Please enable javascript.30 ಬಗರ್‌ಹುಕುಂ ಸಾಗುವಳಿದಾರರ ಬಂಧನ - 30 arrest of buggarukum cultivators - Vijay Karnataka

30 ಬಗರ್‌ಹುಕುಂ ಸಾಗುವಳಿದಾರರ ಬಂಧನ

ವಿಕ ಸುದ್ದಿಲೋಕ 4 Jul 2017, 5:00 am
Subscribe

ಹಿರೇಕೆರೂರು:ಬಗರ್‌ಹುಕುಂ ಪಟ್ಟಾ ನೀಡುವಂತೆ ಒತ್ತಾಯಿಸಿ ತಾಲೂಕಿನ ಕಮಲಾಪುರ ಗ್ರಾಮದ ಬಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಳೆದ ಆರು ದಿನಗಳಿಂದ ಪ್ರತಿಭಟನೆ

30 arrest of buggarukum cultivators
30 ಬಗರ್‌ಹುಕುಂ ಸಾಗುವಳಿದಾರರ ಬಂಧನ

ಹಿರೇಕೆರೂರು:ಬಗರ್‌ಹುಕುಂ ಪಟ್ಟಾ ನೀಡುವಂತೆ ಒತ್ತಾಯಿಸಿ ತಾಲೂಕಿನ ಕಮಲಾಪುರ ಗ್ರಾಮದ ಬಳಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಳೆದ ಆರು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ 30 ರೈತರನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಯಾವುದೆ ಸೂಚನೆ ನೀಡದೆ ಪೊಲೀಸರೊಂದಿಗೆ ಡಿಆರ್‌ ಹಾಗೂ ಖಾಸಗಿ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಪ್ರತಿಭಟನೆನಿರತ ಮೂವರು ಮಹಿಳೆಯರು ಸೇರಿದಂತೆ 30 ಮಂದಿಯನ್ನು ಬಂಧಿಸಿದ್ದಾರೆ.

''ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗುವುದು'' ಎಂದು ತಾಲೂಕಾ ವಲಯ ಅರಣ್ಯ ಇಲಾಖೆಯ ಅಧಿಕಾರಿ ಬಸವರಾಜ ಅರಿಶಿಣದ ತಿಳಿಸಿದ್ದಾರೆ.

ಈ ನಡುವೆ ಪ್ರತಿಭಟನೆ ನಡೆಸುತ್ತಿದ್ದ ಬಗರ್‌ಹುಕುಂ ಸಾಗುವಳಿದಾರರ ಬಂಧನವನ್ನು ರೈತ ಸಂಘದ ನಾನಾ ಬಣಗಳು ಖಂಡಿಸಿವೆ.

ಏನಿದು ಪ್ರಕರಣ: ಗ್ರಾಮದ ಹೊರ ವಲಯದಲ್ಲಿ ಸರ್ವೆ ನಂಬರ್‌ 62, 74, 75, 76, 81 ಹಾಗೂ 83 ಸಂಖ್ಯೆಗಳ ವ್ಯಾಪ್ತಿಯಲ್ಲಿ ಸುಮಾರು 1150 ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶ ಇದೆ. ಎಸ್‌ಸಿ, ಎಸ್ಟಿ ಹಾಗೂ ಬಡ ರೈತರು 1985ರಿಂದ 10 ವರ್ಷಗಳ ಕಾಲ ಸುಮಾರು 100 ಎಕರೆಯಷ್ಟು ಸಾಗುವಳಿ ಮಾಡಿದ್ದಾರೆ.

ಗ್ರಾಮ ಘಟಕದ ಅರಣ್ಯ ಸಮಿತಿಯಿಂದ 1991ರಲ್ಲಿ ಪಟ್ಟಾ ನೀಡುವಂತೆ ಅಕ್ರಮ-ಸಕ್ರಮ ಯೋಜನೆಯಲ್ಲಿ ಹಲವಾರು ರೈತರು ಅರ್ಜಿ ಸಲ್ಲಿಸಿದ್ದರೂ ದೊರೆತಿರಲಿಲ್ಲ.

ಮತ್ತೆ ಅರಣ್ಯಭೂಮಿ ಸಾಗುವಳಿ: ಕಾಯ್ದಿಟ್ಟ ಅರಣ್ಯ ಪ್ರದೇಶ ಒತ್ತುವರಿ ಮಾಡುವುದನ್ನು ಅರಣ್ಯಾಧಿಕಾರಿಗಳು ಈ ಹಿಂದೆ ತಡೆದಿದ್ದರು. ಇದರಿಂದ ಕೆಲವರು ವರ್ಷಗಳ ಕಾಲ ಸಾಗುವಳಿ ಮಾಡುವುದನ್ನು ಕೈಬಿಟ್ಟಿದ್ದರು. ಆದರೆ ಈಗ ರಾಜ್ಯ ಸರಕಾರ ಅರಣ್ಯಭೂಮಿ ಹಾಗೂ ಬಗರ್‌ಹುಕುಂ ಸಾಗುವಳಿ ಮಾಡಿದ ರೈತರಿಗೆ ಪಟ್ಟಾ ನೀಡುತ್ತಿರುವುದರಿಂದ ಮತ್ತೆ ಅರಣ್ಯ ಪ್ರದೇಶದಲ್ಲಿ ಕಳೆದ ಒಂದು ವಾರದಿಂದ ಸಾಗುವಳಿ ಮಾಡಲು ಮುಂದಾಗಿದ್ದಾರೆ. ಇದನ್ನು ಅರಣ್ಯ ಹಾಗೂ ಪೊಲೀಸ್‌ ಇಲಾಖೆಯವರು ತಡೆದಿದ್ದರಿಂದ ರೈತರು ಅರಣ್ಯದಲ್ಲಿಯೆ ಕಳೆದ ಆರು ದಿನಗಳಿಂದ ಟೆಂಟ್‌ ಹಾಕಿಕೊಂಡು ಅಹೋರಾತ್ರಿ ಧರಣಿ ನಡೆಸುತ್ತಿದ್ದರು.

ಅಧಿಕಾರಿಗಳ ಭೇಟಿ:ಉಪವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ, ತಹಸೀಲ್ದಾರ್‌ ಎ.ವಿ.ಶಿಗ್ಗಾಂವಿ, ಡಿವೈಎಸ್‌ಪಿ ಎ.ಎಸ್‌.ಭೂಮರೆಡ್ಡಿ, ಸಿಪಿಐ ಜಿ.ಆರ್‌.ಸಂಘನಾಥ, ತಾಲೂಕಾ ವಲಯ ಅರಣ್ಯಾಧಿಕಾರಿ ಬಸವರಾಜ ಅರಿಶಿಣದ, ಸಹಾಯಕ ಅರಣ್ಯ ಸಂರಕ್ಷ ಣಾಧಿಕಾರಿ ಎಸ್‌.ಎಂ.ಪಿರಜಾದೆ, ಪಿಎಸ್‌ಐಗಳಾದ ಅನ್ನಪೂರ್ಣ ಹುಲಗೂರ, ಜಯಪ್ಪ ನಾಯಕ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ್ದರು.

ರೈತರ ಬಂಧನ ಖಂಡನೀಯ

ಭೂಮಿಯ ಹಕ್ಕಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಹೊಡೆದು, ಬಡಿದು ದಬ್ಬಾಳಿಕೆ ಮಾಡಿ ಬಂಧಿಸಿರುವುದು ಖಂಡನೀಯ ಎಂದು ರೈತ ಸಂಘದ (ಕೆ.ಎಸ್‌.ಪುಟ್ಟಣ್ಣಯ್ಯ ಬಣ) ಜಿಲ್ಲಾ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ್‌ ತಿಳಿಸಿದ್ದಾರೆ.

''ಹೊಟ್ಟೆಪಾಡಿಗಾಗಿ 1-2 ಎಕರೆ ಸಾಗುವಳಿ ಮಾಡಲು ಯತ್ನಿಸಿದ ಅಮಾಯಕ ರೈತರನ್ನು ಬಂಧಿಸಿರುವುದನ್ನು ರೈತ ಸಂಘ ಖಂಡಿಸುತ್ತದೆ. ಕೆರೆ, ಗೋಮಾಳ ಪ್ರದೇಶ ಹಾಗೂ ಅರಣ್ಯ ಭೂಮಿಯನ್ನು ನುಂಗಿದ ಕೆಲ ಪ್ರಭಾವಿಗಳ ವಿರುದ್ಧ ಸರಕಾರ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ'' ಎಂದು ಆರೋಪಿಸಿದ್ದಾರೆ.

''ಬಡಪಾಯಿ ರೈತರ ಮೇಲೆ ದಬ್ಬಾಳಿಕೆ ಏಕೆ? ಕಾನೂನು ಎಲ್ಲರಿಗೂ ಒಂದೆ ಇರಬೇಕು. ಬಂಧಿಸಿದ ರೈತರನ್ನು ಯಾವುದೇ ಷರತ್ತಿಲ್ಲದೇ ತಕ್ಷ ಣ ಬಿಡುಗಡೆ ಮಾಡಬೇಕು. ಈ ಘಟನೆ ವಿರೋಧಿಸಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತೇವೆ'' ಎಂದು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ