Please enable javascript.ಗಾಂಧೀಜಿ ತತ್ವಾದರ್ಶ ಜಗತ್ತಿಗೇ ಮಾದರಿ - gandhiji is a model for the world of philosophy - Vijay Karnataka

ಗಾಂಧೀಜಿ ತತ್ವಾದರ್ಶ ಜಗತ್ತಿಗೇ ಮಾದರಿ

Vijaya Karnataka 3 Oct 2018, 5:00 am
Subscribe

ಹಾವೇರಿ :ಗಾಂಧೀಜಿಯವರ ಬದ್ಧತೆ, ವಿಚಾರಗಳು, ತತ್ವಾದರ್ಶಗಳು, ಜಗತ್ತಿಗೆ ಮಾದರಿಯಾಗಿವೆ. ಜಿಲ್ಲೆಯಲ್ಲಿ ಗಾಂಧೀಜಿಯವರ ಹೆಜ್ಜೆ ಗುರುತುಗಳು ಹಾಗೂ ಗಾಂಧೀಜಿ ಸಮಕಾಲೀನ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿಯನ್ನು ಯುವ ಪೀಳಿಗೆಗೆ ತಲುಪಿಸಲು ಸಮಗ್ರ ಮಾಹಿತಿ ಸಂಗ್ರಹ ಕಾರ್ಯ ಜಿಲ್ಲಾಡಳಿತದಿಂದ ನಡೆದರೆ ನಾವೆಲ್ಲ ಕೈಜೋಡಿಸುತ್ತೇವೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

gandhiji is a model for the world of philosophy
ಗಾಂಧೀಜಿ ತತ್ವಾದರ್ಶ ಜಗತ್ತಿಗೇ ಮಾದರಿ
ಹಾವೇರಿ :ಗಾಂಧೀಜಿಯವರ ಬದ್ಧತೆ, ವಿಚಾರಗಳು, ತತ್ವಾದರ್ಶಗಳು, ಜಗತ್ತಿಗೆ ಮಾದರಿಯಾಗಿವೆ. ಜಿಲ್ಲೆಯಲ್ಲಿ ಗಾಂಧೀಜಿಯವರ ಹೆಜ್ಜೆ ಗುರುತುಗಳು ಹಾಗೂ ಗಾಂಧೀಜಿ ಸಮಕಾಲೀನ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರ ಮಾಹಿತಿಯನ್ನು ಯುವ ಪೀಳಿಗೆಗೆ ತಲುಪಿಸಲು ಸಮಗ್ರ ಮಾಹಿತಿ ಸಂಗ್ರಹ ಕಾರ್ಯ ಜಿಲ್ಲಾಡಳಿತದಿಂದ ನಡೆದರೆ ನಾವೆಲ್ಲ ಕೈಜೋಡಿಸುತ್ತೇವೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.

ನಗರದ ಜಿಲ್ಲಾ ಗುರುಭವನದಲ್ಲಿ ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಮಂಗಳವಾರ ನಡೆದ ಮಹಾತ್ಮಾ ಗಾಂಧೀಜಿ 150ನೇ ಜಯಂತಿ ಹಾಗೂ ಲಾಲ್‌ಬಹದ್ದೂರ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗಾಂಧೀಜಿ ಅವರು ಹಾವೇರಿ, ಮೋಟೇಬೆನ್ನೂರಿಗೆ ಹಾಗೂ ಬ್ಯಾಡಗಿಗೆ ಭೇಟಿ ನೀಡಿದ ಇತಿಹಾಸವಿದೆ. ಈ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಿ ಸರಕಾರಿ ಕಚೇರಿಗಳಲ್ಲಿ ಪ್ರದರ್ಶಿಸುವ ಕೆಲಸವಾಗಬೇಕು ಎಂದು ಹೇಳಿದರು.

ಜಿ.ಎಚ್‌.ಪದವಿ ಮಹಾವಿದ್ಯಾಲಯದ ಹಿಂದಿ ಭಾಷಾ ವಿಭಾಗದ ಮುಖ್ಯಸ್ಥೆ ಡಾ.ಮಹಾದೇವ ಕಣವಿ ಮಾತನಾಡಿ, ಗಾಂಧೀಜಿ ಮಹಾತ್ಮರಾಗಿದ್ದು ಒಂದು ಪವಾಡವಾಗಿದೆ. ಜಗತ್ತಿನಲ್ಲಿ ಅಶಾಂತಿ ನೆಲೆಸಿದ ಸಂದರ್ಭದಲ್ಲಿ ಶಾಂತಿ, ಸಹನೆ, ಪ್ರೀತಿ ಅಸ್ತ್ರ ಹಿಡಿದು ಯುದ್ಧ ಮಾಡಿದ ಮಹಾನ್‌ ವ್ಯಕ್ತಿ. ಅವರ ವಿಚಾರ ಧಾರೆಗಳನ್ನು ಓದುತ್ತೇವೆ. ಗೌರವಿಸುತ್ತೇವೆ. ಆದರೆ ಅವರ ಜೀವನ ಸಂದೇಶಗಳನ್ನು ಪಾಲಿಸುತ್ತಿಲ್ಲ. ಗೌರವಿಸುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಶಾಸಕ ನೆಹರು ಓಲೇಕಾರ ಅಧ್ಯಕ್ಷ ತೆ ವಹಿಸಿ ಮಾತನಾಡಿ, ಸತ್ಯ ಹರಿಶ್ಚಂದ್ರ ನಾಟಕದ ಪ್ರೇರಣೆಯಿಂದ ಗಾಂಧೀಜಿ ಮಹಾತ್ಮರಾದರು. 1934ರಲ್ಲಿ ಹಾವೇರಿಗೆ ಬಂದು ಹೈಸ್ಕೂಲ್‌ ಮೈದಾನದಿಂದ ಹೊಂಡದ ಮಠಕ್ಕೆ ಕಾಲ್ನಡಿಗೆಯಿಂದ ಹೋಗಿ ರಾಜೇಂದ್ರ ಗುರುಜಿ ದರ್ಶನ ಮಾಡಿದರು. ನಂತರ ನಗರ ರೈಲ್ವೆ ಸ್ಟೇಷನ್‌ ಹತ್ತಿರ ಧರ್ಮ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ ಮಾಡಿದ್ದರು. ಕರ್ಜಗಿಯಲ್ಲಿ ಅವರ ಚಿತಾಭಸ್ಮ ಹಾಗೂ ಭವ್ಯ ಪುತ್ಥಳಿ ಇದೆ. ಜಿಲ್ಲೆಯ ಮೈಲಾರ ಮಹದೇವಪ್ಪ, ಸಂಗೂರ ಕರಿಯಪ್ಪ, ಹೊಸಮನಿ ಸಿದ್ದಪ್ಪ ಮುಂತಾದವರು ಗಾಂಧೀಜಿ ಜತೆ ಹೋರಾಟ ಮಾಡಿದ್ದರು. ಇಂತಹ ಹೋರಾಟಗಾರ ಮಾಹಿತಿ ನೀಡುವ ಕಟ್ಟಡ ನಿರ್ಮಾಣಕ್ಕೆ ಸಂಸದರು 20 ಲಕ್ಷ ರೂ. ನೀಡಬೇಕು. ನಾನು 10 ಲಕ್ಷ ರೂ. ನೀಡುವೆ ಎಂದರು.

ಸರ್ವಧರ್ಮ ಪ್ರಾರ್ಥನೆ

ಜಿ.ಎಸ್‌.ಭಟ್‌ ಅವರು ಭಗವದ್ಗೀತೆ, ಮೋಹಸ್ಸಿನ ಅವರು ಖುರಾನ್‌ ಹಾಗೂ ಸೇಂಟ್‌ ಆನ್ಸ್‌ ಶಾಲೆಯ ಪ್ರಾಚಾರ್ಯರಾದ ಸಿಸ್ಟರ್‌ ಸೋಲಿನ ಅವರು ಬೈಬಲ್‌ ವಾಚಿಸಿದರು. ಹಿಂದುಸ್ತಾನಿ ಗಾಯಕಿ ವಂದನಾ ಭಾಸ್ಕರ್‌ ಹಾಗೂ ತಂಡದವರಿಂದ ಗಾಂಧೀಜಿ ಅವರಿಗೆ ಪ್ರಿಯವಾದ ಭಜನೆ (ಗೀತೆಗಳ ಗಾಯನ) ಕಾರ್ಯಕ್ರಮ ನಡೆಯಿತು.

ಕಿರುಚಿತ್ರ ಪ್ರದರ್ಶನ:

ಎಲ್‌.ಇ.ಡಿ. ಪರದೆಯ ಮೂಲಕ ಗಾಂಧಿ ಕಿರುಚಿತ್ರ ಪ್ರದರ್ಶನ ಗಾಂಧೀಜಿ ಅವರ ಜೀವನ ದರ್ಶನ ಹಾಗೂ ಜಗತ್ತಿನ ನಾನಾ ಕಡೆ ಗಾಂಧಿ ಕುರಿತಂತೆ ಹೊರತಂದಿರುವ ಅಂಚೆ ಚೀಟಿಗಳ ಪ್ರದರ್ಶನ ನಡೆಯಿತು.

ಪುಸ್ತಕ ಬಿಡುಗಡೆ:

'ಪಾಪು ಗಾಂಧಿ.. ಗಾಂಧಿ ಬಾಪು ಆದ ಕಥೆ' ಕಿರು ಪುಸ್ತಕವನ್ನು ಜಿ.ಪಂ. ಅಧ್ಯಕ್ಷ ಎಸ್‌.ಕೆ.ಕರಿಯಣ್ಣನವರ, ಜನಪದ ವಿಶೇಷ ಗಾಂಧಿ ಸಂಚಿಕೆಯನ್ನು ಶಾಸಕ ನೆಹರು ಓಲೇಕಾರ ಹಾಗೂ ಮಾರ್ಚ್‌ ಆಫ್‌ ಕರ್ನಾಟಕ ವಿಶೇಷ ಗಾಂಧಿ ಸಂಚಿಕೆಯನ್ನು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಸದ್ಭಾವನಾ ಜಾಥಾ ನಡೆಯಿತು. ಜಿ.ಪಂ. ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಜಿ.ಪಂ.ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ತಾ.ಪಂ.ಅಧ್ಯಕ್ಷ ಕರಿಯಲ್ಲಪ್ಪ ಉಂಡಿ, ನಗರಸಭೆ ಸದಸ್ಯ ಗಿರೀಶ ತುಪ್ಪದ, ಲಲಿತಾ ಮಲಗೋಡ, ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್‌, ಜಿ.ಪಂ. ಸಿಇಒ ಶಿಲ್ಪಾ ನಾಗ್‌, ಅಪರ ಜಿಲ್ಲಾಧಿಕಾರಿ ವಿನೋದ ಹೆಗ್ಗಳಗಿ, ಉಪವಿಭಾಗಾಧಿಕಾರಿ ಪ್ರಸನ್‌ಕುಮಾರ, ಡಿಡಿಪಿಐ ಅಂದಾನೆಪ್ಪ ವಡಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್‌.ವಿ. ಚಿನ್ನಿಕಟ್ಟಿ ಉಪಸ್ಥಿತರಿದ್ದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ.ಆರ್‌.ರಂಗನಾಥ್‌ ಸ್ವಾಗತಿಸಿದರು. ಶಿಕ್ಷ ಕ ನಾಗರಾಜ ನಡುವಿನಮಠ ನಿರೂಪಿಸಿದರು. ನಗರಸಭೆ ಪೌರಾಯುಕ್ತ ಆರ್‌.ಪ್ರಕಾಶ ವಂದಿಸಿದರು.

ಸ್ವಚ್ಛತೆ ಕಾರ‍್ಯಕ್ರಮ ಫೋಟೋಗೆ ಸೀಮಿತ

ಗಾಂಧಿ ವೃತ್ತದಲ್ಲಿ ಬೆಳಗ್ಗೆ 10ಕ್ಕೆ ನಡೆದ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಹಾಗೂ ಅಧಿಕಾರಿಗಳು ಕಸ ಇದ್ದಲ್ಲಿ ಕಸ ಗೂಡಿಸದೇ ಸ್ವಚ್ಛ ಜಾಗದಲ್ಲಿ ಪೊರಕೆ ಹಿಡಿದು ಫೋಟೊ ಪೋಜ್‌ ಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ