Please enable javascript.ಡಿಸಿಎಂ ಹುದ್ದೆ ಗಾಳಿ ಸುದ್ದಿ : ಪರಮೇಶ್ವರ್ - ಡಿಸಿಎಂ ಹುದ್ದೆ ಗಾಳಿ ಸುದ್ದಿ : ಪರಮೇಶ್ವರ್ - Vijay Karnataka

ಡಿಸಿಎಂ ಹುದ್ದೆ ಗಾಳಿ ಸುದ್ದಿ : ಪರಮೇಶ್ವರ್

ವಿಕ ಸುದ್ದಿಲೋಕ 27 Jan 2014, 12:48 pm
Subscribe

ಉಪಮುಖ್ಯಮಂತ್ರಿ ಹುದ್ದೆ ತಮಗೆ ನೀಡಲಾಗುತ್ತಿದೆ ಎಂಬುವುದು ಕೇವಲ ಊಹಾಪೋಹ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದರು.

ಡಿಸಿಎಂ ಹುದ್ದೆ ಗಾಳಿ ಸುದ್ದಿ : ಪರಮೇಶ್ವರ್
ಗುಲ್ಬರ್ಗ:ಉಪಮುಖ್ಯಮಂತ್ರಿ ಹುದ್ದೆ ತಮಗೆ ನೀಡಲಾಗುತ್ತಿದೆ ಎಂಬುವುದು ಕೇವಲ ಊಹಾಪೋಹ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಹೇಳಿದರು.

ಭಾನುವಾರ ಇಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,

ಭಾನುವಾರ ಇಲ್ಲಿನ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲ ದಿನಗಳಿಂದ ತಮಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗುತ್ತದೆ ಎಂಬ ಮಾಹಿತಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ನಿಮಗೂ, ನನಗೂ ಗೊತ್ತಿರುವಂತೆ ಇದು ಗಾಳಿ ಸುದ್ದಿ ಎಂದರು.

ಹಿರಿಯ ಶಾಸಕ ಮಾಲಿಕಯ್ಯ ಗುತ್ತೇದಾರ ಅವರು ಮಂತ್ರಿ ಸ್ಥಾನ ಕೇಳಿದ್ದರಲ್ಲಿ ಯಾವುದೆ ತಪ್ಪಿಲ್ಲ ಎಂದು ಅವರ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ ಪರಮೇಶ್ವರ್, ಎಲ್ಲ ಶಾಸಕರಿಗೆ ಸಚಿವ ಸ್ಥಾನ ನೀಡಲು ಆಗುವುದಿಲ್ಲ. ಆದರೆ ಮಾಲಿಕಯ್ಯ ಗುತ್ತೇದಾರ ಆರು ಸಲ ಶಾಸಕರಾಗಿದ್ದಾರೆ, ಒಮ್ಮೆ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ.ಹೀಗಾಗಿ ಅಭಿವೃದ್ಧಿ ಬಗ್ಗೆ ಒಲವು ಹೊಂದಿರುವ ಅವರು ಸಹಜವಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಸಿಎಂ ಮತ್ತು ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಗುತ್ತೇದಾರ ಬರೆದ ಪತ್ರ ನನಗಿನ್ನೂ ತಲುಪಿಲ್ಲ ಎಂದರು.

ಸರಕಾರ ಸರಿಯಾಗಿ ನಡೆದಿದೆ,ಎಲ್ಲ ಸಚಿವರು ಸರಿಯಾಗಿಯೆ ಕೆಲಸ ಮಾಡುತ್ತಿದ್ದಾರೆ, ಪಕ್ಷದ ಶಾಸಕರು ಯಾವ ಸಚಿವರ ವಿರುದ್ಧವೂ ನನ್ನ ಬಳಿ ದೂರು ನೀಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹೈಕ ಭಾಗದ ಜಿಲ್ಲೆಗಳ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂಬ ವಿಶ್ವಾಸ ತಮಗಿದೆ ಎಂದ ಅವರು, ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಸಂಸದ ಧರ್ಮಸಿಂಗ್ ಸೇರಿದಂತೆ ಸಚಿವರು,ಕಾಂಗ್ರೆಸ್‌ನ ಶಾಸಕರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಇದನ್ನು ಗಮನಿಸಿದ ಮತದಾರರು ಕಾಂಗ್ರೆಸ್ ಪಕ್ಷವನ್ನೇ ಗೆಲ್ಲಿಸಲಿದ್ದಾರೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಚಿವರಾದ ಖಮರುಲ್ ಇಸ್ಲಾಂ, ಶಾಸಕರಾದ ಮಾಲಿಕಯ್ಯ ಗುತ್ತೇದಾರ, ಜಿ.ರಾಮಕೃಷ್ಣ , ಡಾ.ಅಜಯಸಿಂಗ್, ಪ್ರಿಯಾಂಕ್ ಖರ್ಗೆ, ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ, ಜಿಲ್ಲಾಧ್ಯಕ್ಷ ಭಾಗಣ್ಣಗೌಡ ಪಾಟೀಲ್ ಇತರರು ಇದ್ದರು.

ಫೆ 1ಕ್ಕೆ ಗುಲ್ಬರ್ಗಕ್ಕೆ ಸೋನಿಯಾಗಾಂಧಿ

ಸುಮಾರು 1200 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಇಎಸ್‌ಐ ಆಸ್ಪತ್ರೆ, ಮೆಡಿಕಲ್ ಕಾಲೇಜು ಲೋಕಾರ್ಪಣೆ ಮಾಡಲು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು ಫೆ.1ರಂದು ಗುಲ್ಬರ್ಗ ನಗರಕ್ಕೆ ಆಗಮಿಸಲಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ತಿಳಿಸಿದರು.

ಇದರಂಗವಾಗಿ ಹಮ್ಮಿಕೊಂಡಿರುವ ಸಮಾವೇಶಕ್ಕಾಗಿ ನಗರದ ಪೊಲೀಸ್ ಮೈದಾನ ಮತ್ತು ಎನ್.ವಿ.ಮೈದಾನಗಳನ್ನು ವಿಕ್ಷೀಸಿದರು. ಹೈಕ ಭಾಗದ ಅಭಿವೃದ್ಧಿಗಾಗಿ ಜಾರಿಗೆ ತರಲಾಗಿರುವ 371(ಜೆ)ಯೋಜನೆ ರೂವಾರಿ ಆಗಿರುವ ಸೋನಿಯಾ ಗಾಂಧಿ ಅವರನ್ನು ಈ ಭಾಗದ ಜನತೆ ಪರವಾಗಿ ಅಭಿನಂದಿಸಲಾಗುವುದು ಮತ್ತು ಲೋಕಸಭೆ ಚುನಾವಣೆಯ ಪ್ರಚಾರಕ್ಕೆ ಚಾಲನೆ ಎಂಬಂತೆ ಅಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ನೂಕು ನುಗ್ಗಲು , ಸಂಕನೂರ ಕಿಡಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸಂಜೆ ನಡೆದ ಸಭೆಯಲ್ಲಿ ಉಂಟಾದ ನೂಕು ನುಗ್ಗಲಿಗೆ ಜಿಲ್ಲಾ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ ಕಿಡಿ ಕಾರಿದರು.
ಸಂಕನೂರ ಅಧ್ಯಕ್ಷರಾದ ಮೇಲೆ ಪ್ರಥಮ ಭಾರಿಗೆ ಪಕ್ಷದ ಕಚೇರಿಗೆ ಭೇಟಿ ನೀಡಿದ್ದ ಪರಮೇಶ್ವರ ಅವರನ್ನು ಗೌರವಿಸಬೇಕೆಂದು ಸಿದ್ಧರಾಗಿದ್ದ ಭಾಗಣ್ಣಗೌಡರಿಗೆ ವೇದಿಕೆಯಲ್ಲಿ ಹೋಗಲು ಸಹ ಬಿಡಲಿಲ್ಲ. ಅನೇಕರು ಏಕಾಏಕಿ ವೇದಿಕೆಗೆ ನುಗ್ಗಿ ಅಧ್ಯಕ್ಷರನ್ನು ಸನ್ಮಾನಿಸಲು ಮುಂದಾದರು.
ಆಗ ಸುಮಾರು ಹೊತ್ತು ನೂಕು ನುಗ್ಗಲು ಉಂಟಾಯಿತು. ಇದನ್ನು ಸರಿ ಪಡಿಸಲು ಶಾಸಕ ಅಲ್ಲಮಪ್ರಭು ಪಾಟೀಲ್ ಮೈಕ್ ಮುಂದೆ ಬಂದಾಗ ಅವರನ್ನು ಸರಿಸಿದ ಸಂಕನೂರ, ಇದು ಹದ್ದು ಮೀರಿದ ಅಶಿಸ್ತು, ನಾನು ಸಹಿಸುವುದಿಲ್ಲ. ಅವರೆ ಎಲ್ಲ ಮಾಡಿಕೊಳ್ಳಲಿ ಎಂದು ಕಿಡಿ ಕಾರಿದರು. ಅಲ್ಲಿಯೆ ಇದ್ದ ಕೆಲ ಶಾಸಕರಿಗೂ ಹೀಗೆ ಯುವಕರು ನುಗ್ಗಿದರೆ ಹೇಗೆ

ಎಂದು ಪ್ರಶ್ನಿಸಿದರು. ನಂತರ ಪರಮೇಶ್ವರ ಅವರೆ ಮೈಕ್ ಹತ್ತಿರ ಬಂದಾಗ ತಡೆದ ಅಧ್ಯಕ್ಷರು ಮೊದಲು ಸನ್ಮಾನ ಮಾಡಿಕೊಳ್ಳಿ, ನಂತರ ಮಾತಾಡಿ ಎಂದರು. ಇವರ ಕೋಪ ಕಂಡ ಪರಮೇಶ್ವರ ಆಯಿತು ಹಾಗೆ ಆಗಲಿ ಎಂದರು. ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರು , ಮುಖಂಡರು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ