ಆ್ಯಪ್ನಗರ

ಕಲಬುರಗಿ ಬಂದ್‌ ಶಾಂತಿಯುತ

ಕ್ವಿಂಟಾಲ್‌ ತೊಗರಿಗೆ 7,500 ರೂ.ಬೆಂಬಲ ಬೆಲೆ ನಿಗದಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಕಲಬುರಗಿ ಬಂದ್‌ ಶಾಂತಯುತವಾಗಿ ನಡೆಯಿತು.

ವಿಕ ಸುದ್ದಿಲೋಕ 8 Feb 2017, 5:22 pm

ಕಲಬುರಗಿ: ಕ್ವಿಂಟಾಲ್‌ ತೊಗರಿಗೆ 7,500 ರೂ.ಬೆಂಬಲ ಬೆಲೆ ನಿಗದಿ ಮಾಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಕಲಬುರಗಿ ಬಂದ್‌ ಶಾಂತಯುತವಾಗಿ ನಡೆಯಿತು.

ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದ ಹೋರಾಟಗಾರರು ಮತ್ತು ರೈತರು ನಗರದಲ್ಲಿ ಬೃಹತ್‌ ಮೆರವಣಿಗೆ ನಡೆಸಿದರು.

ಹೈದರಾಬಾದ್‌ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಘ, ಕರ್ನಾಟಕ ಪ್ರಾಂತ ರೈತ ಸಂಘ, ಆಲ್‌ ಇಂಡಿಯಾ ಕಿಸಾನ್‌ ಸಭಾ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಕಲಬುರಗಿ, ತೊಗರಿ ಬೆಳೆಗಾರರ ಹೋರಾಟ ಸಮಿತಿ ಚಿತ್ತಾಪುರ, ಆಹಾರ ಧಾನ್ಯ ಮತ್ತು ಬೀಜ ವರ್ತಕರ ಸಂಘಗಳು ಸಂಯುಕ್ತವಾಗಿ ಕರೆ ನೀಡಿದ್ದ ಬಂದ್‌ನಲ್ಲಿ ಕಲಬುರಗಿ, ಚಿತ್ತಾಪುರ, ಚಿಂಚೋಳಿ, ಜೇವರ್ಗಿ, ಸೇಡಂ, ಅಫಜಲಪುರ ತಾಲೂಕುಗಳ ಸಾವಿರಾರು ಸಂಖ್ಯೆಯಲ್ಲಿ ರೈತರು, ಕಾರ್ಮಿಕರು, ಹೋರಾಟಗಾರರು ಭಾಗವಹಿಸಿದ್ದರು.

ಬೆಳಗ್ಗೆಯಿಂದಲೇ ಬಸ್‌ ನಿಲ್ದಾಣದಿಂದ ಗಂಜ್‌ವರೆಗೆ ಬೈಕ್‌ ರಾರ‍ಯಲಿ ನಡೆಸಿದ ಹೋರಾಟಗಾರರರು ಬಂದ್‌ ಬೆಂಬಲಿಸುವಂತೆ ವ್ಯಾಪಾರಸ್ಥರಲ್ಲಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದರು. ಧ್ವನಿವರ್ಧಕದ ಮೂಲಕ ಬಂದ್‌ ಸಹಕರಿಸುವಂತೆ ಪ್ರಚಾರ ನಡೆಸಿದ ಹೋರಾಟಗಾರರು ಬೇಡಿಕೆಗಳಿಗೆ ಆಗ್ರಹಿಸಿ ಘೋಷಣೆ ಕೂಗಿದರು.

ಮಧ್ಯಾಹ್ನ 1-30ಕ್ಕೆ ಗಂಜ್‌ನಲ್ಲಿ ಜಮಾಗೊಂಡ ಸಾವಿರಾರು ರೈತರು ಬೃಹತ್‌ ಜಾಥಾ ನಡೆಸಿದರು. ಗಂಜ್‌ ಪ್ರದೇಶ, ಸೂಪರ್‌ ಮಾರ್ಕೆಟ್‌, ಜಗತ್‌ ಮೂಲಕ ಡಿಸಿ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ಮಾಜಿ ಸಚಿವ ಎಸ್‌.ಕೆ.ಕಾಂತಾ, ಎಚ್‌ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ, ಮೌಲಾಮುಲ್ಲಾ ಮಾತನಾಡಿ, ಸರಕಾರಗಳು ಬೇಡಿಗಳಿಗೆ ತಕ್ಷಣವೇ ಸ್ಪಂದಿಸಬೇಕು, ಇಲ್ಲವಾದರೆ ಇನ್ನಷ್ಟು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಶ್ರೀಮಂತ ಉದನೂರ, ಶರಣಬಸಪ್ಪ ಮಮಶೆಟ್ಟಿ, ಗಂಗಮ್ಮ ಬಿರಾದಾರ, ಅಶೋಕ ಮ್ಯಾಗೇರಿ, ಸುಭಾಷ್‌ ಜೇವರ್ಗಿ, ಪ್ರಕಾಶ ಜಾನೆ, ಮಹಾಲಿಂಗಪ್ಪ ಅಂಬರೀಷ್‌ ಪಾಟೀಲ್‌, ಮಂಜುನಾಥ ಗೌಡ ಸೇರಿದಂತೆ ಅನೇಕರು ಇದ್ದರು.

ಬಿಗಿ ಬಂದೋಬಸ್ತ್‌

ಬಂದ್‌ ನಿಮಿತ್ತ ಪೊಲೀಸ್‌ ಬಂದೋಬಸ್ತ್‌ ಭಾರಿ ಪ್ರಮಾಣದಲ್ಲಿ ಏರ್ಪಡಿಸಲಾಗಿತ್ತು. ಬಸ್‌ ಸಂಚಾರ ಸಂಪೂರ್ಣ ನಿಂತು ಹೋಗಿತ್ತು. ನಗರದ ಹೊರವಲಯದಲ್ಲಿಯೇ ಬಸ್‌ಗಳನ್ನು ನಿಲ್ಲಿಸಲಾಗಿತ್ತು. ನಗರ ಸಾರಿಗೆ ಸಹ ಬಸ್‌ಗಳನ್ನು ರಸ್ತೆಗೆ ಇಳಿಯಗೊಡದ ಕಾರಣ ಸಾರ್ವಜನಿಕರು ಆಟೋರಿಕ್ಷಾಗಳನ್ನು ಅವಲಂಬಿಸಬೇಕಾಯಿತು. ಮಧ್ಯಾಹ್ನ 2.30ರ ಹೊತ್ತಿಗೆ ನೃಪತುಂಗ ತನ್ನ ಸಂಚಾರ ಆರಂಭಿಸಿತು. ನಾಲ್ಕೂ ದಿಕ್ಕಿನ ರಿಂಗ್‌ ರಸ್ತೆ, ನಗರದ ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್‌ ವ್ಯಾನ್‌ ಮತ್ತು ಸಿಬ್ಬಂದಿ ರಕ್ಷಣೆಗೆ ಸನ್ನದ್ಧ ಸ್ಥಿತಿಯಲ್ಲಿ ನಿಂತಿದ್ದರು. ರೈತ ಮುಖಂಡರು ಹಾಗೂ ರೈತರ ಬೃಹತ್‌ ಪ್ರತಿಭಟನಾ ಮೆರವಣಿಗೆಗೆ ಪೊಲೀಸರು ಬಿಲ್‌ಕುಲ್‌ ಸಾಥ್‌ ನೀಡಿದಂತೆ ಗೋಚರಿಸುವಷ್ಟರ ಮಟ್ಟಿಗೆ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಬೇಡಿಕೆಗಳು ಹೀಗಿವೆ

*ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತಿರುವ ಬೇಳೆಕಾಳುಗಳ ಮೇಲೆ ಶೇ.30ರಷ್ಟು ತೆರಿಗೆ ವಿಧಿಸಬೇಕು.

*ತೊಗರಿ ಕೃಷಿ ,ಉದ್ದಿಮೆ ಮತ್ತು ವ್ಯಾಪಾರ ಉಳಿಸಬೇಕು.

* ತೊಗರಿ ಮಂಡಳಿಯನ್ನು ಕೆಎಂಎಫ್‌ ಮಾದರಿಯಲ್ಲಿ ಪುನರ್‌ ಸಂಘಟಿಸಬೇಕು.

* ರೈತರ ಸಾಲ ಸಂಪೂರ್ಣವಾಗಿ ಮನ್ನಾ ಮಾಡಬೇಕು.

* ತೊಗರಿಗೆ ರಾಜ್ಯ ಸರಕಾರದಿಂದ ರೂ. 1000 ಬೆಂಬಲ ಬೆಲೆ ದೊರಕಿಸಿಕೊಡುವ ಸಂಸದ ಮಲ್ಲಿಕಾರ್ಜುನ ಖರ್ಗೆ ತಮ್ಮ ಮಾತು ಉಳಿಸಿಕೊಳ್ಳಬೇಕು.

* ಬೆಳೆ ವಿಮೆ ಮಂಜೂರು ಮಾಡಬೇಕು ಮತ್ತು ಅತಿವೃಷ್ಟಿಯಿಂದ ಹಾಳಾದ ಪ್ರತಿ ಎಕರೆ ಬೆಳೆಗೆ 15 ಸಾವಿರ ರೂ.ಪರಿಹಾರ ಧನ ನೀಡಬೇಕು.

* ಮಳೆಯಿಂದ ಹಾಳಾದ ಜಮೀನಿನ ಬದುಗಳನ್ನು ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿಕೊಡಬೇಕು.

ಬಸ್‌ ಸ್ಥಗಿತ; ಜನ ಹೈರಾಣ

ಕಲಬುರಗಿ ಬಂದ್‌ ಕರೆ ನೀಡಿದ್ದರೂ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು.

ಮುಂಜಾಗ್ರತಾ ಕ್ರಮವಾಗಿ ಬಸ್‌ ಸಂಚಾರ ಸಂಜೆಯವರೆಗೆ ವಾಪಸ್‌ ಪಡೆಯಲಾಗಿತ್ತು. ರಸ್ತೆಗಳಲ್ಲಿ ಎಂದಿನಂತೆ ವಾಹನಗಳು ಸಂಚರಿಸಿದವು. ಜಿಲ್ಲೆಯ ವಿವಿಧ ತಾಲೂಕುಗಳಿಂದ ನಗರಕ್ಕೆ ಆಗಮಿಸುವ ಮತ್ತು ಹಳ್ಳಿಗಳಿಗೆ ಹೋಗಿ ಬರುವ ಪ್ರಯಾಣಿಕರಿಗೆ, ವ್ಯಾಪಾರಸ್ಥರಿಗೆ ಮತ್ತು ಸರಕಾರಿ ನೌಕರರು ಬಸ್‌ ಸಂಚಾರ ಇಲ್ಲದ ಕಾರಣ ತೊಂದರೆ ಅನುಭವಿಸಿದರು. ಹೊರವಲಯದಲ್ಲಿಯೇ ಬಸ್‌ಗಳನ್ನು ನಿಲ್ಲಿಸಿದ ಕಾರಣ ಪ್ರಯಾಣಿಕರು ಪರದಾಡಬೇಕಾಯಿತು.

ಕೋರ್ಟ್‌ ಕಲಾಪ ಬಹಿಷ್ಕಾರ

ಪ್ರತಿ ಕ್ವಿಂಟಾಲ್‌ ತೊಗರಿಗೆ 7500 ರೂ.ಬೆಂಬಲ ನೀಡಬೇಕೆಂಬ ಬೇಡಿಕೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಮಂಗಳವಾರ ಕರೆ ನೀಡಿದ್ದ ಕಲಬುರಗಿ ಬಂದ್‌ಗೆ ಜಿಲ್ಲಾ ವಕೀಲರ ಸಂಘ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ ಕೋರ್ಟ್‌ ಕಲಾಪಗಳನ್ನು ಬಹಿಷ್ಕರಿಸಿತ್ತು.

ಜಿಲ್ಲೆಯ ಜೀವನಾಡಿ ತೊಗರಿಗೆ 7500 ರೂ.ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಬಿ.ಆರ್‌.ಪಾಟೀಲ್‌ ಆಗ್ರಹಿಸಿದರು. ಪದಾಧಿಕಾರಿಗಳಾದ ಶಿವಶಂಕರ ಕೋರವಾರ, ಮಲ್ಲಿಕಾರ್ಜುನ ಸುಲ್ತಾನಪುರ, ಶ್ರೀಶೈಲ ಜಮಾದಾರ ಸೇರಿದಂತೆ ಇನ್ನಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ