Please enable javascript.ಆದಿವಾಸಿಗಳ ಕಾಲೊನಿಯಾಗಿರುವ ಹೊಸರಾಮಪುರ - ಆದಿವಾಸಿಗಳ ಕಾಲೊನಿಯಾಗಿರುವ ಹೊಸರಾಮಪುರ - Vijay Karnataka

ಆದಿವಾಸಿಗಳ ಕಾಲೊನಿಯಾಗಿರುವ ಹೊಸರಾಮಪುರ

ವಿಕ ಸುದ್ದಿಲೋಕ 28 Mar 2014, 4:21 am
Subscribe

ಗದಗ :ಹೊಸರಾಮಪುರ ಜಿಲ್ಲೆಯ ಕಟ್ಟಕಡೆಯ ಹಳ್ಳಿ. ಈ ಗ್ರಾಮಕ್ಕೆ ಹೊಸರಾಮಪುರ ಎಂದು ಹೆಸರಿದ್ದರೂ ಹೊಸ ಆಧುನಿಕ ಸೌಲಭ್ಯಗಳಿರಲಿ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ತಮ್ಮೂರಿಗೆ ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಗ್ರಾಮದ ಕುಂದುಕೊರತೆಗಳನ್ನು ಗಮನಿಸಬೇಕೆಂಬುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

ಆದಿವಾಸಿಗಳ ಕಾಲೊನಿಯಾಗಿರುವ ಹೊಸರಾಮಪುರ
ಗದಗ :ಹೊಸರಾಮಪುರ ಜಿಲ್ಲೆಯ ಕಟ್ಟಕಡೆಯ ಹಳ್ಳಿ. ಈ ಗ್ರಾಮಕ್ಕೆ ಹೊಸರಾಮಪುರ ಎಂದು ಹೆಸರಿದ್ದರೂ ಹೊಸ ಆಧುನಿಕ ಸೌಲಭ್ಯಗಳಿರಲಿ ಕನಿಷ್ಠ ಮೂಲಭೂತ ಸೌಲಭ್ಯಗಳೂ ಇಲ್ಲಿಲ್ಲ. ಈಗ ಲೋಕಸಭೆ ಚುನಾವಣೆಯಲ್ಲಿ ತಮ್ಮೂರಿಗೆ ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಮುಖಂಡರು ತಮ್ಮ ಗ್ರಾಮದ ಕುಂದುಕೊರತೆಗಳನ್ನು ಗಮನಿಸಬೇಕೆಂಬುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

ಜಿಲ್ಲಾ ಕೇಂದ್ರ ಗದಗನಿಂದ 75 ಕಿ.ಮೀ. ದೂರದಲ್ಲಿರುವ ರೋಣ ತಾಲೂಕಿನ ಕಟ್ಟಕಡೆಯ ಹಳ್ಳಿಯಾಗಿರುವ ರಾಮಪುರ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಹೊಸರಾಮಪುರ ಸಮಸ್ಯೆಗಳ ಸರಮಾಲೆ ಹೊದ್ದು ಮಲಗಿದೆ. ಮೂಲ ಸೌಕರ್ಯಗಳಾದ ಆರೋಗ್ಯ, ಶಿಕ್ಷಣ ಸೌಕರ್ಯಗಳು ಮರೀಚಿಕೆಯಾಗಿ ಗ್ರಾಮಸ್ಥರ ಬದುಕು ಶೋಚನೀಯವಾಗಿದೆ.ಅತಿ ಚಿಕ್ಕದಾದ ಈ ಗ್ರಾಮದಲ್ಲಿ 40 ಕುಟುಂಬಗಳ 300 ಜನಸಂಖ್ಯೆ ವಾಸಿಸುತ್ತಿದ್ದು,18 ವರ್ಷ ಮೇಲ್ಪಟ್ಟ ಮತದಾರರ ಸಂಖ್ಯೆ ಕೇವಲ 170 ಇದೆ. ಇಲ್ಲಿ ಹೆಚ್ಚಾಗಿ ಕುರಿಗಾರರು, ಕಷಿಕರು, ಬಡ ಕೂಲಿ ಕಾರ್ಮಿಕರು ಇದ್ದಾರೆ.

ಚುನಾವಣೆಗಳು ಬಂದಾಗ ಮಾತ್ರ ಎಲ್ಲ ಪಕ್ಷದವರು ನಮ್ಮ ಗ್ರಾಮವನ್ನು ನೆನಪಿಸಿಕೊಂಡು ಬರುತ್ತಾರೆ. ನಮ್ಮ ಬಹುದಿನಗಳ ಗೋಳು ಪರಿಹರಿಸಲು ಈವರೆಗೆ ಅಧಿಕಾರಿಗಳಾಗಲಿ, ಜನ ಪ್ರತಿನಿಧಿಗಳಾಗಲಿ ಸ್ಪಂದಿಸಿಲ್ಲ ಎಂಬುದು ಅಲ್ಲಿನ ನಾಗರಿಕರ ಆರೋಪವಾಗಿದೆ.

ಓಬೇರಾಯನ ಕಾಲದ ರಸ್ತೆ ಓಬೇರಾಯನ ಕಾಲದ ಒಂದು ರಸ್ತೆ ಮಾತ್ರ ಈ ಗ್ರಾಮಕ್ಕೆ ಸಂಪರ್ಕ ಕಲ್ಪಿಸುತ್ತದೆ. ಅದು ಅತ್ಯಂತ ಕಳಪೆಯಾಗಿದ್ದು, ಮಳೆಯಾದರೆ ಗ್ರಾಮಕ್ಕೆ ರಸ್ತೆ ಸಂಪರ್ಕ ಕಡಿದು ಹೋಗುತ್ತದೆ. ಬಹಳ ವರ್ಷಗಳ ಹಿಂದೆ ಈ ರಸ್ತೆಯಲ್ಲಿ ನಿರ್ಮಿಸಿದ ಒಂದು ಸಿಡಿ ಹಾಗೂ ಅದರ ಫರಸಿಗಳು ಆಗಲೋ ಈಗಲೋ ಬಿದ್ದು ಹೋಗುವ ಸ್ಥಿತಿಯಲ್ಲಿವೆ. ಮಳೆಗಾಲ ಬಂದರೆ ನಾಲ್ಕು ಹಳ್ಳದ ನೀರು ತುಂಬಿ ಬಂದು ಊರಿನ ರಸ್ತೆ ಸಂಪರ್ಕ ಕಡಿದು ಹೋಗಿ ಮಳೆಗಾಲದಲ್ಲಿ ಈ ಗ್ರಾಮ ನಡುಗಡ್ಡೆಯಾಗುತ್ತದೆ.

ಶೈಕ್ಷಣಿಕ ಸೌಲಭ್ಯವಿಲ್ಲ ಇಲ್ಲಿ 5ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸಕ್ಕೆ ಅವಕಾಶ ಇದೆ. ಈ ಶಾಲೆಯಲ್ಲಿ ಕೇವಲ ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ. ನಂತರದ ಶಿಕ್ಷಣಕ್ಕೆ 8-10 ಕಿ.ಮೀ.ದೂರದಲ್ಲಿರುವ ಹಿರೇಕೊಪ್ಪ ಇಲ್ಲವೆ ರಾಮಪುರಕ್ಕೆ ಮಕ್ಕಳು ನಡೆದೇ ಹೋಗಬೇಕಾದ ಅನಿವಾರ್ಯತೆ ಇದೆ. ಈ ಗ್ರಾಮದ ಶಾಲಾ ಮಕ್ಕಳು ಪ್ರಯೋಗ ಶಾಲೆ, ಕಂಪ್ಯೂಟರ್, ಆಟದ ಮೈದಾನ, ಕುಡಿಯಲು ಶುದ್ಧ ನೀರಿಲ್ಲದೆ ಶಾಲೆ ಕಲಿಯಬೇಕಾಗಿದೆ.

ನೀರಿನ ಅವ್ಯವಸ್ಥೆ ಇಲ್ಲಿ ನೀರಿನ ವ್ಯವಸ್ಥೆಯೂ ಚೆನ್ನಾಗಿಲ್ಲ. ಇರುವ ನೀರು ಕುಡಿಯಲು ಯೋಗ್ಯವಿಲ್ಲ. ನೀರಿನ ಸಂಗ್ರಹಕ್ಕಾಗಿ ಏರ್ ಟ್ಯಾಂಕರ್ ಇಲ್ಲ. ಅದಕ್ಕೆ ವಿದ್ಯುತ್ ಸಂಪರ್ಕ ಇಲ್ಲ. ಇಲ್ಲಿನ ನೀರಿನಲ್ಲಿ ಫ್ಲೋರೈಡ್ ಇರುವುದರಿಂದ ಹೆಚ್ಚಿನ ಜನರು ಕೀಲು ಸಂಧು ನೋವಿನಿಂದ ಬಳಲುತ್ತಿದ್ದಾರೆ. ವಾಲ್ವ್‌ಮನ್ ಸರಿಯಾಗಿ ನೀರು ಬಿಡುವುದಿಲ್ಲ . ಮಳೆಗಾಲದಲ್ಲಿ ಊರಿನಲ್ಲಿ ನೀರು ಹರಿದು ಹೋಗಲು ಗಟಾರು, ಸಿಸಿ ರಸ್ತೆಗಳಿಲ್ಲ. ವಯಸ್ಸಾದವರು ಊರಲ್ಲಿ ಅಡ್ಡಾಡಲು ಆಗುವುದಿಲ್ಲ. ದಿನ ನಿತ್ಯ ಇಂತಹ ನರಕಯಾತನೆ ಅನುಭವಿಸುತ್ತಿದ್ದೇವೆ ಎಂದು ಊರಿನ ನಾಗರಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸಾರಿಗೆ ಸೌಲಭ್ಯ ಗಗನಕುಸುಮ ಈ ಊರಿಗೆ ಸಾರಿಗೆ ವ್ಯವಸ್ಥೆ ಗಗನಕುಸುಮವಾಗಿದೆ. ಊರಿನಲ್ಲಿರುವ ಎರಡು ಟಂಟಂ ಆಟೊರಿಕ್ಷಾ, ಎರಡು ಟ್ರ್ಯಾಕ್ಟರ್‌ಗಳೇ ಈಗ ಸಂಪರ್ಕ ಸಾಧನಗಳಾಗಿವೆ. ಇಲ್ಲಿಗೆ ರಾಜ್ಯ ರಸ್ತೆ ಸಾರಿಗೆ ಬಸ್‌ಗಳಿಲ್ಲದಿರುವುದರಿಂದ ವಿದ್ಯಾರ್ಥಿಗಳು ಬಹಳ ಕಷ್ಟ ಅನುಭವಿಸುತ್ತಿದ್ದಾರೆ. ಟಂ ಟಂ ಚಾಲಕರು ಕನಿಷ್ಠ ಹಣ ತೆಗೆದುಕೊಳ್ಳುತ್ತಾರೆ.

ಮಳೆಯಾದರೆ ರೋಗಿಗಳ ಪರದಾಟ ಗ್ರಾಮದಲ್ಲಿ ವಾಸಿಸುವ ಜನರ ಆರೋಗ್ಯದಲ್ಲಿ ಏನಾದರೂ ವ್ಯತ್ಯಾಸಗಳಾದರೆ, ರಾತ್ರಿ ವೇಳೆಯಲ್ಲಿ ತೊಂದರೆಯಾದರೆ ಚಿಕಿತ್ಸೆಗಾಗಿ ಟಂ ಟಂ ಚಾಲಕರನ್ನೇ ಕರೆಯಬೇಕು. ರಸ್ತೆ ಸರಿಯಿಲ್ಲದ ಕಾರಣ ಅವರು ರಾತ್ರಿ ವೇಳೆ ಬರಲು ಹಿಂಜರಿಯುತ್ತಾರೆ. ಬಂದರೂ ಸಿಕ್ಕಾಪಟ್ಟೆ ಹಣ ಕೇಳುತ್ತಾರೆ. ಬಡ ರೈತರು ತಮ್ಮ ಚಕ್ಕಡಿಯನ್ನು ಹೂಡಿಕೊಂಡು ಆಸ್ಪತ್ರೆಗೆ ಹೋಗುತ್ತಾರೆ. ನಮ್ಮ ಹೊಲ ನಮ್ಮ ದಾರಿ ಯೋಜನೆ ಈ ಊರಿನ ಸಮೀಪ ಕೂಡ ಸುಳಿದಿಲ್ಲ. ಗ್ರಾಮದ ರೈತರು ಹೊಲಗಳಿಗೆ ಹೋಗಲು ಸರಿಯಾದ ರಸ್ತೆಗಳಿಲ್ಲ.

ಈ ಹಳ್ಳಿಗೆ ಆರೋಗ್ಯ ಇಲಾಖೆಯವರು ಬರುವುದು ಕೂಡ ಅಪರೂಪ. ಇದರಿಂದ ಮಲೇರಿಯಾ, ಟೈಫಾಯಿಡ್ ರೋಗ ಹೆಚ್ಚಾಗಿ ಕಂಡುಬರುತ್ತವೆ. ಈ ಊರಿನಲ್ಲಿ ಯಾರಾದರೂ ಸತ್ತರೆ ಅವರನ್ನು ಹೂಳಲು ರುದ್ರಭೂಮಿ ಇಲ್ಲದಿರುವುದರಿಂದ ಮೊದಲು ಹೂತಿರುವ ಹಳೆಯ ಶವಗಳನ್ನು ತೆಗೆದು ಅದೇ ಜಾಗದಲ್ಲಿ ಹೊಸ ಶವಗಳನ್ನು ಹೂಳುವ ಪರಿಸ್ಥಿತಿ ಇದೆ. ಗ್ರಾಮದಲ್ಲಿ ಸಾಮೂಹಿಕ ಶೌಚಾಲಯ ಇಲ್ಲದ ಕಾರಣ ಹೆಣ್ಣುಮಕ್ಕಳಿಗೆ ಬಯಲು ಶೌಚಾಲಯವೇ ಗತಿ.

ಸರಕಾರದ ಮಹತ್ವಾಕಾಂಕ್ಷೆಯ ಗುಡಿಸಲು ಮುಕ್ತ ಯೋಜನೆಯಲ್ಲಿ ಈ ಗ್ರಾಮದ ಫಲಾನುಭವಿಗಳಿಗೆ ಕೆಲವು ಮನೆಗಳು ಮಂಜೂರಾದರೂ ಸಕಾಲಕ್ಕೆ ಬರಬೇಕಾದ ಅನುದಾನ ಬಾರದೇ ಬಹುತೇಕ ಮನೆಗಳು ಸ್ಮಾರಕಗಳಂತೆ ಅರ್ಧಕ್ಕೆ ನಿಂತಿವೆ. ಅರ್ಹ ಫಲಾನುಭವಿಗಳಿಗೆ ಮನೆಗಳು ಮಂಜೂರಾಗಿಲ್ಲ. ಈ ಗ್ರಾಮದ ಬಡವರಿಗೆ ಪಡಿತರ ಕೂಡ ಸರಿಯಾಗಿ ಮುಟ್ಟುವುದಿಲ್ಲ. ಅರ್ಹ ಫಲಾನುಭವಿಗಳಿಗೆ ರೇಷನ್ ಕಾರ್ಡ್‌ಗಳು ದೊರಕದೆ ಎಲ್ಲವೂ ಶ್ರಿಮಂತರ ಪಾಲಾಗಿವೆ.

ಕಷಿ ಅಧಿಕಾರಿಗಳಾಗಲಿ, ಗ್ರಾಮ ಲೆಕ್ಕಾಧಿಕಾರಿಗಳಾಗಲಿ ಈ ಗ್ರಾಮವನ್ನು ನೋಡದಿರುವುದರಿಂದ ರೈತರಿಗೆ ರಿಯಾಯತಿ ದರದಲ್ಲಿ ಬೀಜ, ಗೊಬ್ಬರ, ಅಥವಾ ಕಷಿ ಹೊಂಡ, ಬದುಗಳ ನಿರ್ಮಾಣ, ಚೆಕ್‌ಡ್ಯಾಂ ನಿರ್ಮಾಣ ಮುಂತಾದ ಸರಕಾರದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಹೊಸರಾಮಪುರ ಹೊಸದಾಗಿ ಚೆನ್ನಾಗಿ ಇರಬಹುದೆಂದು ಭಾವಿಸಿ ಇಲ್ಲಿಗೆ ಯಾರಾದರೂ ಬಂದರೆ ದಟ್ಟ ಅರಣ್ಯದ ನಡುವಿನ ಆದಿವಾಸಿಗಳ ವಸತಿಕಾಲೊನಿಗೆ ಬಂದ ಅನುಭವವಾಗುತ್ತದೆ.

ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಎಚ್ಚೆತ್ತು ಹೊಸರಾಮಪುರ ಗ್ರಾಮದ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಮುಂದಾಗಬಹುದೆಂದು ನಿರೀಕ್ಷಿಸುತ್ತಿದ್ದೇವೆ. ಹಾವೇರಿ ಲೋಕಸಭೆ ಮತಕ್ಷೇತ್ರದ ಅತಿ ಸಣ್ಣ, ಕೊನೆಯ ಗ್ರಾಮದ ನಮಗೆ ಮೊದಲು ಮೂಲ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು.ಈ ಬಗ್ಗೆ ಹಲವಾರು ಬಾರಿ ಜನನಾಯಕರಿಗೆ, ಜಿಲ್ಲಾಡಳಿತಕ್ಕೆ ಮನವಿ ಮಾಡಿದರೂ ಪ್ರಯೋಜನಕ್ಕೆ ಬಂದಿಲ್ಲ. ಈಗ ಚುನಾವಣೆ ಸಮಯದಲ್ಲಾದರೂ ನಮ್ಮ ಗ್ರಾಮಕ್ಕೆ ಮೂಲ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನವನ್ನು ಮಾಡಬೇಕು. ಮೈಲಾರಪ್ಪ ಸಕ್ರಿ, ಗ್ರಾಮಸ್ಥ, ಹೊಸರಾಮಪುರ

ಹೊಸರಾಮಪುರ ಗ್ರಾಮದ ವಿವರ ಗ್ರಾಮ ಪಂಚಾಯತಿ : ರಾಮಪುರ ವಾರ್ಡ್‌ಗಳು :3 ತಾಲೂಕು : ರೋಣ ಜಿಲ್ಲೆ: ಗದಗ ಕುಟುಂಬಗಳು : 40 ಜನಸಂಖ್ಯೆ : 300 ಮತದಾರರ ಸಂಖ್ಯೆ: 170 ಶಾಲೆ : 5ನೇ ತರಗತಿವರೆಗೆ ಮಾತ್ರ ಶಿಕ್ಷಕರ ಸಂಖ್ಯೆ : 2

ೆಟೋ27ಜಿಡಿಜಿ1 ತಮ್ಮೂರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮಹಾನುಭಾವರು ಈ ಚುನಾವಣೆ ಸಮಯದಲ್ಲಿ ಬರಬಹುದೇನೋ ಎಂದು ಕಟ್ಟೆಯ ಮೇಲೆ ಕಾದು ಕುಳಿತಿರುವ ಹೊಸರಾಮಪುರ ಮಹಿಳೆಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ