Please enable javascript.Karnataka Agriculture,ಮುಂಗಾರು ಮಳೆಯಿಲ್ಲದೆ ಬಾಡಿದ ಕೃಷಿ, ವರುಣನ ಕೃಪೆಗೆ ಕಾದಿದೆ ತುಮಕೂರು - crops withered without monsoon rains, tumkur waits for varuna's grace - Vijay Karnataka

ಮುಂಗಾರು ಮಳೆಯಿಲ್ಲದೆ ಬಾಡಿದ ಕೃಷಿ, ವರುಣನ ಕೃಪೆಗೆ ಕಾದಿದೆ ತುಮಕೂರು

Edited byಸೌಮ್ಯಶ್ರೀ ಮಾರ್ನಾಡ್ | Vijaya Karnataka Web 14 Jun 2023, 3:53 pm
Subscribe

ಮಳೆಯಿಲ್ಲದೆ, ಮುಂಗಾರು ಕೃಷಿ ಚಟುವಟಿಕೆ ಆರಂಭವಿಲ್ಲದೆ, ವರಣನ ಕೃಪೆಗಾಗಿ ತುಮಕೂರು ರೈತರು ಕಾದುನೋಡುವಂತಾಗಿದೆ. ಬಿತ್ತನೆ ಬೀಜ ಹಾಗೂ ರಸಗೊಬ್ಬರದ ದಾಸ್ತಾನು ಸಾಕಷ್ಟಿದ್ದರೂ, ಕೃಷಿಕೆಲಸಗಳು ಆರಂಭವಾಗಿಲ್ಲ. 4.87 ರಷ್ಟು ಮಾತ್ರ ಬಿತ್ತನೆಯಾಗಿದೆ. ಮಳೆಕೊರತೆಯಾಗಿರುವ ಹಿನ್ನೆಲೆ ಯಾವ ಬಿತ್ತನೆಗಳನ್ನು ಮಾಡಬೇಕೆಂದು ರೈತರಿಗೆ ಕೃಷಿ ಇಲಾಖೆ ಮಾರ್ಗಸೂಚಿ ನೀಡಿದೆ.

farmers waiting for rain
ತುಮಕೂರು: ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು ಸಮೃದ್ಧವಾಗಿದೆ. ರೈತರು ಕೃಷಿ ಖುಷಿಯನ್ನು ಆಚರಿಸಲು ಸಿದ್ಧರಾಗಿದ್ದಾರೆ. ಆದರೆ, ಪೂರ್ವ ಮುಂಗಾರು ಬೆಳೆಗಳು ಮಳೆಯಿಲ್ಲದೆ ಬಾಡುತ್ತಿದ್ದರೆ, ಮುಂಗಾರು ಕೃಷಿ ಚಟುವಟಿಕೆ ಆರಂಭವೇ ಇಲ್ಲದಾಗಿದೆ. ಹೀಗೆ ವರುಣನ ಅವಕೃಪೆಯಿಂದ ಕೃಷಿ ಚಟುವಟಿಕೆ ಸಂಪೂರ್ಣ ಬಾಡಿದೆ!

ಮುಂಗಾರು ಕೃಷಿಗೆ ಮಳೆ ಕೊರತೆ:
ಜನವರಿ 1 ರಿಂದ ಜೂನ್‌ 13 ರ ಲೆಕ್ಕ ತೆಗೆದುಕೊಂಡರೆ ವಾಡಿಕೆ ಮಳೆ 159 ಮಿ.ಮೀ., ಈ ವರ್ಷ ಸುರಿದಿರುವುದು 192 ಮಿ.ಮೀ. ಅಂದರೆ ಶೇ.21 ರಷ್ಟು ಹೆಚ್ಚು ಮಳೆ ಆಗಿದೆ. ಜಿಲ್ಲೆಯ ಮಳೆ ಲೆಕ್ಕಕ್ಕೆ ವ್ಯತಿರಿಕ್ತವಾಗಿ ಚಿಕ್ಕನಾಯಕನಹಳ್ಳಿಯಲ್ಲಿ ಮಳೆ ಬೇರೆಡೆಯಂತೆ ಸುರಿದಿಲ್ಲ. ಶೇ.-22 (ಮೈನೆಸ್‌ 22%) ಕಡಿಮೆ ಆಗಿದೆ.

ಮುಂಗಾರು ವಿಳಂಬ, ಬಿತ್ತನೆ ಕುಂಠಿತ, ಜೂನ್‌ 2ನೇ ವಾರದಲ್ಲೂ ಚುರುಕಾಗದ ಕೃಷಿ ಚಟುವಟಿಕೆ

ಜಿಲ್ಲೆಯಲ್ಲಿ 6 ತಿಂಗಳ ಮಳೆ ಹೆಚ್ಚಿದ್ದರೂ ಸಕಾಲಕ್ಕೆ ಸುರಿದಿಲ್ಲ! ಜೂನ್‌ 1 ರಿಂದ 13 ರವರೆಗೆ ಮುಂಗಾರು ಕೃಷಿಗೆ ಪೂರಕವಾಗಿ ವಾಡಿಕೆ ಮಳೆ 34 ಮಿ.ಮೀ.ಇದೆ. ಆದರೆ ಈ ಬಾರಿ ಈ ಅವಧಿಯಲ್ಲಿ ಸುರಿದಿರುವುದು 20 ಮಿ.ಮೀ ಮಾತ್ರ. ಅಂದರೆ ಶೇ.40ರಷ್ಟು ಮಳೆ ಕೊರತೆ ಉಂಟಾಗಿದೆ.

ಶೇ.4.87 ಮಾತ್ರ ಬಿತ್ತನೆ
:
ಜಿಲ್ಲೆಯಲ್ಲಿ ವಾರ್ಷಿಕ 3,14,630 ಹೆಕ್ಟೇರ್‌ ವಾರ್ಷಿಕ ಬಿತ್ತನೆ ಗುರಿ ಹೊಂದಲಾಗಿದೆ. ಅದರಲ್ಲಿ 15,333 ಹೆಕ್ಟೇರ್‌ ಅರ್ಥಾತ್‌ ಶೇ.4.87 ರಷ್ಟು ಮಾತ್ರ ಬಿತ್ತನೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ಶೇ.3.56 ರಷ್ಟು ಬಿತ್ತನೆಯಾಗಿತ್ತು.

ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು:
2022-23ನೇ ಸಾಲಿನ ಮುಂಗಾರಲ್ಲಿ 22,098 ಕ್ವಿಂಟಾಲ್‌ ಬಿತ್ತನೆ ಬೀಜ ವಿತರಣೆ ಮಾಡಲಾಗಿತ್ತು. 2023-24ನೇ ಸಾಲಿನ ಮುಂಗಾರಿಗೆ 38,950 ಕ್ವಿಂಟಾಲ್‌ ಬಿತ್ತನೆ ಬೀಜಗಳ ದಾಸ್ತಾನು ಲಭ್ಯವಿದೆ.

64,321 ಮೆಟ್ರಿಕ್‌ ಟನ್‌ ನಾನಾ ರಸಗೊಬ್ಬರ ಬೇಡಿಕೆ ಇದ್ದು, ಜೂನ್‌ಗೆ 11,527 ಮೆ.ಟನ್‌ ಅವಶ್ಯಕವಿದೆ. 41,240 ಮೆಟ್ರಿಕ್‌ ಟನ್‌ ದಾಸ್ತಾನಿದ್ದು, ಯಾವುದೇ ರೀತಿಯ ಸಮಸ್ಯೆಯಿಲ್ಲ.

ಕಳೆದ ವರ್ಷ ಅತಿವೃಷ್ಟಿಯ ಹೊಡೆತ: ರಾಜ್ಯದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ ವ್ಯಾಪಕ ಕುಂಠಿತ
ಪ್ರಮುಖ ಬೆಳೆಗಳ ಬಿತ್ತನೆ ಗುರಿ

ಬೆಳೆಗಳು- ಬಿತ್ತನೆ ಗುರಿ (ಹೆಕ್ಟೇರ್‌ಗಳಲ್ಲಿ)

ರಾಗಿ- 1,50,229
ಶೇಂಗಾ- 70,750
ಮುಸುಕಿನ ಜೋಳ- 30,577
ತೊಗರಿ- 16,044
ಹುರಳಿ- 10,896
ಹೆಸರು- 10,780
ಸಿರಿಧಾನ್ಯ- 4,396
ಅವರೆ- 3,524
ಅಲಸಂದೆ -3,621
ಬಿಳಿಜೋಳ- 3,500
ಭತ್ತ- 4,322
ಹತ್ತಿ- 3,162

ಬಿತ್ತನೆ ಬೀಜ ದಾಸ್ತಾನು ವಿವರ

ಬೆಳೆ ದಾಸ್ತಾನು (ಕ್ವಿಂಟಾಲ್‌ಗಳಲ್ಲಿ)

ಶೇಂಗಾ- 18,500
ರಾಗಿ -11,200
ಭತ್ತ- 7,500
ಹೆಸರು- 1000
ಅಲಸಂದೆ- 300
ತೊಗರಿ- 450

ರಸಗೊಬ್ಬರ ಬಿತ್ತನೆ ವಿವರ
ಗೊಬ್ಬರ ದಾಸ್ತಾನು (ಮೆಟ್ರಿಕ್‌ ಟನ್‌ಗಳಲ್ಲಿ)
ಡಿಎಪಿ- 9053
ಎಂಒಪಿ- 48,053
ಕಾಂಪ್ಲೆಕ್ಸೆಸ್‌- 24,883
ಯೂರಿಯಾ- 24,279
ಎಸ್‌ಎಸ್‌ಪಿ- 1253

ಬೆಳೆನಷ್ಟ :

ಮೇ 23ರಂದು ಬಿದ್ದ ಆಲಿಕಲ್ಲು ಮಳೆಯಿಂದಾಗಿ ಮಧುಗಿರಿಯಲ್ಲಿ 18 ರೈತರ ತಾಕುಗಳಲ್ಲಿ 3.71 ಹೆಕ್ಟೇರ್‌ ಭತ್ತ, 0.25 ಹೆಕ್ಟೇರ್‌ ಮುಸುಕಿನ ಜೋಳ, 0.25 ರಾಗಿ ಸೇರಿದಂತೆ 4.21 ಹೆಕ್ಟೇರ್‌ ಬೆಳೆ ನಷ್ಟವಾಗಿದೆ. ಶೀಘ್ರದಲ್ಲೇ 71,570 ರೂ. ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌.ರವಿ ತಿಳಿಸಿದ್ದಾರೆ.

ರೈತರ ಗಮನಕ್ಕೆ:
ರಾಗಿಯಲ್ಲಿ ಜುಲೈ ಕೊನೆಯವರೆಗೂ ಎಂಆರ್‌ 1, ಎಂಆರ್‌ 6, ಎಚ್‌ಆರ್‌911, ಜಿಪಿಒ 28 ತಳಿ ಬಿತ್ತನೆ ಮಾಡಬಹುದು. ಆಗಸ್ಟ್‌ ಮೊದಲನೇ ಪಾಕ್ಷಿಕದಲ್ಲಿ ಮಳೆ ಬಂದರೆ ಎಂಎಲ್‌ 365, ಜಿಪಿವಿ 28, ಜಿಪಿಯು 66, ಪಿಆರ್‌ 202 ತಳಿ ಬಿತ್ತನೆ ಮಾಡಬಹುದು. 2ನೇ ಪಾಕ್ಷಿಕ ಅಥವಾ ಸೆಪ್ಟೆಂಬರ್‌ ಮೊದಲ ವಾರದಲ್ಲಿ ಮಳೆ ಬಂದಲ್ಲಿ ಜಿಪಿಯು 26, ಇಂಡಾಫಫ್‌ 7,9, ಜಿಪಿಯು 45 ತಳಿ ರಾಗಿ ಬಿತ್ತನೆ ಮಾಡಬೇಕು.

ಜುಲೈ ಎರಡನೇ ಪಾಕ್ಷಿಕದಲ್ಲಿ ಮಳೆ ಬಂದರೆ ಶೇಂಗಾ ಬದಲು ರಾಗಿ / ಹುರಳಿ/ತೃಣಧಾನ್ಯ ಬೆಳೆಯಬೇಕು. ಮುಸುಕಿನ ಜೋಳವನ್ನು ಜುಲೈ ಕೊನೆಯವರೆಗೂ ಬೆಳೆಯಬಹುದು. ಆಗಸ್ಟ್‌ ಮೊದಲವಾರ ಮಳೆ ಬಂದರೆ ಈ ಪ್ರದೇಶದಲ್ಲಿ ರಾಗಿ, ಹುರುಳಿ, ತೃಣ ಧಾನ್ಯ ಬಿತ್ತನೆ ಮಾಡಬೇಕು. ಅಂತೆಯೇ ತೊಗರಿ ಬೆಳೆಯುವಲ್ಲಿ ಜುಲೈ ಎರಡನೇ ಪಾಕ್ಷಿಕದ ಬಳಿಕ ಮಳೆಯಾದಲ್ಲಿ ಬದಲಿ ಬೆಳೆಯಾಗಿ ರಾಗಿ, ಹುರಳಿ ಅಥವಾ ತೃಣಧಾನ್ಯ ಬೆಳೆಯಬೇಕೆಂಬುದು ಕೃಷಿ ಇಲಾಖೆ ಸಲಹೆ.

ಹೆಚ್ಚಿನ ಮಾಹಿತಿಗಾಗಿ:

ಹವಾಮಾನ ವೈಪರರೀತ್ಯದಿಂದ ಉಂಟಾಗುವ ಸಮಸ್ಯೆ ತಪ್ಪಿಸಿಕೊಳ್ಳಲು ರೈತರು ಕಡ್ಡಾಯವಾಗಿ ಬೆಳೆ ವಿಮೆ ಮಾಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹೋಬಳಿ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರ / ತಾಲೂಕು ಮಟ್ಟದಲ್ಲಿ ತಾಲೂಕು ಸಹಾಯಕ ಕೃಷಿ ನಿರ್ದೇಶಕರು /ಉಪ ವಿಭಾಗದ ಮಟ್ಟದಲ್ಲಿ ಉಪ ಕೃಷಿ ನಿರ್ದೇಶಕರು/ ಜಿಲ್ಲಾ ಮಟ್ಟದಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ ಸಂಪರ್ಕಿಸಿ .

ಪೂರ್ವ ಮುಂಗಾರಲ್ಲಿ ಬಿತ್ತನೆಯಾಗಿರುವ 15,333 ಹೆಕ್ಟೇರ್‌ ಬೆಳೆಗಳು ಮಳೆಯ ಕೊರತೆಯಿಂದ ಬಾಡಲು ಪ್ರಾರಂಭಿಸಿವೆ. ಸದ್ಯದಲ್ಲಿ ಮಳೆಯ ಅವಶ್ಯಕತೆಯಿದೆ. ಮಳೆ ಬಿದ್ದರೆ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಸರಬರಾಜು ಮಾಡಲು ಇಲಾಖೆ ಸನ್ನದ್ಧವಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆ.ಎಚ್‌.ರವಿ, ಹೇಳಿದ್ದಾರೆ.
ಸೌಮ್ಯಶ್ರೀ ಮಾರ್ನಾಡ್
ಲೇಖಕರ ಬಗ್ಗೆ
ಸೌಮ್ಯಶ್ರೀ ಮಾರ್ನಾಡ್
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಡಿಜಿಟಲ್ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರರಾಗಿ 7 ವರ್ಷ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ರಾಜಕೀಯ, ನಾಗರಿಕರ ಸಮಸ್ಯೆಗಳು, ಬೆಂಗಳೂರು ಸ್ಥಳೀಯ ಆಡಳಿತದ ಕುಂದುಕೊರತೆಗಳ ವರದಿ, ವಿಶೇಷ ವ್ಯಕ್ತಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ರಂಗಭೂಮಿ ಹಾಗೂ ಯಕ್ಷಗಾನ ಇವರ ಇತರ ಆಸಕ್ತಿಕರ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ