Please enable javascript.ಮೇಕೆದಾಟು ಹಕ್ಕಿಗಾಗಿ ಕೇಂದ್ರಕ್ಕೆ ನಿಯೋಗ: ಸಿದ್ದರಾಮಯ್ಯ - ಮೇಕೆದಾಟು ಹಕ್ಕಿಗಾಗಿ ಕೇಂದ್ರಕ್ಕೆ ನಿಯೋಗ: ಸಿದ್ದರಾಮಯ್ಯ - Vijay Karnataka

ಮೇಕೆದಾಟು ಹಕ್ಕಿಗಾಗಿ ಕೇಂದ್ರಕ್ಕೆ ನಿಯೋಗ: ಸಿದ್ದರಾಮಯ್ಯ

Vijaya Karnataka Web 31 Mar 2015, 4:11 am
Subscribe

ಮೇಕೆದಾಟು ವಿಷಯದಲ್ಲಿ ತಮಿಳುನಾಡು ಎತ್ತಿರುವ ಕ್ಯಾತೆ ವಿರೋಧಿಸಿ, ನಮ್ಮ ಹಕ್ಕಿನ ನೀರಿನ ಬಳಕೆಗೆ ಕಾನೂನು, ರಾಜಕೀಯ ಸೇರಿದಂತೆ ಸಕಲ ರೀತಿಯ ಹೋರಾಟಕ್ಕೆ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಮೇಕೆದಾಟು ಹಕ್ಕಿಗಾಗಿ ಕೇಂದ್ರಕ್ಕೆ ನಿಯೋಗ: ಸಿದ್ದರಾಮಯ್ಯ
-ನಮ್ಮ ಹಕ್ಕು ರಕ್ಷಣೆಗೆ ಹೋರಾಟಕ್ಕೆ ಸಿದ್ಧ: ಸಿದ್ದರಾಮಯ್ಯ-

ಬೆಂಗಳೂರು: ಮೇಕೆದಾಟು ವಿಷಯದಲ್ಲಿ ತಮಿಳುನಾಡು ಎತ್ತಿರುವ ಕ್ಯಾತೆ ವಿರೋಧಿಸಿ, ನಮ್ಮ ಹಕ್ಕಿನ ನೀರಿನ ಬಳಕೆಗೆ ಕಾನೂನು, ರಾಜಕೀಯ ಸೇರಿದಂತೆ ಸಕಲ ರೀತಿಯ ಹೋರಾಟಕ್ಕೆ ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ವಿಧಾನಮಂಡಲದ ಉಭಯ ಸದನಗಳಲ್ಲಿ ಬಜೆಟ್ ಮೇಲಿನ ಚರ್ಚೆಗೆ ಸೋಮವಾರ ಉತ್ತರ ನೀಡಿ ಸಿಎಂ, ಇಡೀ ರಾಜ್ಯದ ಜನತೆಯ ಸಾರ್ವಭೌಮ ಅಧಿಕಾರವಾಗಿರುವ ಸದನದಲ್ಲಿ ತಮಿಳುನಾಡಿನ ತಕರಾರಿಗೆ ತಕ್ಕ ಎದುರೇಟು ನೀಡಿ, ಇಡೀ ರಾಜ್ಯದ ಜನತೆಯ ಅಭಿಮತವನ್ನು ತಮಿಳುನಾಡಿಗೆ ಮುಟ್ಟಿಸುವ ದಿಟ್ಟತನ ತೋರಿದರು.

ತಮಿಳುನಾಡು ರೀತಿ ನಾವು ಕ್ಯಾತೆ ತೆಗೆಯುವುದು ಬೇಡ, ರಾಜಕೀಯವೂ ಬೇಕಿಲ್ಲ ಎಂದು ಸರಕಾರ ನಿಲುವನ್ನು ಸ್ಪಷ್ಟಪಡಿಸಿದ ಅವರು ‘‘ತಮಿಳುನಾಡು ಕ್ಯಾತೆಯನ್ನು ಕಾನೂನು, ರಾಜಕೀಯ ಹೋರಾಟದಿಂದ ಎದುರಿಸಲು ಸರಕಾರ ಬದ್ಧ. ರಾಜ್ಯವನ್ನು ಪ್ರತಿನಿಧಿಸುವ ನಾಲ್ವರು ಕೇಂದ್ರ ಸಚಿವರು, ಸರ್ವಪಕ್ಷ ನಿಯೋಗವನ್ನು ದಿಲ್ಲಿಗೆ ಕರೆದೊಯ್ದು, ಪ್ರಧಾನಮಂತ್ರಿಗಳು, ಜಲಸಂಪನ್ಮೂಲ ಸಚಿವರನ್ನು ಭೇಟಿಯಾಗಿ ರಾಜ್ಯದ ಪಾಲನ್ನು ಬಳಸಿಕೊಳ್ಳುತ್ತಿರುವ ಕಾನೂನಾತ್ಮಕ ಕ್ರಮವನ್ನು ಅರ್ಥ ಮಾಡಿಸಲಿದ್ದೇನೆ,’’ ಎಂದರು.

‘‘ಕಾವೇರಿ ನದಿಯಿಂದ ನ್ಯಾಯಾಧಿಕರಣದ ತೀರ್ಪಿನಂತೆ 192 ಟಿಎಂಸಿ ನೀರನ್ನು ಬಿಡಬೇಕಿದೆ. ಅದನ್ನು ಪಾಲಿಸಲು ಸರಕಾರ ಬದ್ಧ. ಮಳೆಗಾಲ ಹಾಗೂ ಪ್ರವಾಹದ ಸಮಯದಲ್ಲಿ ಕೆಲವೊಮ್ಮೆ 300-356 ಟಿಎಂಸಿ ನೀರು ಸಮುದ್ರಕ್ಕೆ ಹರಿದುಹೋಗುತ್ತದೆ. ಸಮತೋಲನ ಅಣೆಕಟ್ಟು ನಿರ್ಮಿಸಿ, 192 ಟಿಎಂಸಿಗೂ ಹೆಚ್ಚಿನ ನೀರನ್ನು ಕುಡಿಯುವ ಹಾಗೂ ವಿದ್ಯುತ್ ಉತ್ಪಾದನೆಗೆ ಬಳಸುವ ಸದಾಶಯವಷ್ಟೇ ಸರಕಾರದ್ದಾಗಿದೆ,’’ ಎಂದರು.

‘‘ಕುಡಿಯುವ ಉದ್ದೇಶಕ್ಕೆ ನೀರನ್ನು ಬಳಸಲು ಯಾವ ರಾಜ್ಯವೂ ವಿರೋಧಿಸುವುದಿಲ್ಲ. ಕೃಷ್ಣಾನದಿಯಿಂದ ಚೆನ್ನೈಗೆ ಕರ್ನಾಟಕ ಪ್ರತಿವರ್ಷ ಐದು ಟಿಎಂಸಿ ನೀರು ಕೊಡುತ್ತಿದೆ. ಹೊಗೇನಕಲ್‌ನಲ್ಲಿ ತಮಿಳುನಾಡು ಕುಡಿಯುವ ನೀರು ಯೋಜನೆ ಅನುಷ್ಠಾನ ಮಾಡಿದಾಗ ಕರ್ನಾಟಕ ವಿರೋಧಿಸಿರಲಿಲ್ಲ. ಅಂತಹ ವಿರೋಧವೂ ನಮಗೆ ಬೇಕಾಗಿಲ್ಲ. ನಮ್ಮ ಹಕ್ಕಿನ ನೀರನ್ನು ಬಳಸಲು ತಮಿಳುನಾಡು ಕ್ಯಾತೆ ತೆರೆಯುವುದನ್ನು ವಿರೋಧಿಸಲು ಸರಕಾರ ಸಜ್ಜಾಗಿದೆ. ಮೇಕೆದಾಟು ಯೋಜನೆ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಹಕ್ಕು ರಕ್ಷಿಸಲು ನಾನು ತಯಾರು,’’ ಎಂದು ಹೇಳಿದರು.

‘‘ತಮಿಳುನಾಡು ಈಗಾಗಲೇ ಸಂಸದರ ನಿಯೋಗ ಕೊಂಡೊಯ್ದು ಕೇಂದ್ರದ ಮೇಲೆ ಒತ್ತಡ ಹೇರುತ್ತಿದೆ. ಕರ್ನಾಟಕ ವಿಳಂಬ ಮಾಡಬಾರದು, ತ್ವರಿತವಾಗಿ ಯೋಜನೆ ಅನುಷ್ಠಾನ ಮಾಡಬೇಕು,’’ ಎಂದು ಜೆಡಿಎಸ್‌ನ ಚಲುವರಾಯಸ್ವಾಮಿ, ಎಚ್.ಸಿ. ಬಾಲಕೃಷ್ಣ ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘‘ಕಾವೇರಿ, ಕೃಷ್ಣಾ ನೀರಿನ ವಿಷಯದಲ್ಲಿ ರಾಜಕೀಯ ಮಾಡುವುದಿಲ್ಲ. ಪ್ರತಿಪಕ್ಷ ನಾಯಕರು ಮಾತ್ರವಲ್ಲದೆ ಆ ಭಾಗದ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇನೆ. ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರನ್ನೂ ಜತೆಗೂಡಿಸಿ ಕೇಂದ್ರಕ್ಕೆ ನಿಯೋಗ ಹೋಗೋಣ. ರಾಜ್ಯದ ಹಿತ ಕಾಪಾಡಲು ಸರಕಾರ ಕಟಿಬದ್ಧವಾಗಿರುತ್ತದೆ,’’ ಎಂದು ಪ್ರತಿಪಾದಿಸಿದರು.
---

ತಮಿಳುನಾಡಿನಲ್ಲಿ ಅಲ್ಲಿನ ರಾಜಕೀಯ ಪಕ್ಷಗಳು ಅಸ್ತಿತ್ವಕ್ಕಾಗಿ ಇದನ್ನು ವಿವಾದ ಮಾಡುತ್ತಿವೆ. ಕಾವೇರಿ ನೀರಿನಲ್ಲಿ ನಮಗೆ ಹಕ್ಕಿದೆ. ಸರಕಾರದ ಎಲ್ಲಾ ರೀತಿಯ ಹೋರಾಟಕ್ಕೆ ಪ್ರತಿಪಕ್ಷ ಸರ್ವಸಮ್ಮತ ಬೆಂಬಲ ನೀಡಲಿದೆ.
-ಜಗದೀಶ್ ಶೆಟ್ಟರ್, ಪ್ರತಿಪಕ್ಷ ನಾಯಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ