ಆ್ಯಪ್ನಗರ

ಅರಕಲಗೂಡು: ಹಾರೋಹಳ್ಳಿ-ಕಲ್ಲೂರು ರಸ್ತೆ ಡಾಂಬರ್‌ ಕಾಮಗಾರಿ ಕಳಪೆ ಆರೋಪ

ಅರಕಲಗೂಡು: ತಾಲೂಕಿನ ಹಾರೋಹಳ್ಳಿ-ಕಲ್ಲೂರು ಮಾರ್ಗಮಧ್ಯೆ ಕಾವೇರಿ ನೀರಾವರಿ ನಿಗಮದಿಂದ ನಿರ್ಮಾಣ ಮಾಡಿರುವ ಡಾಂಬರ್‌ ರಸ್ತೆ ಕಳಪೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

Vijaya Karnataka 3 Mar 2019, 5:00 am
ಅರಕಲಗೂಡು: ತಾಲೂಕಿನ ಹಾರೋಹಳ್ಳಿ-ಕಲ್ಲೂರು ಮಾರ್ಗಮಧ್ಯೆ ಕಾವೇರಿ ನೀರಾವರಿ ನಿಗಮದಿಂದ ನಿರ್ಮಾಣ ಮಾಡಿರುವ ಡಾಂಬರ್‌ ರಸ್ತೆ ಕಳಪೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
Vijaya Karnataka Web arakalagudu harohalli road work quality failure
ಅರಕಲಗೂಡು: ಹಾರೋಹಳ್ಳಿ-ಕಲ್ಲೂರು ರಸ್ತೆ ಡಾಂಬರ್‌ ಕಾಮಗಾರಿ ಕಳಪೆ ಆರೋಪ


ಗೊರೂರು ಹೇಮಾವತಿ ಬಲಮೇಲ್ದಂಡೆ ಅರಕಲಗೂಡು ಉಪ ವಿಭಾಗ ವತಿಯಿಂದ ಗುತ್ತಿಗೆದಾರರೊಬ್ಬರು ಕಳೆದ ಒಂದು ವಾರದಿಂದ ಡಾಂಬರೀಕರಣ ಕೆಲಸ ಆರಂಭಿಸಿದ್ದರು. ಮೊದಲ ಹಂತದಲ್ಲಿ ಜಲ್ಲಿ ಮಿಶ್ರಣವನ್ನು ರಸ್ತೆಗೆ ಹಾಕಿ ರೋಲರ್‌ ಮೂಲಕ ವೈಜ್ಞಾನಿಕವಾಗಿ ಸಮತಟ್ಟು ಮಾಡಿಲ್ಲದ ಪರಿಣಾಮ ತರಾತುರಿಯಲ್ಲಿ ಡಾಂಬರ್‌ ಹಾಕಿದ್ದಾರೆ. ಹಾಗಾಗಿ ಕಳಪೆ ಕಾಮಗಾರಿ ನಡೆದಿದೆ ಎಂದು ನಿವಾಸಿಗಳು ದೂರಿದ್ದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

40 ಲಕ್ಷ ರೂ. ವೆಚ್ಚ:
1.28 ಕಿಮೀ ದೂರದ ಡಾಂಬರ್‌ ರಸ್ತೆ ನಿರ್ಮಾಣಕ್ಕೆ 40 ಲಕ್ಷ ರೂ.ವೆಚ್ಚ ಮಾಡಲಾಗಿದೆ. ಇನ್ನೂ ರಸ್ತೆ ಉದ್ಘಾಟನೆಯಾಗಿಲ್ಲ. ಆಗಲೇ ಕಿತ್ತು ಬರುತ್ತಿದೆ ಎಂದು ಸ್ಥಳೀಯರ ಆರೋಪ. ಡಾಂಬರ್‌ ವಾಹನ ಓಡಾಡುವ ವೇಳೆ ಸಂಪೂರ್ಣವಾಗಿ ಕಿತ್ತುಬರುತ್ತಿದೆ. ಈ ಭಾಗದಲ್ಲಿ ಟ್ರ್ಯಾಕ್ಟರ್‌, ಎತ್ತಿನಗಾಡಿಗಳ ಸಂಚಾರ ಹೆಚ್ಚಿದೆ. ವಾಹನ ಸಂಚಾರದಿಂದ ಈಗಷ್ಟೇ ನಿರ್ಮಾಣ ಮಾಡಿದ ಡಾಂಬರ್‌ ಮೇಲೆ ಕಿತ್ತು ಬರುತ್ತಿದೆ ಂದು ಕಲ್ಲೂರು ಗ್ರಾಮಸ್ಥರಾದ ರಾಜಪ್ಪ, ಪುಟ್ಟಸ್ವಾಮಿ, ಶಿವಣ್ಣ ಹಾರೋಹಳ್ಳಿ ಗ್ರಾಮಸ್ಥರಾದ ಜಯಣ್ಣ, ಕುಮಾರ್‌ ಇತರರು ರಸ್ತೆಯ ಸ್ಥಿತಿಯನ್ನು ಅಧಿಕಾರಿಗಳಿಗೆ ತೋರಿಸಿದರು.

ಈ ಹಿಂದೆ ಅರಕಲಗೂಡು ಪಟ್ಟಣಕ್ಕೆ ನೇರವಾಗಿ ಸಂಪರ್ಕ ರಸ್ತೆ ಇರಲಿಲ್ಲ. ಇದನ್ನು ಅರಿತು ಕ್ಷೇತ್ರದ ಶಾಸಕರು ಕಳೆದ ತಿಂಗಳು ನೂತನ ಸಂಪರ್ಕ ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಗುಣಮಟ್ಟದ ಕೆಲಸ ಮಾಡಿ. ಕಳಪೆ ಕಾಮಗಾರಿ ಮಾಡಿದರೆ ಕ್ರಮ ಎದುರಿಸಬೇಕಾಗುತ್ತದೆ ಎಂದು ಗುತ್ತಿಗೆದಾರ ಹಾಗೂ ನೀರಾವರಿ ಇಲಾಖೆ ಎಂಜಿನಿಯರ್‌ಗಳಿಗೆ ಎಚ್ಚರಿಕೆ ನೀಡಿದ್ದರೂ ಕಳಪೆ ರಸ್ತೆ ಕಾಮಗಾರಿ ನಡೆದಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರಸ್ತೆ ಕಾಮಗಾರಿಗೆ ಸಾರ್ವಜನಿಕರ ಹಣ ಬಳಕೆಯಾಗಿದ್ದು ಈಗಾಗಲೇ ಮಾಡಿರುವ 1.28ಕಿಮೀ ದೂರದ ದಾಂಬರ್‌ ರಸ್ತೆ ಎಲ್ಲಿಯೂ ಸಹ ಗುಣಮಟ್ಟದಿಂದ ನಡೆದಿಲ್ಲ. ಗುತ್ತಿಗೆದಾರ ಮತ್ತು ಎಂಜಿನಿಯರ್‌ ವಿರುದ್ಧ ಕಠಿಣ ಕ್ರಮ ಜರುಗಿಸಿ ಮತ್ತೆ ಗುಣಮಟ್ಟದಿಂದ ರಸ್ತೆ ಕೆಲಸವನ್ನು ಮಾಡಿಸಲು ಶಾಸಕರಾದ ಎ.ಟಿ.ರಾಮಸ್ವಾಮಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಎಂಜಿನಿಯರ್‌ ತಂಡ ಪರಿಶೀಲನೆ: ಶನಿವಾರ ಮಧ್ಯಾಹ್ನ ಗೊರೂರು ಕ್ವಾಲಿಟಿ ಕಂಟ್ರೋಲ್‌ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌, ಉಪ ವಿಭಾಗದ ಎಇಇ ಸುಧಾಕರ ರಾವ್‌, ಎಂಜಿನಿಯರ್‌ ಸಂದರ್ಶ ಹಾಗೂ ಗುತ್ತಿಗೆದಾರರು ರಸ್ತೆ ಕಾಮಗಾರಿ ವೀಕ್ಷಿಸಿದರು. ಬಳಿಕ ಕಿತ್ತುಬಂದಿರುವ ಮಾದರಿ ಡಾಂಬರ್‌ ಮಿಶ್ರಣವನ್ನು ಸಂಗ್ರಹಿಸಿತು.
--------------
ರಸ್ತೆ ಡಾಂಬರೀಕರಣಕ್ಕೆ ಬಳಕೆಯಾಗಿರುವ ಕಚ್ಚಾ ವಸ್ತುಗಳನ್ನು ಎರಡು ಮೂರು ಕಡೆ ಸಂಗ್ರಹಿಸಲಾಗಿದೆ. ಎರಡು ದಿನದಲ್ಲಿ ಈ ಕುರಿತು ನಿಖರ ಮಾಹಿತಿ ಲಭ್ಯವಾಗಲಿದೆ. ಇದಾದ ಬಳಿಕ ನಿಖರ ಮಾಹಿತಿ ದೊರೆಯಲಿದೆ.
- ಶ್ರೀನಿವಾಸ್‌ ರವಿರಾಮನ್‌, ಇಇ, ಕ್ವಾಲಿಟಿ ಕಂಟ್ರೋಲ್‌, ಗೊರೂರು
-------------
ಹಾರೋಹಳ್ಳಿ-ಕಲ್ಲೂರು ನಡುವೆ 40 ಲಕ್ಷ ರೂ.ವೆಚ್ಚದ ಡಾಂಬರೀಕರಣ ಕೆಲಸ ಮುಗಿದೆ. ಎರಡು ಬದಿಯಲ್ಲಿ ಮಣ್ಣು ಹಾಕುವ ಕೆಲಸ ಬಾಕಿ ಇದೆ. ಮಣ್ಣಿನ ರಸ್ತೆ ಮೇಲೆ ಜಲ್ಲಿ ಹಾಕಿ ಡಾಂಬರ್‌ ಹಾಕಲಾಗಿದೆ. ಇದು ಸೆಟ್‌ ಆಗಬೇಕಾದರೆ ಮೂರ್ನಾಲ್ಕು ದಿನ ಬೇಕಿದೆ. ರಾತ್ರಿ ವೇಳೆ ಈ ಭಾಗದಲ್ಲಿ ಟ್ರ್ಯಾಕ್ಟರ್‌, ಎತ್ತಿನ ಗಾಡಿ ಸಂಚಾರವಿರುವ ಕಾರಣ ಕೆಲವೆಡೆ ಡಾಂಬರ್‌ ಮೇಲೆ ಬಂದಿದೆ. ಇನ್ನೂ ಬಿಲ್‌ ನೀಡಿಲ್ಲ. ಕ್ವಾಲಿಟಿ ಕಂಟ್ರೋಲ್‌ನವರು ಮಾದರಿ ತೆಗೆದುಕೊಂಡು ಹೋಗಿದ್ದಾರೆ.
- ಸುಧಾಕರ ರಾವ್‌, ಎಇಇ, ಉಪ ವಿಭಾಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ