Please enable javascript.ಮಹಿಳೆಯರು ಧಾರ್ಮಿಕ ಪರಂಪರೆಯ ಪ್ರತಿನಿಧಿಗಳು - ಮಹಿಳೆಯರು ಧಾರ್ಮಿಕ ಪರಂಪರೆಯ ಪ್ರತಿನಿಧಿಗಳು - Vijay Karnataka

ಮಹಿಳೆಯರು ಧಾರ್ಮಿಕ ಪರಂಪರೆಯ ಪ್ರತಿನಿಧಿಗಳು

Vijaya Karnataka Web 24 Aug 2015, 4:37 am
Subscribe

ಭಾರತೀಯ ಸಂಸ್ಕೃತಿ, ಧರ್ಮ, ಆಚರಣೆಗಳು ಉಳಿದಿದ್ದರೆ ಅದು ಮಹಿಳೆಯರಿಂದ ಮಾತ್ರ ಎಂದು ಶ್ರವಣಬೆಳಗೊಳ ಶ್ರೀಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಮಹಿಳೆಯರು ಧಾರ್ಮಿಕ ಪರಂಪರೆಯ ಪ್ರತಿನಿಧಿಗಳು
ಚನ್ನರಾಯಪಟ್ಟಣ: ಭಾರತೀಯ ಸಂಸ್ಕೃತಿ, ಧರ್ಮ, ಆಚರಣೆಗಳು ಉಳಿದಿದ್ದರೆ ಅದು ಮಹಿಳೆಯರಿಂದ ಮಾತ್ರ ಎಂದು ಶ್ರವಣಬೆಳಗೊಳ ಶ್ರೀಮಠದ ಪೀಠಾಧ್ಯಕ್ಷರಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಶ್ರವಣಬೆಳಗೊಳದ ಚಾವುಂಡರಾಯ ಮಂಟಪದಲ್ಲಿ ಆಯೋಜಿಸಿದ್ದ ಶ್ರೀಪಾರ್ಶ್ವನಾಥ ತೀರ್ಥಂಕರರ 2666ನೇ ಮೋಕ್ಷ ಕಲ್ಯಾಣ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.

ಧಾರ್ಮಿಕ ಪರಂಪರೆಯ ಪ್ರತಿನಿಧಿಗಳಾಗಿ ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡಿರುವುದರಿಂದಲೇ ಅವರಿಗೆ ಸಮಾಜದಲ್ಲಿ ವಿಶಿಷ್ಟ ಸ್ಥಾನಮಾನ ನೀಡಲಾಗಿದೆ. ಮಹಿಳಾ ಸಂಘಟನೆಗಳು ಪಾಠಶಾಲೆಗಳು, ಸಂಸ್ಕಾರ ಕೇಂದ್ರಗಳನ್ನು ತೆರೆಯಬೇಕು. ಲೌಕಿಕ ಕಾರ‌್ಯಗಳಿಗಿಂತ ದೇಶದ ಪರಂಪರೆ ಉಳಿಸಲು ಮುಂದಾಗಬೇಕು ಎಂದರು.

ಶ್ರವಣಬೆಳಗೊಳದಲ್ಲಿ ಜೈನ ಸಮಾಜದ ಭವನದ ಪಕ್ಕದಲ್ಲೇ ಇರುವ ಜಾಗದಲ್ಲಿ ಮಹಿಳಾ ಸಂಘದ ಚಟುವಟಿಕೆಗಳಿಗೂ ಅನುಕೂಲವಾಗುವಂತೆ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಲಾಗುವುದು. ಮಹಿಳಾ ಸಂಘಟನೆಗಳು ತಮ್ಮ ಸಂಘಗಳನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ಇನ್ನಷ್ಟು ಸಹಕಾರ ಪಡೆಯಬಹುದೆಂದರು.

ಶ್ರವಣಬೆಳಗೊಳದ ವಿಂಧ್ಯಾಗಿರಿಯಲ್ಲಿ ಬಾಹುಬಲಿ ಮೂರ್ತಿ ಇರುವಂತೆ ಚಿಕ್ಕಬೆಟ್ಟದಲ್ಲಿ 21 ಅಡಿ ಎತ್ತರದ ಪಾರ್ಶ್ವನಾಥ ತೀರ್ಥಂಕರರ ಸುಂದರ ಮೂರ್ತಿಯಿದ್ದು, ಅಷ್ಟೇ ಖ್ಯಾತಿ ಪಡೆದಿದೆ. ಇದನ್ನು ಅಂತರಾಳಪಾರ್ಶ್ವನಾಥ ಸ್ವಾಮಿ ಎಂದೂ ಕರೆಯಲಾಗುತ್ತಿದ್ದು ಪ್ರಾಚೀನತೆಯ ಕುರುಹಾಗಿದೆ. ಚಂದ್ರಗುಪ್ತ ಬಸದಿಯಲ್ಲಿನ ಮೂಲ ವಿಗ್ರಹ ಬದಲಾಗಿದೆ ಎಂದರು.

ಅಖಿಲ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಶೀಲಾ ಅನಂತರಾಜು, ಸಮಾಜದಿಂದ ವ್ಯಕ್ತಿ ರೂಪುಗೊಳ್ಳುವುದರಿಂದ ಶುಭ ಭಾವನೆಗಳನ್ನು ರೂಢಿಸಿಕೊಂಡು ಆತ್ಮಸಂಸ್ಕಾರದ ದ್ಯೋತಕಕ್ಕೆ ಬದ್ಧರಾಗಬೇಕು. ವಿಶ್ವಧರ್ಮವಾಗಿರುವ ಜೈನಧರ್ಮದ ಅನುಸರಣೆಯಿಂದ ಜೀವನವನ್ನು ಪಾವನ ಮಾಡಿಕೊಳ್ಳಬೇಕೆಂದರು.

ಶ್ರವಣಬೆಳಗೊಳದ ಕೂಷ್ಮಾಂಡಿನೀ ದಿಗಂಬರ ಜೈನ ಮಹಿಳಾ ಸಮಾಜದ ಅಧ್ಯಕ್ಷೆ ಪೂರ್ಣಿಮಾ ಅನಂತಪದ್ಮನಾಭ, ರಾಜ್ಯಾದ್ಯಂತ 100ಕ್ಕೂ ಹೆಚ್ಚು ಜೈನ ಮಹಿಳಾ ಸಂಘಟನೆಗಳು ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ತೊಡಗಿಸಿಕೊಂಡಿದ್ದು, ಶ್ರವಣಬೆಳಗೊಳದ ಸಂಘವೂ ಈ ನಿಟ್ಟಿನಲ್ಲಿ ಸಾಗಿದೆ ಎಂದರು.

ಆಚಾರ‌್ಯ ಪಾವನಕೀರ್ತಿ ಮಹಾರಾಜರು, ಪ್ರತೀಕ ಸಾಗರಮಹಾರಾಜರು, ಕ್ಷುಲ್ಲಕ ಜಿನಕೀರ್ತಿ ಮಹಾರಾಜರು, ಸಿದ್ಧಾಂತಕೀರ್ತಿ ಸ್ವಾಮೀಜಿ, ಆರ್ಯಿಕಾ ಶಿವಮತಿ ಮಾತಾಜಿ, ಕ್ಷುಲ್ಲಿಕಾ ವಿಶುದ್ಧಮತಿ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ನಿವೃತ್ತ ಎಂಜಿನಿಯರ್ ಎನ್.ಅನಂತರಾಜ್ ಇದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ