್ಕಿ ಸೇವೆ ನಡೆಸಿಕೊಂಡು ಬರಲಾಗುತ್ತಿದೆ. ರಾಯರ ಆರಾಧನೆ ಮಾಡಲಾಗುತ್ತದೆ.

ವಿಶೇಷ ಪೂಜೆಗಳು:

ಅಭಯ ಹಸ್ತ ಆಂಜನೇಯನಿಗೆ ಬೆಣ್ಣೆ ಪೂಜೆ, ಕುಂಕುಮ ಪೂಜೆ, ಗೋಡಂಬಿ ಪೂಜೆ, ಎಲೆ ಪೂಜೆ, ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಪೂಜೆ ಸೇರಿದಂತೆ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ದೇವಸ್ಥಾನ ಆರಂಭವಾದಾಗ ಅನೇಕ ಸಾಧು ಸಂತರು ಬಂದು ಆಂಜನೇಯನಿಗೆ ಪೂಜೆ ಸಲ್ಲಿಸುತ್ತಿದ್ದರು. ನಂತರದ ದಿನಗಳಲ್ಲಿ ದೇವಸ್ಥಾನದ ಉಸ್ತುವಾರಿ ಪಡೆದ ದೇಸಾಯಿ ಮನೆತನದವರು ಶ್ಯಾಲಂಭಟರ್‌ರನ್ನು ಅರ್ಚಕರಾಗಿ ನೇಮಿಸಿಕೊಂಡರು. ಇಲ್ಲಿಯವರೆಗೂ ಒಟ್ಟು 8ಜನ ಅರ್ಚಕರು ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದ್ದು, ಸದಸ್ಯ ನಾರಾಯಣ ಸವಾಯಿ ಎಂಬುವರು ಪ್ರತಿನಿತ್ಯ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.

=

ದೇವಸ್ಥಾನಕ್ಕೆ ಹೀಗೆ ಬನ್ನಿ

ಧಾರವಾಡದ ಸಿಬಿಟಿಯಿಂದ ಕೇವಲ 4 ಕಿಮೀ ಅಂತರದಲ್ಲಿ ಈ ದೇವಸ್ಥಾನವಿದೆ. ಸಿಬಿಟಿಯಿಂದ ಕಲ್ಯಾಣಗರ ಅಥವಾ ಶ್ರೀನಗರ ಸರ್ಕಲ್‌ ಮಾರ್ಗವಾಗಿಯೂ ಸಪ್ತಾಪೂರದ ರೈಲ್ವೇಗೆಟ್‌ನ ಆಂಜನೇಯ ದೇವಸ್ಥಾನಕ್ಕೆ ಆಗಮಿಸಬಹುದು. ಶ್ರೀಗರದ ಸರ್ಕಲ್‌ಗೆ ಬಂದು ಕರ್ನಾಟಕ ವಿಶ್ವವಿದ್ಯಾಲಯದ ಮುಖ್ಯಗೇಟ್‌ ವರೆಗೆ ನಡೆದರೇ ಸಾಕು ನೀವು ದೇವಸ್ಥಾನಕ್ಕೆ ಬಂದಂತೆ.

--

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ