Please enable javascript.ಕೆಪಿಎಸ್‌ಸಿಗೆ ನೇಮಕ: ತಜ್ಞರ ಸಲಹೆ ಪಡೆಯಲು ನಿರ್ಧಾರ - ಕೆಪಿಎಸ್‌ಸಿಗೆ ನೇಮಕ: ತಜ್ಞರ ಸಲಹೆ ಪಡೆಯಲು ನಿರ್ಧಾರ - Vijay Karnataka

ಕೆಪಿಎಸ್‌ಸಿಗೆ ನೇಮಕ: ತಜ್ಞರ ಸಲಹೆ ಪಡೆಯಲು ನಿರ್ಧಾರ

Vijaya Karnataka Web 3 Jan 2015, 10:11 am
Subscribe

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಹುದ್ದೆಗೆ ರಾಜಕೀಯ ಹಾಗೂ ಕ್ರಿಮಿನಲ್ ಹಿನ್ನೆಲೆ ಇರುವವರನ್ನು ಶಿಫಾರಸು ಮಾಡಿರುವ ಸರಕಾರದ ಕ್ರಮ ಸಾರ್ವಜನಿಕ ವಲಯದಲ್ಲಿ ಕಟು ಟೀಕೆಗೊಳಗಾಗಿರುವ ಮಧ್ಯೆ ಸರಕಾರದ ಶಿಫಾರಸನ್ನು ಪುರಸ್ಕರಿಸಬೇಕೇ, ಬೇಡವೇ ಎಂಬ ಜಿಜ್ಞಾಸೆಯಲ್ಲಿರುವ ರಾಜ್ಯಪಾಲರು ಒಂದೆರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಕೆಪಿಎಸ್‌ಸಿಗೆ ನೇಮಕ: ತಜ್ಞರ ಸಲಹೆ ಪಡೆಯಲು ನಿರ್ಧಾರ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರ ಹುದ್ದೆಗೆ ರಾಜಕೀಯ ಹಾಗೂ ಕ್ರಿಮಿನಲ್ ಹಿನ್ನೆಲೆ ಇರುವವರನ್ನು ಶಿಫಾರಸು ಮಾಡಿರುವ ಸರಕಾರದ ಕ್ರಮ ಸಾರ್ವಜನಿಕ ವಲಯದಲ್ಲಿ ಕಟು ಟೀಕೆಗೊಳಗಾಗಿರುವ ಮಧ್ಯೆ ಸರಕಾರದ ಶಿಫಾರಸನ್ನು ಪುರಸ್ಕರಿಸಬೇಕೇ, ಬೇಡವೇ ಎಂಬ ಜಿಜ್ಞಾಸೆಯಲ್ಲಿರುವ ರಾಜ್ಯಪಾಲರು ಒಂದೆರಡು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಭ್ರಷ್ಟಾಚಾರ ಕೂಪದಂತಾಗಿರುವ ಕೆಪಿಎಸ್‌ಸಿಗೆ ಕಾಯಕಲ್ಪ ನೀಡಲು ವರ್ಚಸ್ವಿ ಹಾಗೂ ಉತ್ತಮ ಚಾರಿತ್ರ್ಯವುಳ್ಳವರನ್ನು ಅಧ್ಯಕ್ಷ ಹಾಗೂ ಸದಸ್ಯರ ಹುದ್ದೆಗೆ ಸರಕಾರ ಶಿಫಾರಸು ಮಾಡಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಸುಪ್ರೀಂ ಕೋರ್ಟ್ ಮಾರ್ಗಸೂಚಿ ಪಾಲನೆ ಮಾಡಿಲ್ಲ. ಕೆಪಿಎಸ್‌ಸಿ ಸುಧಾರಣೆಗೆಂದೇ ರಚಿಸಿದ್ದ ಹೋಟಾ ಸಮಿತಿ ಶಿಫಾರಸುಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಸರಕಾರದ ಈ ನಿಲುವು ರಾಜಕೀಯ ಪಕ್ಷಗಳಿಂದಲೂ ವಿರೋಧ ವ್ಯಕ್ತವಾಗಿದೆ. ಒತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲು ರಾಜ್ಯಪಾಲರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಏತನ್ಮಧ್ಯೆ ಕೆಪಿಎಸ್‌ಸಿ ಅಧ್ಯಕ್ಷ ಹಾಗೂ ಸದಸ್ಯರ ನೇಮಕ ಸಂಬಂಧ ಸರಕಾರ ಕಳುಹಿಸಿರುವ ಶಿಫಾರಸು ಪಟ್ಟಿ ತಿರಸ್ಕರಿಸುವಂತೆ ನಿರ್ದೇಶನ ನೀಡಬೇಕೆಂದು ಕೋರಿ ಹೈಕೋರ್ಟ್‌ನಲ್ಲಿ ಪ್ರಮೋದ್ ಮತ್ತು ಇತರ ನಾಲ್ವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಜ.5ರಂದು ವಿಚಾರಣೆಗೆ ಬರಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಮೂವರ ಸದಸ್ಯರ ಉನ್ನತ ಸಮಿತಿ ಹಾಗೂ ಪ್ರತಿಪಕ್ಷ ನಾಯಕರು, ಸ್ಪೀಕರ್ ಅವರನ್ನೊಳಗೊಂಡ ಮುಖ್ಯಮಂತ್ರಿ ನೇತೃತ್ವದಲ್ಲಿ ಆಯ್ಕೆ ಸಮಿತಿಯನ್ನು ರಚಿಸದೆ ಸರಕಾರವೇ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡಿದೆ. ರಾಜಕೀಯ ಹಾಗೂ ಕ್ರಿಮಿನಲ್ ಹಿನ್ನೆಲೆ ಇರುವವರನ್ನು ನೇಮಕ ಮಾಡಲು ಮುಂದಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.

ಇವರ ಮೇಲಿನ ಆರೋಪಗಳೇನು ?
ವಿ.ಆರ್.ಸುದರ್ಶನ್ : ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಶಿಫಾರಸುಗೊಂಡಿರುವ ವಿ.ಆರ್.ಸುದರ್ಶನ್ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತ, ವಕ್ತಾರ ಹಾಗೂ ಪಕ್ಷದ ಶಿಸ್ತು ಸಮಿತಿ ಅಧ್ಯಕ್ಷರಾಗಿ, ನಾನಾ ಸಮಿತಿಯ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಮೂರು ಬಾರಿ ವಿಧಾನಪರಿಷತ್ ಸದಸ್ಯರಾಗಿ, ಸಭಾಪತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯಪಾಲರಿಗೆ ಹೆಸರು ಶಿಫಾರಸ್ಸಿಗೂ ಮೊದಲು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರೆ, ಹೀಗಾಗಿ ಅವರು ಸಕ್ರೀಯ ರಾಜಕಾರಣಿಯಾಗಿದ್ದರೂ ಎಂಬ ಕಾರಣಕ್ಕೆ ಅವರ ಆಯ್ಕೆ ಸೂಕ್ತವಲ್ಲ ಎಂಬ ಟೀಕೆ ಕೇಳಿಬಂದಿದೆ.

ಡಾ.ರವಿಕುಮಾರ್ : ಕೆಸಿ ಜನರಲ್ ಆಸ್ಪತ್ರೆ ವೈದ್ಯರಾದ ಡಾ.ರವಿಕುಮಾರ್ ರೋಗಿಯೊಬ್ಬರಿಂದ ಲಂಚ ಪಡೆದ ಆರೋಪ ಕೇಳಿಬಂದಿತ್ತು. ಲೋಕಾಯುಕ್ತ ವೈ.ಭಾಸ್ಕರ್‌ರಾವ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದ ಸಂದರ್ಭದಲ್ಲಿ ರೋಗಿ ನೀಡಿದ ಮೌಖಿಕ ದೂರಿನ ಮೇರೆಗೆ ಲೋಕಾಯುಕ್ತರು ವೈದ್ಯ ರವಿಕುಮಾರ್ ಅವರನ್ನು ಪ್ರಶ್ನಿಸಿ ಲಂಚದ ಹಣವನ್ನು ವಾಪಸ್ ಕೊಡಿಸಿದ್ದರು. ಜತೆಗೆ ರವಿಕುಮಾರ್ ಅವರು ಕಳೆದ ಎರಡು ದಶಕಗಳಿಂದ ಸಿದ್ದರಾಮಯ್ಯ ಅವರ ಖಾಸಗಿ ವೈದ್ಯರಾಗಿದ್ದು ಆಪ್ತರು ಎಂಬುದು ವಿಶೇಷ.

ಪ್ರೊ.ಗೋವಿಂದಯ್ಯ : ಸುಳ್ಳು ಜಾತಿ ಪತ್ರ ನೀಡಿ ಪತ್ನಿ ಬಿ.ಆರ್. ಗೋಪಮ್ಮ ಅವರಿಗೆ ಸರಕಾರಿ ಹುದ್ದೆ ಕೊಡಿಸಿದ ಆರೋಪ ಅವರ ಮೇಲಿದೆ. ಕೊಡಗು ಒಕ್ಕಲಿಗ ಸಮುದಾಯಕ್ಕೆ ಸೇರಿದ ಗೋಪಮ್ಮ ಅವರು ಪರಿಶಿಷ್ಟ ಜಾತಿ ಮೀಸಲಾತಿನಡಿ ಸರಕಾರಿ ಹುದ್ದೆ ಪಡೆದಿದ್ದರು. ಈ ಸಂಬಂಧ ತಹಸೀಲ್ದಾರ್ ನವೀನ್ ಜೋಸೆಫ್ ತನಿಖೆ ನಡೆಸಿ ವರದಿ ನೀಡಿದ್ದಾರೆ ಎಂಬ ಆರೋಪವಿದೆ.

ರಘುನಂದನ್ ರಾಮಣ್ಣ : ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತರಾಗಿದ್ದರು. 2011ರಲ್ಲಿ ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ.

ಸೈಯದ್ ಉಲ್ಫತ್ ಹುಸೇನ್ : ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಇವರು ಹುಬ್ಬಳ್ಳಿ-ಧಾರವಾಡದಲ್ಲಿ ಡಿಸಿಪಿಯಾಗಿ ಕೆಲಸ ಮಾಡುವಾಗ ರಿವಾಲ್ವಾರ್ ಲೈಸೆನ್ಸ್ ನವೀಕರಣ ಮಾಡುವಾಗ ನಿಯಮ ಉಲ್ಲಂಘಿಸಿ ನೀಡಿದ ಆರೋಪವಿದೆ.

ಸರಕಾರ ಶಿಫಾರಸು ಮಾಡಿರುವ ಆರು ಮಂದಿ ಸದಸ್ಯರಲ್ಲಿ ನಿವೃತ್ತ ಐಎಫ್‌ಎಸ್ ಅಧಿಕಾರಿ ಮೈಕೆಲ್ ಸೈಮನ್ ಬರೆಟ್ಟೊ ಹಾಗೂ ಗುಲ್ಬರ್ಗ ವಿವಿ ಪ್ರಾಧ್ಯಾಪಕಿ ಪ್ರೊ. ನಾಗಾಬಾಯಿ ಬುಳ್ಳಾ ಅವರು ಇದ್ದಾರೆ.

ರಾಜ್ಯಪಾಲರಿಗೆ ಬಿಜೆಪಿ ದೂರು :
ಈ ನಡುವೆ ಸರಕಾರದ ಶಿಫಾರಸು ತಿರಸ್ಕರಿಸುವಂತೆ ಪ್ರತಿಪಕ್ಷ ಬಿಜೆಪಿ ನಾಯಕರ ನಿಯೋಗ, ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಶುಕ್ರವಾರ ಭೇಟಿ ಮಾಡಿ ಒತ್ತಾಯಿಸಿದೆ. ಅಧ್ಯಕ್ಷರು ಹಾಗೂ ಸದಸ್ಯರ ಹುದ್ದೆಗೆ ಶಿಫಾರಸುಗೊಂಡವರ ಪೂರ್ವಾಪರ ಹಾಗೂ ಅವರ ಮೇಲಿರುವ ಆರೋಪಗಳ ವಿವರ ಇರುವ ದೂರನ್ನು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ನೇತೃತ್ವದ ನಿಯೋಗ ರಾಜ್ಯಪಾಲರಿಗೆ ಸಲ್ಲಿಸಿದೆ. ಸರಕಾರ ಶಿಫಾರಸು ಮಾಡಿರುವ ಹೆಸರುಗಳು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದಾರೆ. ಯಾವ ಕಾರಣಕ್ಕೂ ಈ ಶಿಫಾರಸು ಒಪ್ಪಬಾರದು ಎಂದು ಬಿಜೆಪಿ ನಾಯಕರು ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸರಕಾರದ ಶಿಫಾರಸನ್ನು ರಾಜ್ಯಪಾಲರು ತಿರಸ್ಕರಿಸುವ ಸಾಧ್ಯತೆಗಳೂ ಹೆಚ್ಚಿವೆ ಎಂಬ ಮಾತುಗಳೂ ಕೇಳಿ ಬರುತ್ತಿವೆ.

‘‘ಈ ಹಿಂದೆ ರಾಜಕೀಯ ಹಿನ್ನಲೆಯಿದ್ದವರನ್ನು ನೇಮಿಸಿದ್ದನ್ನು ಪಂಜಾಬ್ ಹೈಕೋರ್ಟ್ ರದ್ದುಗೊಳಿಸಿತ್ತು ಹಾಗೂ ಅದನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿತ್ತು. ಈ ಅಂಶವನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ಕಾನೂನು ತಜ್ಞರ ಜತೆ ಚರ್ಚಿಸಿ ಅವರು ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ,’’-ಜಗದೀಶ್ ಶೆಟ್ಟರ್, ವಿಧಾನಸಭೆ ಪ್ರತಿಪಕ್ಷ ನಾಯಕರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ