ಆ್ಯಪ್ನಗರ

ಪಿಯು ವಿದ್ಯಾರ್ಥಿ ಆತ್ಮಹತ್ಯೆ

ಕಾಲೇಜಿನ ಪರಿಚಿತ ವಿದ್ಯಾರ್ಥಿನಿಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಊರಿಗೆ ತಲುಪಿಸಿದ ತಪ್ಪಿಗೆ ಆಕೆಯ ಪೋಷಕರಿಂದ ಹಲ್ಲೆ ಗೊಳಗಾದ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಮೃತಟ್ಟಿದ್ದಾನೆ.

ವಿಕ ಸುದ್ದಿಲೋಕ 12 Sep 2016, 9:00 am

* ಪರಿಚಿತ ವಿದ್ಯಾರ್ಥಿನಿಗೆ ಡ್ರಾಪ್‌ ನೀಡಿದ್ದಕ್ಕೆ ಹಲ್ಲೆ, ಅವಮಾನ

ಕೊಣನೂರು: ಕಾಲೇಜಿನ ಪರಿಚಿತ ವಿದ್ಯಾರ್ಥಿನಿಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಊರಿಗೆ ತಲುಪಿಸಿದ ತಪ್ಪಿಗೆ ಆಕೆಯ ಪೋಷಕರಿಂದ ಹಲ್ಲೆ ಗೊಳಗಾದ ಪಿಯುಸಿ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಯತ್ನಿಸಿ, ಆಸ್ಪತ್ರೆಯಲ್ಲಿ ಮೃತಟ್ಟಿದ್ದಾನೆ.

ಅರಕಲಗೂಡು ತಾಲೂಕು ಕೊಣನೂರು ಹೋಬಳಿಯ ಸಿ.ಅಬ್ಬೂರು ಗ್ರಾಮದ ಚಂದ್ರೇಗೌಡರ ಪುತ್ರ ಶರಣ್‌ (19) ಮೃತ. ಅರಕಲಗೂಡಿನಲ್ಲಿ ಪಿಯುಸಿ ಓದುತ್ತಿದ್ದ ಶರಣ್‌ ಸೆ.3ರಂದು ಕಾಲೇಜು ಮುಗಿಸಿಕೊಂಡು ಬೈಕ್‌ನಲ್ಲಿ ಊರಿಗೆ ವಾಪಸ್‌ ಆಗುತ್ತಿದ್ದಾಗ, ದಾರಿ ಮಧ್ಯೆ ಪರಿಚಿತ ವಿದ್ಯಾರ್ಥಿನಿಯೊಬ್ಬಳು ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ್ದಾನೆ. ಸುಳುಗೋಡು ಸೋಮವಾರ ಗ್ರಾಮದ ನಿವಾಸಿಯಾಗಿರುವ ಆಕೆಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಮನೆ ತನಕ ಕರೆದುಕೊಂಡು ಬಂದಿದ್ದಾನೆ. ಈ ವಿಷಯ ಹುಡುಗಿಯ ಪೋಷಕರಿಗೆ ತಿಳಿದು ಅದನ್ನು ಅವರು ತಪ್ಪಾಗಿ ಅರ್ಥೈಸಿ, ಆಕ್ರೋಶಗೊಂಡಿದ್ದರು ಎನ್ನಲಾಗಿದೆ.

ಮಾರನೆ ದಿನ ಸೆ.4ರಂದು ಮಧ್ಯಾಹ್ನ ವಿದ್ಯಾರ್ಥಿನಿಯ ಮನೆ ಬಳಿ ರಸ್ತೆಯಲ್ಲಿ ಶರಣ್‌ ಬೈಕ್‌ ನಿಲ್ಲಿಸಿಕೊಂಡು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ. ಈ ವೇಳೆ ಯುವತಿಯ ತಂದೆ ವೆಂಕಟೇಶ್‌, ಅವರ ತಮ್ಮ ಗಿರೀಶ ಮತ್ತು ಸಂಬಂಧಿಕರಾದ ಪುಟ್ಟ ಹಾಗೂ ಕಿಟ್ಟ ಎಂಬುವವರು ಶರಣ್‌ ಮೇಲೆ ಹಲ್ಲೆ ನಡೆಸಿದ್ದರು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಶರಣ್‌ನ ತಂದೆ ಚಂದ್ರೇಗೌಡ ಅವರ ಮೇಲೂ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು ಎನ್ನಲಾಗಿದೆ. ಈ ಘಟನೆ ನಡೆದ ಬೆನ್ನಿಗೆ ಊರಿನವರು ಪಂಚಾಯಿತಿ ನಡೆಸಿ, ಎರಡೂ ಕುಟುಂಬಗಳ ನಡುವೆ ರಾಜಿ ಸಂಧಾನ ಮಾಡಿಸಿದ್ದಾರೆ.

ಅವಮಾನ: ಈ ಘಟನೆಯ ನಂತರ ಗ್ರಾಮಸ್ಥರು ಹಾಗೂ ಹುಡುಗಿಯ ಮನೆಯವರು ಶರಣ್‌ನನ್ನು ನಿಂದಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಅವಮಾನ ತಾಳಲಾರದೆ ಮನೆಯಲ್ಲಿ ಶರಣ್‌ ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಸೆ.5ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ. ಕುಟುಂಬದವರು ಆತನನ್ನು ಕೊಣನೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಕರೆ ತರಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟ.

ಈ ಸಂಬಂಧ ಶರಣ್‌ ಚಿಕ್ಕಪ್ಪ ಮಧು ಅವರು ಕೊಣನೂರು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ''ತನ್ನ ಅಣ್ಣನ ಮಗ ಶರಣ್‌, ಅಣ್ಣ ಚಂದ್ರೇಗೌಡರಿಗೆ ವೆಂಕಟೇಶ್‌ ಹಾಗೂ ಆತನ ಮನೆಯವರು ಹಲ್ಲೆ ನಡೆಸಿದ್ದರು. ಈ ಅವಮಾನ ತಾಳಲಾರದೇ ಶರಣ್‌ ವಿಷ ಸೇವಿಸಿ ಮೃತಪಟ್ಟ'' ಎಂದು ದೂರಿನಲ್ಲಿ ತಿಳಿಸಿದ್ದಾರೆ. ಹುಡುಗಿಯ ತಂದೆ ವೆಂಕಟೇಶ್‌ನನ್ನು ಬಂಧಿಸಲಾಗಿದ್ದು, ಉಳಿದ ಮೂವರು ಆರೋಪಿಗಳಿಗಾಗಿ ಬಲೆ ಬೀಸಲಾಗಿದೆ ಎಂದು ಆರಕ್ಷ ಕ ಉಪನಿರೀಕ್ಷ ಬಿ.ಪಿ.ಬ್ಯಾಟರಾಯಗೌಡ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ