Please enable javascript.ಅಕ್ಕಿಆಲೂರು ಬಂತ್ರೀ, ಮೂಗು ಮುಚ್ಚಿಕೊಳ್ರಿ.! - ಅಕ್ಕಿಆಲೂರು ಬಂತ್ರೀ, ಮೂಗು ಮುಚ್ಚಿಕೊಳ್ರಿ.! - Vijay Karnataka

ಅಕ್ಕಿಆಲೂರು ಬಂತ್ರೀ, ಮೂಗು ಮುಚ್ಚಿಕೊಳ್ರಿ.!

ವಿಕ ಸುದ್ದಿಲೋಕ 7 Aug 2013, 4:25 am
Subscribe

ಅಕ್ಕಿಆಲೂರು ಬಂತ್ರೀ ಮಾರಾಯಾ, ಸುಮ್ನೆ ಕುಂತೀರೆಲ್ಲ ಮೂಗು ಮುಚ್ಚಿಕೊಳ್ರಿ....! ಸಾಮಾನ್ಯವಾಗಿ ಸರ್ಕಾರಿ ಬಸ್ಸು ಹಾಗೂ ಖಾಸಗಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ತಮ್ಮ ಅಕ್ಕಪಕ್ಕದಲ್ಲಿ ಕುಳಿತಿರುವವರಿಗೆ ಈ ರೀತಿಯ ಎಚ್ಚರಿಕೆ ಮಾತು ಹೇಳುವುದನ್ನು ಪಟ್ಟಣದಲ್ಲಿ ನಾವೀಗ ನಿತ್ಯವೂ ಕೇಳಬಹುದಾಗಿದೆ.

ಅಕ್ಕಿಆಲೂರು ಬಂತ್ರೀ, ಮೂಗು ಮುಚ್ಚಿಕೊಳ್ರಿ.!
ಅಕ್ಕಿಆಲೂರು: ಅಕ್ಕಿಆಲೂರು ಬಂತ್ರೀ ಮಾರಾಯಾ, ಸುಮ್ನೆ ಕುಂತೀರೆಲ್ಲ ಮೂಗು ಮುಚ್ಚಿಕೊಳ್ರಿ....! ಸಾಮಾನ್ಯವಾಗಿ ಸರ್ಕಾರಿ ಬಸ್ಸು ಹಾಗೂ ಖಾಸಗಿ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರು ತಮ್ಮ ಅಕ್ಕಪಕ್ಕದಲ್ಲಿ ಕುಳಿತಿರುವವರಿಗೆ ಈ ರೀತಿಯ ಎಚ್ಚರಿಕೆ ಮಾತು ಹೇಳುವುದನ್ನು ಪಟ್ಟಣದಲ್ಲಿ ನಾವೀಗ ನಿತ್ಯವೂ ಕೇಳಬಹುದಾಗಿದೆ.

ಗಲೀಜು ಹಾಗೂ ಗಬ್ಬು ವಾಸನೆಯಿಂದಾಗಿ ಪಟ್ಟಣದ ಹಾನಗಲ್ಲ-ಹಾವೇರಿ ರಸ್ತೆಯಲ್ಲಿ ಪ್ರಯಾಣಿಕರು ಮೂಗು ಮುಚ್ಚಿಕೊಂಡೇ ಸಂಚರಿಸುವಂತಹ ಹೀನ ಸ್ಥಿತಿ ನಿರ್ಮಾಣವಾಗಿದೆ. ಊರನ್ನು ಪ್ರವೇಶಿಸುವ ನಾಲ್ಕು ದಿಕ್ಕಿನಲ್ಲಿಯೂ ಸತ್ತ ಪ್ರಾಣಿಗಳ ದೇಹ, ಕುರಿ-ಕೋಳಿ ಮಾಂಸ, ಕೊಳೆತ ತರಕಾರಿ ಇನ್ನಿತರ ಗಲೀಜು ವಸ್ತುಗಳನ್ನು ವ್ಯಾಪಕ ಪ್ರಮಾಣದಲ್ಲಿ ಬಿಸಾಡುತ್ತಿರುವ ಪರಿಣಾಮ ಗಬ್ಬೆದ್ದು ನಾರುತ್ತಿದ್ದು ಊರಿಗೆ ಆಗಮಿಸಲು ಅಸಹ್ಯ ಪಟ್ಟುಕೊಳ್ಳುವಂತಾಗಿದೆ.

ಹಾನಗಲ್ಲ ರಸ್ತೆಯ ಕಾಳೇರಕಟ್ಟಿ ಸುತ್ತಲಿನ ಪ್ರದೇಶದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ಗಲೀಜಿನಿಂದ ಕೂಡಿದ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಎಸೆದಿರುವ ದಶ್ಯ ಕಂಡುಬರುತ್ತದೆ. ಸಾಲದೆಂಬಂತೆ ಸತ್ತು ಬಿದ್ದಿರುವ ಪ್ರಾಣಿಗಳ ದೇಹಗಳನ್ನು ಇಲ್ಲಿಯೇ ನೂಕಿ ಕೈತೊಳೆದುಕೊಳ್ಳಲಾಗುತ್ತಿದೆ. ಪಟ್ಟಣದ ಚಿಕನ್ ಹಾಗೂ ಮಟನ್ ಸೆಂಟರ್‌ಗಳ ಮಾಲಿಕರು ಕೊಳೆತ ಮಾಂಸವನ್ನು ಈ ಪ್ರದೇಶದಲ್ಲಿ ನಿತ್ಯವೂ ತಂದು ಹಾಕುತ್ತಿದ್ದು ಜೊತೆಗೆ ಎಗ್ ರೈಸ್ ಅಂಗಡಿಯವರು ಮೊಟ್ಟೆ ಸಿಪ್ಪೆಗಳನ್ನೆಲ್ಲ ಚೆಲ್ಲಿ ಹೋಗುತ್ತಿದ್ದಾರೆ. ಇದೀಗ ಈ ಪ್ರದೇಶದಲ್ಲಿ ಸತ್ತಿರುವ ಮೀನುಗಳನ್ನು ಎಸೆಯಲಾಗಿದ್ದು ದುರ್ವಾಸನೆಯಿಂದಾಗಿ ಈ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗುತ್ತಿಲ್ಲ.

ಹಾನಗಲ್ಲ ರಸ್ತೆಯಲ್ಲಿ ಸಿ.ಜಿ.ಬೆಲ್ಲದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯವಿದ್ದು ನಿತ್ಯವೂ ವಿದ್ಯಾರ್ಥಿಗಳು ಕಾಲ್ನಡಿಗೆ ಮೂಲಕ ತೆರಳುತ್ತಾರೆ. ಸುತ್ತಲಿನ ಗುರುರಾಯಪಟ್ಟಣ, ಡೊಳ್ಳೇಶ್ವರ ಗ್ರಾಮಗಳ ವಿದ್ಯಾರ್ಥಿಗಳು ಕೂಡ ಸೈಕಲ್ ಮೂಲಕ ಶಾಲಾ-ಕಾಲೇಜುಗಳಿಗಾಗಿ ಪಟ್ಟಣಕ್ಕೆ ಆಗಮಿಸುತ್ತಾರೆ. ವಿದ್ಯಾರ್ಥಿಗಳು ಕಾಳೇರಕಟ್ಟಿ ಪ್ರದೇಶವನ್ನು ತಲುಪಿದರೆ ಸಾಕು ಮೂಗು ಮುಚ್ಚಿಕೊಳ್ಳಲೇ ಬೇಕು, ಇಲ್ಲದಿದ್ದಲ್ಲಿ ವಾಂತಿ ಗ್ಯಾರಂಟಿ....

ಹಾವೇರಿ ರಸ್ತೆಯಿಂದ ಪಟ್ಟಣಕ್ಕೆ ಪ್ರವೇಶ ಕಲ್ಪಿಸುವ ಪ್ರದೇಶದಲ್ಲಿಯೂ ಇದೇ ಸ್ಥಿತಿ. ಕೂಗಳತೆಯ ದೂರದಲ್ಲಿಯೇ ಪೊಲೀಸ್ ಹೊರ ಠಾಣೆ ಕಾರ್ಯಶೀಲವಾಗಿದೆಯಾದರೂ ಅದನ್ನು ಲೆಕ್ಕಿಸದೇ ಗಲೀಜು ವಸ್ತುಗಳನ್ನು ಎಸೆಯಲಾಗುತ್ತಿದೆ. ಕಲ್ಲಾಪುರ ಗ್ರಾಮದಿಂದ ಪ್ರವೇಶ ಕಲ್ಪಿಸುವ ಬೇರಗಟ್ಟಿ, ಸುರಳೇಶ್ವರ ಪ್ರದೇಶದಿಂದ ಪ್ರವೇಶ ಕಲ್ಪಿಸುವ ಮಾರುತಿ ನಗರದ ಬಳಿಯ ಮುಗುಳಿಗಟ್ಟಿ ಹಾಗೂ ಶ್ರೀರಾಮ್ ನಗರದಿಂದ ಜಿಗಳಿಕೊಪ್ಪಕ್ಕೆ ಸಾಗುವ ರಸ್ತೆಯುದ್ದಕ್ಕೂ ಗಲೀಜು ವಸ್ತುಗಳು ಹಾಗೂ ಗಬ್ಬು ವಾಸನೆಯದೇ ದರ್ಬಾರು...!

ಸಾಂಕ್ರಾಮಿಕ ರೋಗಗಳಿಗೆ ರಹದಾರಿ: ಗಲೀಜು ಹಾಗೂ ಗಬ್ಬು ವಾಸನೆಯಿಂದ ಪಟ್ಟಣವೀಗ ಸಾಂಕ್ರಾಮಿಕ ರೋಗಗಳಿಗೆ ರಹದಾರಿ ಕಲ್ಪಿಸಿಕೊಟ್ಟಂತಾಗಿದೆ. ಇದರಿಂದಾಗಿ ಸೊಳ್ಳೆಗಳ ಕಾಟ ಹೇಳತೀರದಾಗಿದ್ದು ನಿವಾಸಿಗಳು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುವಂತಾಗಿದೆ. ಅಷ್ಟೊಂದು ಪ್ರಮಾಣದಲ್ಲಿ ಪಟ್ಟಣ ಗಬ್ಬೆದ್ದು ನಾರುತ್ತಿದ್ದರೂ ಸಂಬಂಧಪಟ್ಟವರು ತಲೆ ಕೆಡಿಸಿಕೊಂಡಿಲ್ಲ.

ಸ್ಥಳೀಯ ಆಡಳಿತ ಕಸ ವಿಲೇವಾರಿಗೆ ಹೆಚ್ಚಿನ ಗಮನ ನೀಡದಿರುವುದೇ ಇಂತಹ ಘಟನೆಗಳಿಗೆ ಕಾರಣವಾಗಿದೆ. ಊರಿನ ಕಸವನ್ನೆಲ್ಲ ನಿರ್ದಿಷ್ಟ ಸ್ಥಳದಲ್ಲಿ ಸಂಗ್ರಹಿಸಿ ಅದನ್ನು ವಿಲೇವಾರಿ ಮಾಡುವಂತಹ ಸಣ್ಣ ಪ್ರಯತ್ನವನ್ನೂ ಸ್ಥಳೀಯ ಆಡಳಿತ ಮಾಡದೇ ಇರುವುದು ವಿಪರ್ಯಾಸ!. ಈಗಲಾದರೂ ಸಂಬಂಧಪಟ್ಟವರು ಎಚ್ಚೆತ್ತು ಗ್ರಾಮ ನೈರ್ಮಲ್ಯಕ್ಕೆ ಆದ್ಯತೆ ನೀಡದೇ ಇದ್ದರೆ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು..?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ