Please enable javascript.ದೈನಂದಿನ ಆಡಳಿತಕ್ಕೆ ಇ-ಟೆಲಿಗ್ರಾಂ ಆಪ್ ಬಳಕೆ - ದೈನಂದಿನ ಆಡಳಿತಕ್ಕೆ ಇ-ಟೆಲಿಗ್ರಾಂ ಆಪ್ ಬಳಕೆ - Vijay Karnataka

ದೈನಂದಿನ ಆಡಳಿತಕ್ಕೆ ಇ-ಟೆಲಿಗ್ರಾಂ ಆಪ್ ಬಳಕೆ

Vijaya Karnataka Web 24 Oct 2014, 4:32 am
Subscribe

ಜಗತ್ತಿನ ಸಂಪರ್ಕ ವ್ಯವಸ್ಥೆಯ ಆರಂಭದಲ್ಲಿ ಕ್ರಾಂತಿಯುಂಟು ಮಾಡಿದ್ದ ಟೆಲಿಗ್ರಾಂ ಅಧಿಕೃತವಾಗಿ ಮರೆಯಾಗಿ ವರ್ಷ ತುಂಬಿದೆ. ಇದರ ಬೆನ್ನಲ್ಲೇ ವಾಟ್ಸಪ್ ಮಾದರಿಯ ಇ- ಟೆಲಿಗ್ರಾಂ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಹಿರಿಯ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ ದೈನಂದಿನ ಆಡಳಿತದಲ್ಲಿ ಹೊಸ ಶಕೆ ಆರಂಭಿಸಿದ್ದಾರೆ.

ದೈನಂದಿನ ಆಡಳಿತಕ್ಕೆ ಇ-ಟೆಲಿಗ್ರಾಂ ಆಪ್ ಬಳಕೆ
-ಮಣಿವಣ್ಣನ್ ಕ್ರಮದಿಂದ ಫಟಾಫಟ್ ಮಾಹಿತಿ ವಿನಿಮಯ-

* ವಿ ಸಿ ಪ್ರಸನ್ನ ಶಿವಮೊಗ್ಗ
ಜಗತ್ತಿನ ಸಂಪರ್ಕ ವ್ಯವಸ್ಥೆಯ ಆರಂಭದಲ್ಲಿ ಕ್ರಾಂತಿಯುಂಟು ಮಾಡಿದ್ದ ಟೆಲಿಗ್ರಾಂ ಅಧಿಕೃತವಾಗಿ ಮರೆಯಾಗಿ ವರ್ಷ ತುಂಬಿದೆ. ಇದರ ಬೆನ್ನಲ್ಲೇ ವಾಟ್ಸಪ್ ಮಾದರಿಯ ಇ- ಟೆಲಿಗ್ರಾಂ ವ್ಯವಸ್ಥೆ ಜಾರಿಗೊಳಿಸುವ ಮೂಲಕ ಹಿರಿಯ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ ದೈನಂದಿನ ಆಡಳಿತದಲ್ಲಿ ಹೊಸ ಶಕೆ ಆರಂಭಿಸಿದ್ದಾರೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕರಾಗಿ ಜುಲೈನಲ್ಲಿ ಅಧಿಕಾರ ವಹಿಸಿಕೊಂಡ ಮಣಿವಣ್ಣನ್, ಸದ್ದಿಲ್ಲದೆ ಮಂಡಳಿಯಲ್ಲಿ ಇ-ಟೆಲಿಗ್ರಾಂ ಸಂಪರ್ಕ ವ್ಯವಸ್ಥೆಯನ್ನು ಆ.1ರಿಂದ ಆರಂಭಿಸುವ ಮೂಲಕ ಹೊಸತನಕ್ಕೆ ನಾಂದಿ ಹಾಡಿದ್ದಾರೆ.

ಈ ತನಕ ತಾವು ಕರ್ತವ್ಯ ನಿರ್ವಹಿಸಿದ ಕಡೆಗಳಲ್ಲಿ ಸದ್ದಿಲ್ಲದೆ ಹೊಸ ರೀತಿಯ ಆಲೋಚನೆ, ನೂತನ ತಂತ್ರಜ್ಞಾನ, ಆಡಳಿತ ಸುಧಾರಣೆ ಮುಂತಾದ ಹಲವು ಕ್ರಮಗಳ ಮೂಲಕ ಇತರೆ ಐಎಎಸ್ ಅಧಿಕಾರಿಗಳಿಗಿಂತ ತಾವು ಭಿನ್ನ ಎಂದು ಗುರುತಿಸಿಕೊಂಡಿರುವ ಮಣಿವಣ್ಣನ್, ಇದೀಗ ಕೆಯುಡಬ್ಲ್ಯೂಎಸ್‌ಎಸ್‌ಬಿಯಲ್ಲೂ ಇಂತಹುದೇ ಮೌನ ಕ್ರಾಂತಿ ಶುರು ಮಾಡಿದ್ದಾರೆ.

ಏನಿದು ಇ-ಟೆಲಿಗ್ರಾಂ:
ಇಂಟರ್‌ನೆಟ್‌ನಲ್ಲಿ ಉಚಿತ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಟೆಲಿಗ್ರಾಂ ಎಂಬ ಮೆಸೆಂಬರ್ ಅಪ್ಲಿಕೇಷನ್ ಲಭ್ಯವಿದೆ. ನೆಟ್ ಸಂಪರ್ಕ ಹೊಂದಿರುವ ಸ್ಮಾರ್ಟ್ ಫೋನ್ ಇದ್ದಲ್ಲಿ ಈ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಕಿರುತಂತ್ರಾಂಶ ಆ್ಯಂಡ್ರಾಯ್ಡ್, ವಿಂಡೋಸ್ ಫೋನ್, ಆ್ಯಪಲ್ ಐಫೋನ್, ಐಪ್ಯಾಡ್ ಮಾತ್ರವಲ್ಲದೆ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳಲ್ಲಿಯೂ ಕೆಲಸ ಮಾಡುತ್ತದೆ. ಇದನ್ನೇ ಮಣಿವಣ್ಣನ್ ಯಶಸ್ವಿಯಾಗಿ ಬಳಸಿಕೊಳ್ಳುವ ಮೂಲಕ ಮಂಡಳಿಯ ದೈನಂದಿನ ವ್ಯವಹಾರವನ್ನು ಸಲೀಸು ಮಾಡಿದ್ದಾರೆ.

ತಲಾ 200 ಮಂದಿಯ ಮೂರು ಗುಂಪು ರಚಿಸಲಾಗಿದೆ. ಟೀಮ್ ಕೆಯುಡಬ್ಲ್ಯೂಎಸ್‌ಎಸ್‌ಬಿ ಎಂಬ 1ನೇ ಗುಂಪು ಮಂಡಳಿಯ ಆಡಳಿತ ವಿಷಯಗಳನ್ನು ಒಳಗೊಂಡಿದೆ. ಆಡಳಿತಕ್ಕೆ ಸಂಬಂಧಿಸಿ ಮಾಹಿತಿಗಳನ್ನು 200 ಜನ ಅಧಿಕಾರಿಗಳು ಏಕಕಾಲಕ್ಕೆ ಪರಸ್ಪರ ಹಂಚಿಕೊಂಡು ಪ್ರತಿಕ್ರಿಯೆ ನೀಡಬಹುದು.

ಪಾಜೆಕ್ಟ್ ಕೆಯೂಡಬ್ಲ್ಯೂಎಸ್‌ಎಸ್‌ಬಿ ಎಂಬ 2ನೇ ಗುಂಪಿನಲ್ಲಿ ಮಂಡಳಿಯ ಕೆಲಸಗಳನ್ನು ನಿರ್ವಹಿಸುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಬಹುದು.

ಕಾರ್ಯಾಚರಣೆ ಮತ್ತು ನಿರ್ವಹಣೆ (ಒ ಆ್ಯಂಡ್ ಎಂ) ಎಂಬ 3ನೇ ಗುಂಪಿನಲ್ಲಿ ಕುಡಿಯುವ ನೀರಿನ ನಿರ್ವಹಣೆಗೆ ಸಂಬಂಧಿಸಿ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳ ಮೇಯರ್ ಅಥವಾ ಅಧ್ಯಕ್ಷರು, ಆಯುಕ್ತ ಅಥವಾ ಮುಖ್ಯ ಆಡಳಿತಾಧಿಕಾರಿಗಳು, ಕಿರಿಯ ಎಂಜಿನಿಯರ್‌ಗಳು, ಅಷ್ಟೇ ಏಕೆ, ನೀರುಗಂಟಿ (ವಾಟರ್‌ಮ್ಯಾನ್) ಸಹ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಬಹುದು. ಈ ಮೂರೂ ಗುಂಪುಗಳಲ್ಲಿ ಯಾರು ಬೇಕಾದರೂ ಮಂಡಳಿಯ ಕೆಲಸ, ಅಧಿಕಾರಶಾಹಿಯ ವಿಳಂಬ ನೀತಿ, ಯೋಜನೆಯ ಅನುಷ್ಠಾನದಲ್ಲಿ ಆಗುತ್ತಿರುವ ತೊಡಕುಗಳು, ಯೋಜನೆ ಪ್ರಗತಿ ಹೀಗೆ ಯಾವುದೇ ವಿಷಯವನ್ನು ಭಾವಚಿತ್ರ ಸಮೇತ ವ್ಯವಸ್ಥಾಪಕ ನಿರ್ದೇಶಕರಾದ ಮಣಿವಣ್ಣನ್ ಅವರಿಗೆ ಇ-ಟೆಲಿಗ್ರಾಂ ಸಂದೇಶದ ಮೂಲಕ ತಿಳಿಸಬಹುದು.

ಪಾರದರ್ಶಕವಾದ ಈ ವ್ಯವಸ್ಥೆಯಲ್ಲಿ ಮಣಿವಣ್ಣನ್ ಅವರು ಯೋಜನೆ ಅನುಷ್ಠಾನ ಹಾಗೂ ಆಡಳಿತಕ್ಕೆ ಸಂಬಂಧಿಸಿ ನೀಡುವ ಸೂಚನೆ, ಕೇಳುವ ಪ್ರಶ್ನೆ, ಇದಕ್ಕೆ ಅಧಿಕಾರಿಗಳು ಭಾವಚಿತ್ರ (ಪ್ರೊಫೈಲ್) ಸಮೇತ ನೀಡುವ ಉತ್ತರ ಪ್ರತಿ ಕ್ಷಣಕ್ಕೂ ಆಯಾ ಗುಂಪಿನ ಪ್ರತಿಯೊಬ್ಬರಿಗೂ ತಿಳಿಯುತ್ತದೆ. ಪ್ರತಿದಿನ ಒಂದು ಗುಂಪಿನಲ್ಲಿ ಸರಾಸರಿ 300ರಿಂದ 400 ಟೆಲಿಗ್ರಾಂ ಸಂದೇಶಗಳು ಹರಿದಾಡುತ್ತಿದ್ದು, ಅಧಿಕಾರಿಗಳು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ವೇದಿಕೆ ಸಿಕ್ಕಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ವಿಕಗೆ ತಿಳಿಸಿದರು.

ವೆಚ್ಚ ಉಳಿತಾಯ
ಹೆಚ್ಚಿನ ಖರ್ಚಿಲ್ಲದೆ ಆಡಳಿತದಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿರುವ ಇ-ಟೆಲಿಗ್ರಾಂ ವ್ಯವಸ್ಥೆ ಜಾರಿಯಿಂದ ಮಂಡಳಿಯ ಖರ್ಚು ವೆಚ್ಚದಲ್ಲಿ ಸಾಕಷ್ಟು ಉಳಿತಾಯವಾಗಿದೆ. ಪ್ರತಿಯೊಂದು ವಿಷಯವೂ ಟೆಲಿಗ್ರಾಂ ಮೆಸೆಂಜರ್ ಆ್ಯಫ್ ಮೂಲಕ ರವಾನೆಯಾಗುವುದರಿಂದ ಸ್ಥಿರ ದೂರವಾಣಿ ಹಾಗೂ ಮೊಬೈಲ್ ಕರೆಗಳ ಬಳಕೆ ಬಹುತೇಕ ನಿಂತು ಹೋಗಿದೆ. ಇಂಟರ್‌ನೆಟ್ ಖರ್ಚನ್ನು ಮಂಡಳಿಯೇ ಭರಿಸುತ್ತಿದೆ. ನಿವೃತ್ತಿ ಅಂಚಿನಲ್ಲಿರುವ ಅಧಿಕಾರಿಗಳು ಸಹ ಇ-ಟೆಲಿಗ್ರಾಂಗೆ ಪ್ರತಿಕ್ರಿಯಿಸುತ್ತಿದ್ದಾರೆ. ದಿನದ 24 ಗಂಟೆ ನಿರಂತರವಾಗಿ ಹರಿದಾಡುವ ಟೆಲಿಗ್ರಾಂನಿಂದ ರಾಜ್ಯದ ಯಾವುದೇ ಮೂಲೆಯಲ್ಲಿ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಗೆ ಸಂಬಂಧಿಸಿದಂತೆ ಏನೇ ಬೆಳವಣಿಗೆ ಆದರೂ ಎಲ್ಲ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಪ್ರೊಫೈಲ್ ಸಮೇತ ತಿಳಿಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅಧಿಕಾರಿಗಳು ರಾಜ್ಯದ ವಿವಿಧೆಡೆಯಿಂದ ಬೆಂಗಳೂರಿಗೆ ಸಭೆ ಹೆಸರಿನಲ್ಲಿ ಹೋಗಿ ಬರಲು ಪಡೆಯುತ್ತಿದ್ದ ಟಿಎ, ಡಿಎ ವೆಚ್ಚ ಉಳಿಯುತ್ತಿದೆ.

ನಿಯಂತ್ರಣ ಕೊಠಡಿ ಸ್ಥಾಪನೆ
ಇ-ಟೆಲಿಗ್ರಾಂ ಜಾರಿಯಿಂದ ಮಂಡಳಿಯ ದೈನಂದಿನ ಆಡಳಿತದಲ್ಲಿ ಹಲವಾರು ಸುಧಾರಣೆ ಆಗಿರುವುದರಿಂದ ಸಂತಸಗೊಂಡಿರುವ ಮಣಿವಣ್ಣನ್, ಇದೀಗ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೆಂಗಳೂರಿನಲ್ಲಿ ವಾರದ 24 ಗಂಟೆಯೂ ಕಾರ್ಯ ನಿರ್ವಹಿಸುವಂಥ ನಿಯಂತ್ರಣ ಕೊಠಡಿ ಸ್ಥಾಪಿಸುವ ಚಿಂತನೆ ನಡೆಸಿದ್ದಾರೆ.

ಶೀಘ್ರವೇ ಜಾರಿಗೆ ಬರಲಿರುವ ಈ ವ್ಯವಸ್ಥೆಯಿಂದ ರಾಜ್ಯದ ಯಾವುದೇ ನಗರ ಹಾಗೂ ಪಟ್ಟಣ ಪ್ರದೇಶದ ಸಾರ್ವಜನಿಕರು ಕುಡಿಯುವ ನೀರು ಹಾಗೂ ಒಳಚರಂಡಿಗೆ ಸಂಬಂಧಿಸಿದ ದೂರುಗಳನ್ನು ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡುವ ಮೂಲಕ ದಾಖಲಿಸಬಹುದು. ದೂರು ದಾಖಲಾದ ತಕ್ಷಣ ಸಂಬಂಧಪಟ್ಟ ಅಧಿಕಾರಿಗೆ ಇ-ಟೆಲಿಗ್ರಾಂ ಸಂದೇಶ ರವಾನೆಯಾಗಿ ಸಮಸ್ಯೆ ಇತ್ಯರ್ಥವಾದ ಬಗ್ಗೆ ದೂರುದಾರರಿಗೆ ಮಾಹಿತಿ ಲಭಿಸಲಿದೆ.

ಒಟ್ಟಿನಲ್ಲಿ ರಾಜ್ಯ ಸರಕಾರದ ಇತರೆ ಇಲಾಖೆಗಳು ಅನುಸರಿಸಬಹುದಾದ ಹಾಗೂ ಖಾಸಗಿಯಾಗಿ ಯಾವುದೇ ಆಸಕ್ತರ ಗುಂಪು ಬಳಸಬಹುದಾದ ಇ-ಟೆಲಿಗ್ರಾಂ ವ್ಯವಸ್ಥೆ ಜಾರಿಯಿಂದ ಕೆಯೂಡಬ್ಲ್ಯೂಎಸ್‌ಎಸ್‌ಬಿನಲ್ಲಿ ನಿಜವಾದ ಇ-ಆಡಳಿತ ಆರಂಭಗೊಂಡಿರುವುದು ಸಂತಸದ ವಿಷಯ.
-----

ತಂತ್ರಜ್ಞಾನದ ವಿಷಯದಲ್ಲಿ ಜನರು ನಮಗಿಂತ ಮುಂದಿದ್ದಾರೆ. ಆದ್ದರಿಂದ ಜನರ ಅವಶ್ಯಕತೆಗಳಿಗೆ ಅನುಗುಣವಾಗಿ ಕೆಲಸ ಮಾಡುವ ಮೂಲಕ ಅವರ ವೇಗದೊಂದಿಗೆ ಹೆಜ್ಜೆ ಹಾಕಬೇಕು. ಇಲ್ಲದಿದ್ದರೆ ನಾವು ಹಿಂದುಳಿಯುತ್ತೇವೆ. ಅದಕ್ಕಾಗಿಯೇ ಫೇಸ್ ಬುಕ್, ಇ-ಟೆಲಿಗ್ರಾಂ ಮತ್ತಿತರ ವ್ಯವಸ್ಥೆ ಜಾರಿಗೆ ಬಂದಿದೆ. ಇದರಿಂದ ಕಡತಗಳು ಅನಗತ್ಯವಾಗಿ ವಾರಗಟ್ಟಲೆ ಓಡಾಡುವುದು ತಪ್ಪುತ್ತದೆ. ವೇಗವಾಗಿ ಕೆಲಸವಾಗುತ್ತಿದ್ದು, ಉತ್ತಮ ಫಲಿತಾಂಶ ಸಿಕ್ಕಿದೆ. ಇದೇ ರೀತಿ ಕುಡಿಯುವ ನೀರು ಹಾಗೂ ಒಳಚರಂಡಿ ಸಂಬಂಧಿತ ದೂರು ದಾಖಲೆಗೆ ಇನ್ನು 1 ತಿಂಗಳಲ್ಲಿ ಬೆಂಗಳೂರು ಹೊರತುಪಡಿಸಿ ರಾಜ್ಯದ 213 ಸ್ಥಳೀಯ ಸಂಸ್ಥೆಗಳಿಗೆ ಅನ್ವಯವಾಗುವಂತೆ ಒಂದೇ ಸಂಖ್ಯೆ ನೀಡಲಾಗುವುದು. ಇದರಿಂದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಏನೇ ಆದರೂ ಸಿಟಿಜನ್ ಫಸ್ಟ್ ಎಂಬುದು ನಮ್ಮ ಧ್ಯೇಯ.
-ಪಿ.ಮಣ್ಣಿವಣ್ಣನ್, ಕೆಯೂಡಬ್ಲ್ಯೂಎಸ್‌ಎಸ್‌ಬಿ ವ್ಯವಸ್ಥಾಪಕ ನಿರ್ದೇಶಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ