Please enable javascript.ಗಂಡನನ್ನು ಕಪ್ಪು ಬಣ್ಣದವನು ಎಂದು ಹೀಯಾಳಿಸಿ ಹೆಂಡತಿ ದೂರ ಇರೋದು 'ಕ್ರೌರ್ಯ' ಎಂದ ಹೈಕೋರ್ಟ್‌! - a wife insulted her husband as black staying away from him is cruelty karnataka high court - Vijay Karnataka

ಗಂಡನನ್ನು ಕಪ್ಪು ಬಣ್ಣದವನು ಎಂದು ಹೀಯಾಳಿಸಿ ಹೆಂಡತಿ ದೂರ ಇರೋದು 'ಕ್ರೌರ್ಯ' ಎಂದ ಹೈಕೋರ್ಟ್‌!

Produced by ಜಯಪ್ರಕಾಶ್‌ ಬಿರಾದಾರ್‌ | Vijaya Karnataka 9 Aug 2023, 12:06 am
Subscribe

Karnataka High Court Divorce Case : ಗಂಡನನ್ನು ಕಪ್ಪಗೆ ಇದ್ದೀಯಾ ಎಂದು ಹೀಯಾಳಿಸುತ್ತಾ ಆತನ ಸಂಗದಿಂದ ದೂರವಿದ್ದ ಪತ್ನಿಯ ನಡೆಯನ್ನು ಕ್ರೌರ್ಯ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಸದ್ಯ ಈ ದಂಪತಿಗಳಿಗೆ ವಿಚ್ಛೇದನ ಮಂಜೂರು ಮಾಡಿದೆ.

ಹೈಲೈಟ್ಸ್‌:

  • ಪತಿಯನ್ನು ಸದಾ ಕಪ್ಪು ವರ್ಣದವನೆಂದು ಸಂಬೋಧಿಸಿ, ಅದನ್ನೇ ಮುಂದಿಟ್ಟುಕೊಂಡು ಪತಿಯ ಸಂಗದಿಂದ ಪತ್ನಿ ದೂರ ಇದ್ದ ಪತ್ನಿ.
  • ಪತ್ನಿಯ ಈ ನಡೆಯನ್ನು 'ಕ್ರೌರ್ಯ' ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.
  • ಪತಿಯೊಂದಿಗೆ ಮತ್ತೆ ಬಾಳುವ ಆಸಕ್ತಿ ಪತ್ನಿಗೆ ಇಲ್ಲವಾಗಿದ್ದು, ಅವರ ನಡುವೆ ದೊಡ್ಡ ಬಿರುಕು ಇರುವುದು ಸ್ಪಷ್ಟ ಎಂದು ಡೈವೋರ್ಸ್‌ ಮಂಜೂರು.
ಹೈಕೋರ್ಟ್‌
ಹೈಕೋರ್ಟ್‌
ಬೆಂಗಳೂರು: ಪತಿಯನ್ನು ಸದಾ ಕಪ್ಪು ವರ್ಣದವನೆಂದು ಸಂಬೋಧಿಸಿ, ಅದನ್ನೇ ಮುಂದಿಟ್ಟುಕೊಂಡು ಪತಿಯ ಸಂಗದಿಂದ ಪತ್ನಿ ದೂರ ಸರಿದಿದ್ದು 'ಕ್ರೌರ್ಯ' ಆಗಲಿದೆ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಅಲ್ಲದೆ, ಅದೇ ಕಾರಣಕ್ಕೆ ಪತಿ-ಪತ್ನಿ ನಡುವಿನ ಮದುವೆಯನ್ನು ಅಸಿಂಧು ಗೊಳಿಸಿ ವಿಚ್ಛೇದನ ಮಂಜೂರು ಮಾಡಿದೆ.
ವಿಚ್ಛೇದನ ನೀಡಲು ನಿರಾಕರಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ನ್ಯಾ. ಅಲೋಕ್‌ ಅರಾಧೆ ಮತ್ತು ನ್ಯಾ. ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಗಂಭೀರ ಪ್ರಕರಣಗಳಿದ್ದಾಗ ತಕ್ಷಣ ಎಫ್‌ಐಆರ್: ಕರ್ನಾಟಕ ಹೈಕೋರ್ಟ್ ನಿರ್ದೇಶನ
ಪ್ರಕರಣದ ಎಲ್ಲ ವಿವರಗಳನ್ನು ಪರಿಶೀಲಿಸಿದ ಬಳಿಕ ಪೀಠ, ''ಪತ್ನಿ ಪತಿಗೆ 'ಕಪ್ಪು ಬಣ್ಣದವರು' ಎಂದು ಸದಾ ಹೇಳುವ ಮೂಲಕ ಅವಮಾನ ಮಾಡುತ್ತಿದ್ದರು. ಸಕಾರಣವಿಲ್ಲದಿದ್ದರೂ ಪತಿ ಜತೆ ಇರದೇ ಪತ್ನಿ ತವರು ಮನೆ ಸೇರಿದ್ದರು. ಆದರೆ, ಈ ವಿಷಯ ಮರೆಮಾಚಲು ಪತಿ ಮೇಲೆ ಅಕ್ರಮ ಸಂಬಂಧ ಕುರಿತು ಸುಳ್ಳು ಆರೋಪ ಹೊರಿಸಿದ್ದಾರೆ. ಇದು ನಿಸ್ಸಂದೇಹವಾಗಿ ಕ್ರೌರ್ಯದ ಅರ್ಥ ವ್ಯಾಪ್ತಿಗೆ ಬರಲಿದೆ,'' ಎಂದು ಹೇಳಿದೆ.

ಅಪರಿಮಿತ ಮಾನಸಿಕ ಕ್ರೌರ್ಯ

ಪ್ರಕರಣದ ದಾಖಲೆ ಪರಿಶೀಲಿಸಿದ ಹೈಕೋರ್ಟ್‌, ''ಪತಿಯ ಅಕ್ರಮ ಸಂಬಂಧ ಕುರಿತಂತೆ ಪತ್ನಿ ಆಧಾರ ರಹಿತ ಆರೋಪ ಮಾಡಿದ್ದಾರೆ. ಇಂತಹ ಆರೋಪ ಮಾಡುವುದರಿಂದ ಅಪರಿಮಿತ ಮಾನಸಿಕ ಕ್ರೌರ್ಯ ಆಗಲಿದೆ. ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಪತ್ನಿ ಹಲವು ಕ್ರಿಮಿನಲ್‌ ಕೇಸ್‌ ದಾಖಲಿಸಿದ್ದಾರೆ. ಹಲವು ವರ್ಷಗಳಿಂದ ಪತಿಯ ಸಂಪರ್ಕದಲ್ಲಿಇಲ್ಲದ ಪತ್ನಿ, ಪತಿಯೊಂದಿಗೆ ಸಹಬಾಳ್ವೆ ನಡೆಸಲು ಸಿದ್ಧಳಿದ್ದೇನೆ. ಆದರೆ, ಯಾವ ಕಾರಣಕ್ಕೂ ಅವರ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದಾರೆ.

ವಿಚ್ಛೇದನ ಪ್ರಕರಣಗಳನ್ನು ಒಂದು ವರ್ಷದೊಳಗೆ ಇತ್ಯರ್ಥಗೊಳಿಸಬೇಕು - ಹೈಕೋರ್ಟ್‌ ಆದೇಶ

ದೊಡ್ಡ ಬಿರುಕು ಇರುವುದು ಸ್ಪಷ್ಟ

ಇದರಿಂದ ಪತಿಯೊಂದಿಗೆ ಮತ್ತೆ ಬಾಳುವ ಆಸಕ್ತಿ ಪತ್ನಿಗೆ ಇಲ್ಲವಾಗಿದ್ದು, ಅವರ ನಡುವೆ ದೊಡ್ಡ ಬಿರುಕು ಇರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಕ್ರೌರ್ಯ ಆಧಾರದ ಮೇಲೆ ಪತಿಗೆ ವಿಚ್ಛೇದನ ನೀಡಬಹುದು. ಇದೇ ವೇಳೆ ಪತ್ನಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದರೆ ಕೌಟುಂಬಿಕ ನ್ಯಾಯಾಲಯ ಪರಿಶೀಲಿಸಿ ನಿರ್ಧರಿಸಬೇಕು,'' ಎಂದು ಹೈಕೋರ್ಟ್‌ ಸೂಚಿಸಿದೆ.

2012ರಲ್ಲಿ ವಿಚ್ಛೇದನ ಕೋರಿ ಕೋರ್ಟ್‌ ಮೊರೆ

ಪ್ರಕರಣದ ಹಿನ್ನೆಲೆ ಬೆಂಗಳೂರಿನ ನಿವಾಸಿಗಳಾದ ಆತ ಮತ್ತು ಆಕೆ 2007ರಲ್ಲಿ ಮದುವೆಯಾಗಿದ್ದರು. ಆದರೆ, 2012ರಲ್ಲಿ ವಿಚ್ಛೇದನ ಕೋರಿ ಆತ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಬೆಂಗಳೂರಿನ 2ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯ 2017ರ ಜ.13ರಂದು ವಿಚ್ಛೇದನ ನೀಡಲು ನಿರಾಕರಿಸಿತ್ತು. ಅದನ್ನು ಪ್ರಶ್ನಿಸಿ ಆತ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
 ಜಯಪ್ರಕಾಶ್‌ ಬಿರಾದಾರ್‌
ಲೇಖಕರ ಬಗ್ಗೆ
ಜಯಪ್ರಕಾಶ್‌ ಬಿರಾದಾರ್‌
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. ಚಿನ್ನದ ಪದಕದೊಂದಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಳೆದ ಆರು ವರ್ಷಗಳಿಂದ ರಾಜ್ಯಮಟ್ಟದ ವಿವಿಧ ಪತ್ರಿಕೆಗಳಲ್ಲಿ ವರದಿಗಾರಿಕೆಯ ಅನುಭವ ಹೊಂದಿದ್ದಾರೆ. ಆರೋಗ್ಯ, ಅರಣ್ಯ, ಸಾರಿಗೆ, ರಾಜಕೀಯ, ಕೊರೊನಾ, ಬೆಂಗಳೂರು ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯದ ಕುರಿತು ಒಂದು ಸಾವಿರಕ್ಕೂ ಅಧಿಕ ವಿಶೇಷ ವರದಿಗಳನ್ನು ಬರೆದಿದ್ದಾರೆ. ರಾಜಕೀಯ, ಪರಿಸರ, ವಿಜ್ಞಾನ -ತಂತ್ರಜ್ಞಾನ ರಂಗಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಪ್ರವಾಸ, ಕ್ರಿಕೆಟ್ ,ಫೋಟೊಗ್ರಾಫಿ, ಓದು, ಸಿನಿಮಾ ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ