Please enable javascript.‘ಶಾನ್’ದಾರ್ ಸಂಗೀತ ಸಂಜೆ - ‘ಶಾನ್’ದಾರ್ ಸಂಗೀತ ಸಂಜೆ - Vijay Karnataka

‘ಶಾನ್’ದಾರ್ ಸಂಗೀತ ಸಂಜೆ

Vijaya Karnataka Web 11 Jan 2015, 4:06 am
Subscribe

ಶನಿವಾರ ಬೆಳಕು ಸರಿದು ಕತ್ತಲಾಗುತ್ತಿದ್ದಂತೆ ಬಾಲಿವುಡ್ ಹಿನ್ನೆಲೆ ಗಾಯಕ ಶಾನ್ ಮತ್ತು ತಂಡದಿಂದ ನಡೆದ ‘ಸಂಗೀತ ಸಂಜೆ’ ಯುವಜನತೆಯನ್ನು ಹುಚ್ಚೆದ್ದು, ಕುಣಿಸಿತು.

‘ಶಾನ್’ದಾರ್ ಸಂಗೀತ ಸಂಜೆ
ಹಾಸನ: ಶನಿವಾರ ಬೆಳಕು ಸರಿದು ಕತ್ತಲಾಗುತ್ತಿದ್ದಂತೆ ಬಾಲಿವುಡ್ ಹಿನ್ನೆಲೆ ಗಾಯಕ ಶಾನ್ ಮತ್ತು ತಂಡದಿಂದ ನಡೆದ ‘ಸಂಗೀತ ಸಂಜೆ’ ಯುವಜನತೆಯನ್ನು ಹುಚ್ಚೆದ್ದು, ಕುಣಿಸಿತು.

ಹೊಯ್ಸಳ ಮಹೋತ್ಸವದ ಅಂಗವಾಗಿ ಸಿದ್ಧಪಡಿಸಿರುವ ವೇದಿಕೆಯನ್ನು ಹುಡುಗಾಟ ಸಿನಿಮಾದ ‘ಏನೋ ಒಂಥರಾ’ ಹಾಡಿನ ಮೂಲಕ ಏರಿದ ಶಾನ್, ಮುಂದಿನ ಒಂದೂವರೆ ಗಂಟೆಗಳ ಕಾಲ ಯುವಜನರನ್ನು ರಂಜಿಸಿದರು. ನಂತರ ಪರಿಚಯ ಸಿನಿಮಾದ ‘ಕುಡಿ ನೋಟವೇ ಮನಮೋಹಕ’’ ಗೀತೆ ಹಾಡುತ್ತಿದ್ದಂತೆ ನಾಗರಿಕರ ಚಪ್ಪಾಳೆ, ಶಿಳ್ಳೆ ಸದ್ದು. ಹಿಂದಿಯ ಧೂಮ್-3, ಬಾಡಿಗಾರ್ಡ್ ಸಿನಿಮಾದ ಗೀತೆಗಳನ್ನು ಹಾಡಿ ಪ್ರೇಕ್ಷಕರ ನಾಡಿಯಲ್ಲಿ ವಿದ್ಯುತ್ ಸಂಚಾರ ಮಾಡಿಸಿದರು. ಇದಕ್ಕೂ ಮುನ್ನ ವಿದ್ವಾನ್ ಉನ್ನತ್ ನಾಟ್ಯಕಲಾ ತಂಡದಿಂದ ನಡೆದ ಭರತನಾಟ್ಯ ಪ್ರೇಕ್ಷಕರಿಗೆ ರಸದೌತಣ ನೀಡಿತು.

ಎರಡನೇ ದಿನ ಹೊಯ್ಸಳ ಉತ್ಸವ ಜನಮನಸೂರೆಗೊಂಡಿದ್ದು, ಫಲಪುಷ್ಪ ಪ್ರದರ್ಶನ, ವಸ್ತು ಪ್ರದರ್ಶನ. ರಂಗವಲ್ಲಿ ಸ್ಪರ್ಧೆಯಲ್ಲಿ ಜನತೆ ಅತ್ಯುತ್ಸಾಹದಿಂದ ಭಾಗವಹಿಸಿದರು. ನೂರಾರು ಮಹಿಳೆಯರು ಚಿತ್ತಾಕರ್ಷಕ ರಂಗೋಲಿ ಬಿಡಿಸಿ ನೋಡುಗರ ಮನಸೂರೆಗೊಂಡರು.

ಸಂಜೆ 5ರಿಂದ ಆರಂಭಗೊಂಡ ಸುಗಮ ಸಂಗೀತ, ಕೊಳಲು ವಾದನ, ನೃತ್ಯ, ಕಜರಿ ನೃತ್ಯ, ಬೆಳಕಿನ ಚಿತ್ತಾರ ವೀಕ್ಷಿಸಿದರು. ಬಾನಂಗಳದಿ ಮಿನುಗುವ ನಕ್ಷತ್ರದಂತೆ ಕಣ್ಣು ಕೊರೈಸುವ ವಿದ್ಯುತ್ ದೀಪಾಲಂಕಾರದಿಂದ ಇಡೀ ನಗರ ಮಧುವಣಗಿತ್ತಿಯಂತೆ ನಳನಳಿಸುತ್ತಿದೆ.

ಮನಸೂರೆಗೊಂಡ ಕಲಾಕೃತಿ: ಬಣ್ಣ, ಬಣ್ಣದ ಅಪರೂಪದ ಹೂಗಳು ಹಾಗೂ ಅವುಗಳ ಸೊಬಗಿಗೆ ಯುವಸಮೂಹವಷ್ಟೇ ಅಲ್ಲದೆ ಪ್ರತಿಯೊಬ್ಬರೂ ತಲೆದೂಗುತ್ತಿದ್ದಾರೆ. ಸಾವಿರಾರು ಹೂಗಳು ಅಲಂಕರಿಸಿ ರೂಪಿತವಾಗಿರುವ ಆಕರ್ಷಣೀಯ ಪುಷ್ಪರಾಣಿ, ಕಲ್ಲಂಗಡಿ, ಕುಂಬಳಕಾಯಿಯಲ್ಲಿ ಮೂಡಿರುವ ಗಣೇಶನ ವಿಗ್ರಹ ಹೀಗೆ ನಾನಾ ಕಲಾಕೃತಿ ನೋಡುಗರ ಮನಸೂರೆಗೊಳ್ಳುತ್ತಿದೆ. ಕೈಗಾರಿಕೆ, ಕೃಷಿ, ಆರೋಗ್ಯ ವಸ್ತುಪ್ರದರ್ಶನದಲ್ಲಿ ರೈತರಿಗೆ ಮಾಹಿತಿ ಹೂರಣ ಲಭಿಸುತ್ತಿದೆ.

ಕಲೆಯ ಬೆರಗು: ಹಾಸನಾಂಬ ಕಲಾಕ್ಷೇತ್ರದಲ್ಲಿ ಸಂಸ ನಾಟಕ ಸಂಘ ಪ್ರದರ್ಶಿಸಿದ ಮುತ್ತಿನ ಮೂಗುತಿ ಐತಿಹಾಸಿನ ನಾಟಕ, ದೊಡ್ಡಳ್ಳಿ ರಮೇಶ್ ತಂಡ ನಡೆಸಿಕೊಟ್ಟ ಜಾನಪದ ಸಂಗೀತ ಜನರ ಮೆಚ್ಚುಗೆಗೆ ಪಾತ್ರವಾಯಿತು. ವಿದುಷಿ ಭಾನುಚಿದಾನಂದ್ ಅವರ ತಂಡದ ನೃತ್ಯ ರೂಪಕ, ರಂಗಗೀತೆ ಹೀಗೆ ಬೆಳಗ್ಗಿಂದ ಸಂಜೆವರೆಗೆ ನಡೆದ ಸುಗಮ ಸಂಗೀತ, ನಾನಾ ಕಲಾಪ್ರಕಾರ ಜನತೆಯನ್ನು ಸಂತಸದ ಹೊನಲಿನಲ್ಲಿ ತೇಲಿಸಿತು.

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಉದ್ಯೋಗಮೇಳಕ್ಕೆ ಎಂಟು ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ