Please enable javascript.ಬೆಳೆ ವಿಮೆ ಪರಿಹಾರ ಮೋಸವೇ ಬಿಜೆಪಿ ಅಸ್ತ್ರ - The crop insurance solution is a BJP weapon - Vijay Karnataka

ಬೆಳೆ ವಿಮೆ ಪರಿಹಾರ ಮೋಸವೇ ಬಿಜೆಪಿ ಅಸ್ತ್ರ

ವಿಕ ಸುದ್ದಿಲೋಕ 4 Mar 2018, 5:00 am
Subscribe

ಹಾವೇರಿ: ಬೀಜ-ಗೊಬ್ಬರ ಪೂರೈಕೆ ವಿಷಯದಲ್ಲಿ ಗೋಲಿಬಾರ್‌ ನಡೆದು ಇಬ್ಬರು ರೈತರನ್ನು ಬಲಿ ತೆಗೆದುಕೊಂಡ ಘಟನೆ ರೈತರ ಮೇಲೆ ಆಣೆ ಮಾಡಿ ಅಧಿಕಾರಕ್ಕೆ ಬಂದಿದ್ದ ಯಡಿಯೂರಪ್ಪನವರ ಬಿಜೆಪಿ ಸರಕಾರಕ್ಕೆ 2013ರ ಚುನಾವಣೆæ ಸೋಲಿನ ಕುಣಿಕೆಯಾಯಿತು.

the crop insurance solution is a bjp weapon
ಬೆಳೆ ವಿಮೆ ಪರಿಹಾರ ಮೋಸವೇ ಬಿಜೆಪಿ ಅಸ್ತ್ರ

ಹಾವೇರಿ: ಬೀಜ-ಗೊಬ್ಬರ ಪೂರೈಕೆ ವಿಷಯದಲ್ಲಿ ಗೋಲಿಬಾರ್‌ ನಡೆದು ಇಬ್ಬರು ರೈತರನ್ನು ಬಲಿ ತೆಗೆದುಕೊಂಡ ಘಟನೆ ರೈತರ ಮೇಲೆ ಆಣೆ ಮಾಡಿ ಅಧಿಕಾರಕ್ಕೆ ಬಂದಿದ್ದ ಯಡಿಯೂರಪ್ಪನವರ ಬಿಜೆಪಿ ಸರಕಾರಕ್ಕೆ 2013ರ ಚುನಾವಣೆæ ಸೋಲಿನ ಕುಣಿಕೆಯಾಯಿತು.

ಆದರೆ ಬಿಜೆಪಿಯವರು ಈ ಬಾರಿಯ ಚುನಾವಣೆಯಲ್ಲಿ ಬೆಳೆ ವಿಮೆ ಪರಿಹಾರ ಮೋಸವನ್ನೇ ರೈತರ ಮತಗಳನ್ನು ಸೆಳೆಯುವ ಅಸ್ತ್ರವನ್ನಾಗಿಸಿಕೊಂಡಿದ್ದಾರೆ.

ಕೃಷಿ ಪ್ರಧಾನ ಜಿಲ್ಲೆ ಹಾವೇರಿ ರಾಜಕೀಯ ಶಕ್ತಿ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ. ಯಡಿಯೂರಪ್ಪ ನೇತೃತ್ವದ ಕೆಜೆಪಿ ಹಾಗೂ ಈಶ್ವರಪ್ಪ ನೇತೃ ತ್ವದ ರಾಯಣ್ಣ ಬ್ರಿಗೇಡ್‌ ಜನ್ಮತಳೆದದ್ದು ಇಲ್ಲಿಯೇ.

2008ರಲ್ಲಿ ದಕ್ಷಿಣ ಭಾರತದಲ್ಲಿ ಪ್ರಥಮ ಬಿಜೆಪಿ ಸರಕಾರ ಎನ್ನುವ ಗರಿಮೆಗೆ ಪಾತ್ರವಾಗಿದ್ದ ಯಡಿಯೂರಪ್ಪ ಹಸಿರು ಶಾಲು ಹಾಕಿಕೊಂಡು ರೈತರ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಆಡಳಿತ ಚುಕ್ಕಾಣಿ ಹಿಡಿದು ಕೇವಲ ಒಂದು ವಾರವಾಗಿತ್ತು. ಬೀಜ-ಗೊಬ್ಬರ ಪೂರೈಕೆ ವೇಳೆ ಏಕಾಏಕಿ ಗಲಾಟೆ ಸಂಭವಿಸಿ ಪೊಲೀಸ್‌ ಗೋಲಿಬಾರ್‌ ನಡೆಯಿತು. ಇಬ್ಬರು ಅಮಾಯಕ ರೈತರು ಗುಂಡಿಗೆ ಬಲಿಯಾಗಬೇಕಾಯಿತು. ಈ ಘಟನೆ ಜಿಲ್ಲೆಗೆ ಅಳಿಸಲಾಗದ ಕಪ್ಪುಚುಕ್ಕೆ ಹಣೆಪಟ್ಟಿಗೆ ಕಾರಣವಾಯಿತು. ಈ ಪ್ರಮಾದವೇ 2013ರ ಚುನಾವಣೆಗೆ ಪ್ರತಿಪಕ್ಷ ಕಾಂಗ್ರೆಸ್‌ ಗೆಲುವಿಗೆ ಮುನ್ನುಡಿಯಾಯಿತು. ಜತೆಗೆ ಕೆಜೆಪಿ ಉದಯ ಬಿಜೆಪಿ ಸೋಲಿಗೆ ಚರಮಗೀತೆ ಹಾಡಲು ಕಾರಣವಾಯಿತು.

ಬೆಳೆ ವಿಮೆ ರಾಜಕೀಯ ಅಸ್ತ್ರ: ಕಳೆದ ಚುನಾವಣೆಯಲ್ಲಿ ಗೋಲಿಬಾರ್‌ ಘಟನೆ ಕಾಂಗ್ರೆಸ್‌ ಗೆಲುವಿಗೆ ವರದಾನವಾಯಿತು. ಈ ಬಾರಿ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಆಗುತ್ತಿರುವ ವಿಳಂಬ ಮತ್ತು ಲೆಕ್ಕಾಚಾರದಲ್ಲಿ ಮಾಡಿರುವ ಮೋಸವನ್ನೇ ಬಿಜೆಪಿ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದೆ. ಈ ವಿಷಯದಲ್ಲೇ ಜಿಲ್ಲಾಡಳಿತ ಕಚೇರಿ ಹಾಗೂ ಸಿಎಂ ಭಾವಚಿತ್ರದ ಫಲಕಕ್ಕೆ ಸೆಗಣಿ ಎರಚುವ ಪ್ರತಿಭಟನೆ ನಡೆದು, ಬಿಜೆಪಿ ಜಿಲ್ಲಾಧ್ಯಕ್ಷ ಸೇರಿದಂತೆ ಕನಿಷ್ಠ 35ಕ್ಕೂ ಹೆಚ್ಚು ಮುಖಂಡರು ಹಾಗೂ ಕಾರ್ಯಕರ್ತರ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಬೇಲ್‌ ಸಿಗದೇ ಜೈಲು ಶಿಕ್ಷೆ ಅನುಭವಿಸಲು ಸಹ ಕಾರಣವಾಗಿರುವುದೇ ಸಾಕ್ಷಿಯಾಗಿದೆ.

ರಾಜ್ಯದಲ್ಲೇ ಬೆಳೆ ವಿಮೆಗೆ ಮುಂಚೂಣಿ!: ಸತತ ಎರಡು ವರ್ಷ ಅನಾವೃಷ್ಟಿ ಪರಿಣಾಮ ಬರಪೀಡಿತ ಜಿಲ್ಲೆ ಎಂದು ಘೋಷಿತ ಗೊಂಡಿದ್ದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದರೂ ಸರಕಾರ ಸಕಾಲಕ್ಕೆ ಪರಿಹಾರ ಕೊಡದಿರುವುದು ಅನ್ನದಾತರನ್ನು ಆಕ್ರೋಶಗೊಳ್ಳುವಂತೆ ಮಾಡಿತ್ತು. ಬೆಳೆ ವಿಮೆ ಪರಿಹಾರ ವಿಷಯದಲ್ಲಿ 2015-16ರಲ್ಲಿ ಬಿಡುಗಡೆಯಾದ ಮೊತ್ತದ ಪೈಕಿ 123.59 ಕೋಟಿ ರೂ. ಪರಿಹಾರ ಪಡೆದ ಹಾವೇರಿ ಜಿಲ್ಲೆ ರಾಜ್ಯದಲ್ಲೇ ಕಲಬುರ್ಗಿ ನಂತರದ ಸ್ಥಾನ ಪಡೆದುಕೊಂಡಿದ್ದರೆ 2016-17 ರಲ್ಲಿ 192 ಕೋಟಿ ರೂ. ಪರಿಹಾರ ಪಡೆದ ಪ್ರಥಮ ಜಿಲ್ಲೆ ಎನ್ನುವ ಗರಿಮೆಗೂ ಪಾತ್ರವಾಗಿದೆ. ಆದರೆ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಿದರೂ ರೈತರ ಖಾತೆಗೆ ಜಮೆ ಮಾಡುವಲ್ಲಿ ರಾಜ್ಯ ಸರಕಾರ ವಿಳಂಬ ನೀತಿ ಅನುಸರಿಸುತ್ತಿರುವುದು ರೈತ ಸಂಘಟನೆಗಳನ್ನು ಕೆರಳುವಂತೆ ಮಾಡಿತು. 2015-16 ಮತ್ತು 2016-17 ರ ಬೆಳೆ ವಿಮೆ ಲೆಕ್ಕಾಚಾರದಲ್ಲಿ ಕನಿಷ್ಠ 40 ಕೋಟಿ ರೂ.ಗೂ ಅಧಿಕ ಮೊತ್ತ ರೈತರಿಗೆ ಮೋಸವಾಗಿದೆ ಎನ್ನುವ ಆರೋಪ ಹಾಗೂ ಆಕ್ರೋಶ ರೈತ ಸಂಘಟನೆಗಳಿಂದಲೂ ವ್ಯಕ್ತವಾಯಿತು.

ಈ ಎಲ್ಲ ಬೆಳವಣಿಗೆಗಳನ್ನೇ ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ ಈ ಬಾರಿಯ ಚುನಾವಣೆಗೆ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿರುವುದು ಆಡಳಿತಾರೂಢ ಕಾಂಗ್ರೆಸ್‌ ಸರಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಒಟ್ಟಾರೆ ಜಿಲ್ಲೆಯ ಶೇಕಡಾವಾರು ಮತದಾರರ ಪೈಕಿ ಶೇ.80 ರೈತರ ಮತಗಳೇ ನಿರ್ಣಾಯಕವಾಗಲಿವೆ. ಈ ಬಾರಿಯ ಬಜೆಟ್‌ನಲ್ಲಿ ಸಿಎಂ ಸಿದ್ಧರಾಮಯ್ಯ ಬೆಳೆ ನಷ್ಟ ಪರಿಹಾರಕ್ಕೆ ಆವರ್ತನಿಧಿಗೆ ಕನಿಷ್ಠ 1 ಸಾವಿರ ಕೋಟಿ ರೂ. ನಿಗದಿಪಡಿಸುತ್ತಾರೆ ಎನ್ನುವ ರೈತರ ಆಸೆಗೆ ತಣ್ಣೀರು ಎರಚಿರುವುದು ಫಲಿತಾಂಶದ ಮೇಲೆ ಪ್ರತಿಕೂಲವಾಗಲಿದೆ ಎನ್ನುವ ಲೆಕ್ಕಾಚಾರ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ