ಆ್ಯಪ್ನಗರ

ಕಲಬುರಗಿಯಲ್ಲಿ ಪ್ರಾಚ್ಯವಸ್ತು ಇಲಾಖೆ ಕಚೇರಿ ಶೀಘ್ರ: ಪ್ರಿಯಾಂಕ್‌

ಹೈದರಾಬಾದ್‌ ಕರ್ನಾಟಕದ ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕಲಬುರಗಿಯಲ್ಲಿ ಶೀಘ್ರವೇ ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಇಲಾಖೆಯ ಪ್ರಾದೇಶಿಕ ಕಚೇರಿ ಆರಂಭಿಸಲಾಗುವುದು ಎಂದು ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ವಿಕ ಸುದ್ದಿಲೋಕ 28 Jul 2016, 5:06 pm

ಕಲಬುರಗಿ: ಹೈದರಾಬಾದ್‌ ಕರ್ನಾಟಕದ ಐತಿಹಾಸಿಕ ಸ್ಥಳಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಕಲಬುರಗಿಯಲ್ಲಿ ಶೀಘ್ರವೇ ಪ್ರಾಚ್ಯವಸ್ತು ಸರ್ವೇಕ್ಷಣಾಲಯ ಇಲಾಖೆಯ ಪ್ರಾದೇಶಿಕ ಕಚೇರಿ ಆರಂಭಿಸಲಾಗುವುದು ಎಂದು ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಬುಧವಾರ ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, '' ಕಲಬುರಗಿಯಲ್ಲಿ ಈ ಕಚೇರಿ ಆರಂಭಿಸಲು ಅಗತ್ಯವಾದ ಪ್ರಾಥಮಿಕ ಹಂತದ ಕೆಲಸಗಳನ್ನು ಕೈಗೊಳ್ಳಲಾಗಿದೆ. ಆದಷ್ಟು ಶೀಘ್ರವೇ ಈ ಕಚೇರಿ ಆರಂಭವಾಗಲಿದೆ,'' ಎಂದರು.

ಸಮಿತಿ ರಚನೆ:

ಹೈಕ ಭಾಗದ ಪ್ರವಾಸಿ ಕೌನ್ಸಿಲ್‌ ಶೀಘ್ರವೇ ಅಸ್ತಿತ್ವಕ್ಕೆ ಬರಲಿದೆ. ಅರ್ಬನ್‌ ಪ್ಲಾನರ್‌, ಇಂಟಾಕ್‌, ಇತಿಹಾಸ ತಜ್ಞರು, ವಿಶ್ವವಿದ್ಯಾಲಯದಲ್ಲಿರುವ ಇತಿಹಾಸ ಪ್ರಾಧ್ಯಾಪಕರು, ವಾಸ್ತುಶಿಲ್ಪಿಗಳು, ಕಾನೂನು ಸಲಹೆಗಾರರು, ಪ್ರವಾಸೋದ್ಯಮ ನಿರ್ದೇಶಕರು, ಎಚ್‌ಕೆಆರ್‌ಡಿಬಿ ಕಾರ್ಯದರ್ಶಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುವುದು. ಪ್ರವಾಸೋದ್ಯಮ ಸಚಿವರೇ ಇದರ ಅಧ್ಯಕ್ಷರಾಗಿರಲಿದ್ದಾರೆ. ನಾಲ್ಕು ತಿಂಗಳಲ್ಲಿ ಈ ಸಮಿತಿ ವರದಿ ನೀಡಲಿದೆ. ಪ್ರವಾಸೋದ್ಯಮ ಸ್ಥಳಗಳನ್ನು ಗುರುತಿಸುವುದು, ಅಭಿವೃದ್ಧಿಪಡಿಸಿ ಸಂರಕ್ಷಿಸುವ ಬಗ್ಗೆ ಇದು ಸಲಹೆ ನೀಡಲಿದೆ. ಇದರ ಆಧಾರದ ಮೇಲೆ ಡಿಪಿಆರ್‌ ತಯಾರಿಸಿ ಯೋಜನೆ ಅನುಷ್ಠಾನಗೊಳಿಸಲಾಗುವುದು ಎಂದು ಪ್ರಿಯಾಂಕ್‌ ಸ್ಪಷ್ಟಪಡಿಸಿದರು.

ಹೈಕ ಭಾಗದಲ್ಲಿ ಧಾರ್ಮಿಕ, ಐತಿಹಾಸಿಕ, ಪರಿಸರ ಪ್ರವಾಸೋದ್ಯಮದ ಬಗ್ಗೆ ಸಮಿತಿ ವರದಿ ನೀಡಲಿದೆ. ಕರಾವಳಿ ಪ್ರವಾಸೋದ್ಯಮಕ್ಕೆ ಈಗಾಗಲೇ 100 ಕೋಟಿ ರೂ. ಸಮಗ್ರ ಯೋಜನಾ ವರದಿ ಸಿದ್ಧವಾಗಿದ್ದು, ಯೋಜನೆಯೂ ಜಾರಿಯಾಗಿದೆ. ಇದಕ್ಕಾಗಿ ಮಂಗಳೂರು, ಉಳ್ಳಾಲ, ಓಂ ಬೀಚ್‌ ಸೇರಿದಂತೆ 23 ಸ್ಥಳಗಳ್ನು ಗುರುತಿಸಲಾಗಿದೆ ಎಂದರು.

ಸಿಎಜಿ ವರದಿ:

ರಾಜ್ಯದ ಪ್ರವಾಸೋದ್ಯಮ ಪ್ರಚಾರಕ್ಕೆ ಕೋಟ್ಯಂತರ ರೂ.ಖರ್ಚು ಮಾಡಲಾಗಿದೆ, ಆದರೆ ಅದಕ್ಕೆ ತಕ್ಕಂತೆ ಬಂಡವಾಳ ಹರಿದು ಬಂದಿಲ್ಲ ಎಂಬ ಸಿಎಜಿ ವರದಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದಿನ ಬಿಜೆಪಿ ಸರಕಾರದಲ್ಲಿ ಮಾಡಿದ ದುಂದುವೆಚ್ಚದ ಕರಿ ನೆರಳು ನಮ್ಮ ಸರಕಾರದ ಮೇಲೆ ಬಿದ್ದಿದೆ. ಈ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಾಗಿ ಹೂಡಿಕೆದಾರರ ಸಮಾವೇಶದಲ್ಲಿ ಹೇಳಿದ್ದ ಆಗಿನ ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಹೂಡಿಕೆಯೇ ಮಾಡಿಲ್ಲಎಂದರು.

ತೊಗರಿ ಟಾನಿಕ್‌:

ಪ್ರವಾಸೋದ್ಯಮದಲ್ಲಿ ಟೂರಿಸಂನಲ್ಲಿ ಕರ್ನಾಟಕ ರಾಜ್ಯ 3ನೇ ಸ್ಥಾನದಲ್ಲಿದ್ದು, ಅದನ್ನು ಮೊದಲ ಸ್ಥಾನಕ್ಕೆ ಏರಿಸಲಾಗುವುದು. ಫಾರಿನ್‌ ಟೂರಿಸಂನಲ್ಲಿ 9ನೇ ಸ್ಥಾನದಲ್ಲಿದ್ದು, ಅದನ್ನು 5ಕ್ಕೆ ತರಲಾಗುವುದು. ತೊಗರಿ ಉತ್ಪಾದನೆ ಹೆಚ್ಚಿಸುವುದಕ್ಕಾಗಿ ರಾಯಚೂರು ಕೃಷಿ ವಿವಿಗೆ ಜೈವಿಕ ತಂತ್ರಜ್ಞಾನ ಯೋಜನೆ ಅಡಿ ಪ್ರಸ್ತಾವನೆ ಪಡೆಯದು ಹಣಕಾಸು ನೆರವು ನೀಡಲಾಗುವುದು. ಈ ಬಗ್ಗೆ ಕುಲಪತಿಗೆ ಸೂಚನೆ ನೀಡಲಾಗಿದೆ ಎಂದು ಪ್ರಿಯಾಂಕ್‌ ತಿಳಿಸಿದರು.

ಹೈಕ ಭಾಗದಲ್ಲಿ ಪ್ರವಾಸಿ ತಾಣಗಳಿಗೆ ಒಂದು ಬಾರಿ ಅನುದಾನ ನೀಡಿದರೆ ಸಾಲದು, ಪ್ರತಿ ವರ್ಷವೂ ನಿರ್ವಹಣೆಗಾಗಿ ಹಣ ನೀಡಬೇಕು. ಮಠಗಳು, ಯಾತ್ರಿನಿವಾಸಕ್ಕೆ ಹಣ ನೀಡಿದರೆ ಆಗಲ್ಲಎಂದರು. ಈ ಭಾಗದ ಎಂಜಿನಿಯರ್‌ ಓದಿರುವ ವಿದ್ಯಾರ್ಥಿಗಳಿಗೆ ಕೆಲಸ ಕೊಡುವುದಕ್ಕೆ ಆದ್ಯತೆ ನೀಡಲಾಗಿದೆ. ಪಿಯುಸಿ ಮತ್ತು ಪದವಿ ಡ್ರಾಪ್‌ಔಟ್‌ ಆದವರಿಗೆ ಕೆಲಸ ಕೊಡಲಾಗುವುದು ಎಂದರು.

ಪ್ರವಾಸಿ ಟ್ಯಾಕ್ಸಿಗಳ ಹೆಚ್ಚಳ

ಪ್ರವಾಸಿ ಟ್ಯಾಕ್ಸಿ ನೀಡುವ ಬಗ್ಗೆ ಮಾರ್ಗಸೂಚಿಯಲ್ಲಿ ಏಕರೂಪತೆ ಇರಲಿಲ್ಲ. ಟ್ಯಾಕ್ಸಿ ಪಡೆದವರು ಇನ್ನೊಬ್ಬರಿಗೆ ಮಾರಾಟ ಮಾಡಿರುವ, ಬಾಡಿಗೆ ನೀಡಿರುವ ನಿದರ್ಶನಗಳೂ ಕಂಡು ಬಂದಿವೆ. ಹೀಗಾಗಿ ಅದನ್ನು ಸದ್ಯಕ್ಕೆ ತಡೆಹಿಡಿಯಲಾಗಿದ್ದು, ಶೀಘ್ರವೇ ಏಕರೂಪ ಮಾರ್ಗಸೂಚಿ ಹೊರಡಿಸಲಾಗುವುದು. ವಯೋಮಿತಿ ಮತ್ತು ಮೆರಿಟ್‌ ಆಧರಿಸಿ ನಿರುದ್ಯೋಗಿ ಯುವಕರಿಗೆ ಈ ವರ್ಷ 4000ಟ್ಯಾಕ್ಸಿ ಕಾರು ನೀಡಲಾಗುವುದು ಎಂದು ಸಚಿವರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ