Please enable javascript.ಮಧ್ಯಪ್ರದೇಶ ವಿಧಾನಸಭೆ ಚುನಾವಣೆ: ಬಿಜೆಪಿಗೆ 'ಕರ್ನಾಟಕ ಪಾಠ'! - madhya pradesh assembly election 2023 bjp learnt lesson from karnataka experience gives ticket to seniors - Vijay Karnataka

ಮಧ್ಯಪ್ರದೇಶ ವಿಧಾನಸಭೆ ಚುನಾವಣೆ: ಬಿಜೆಪಿಗೆ 'ಕರ್ನಾಟಕ ಪಾಠ'!

Edited byಅಮಿತ್ ಎಂ.ಎಸ್ | Vijaya Karnataka 29 Nov 2023, 2:16 pm
Subscribe

Madhya Pradesh Assembly Elections 2023: ಮಧ್ಯಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಕಾವು ಜೋರಾಗಿದೆ. ಕರ್ನಾಟಕ ಚುನಾವಣೆಯಲ್ಲಿ ಹಿರಿಯರಿಗೆ 'ವಿಶ್ರಾಂತಿ' ನೀಡಿ ಹೊಸ ಮುಖಗಳಿಗೆ ಟಿಕೆಟ್ ನೀಡಿದ್ದ ಬಿಜೆಪಿಗೆ, ಅದರ ಅನುಭವ ಉಂಟಾದಂತಿದೆ. ಹೀಗಾಗಿ 70 ವರ್ಷ ದಾಟಿದವರಿಗೆ ಟಿಕೆಟ್ ಇಲ್ಲ ಎಂಬ ನಿಯಮದ ಬಗ್ಗೆ ಇಲ್ಲಿ ಪ್ರಸ್ತಾಪವೇ ಆಗಿಲ್ಲ. ಈ ಕುರಿತಾದ ವಿಶ್ಲೇಷಣೆ ಇಲ್ಲಿದೆ.

ಹೈಲೈಟ್ಸ್‌:

  • ಮಧ್ಯಪ್ರದೇಶದಲ್ಲಿ 70 ತುಂಬಿದ ಹಿರಿಯರಿಗೆ ಕರೆದು ಟಿಕೆಟ್‌ ನೀಡಿದ 'ಕಮಲ' ಪಕ್ಷ
  • ಕರ್ನಾಟಕದಲ್ಲಿ ಘಟಾನುಘಟಿಗಳಿಗೆ ಟಿಕೆಟ್ ನೀಡದೆ 'ಅನುಭವ' ಪಡೆದ ಬಿಜೆಪಿ
  • ರಾಜಕೀಯ ಸಾಕು ಎಂದು ಬಹಿರಂಗವಾಗಿ ಹೇಳಿಕೊಂಡ ವೃದ್ಧರಿಗೂ ಬಿಜೆಪಿ ಟಿಕೆಟ್
Madhya Pradesh BJP
ಬೆಂಗಳೂರು: ಹಿರಿಯರ ಕಾಲ ಮುಗಿದು ಹೋಯಿತು, ಇನ್ನೇನಿದ್ದರೂ ಹೊಸಬರ ಜಮಾನ. ಬಿಜೆಪಿಯಲ್ಲಿ ಕಿರಿಯರದ್ದು, ಹೊಸ ಮುಖಗಳದ್ದೇ ಪರ್ವ. ಎಪ್ಪತ್ತು ತುಂಬಿದೆಯೇ ? ನಿವೃತ್ತರಾಗಿ...!
ವರ್ಷದ ಹಿಂದೆ, ಕರ್ನಾಟಕ ಚುನಾವಣೆಗೆ ಸಿದ್ಧವಾಗುತ್ತಿದ್ದ ಬಿಜೆಪಿ ಪಾಳಯದಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದ್ದ ಮಾತಿದು. ಜಾಹೀರಾತಿನ ಗೀತೆಯಷ್ಟೇ ಮಧುರವಾಗಿದ್ದವು ಈ ಮಾತುಗಳು. ಇದೊಂದು ಚುನಾವಣಾ ರಾಜಕೀಯ ಪ್ರಯೋಗ, ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನ ಎಂಬುದನ್ನು ಸಾರಿ ಹೇಳಲು ಕೇಸರಿ ಪಕ್ಷದ ಚಿಂತಕರು ಕೂಡ ಹೊಸ ಹಾಡಿಗೆ ಕೋರಸ್‌ ನೀಡಿದ್ದರು. ನಿಜವೆಂದರೆ- ಇದೊಂದು ನೀತಿ ಎಂದು ಬಿಜೆಪಿ ಬಹಿರಂಗವಾಗಿ ಯಾವತ್ತೂ, ಎಲ್ಲಿಯೂ ಹೇಳಿರಲಿಲ್ಲ. ಆದರೆ, ಟಿಕೆಟ್‌ ನೀಡುವಿಕೆಯಲ್ಲಿ 'ಎಪ್ಪತ್ತು ತುಂಬಿದವರಿಗೆ ನಿರಾಕರಣೆ' ಎಂಬ ನೀತಿ ಪ್ರತಿಫಲನಗೊಂಡಿತ್ತು.
450 ರೂ.ಗೆ ಎಲ್‌ಪಿಜಿ ಸಿಲಿಂಡರ್‌ ಸೇರಿದಂತೆ ಮಧ್ಯಪ್ರದೇಶ ಚುನಾವಣೆಗೆ ಬಿಜೆಪಿಯಿಂದ ಉಚಿತ ಭರವಸೆಗಳ ಸುರಿಮಳೆ

70 ತುಂಬಿದ ಬಿ. ಎಸ್‌. ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌, ಕೆ. ಎಸ್‌. ಈಶ್ವರಪ್ಪ ಅವರಂಥ ಘಟಾನುಘಟಿಗಳಿಗೆ ಟಿಕೆಟ್‌ ಸಿಗಲಿಲ್ಲ. ವೀರಶೈವ ಲಿಂಗಾಯತ ಸಮುದಾಯದ ಶೆಟ್ಟರ್‌ ಬಂಡೆದ್ದು ಕಾಂಗ್ರೆಸ್‌ ಸೇರಿದರೆ, ಪಕ್ಷದ ಶಿಸ್ತಿನ ಸಿಪಾಯಿಯಂತಿರುವ ಕುರುಬ ಸಮುದಾಯದ ಈಶ್ವರಪ್ಪ ನೋವು ನುಂಗಿಕೊಂಡು, ನಗುನಗುತ್ತ ಸಂಘಟನೆಯಲ್ಲಿ ಉಳಿದರು. ಮಾಗಿದ ಬಿಎಸ್‌ವೈ ಮುಗುಳ್ನಕ್ಕಿದ್ದರು. ಈ ಪ್ರಯೋಗ ಯಶಸ್ವಿಯಾಯಿತೇ? ಇದರಿಂದ ಬಿಜೆಪಿ ಪಾಠ ಕಲಿಯಿತೇ? ಈ ಪ್ರಶ್ನೆಗಳಿಗೆ ಉತ್ತರವನ್ನು ಬಿಜೆಪಿ ನೀಡುವುದಿಲ್ಲ. ಏಕೆಂದರೆ, ಅದು ಯಾವತ್ತೂ ಈ ಸಂಗತಿಯನ್ನು ಘೋಷಿಸಿರಲಿಲ್ಲ. ಆದರೆ, ಮಧ್ಯಪ್ರದೇಶದ ಚುನಾವಣಾ ಭೂಮಿಕೆಯಲ್ಲಿ 'ಕರ್ನಾಟಕದ ಪ್ರಯೋಗ'ದಿಂದ ಬಿಜೆಪಿ ಕಲಿತ ಪಾಠವೇನು ಎಂಬುದಕ್ಕೆ ಉತ್ತರ ಕಂಡುಕೊಳ್ಳಬಹುದು. ಕರ್ನಾಟಕದ ಅನುಭವ ಅಲ್ಲಿ ಪ್ರತಿಫಲಗೊಂಡಿದೆ!

ನವೆಂಬರ್‌ 17ರಂದು ಮಧ್ಯಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಒಬ್ಬರಲ್ಲ-ಇಬ್ಬರಲ್ಲ 70 ತುಂಬಿದ 14 ಹಿರಿಯರಿಗೆ ಟಿಕೆಟ್‌ ನೀಡಿದೆ. ನೆನಪಿರಲಿ, ಈ ಪೈಕಿ 80 ವರ್ಷ ತುಂಬಿದ ವಯೋವೃದ್ಧರೂ ಇದ್ದಾರೆ. ಹೊಸ ಪೀಳಿಗೆಗೆ ಉಮೇದುವಾರಿಕೆ ಎಂಬ ಸೂತ್ರವನ್ನು ಕರ್ನಾಟಕದಲ್ಲಿ ಹೆಣೆದಿದ್ದ ಬಿಜೆಪಿ, ಮಧ್ಯಪ್ರದೇಶದಲ್ಲಿ ಗೆಲ್ಲುವ ಕುದುರೆಗೆ ಟಿಕೆಟ್‌, ವಯಸ್ಸು ಎಷ್ಟಾದರೇನು ಎಂಬ ನೀತಿಗೆ ಶರಣಾಗಿದೆ. ಹುಣಸೇ ಮುಪ್ಪಾದ ಮಾತ್ರಕೆ, ಹುಳಿ ಮುಪ್ಪಾದೀತೆ ಎಂಬ ಜನಪದದ ನಂಬಿಕೆ ಜತೆ ಉಯ್ಯಾಲೆಯಾಡಿದೆ.
ಮೋದಿ ಒಮ್ಮೆ ಧರಿಸಿದ ಸೂಟ್ ಮತ್ತೆ ಹಾಕೊಲ್ಲ, ನಾನು ಕೇವಲ ಟಿ ಶರ್ಟ್ ತೊಡುವುದಷ್ಟೆ: ರಾಹುಲ್ ಗಾಂಧಿ ಟೀಕೆ

ರೇವಾ ಜಿಲ್ಲೆಯ ಗುರಹ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಕಣಕ್ಕಿಳಿಸಿರುವ ಅಭ್ಯರ್ಥಿ ನಾಗೇಂದ್ರ ಸಿಂಗ್‌ ಅವರ ವಯಸ್ಸು 79. ಅಂದಹಾಗೆ ಇವರಿಗೆ ಪ್ರಬಲ ಪ್ರತಿಸ್ಪರ್ಧೆಯೊಡ್ಡಿರುವ ಆಮ್‌ ಆದ್ಮಿ ಪಾರ್ಟಿಯ ಹುರಿಯಾಳು ಪಿ. ಪ್ರಖರ್‌ ಪ್ರತಾಪ್‌ ಸಿಂಗ್‌ ವಯಸ್ಸು ಕೇವಲ 25. ಯುಎಸ್‌ನಲ್ಲಿದ್ದ ತರುಣ ಪ್ರಖರ್‌ ಚುನಾವಣೆಗಾಗಿ ಕೆಲಸ ತೊರೆದು ಬಂದಿದ್ದಾರೆ. ಸಾತ್ನ ಜಿಲ್ಲೆಯ ನಗೋಡ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಕಣಕ್ಕಿಳಿಸಿರುವ ನಾಗೇಂದ್ರ ಸಿಂಗ್‌ ಅವರ ವಯಸ್ಸು 80. ಸ್ವಾರಸ್ಯ ಎಂದರೆ, ಈ ಇಬ್ಬರು ಅಜ್ಜಂದಿರು, ಆರು ತಿಂಗಳ ಹಿಂದೆಯಷ್ಟೇ ತಮಗೆ ಚುನಾವಣಾ ರಾಜಕೀಯವೇ ಸಾಕಾಗಿದೆ ಎಂದು ನಿವೃತ್ತಿ ಘೋಷಿಸಿದ್ದರು. ಆದರೆ, ಬಿಜೆಪಿ ಕರ್ನಾಟಕದಿಂದ ಪಾಠ ಕಲಿತಿದೆ. ಟಿಕೆಟ್‌ ಒಲ್ಲೆ ಎಂದವರಿಗೂ ಟಿಕೆಟ್‌ ನೀಡಿ, ಸ್ಪರ್ಧಾ ಕಣದಲ್ಲಿ ಕಟ್ಟಿಹಾಕಿದೆ. ಇಂಥವರು 12ಕ್ಕೂ ಹೆಚ್ಚು ಮಂದಿ ಕೇಸರಿ ಕಣದಲ್ಲಿದ್ದಾರೆ!

ಹಿರಿಯ ನಾಯಕರಿಗೇ ಅಚ್ಚರಿ

ಬಿಜೆಪಿ ವರಿಷ್ಠರ ಈ ನಡೆ, ಆ ಪಕ್ಷದ ಹಿರಿಯರಲ್ಲಿ ಅಚ್ಚರಿ ಮೂಡಿಸಿದೆ. 2019ರ ಲೋಕಸಭೆ ಚುನಾವಣಾ ಪೂರ್ವದ ದಿನಗಳನ್ನು ಅವರು ನೆನಪಿಸಿಕೊಳ್ಳುತ್ತಾರೆ. ಸರಿಸಾಟಿ ಇಲ್ಲದೇ ಲೋಕಸಮರದ ತಯಾರಿ ನಡೆಸುತ್ತಿದ್ದ ಅಮಿತ್‌ ಶಾ ಅವರಂತೂ, ''75 ತುಂಬಿದ ಹಿರಿಯರಿಗೆ ಟಿಕೆಟ್‌ ಇಲ್ಲ. ಅವರು ಯಾರೇ ಆದರೂ ಸರಿ!,'' ಎಂದು ಘೋಷಿಸಿದ್ದರು. ಪರಿಣಾಮ ಲಾಲಕೃಷ್ಣ ಆಡ್ವಾಣಿ, ಮುರುಳಿ ಮನೋಹರ ಜೋಷಿ ಅವರಂಥ ಘಟನುಘಟಿಗಳು ವಿಶ್ರಾಂತ ಜೀವನಕ್ಕೆ ತೆರಳಿದರು. ಆದರೆ, 2023ರಲ್ಲಿ ಮಧ್ಯಪ್ರದೇಶದ ಚುನಾವಣಾ ಅಂಗಳದಲ್ಲಿ ಅಂಥ ಝೇಂಕಾರ-ಠೇಂಕಾರದ ಗೀತೆ ಕಾಣೆಯಾಗಿದೆ. ''ಶತಾಯ ಗತಾಯ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲೇ ಬೇಕಿದೆ. ಹಾಗಾಗಿ, ಅದು ತನ್ನ ನೀತಿ, ಸಿದ್ಧಾಂತ ಮಾತ್ರವಲ್ಲ, ಎಲ್ಲದರ ಜತೆಯೂ ರಾಜಿಯಾಗಿದೆ,'' ಎನ್ನುತ್ತಾರೆ ಚುನಾವಣಾ ವಿಶ್ಲೇಷಕ ರಾಖೇಶ್‌ ದೀಕ್ಷಿತ್‌.
Madhya Pradesh Elections: ಕಾಂಗ್ರೆಸ್‌ನಿಂದ '4ಸಿ' ದುರಾಡಳಿತ: ಸಚಿವ ಅಮಿತ್ ಶಾ ವಾಗ್ದಾಳಿ

ಅಂದಹಾಗೆ, ಬಿಜೆಪಿಯಿಂದ ಸದಾ 'ಹಳಸಿದ ನಾಯಕರ ಪಕ್ಷ' ಎಂಬ ಮೂದಲಿಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಕೂಡ, ಇತ್ತೀಚೆಗೆ ತಾನೂ ತಾಜಾ ಹಾಗೂ ತಾರುಣ್ಯದ ನಾಯಕರ ಪರ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿತ್ತು. ಆದರೆ, ಬಿಜೆಪಿಯಿಂದ ಅದೂ ಪಾಠ ಕಲಿತಿದೆ. 70 ವರ್ಷ ತುಂಬಿದ 9 ಜನರಿಗೆ ಕಾಂಗ್ರೆಸ್‌ ಕೂಡ ಟಿಕೆಟ್‌ ನೀಡಿದೆ. ಹಳೆ ಬೇರು ಹೊಸ ಚಿಗುರು ಕೂಡಿದರೆ ಮರ ಸೊಬಗು ಎಂದರೆ, ಇದೇ ಇರಬೇಕು !
ಅಮಿತ್ ಎಂ.ಎಸ್
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ