ಆ್ಯಪ್ನಗರ

ನೆಲಸಮ ನೆಲಸಮ ಭೀತಿಯಿಂದ ಶಾಲೆಗಳು ಬಚಾವ್‌

ಸೇನೆಯಿಂದ ನೆಲಸಮಗೊಳ್ಳುವ ಭೀತಿಯಲ್ಲಿದ್ದ ಜೆ.ಸಿ ನಗರದ ನಾಲ್ಕು ಸರಕಾರಿ ಶಾಲೆ ಹಾಗೂ ಪಿಯು ಕಾಲೇಜಿಗೆ ಜೀವದಾನ ಸಿಕ್ಕಿದೆ.

ವಿಕ ಸುದ್ದಿಲೋಕ 8 Jul 2016, 4:13 am
-ಶಿಕ್ಷಣ ಇಲಾಖೆಗೇ ಜಾಗ ಬಿಟ್ಟುಕೊಡಲು ರಕ್ಷಣಾ ಸಚಿವರು ಒಪ್ಪಿಗೆ, ನಗರದ ಯೋಜನಗಳಿಗೆ ಸೇನೆಗೆ ಸೇರಿದ 38 ಎಕರೆ ಜಾಗ ಬಿಟ್ಟು ಕೊಡಲು ಸಮ್ಮತಿ-
Vijaya Karnataka Web dismantled fear government schools defence minister manohar parikkar
ನೆಲಸಮ ನೆಲಸಮ ಭೀತಿಯಿಂದ ಶಾಲೆಗಳು ಬಚಾವ್‌


ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರ ಮಧ್ಯಸ್ಥಿಕೆಯಿಂದ ಶಾಲೆ ನೆಲಸಮ ಕೈಬಿಟ್ಟ ಸೇನೆ

ಬೆಂಗಳೂರು: ಸೇನೆಯಿಂದ ನೆಲಸಮಗೊಳ್ಳುವ ಭೀತಿಯಲ್ಲಿದ್ದ ಜೆ.ಸಿ ನಗರದ ನಾಲ್ಕು ಸರಕಾರಿ ಶಾಲೆ ಹಾಗೂ ಪಿಯು ಕಾಲೇಜಿಗೆ ಜೀವದಾನ ಸಿಕ್ಕಿದೆ. 1200 ವಿದ್ಯಾರ್ಥಿಗಳು ಕಲಿಯುತ್ತಿರುವ ಶಾಲೆಯ ಜಾಗವನ್ನು ಶಿಕ್ಷಣ ಇಲಾಖೆಗೆ ಬಿಟ್ಟುಕೊಡಲು ರಕ್ಷಣಾ ಸಚಿವರು ಒಪ್ಪಿಗೆ ನೀಡಿದ್ದಾರೆ. ಇದರ ಜತೆಗೇ ನಗರದಲ್ಲಿ ಸೇನೆಗೆ ಸೇರಿದ 20ಕ್ಕೂ ಹೆಚ್ಚು ಜಾಗಗಳನ್ನು ರಾಜ್ಯ ಸರಕಾರಕ್ಕೆ ಬಿಟ್ಟು ಕೊಟ್ಟು, ಪರ್ಯಾಯ ಜಮೀನು ತೆಗೆದುಕೊಳ್ಳಲು ರಕ್ಷಣಾ ಇಲಾಖೆ ತಾತ್ವಿಕ ಒಪ್ಪಿಗೆ ಸೂಚಿಸಿದೆ.

ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಹಾಗೂ ಕೇಂದ್ರ ಸಚಿವ ಸದಾನಂದ ಗೌಡ ಸೇರಿದಂತೆ ಜನಪ್ರತಿನಿಗಳು, ಅಕಾರಿಗಳು ಹಾಗೂ ಸೇನೆಯ ಅಕಾರಿಗಳ ನಡುವೆ ಗುರುವಾರ ನಗರದ ಎಚ್‌ಎಎಲ್‌ ಕಾರ್ಪೊರೇಟ್‌ ಕಚೇರಿಯಲ್ಲಿ ನಡೆದ ಸಭೆ ಫಲಪ್ರದವಾಗಿದೆ.

ಸೇನಾ ಕೋರ್ಟ್‌ ತೀರ್ಪಿನಂತೆ ಜೆಸಿ ನಗರದಲ್ಲಿರುವ ಎರಡೂವರೆ ಎಕರೆ ಜಾಗವನ್ನು ಪ್ಯಾರಚ್ಯೂಟ್‌ ರೆಜಿಮೆಂಟ್‌ ತನ್ನ ವಶಕ್ಕೆ ಪಡೆಯಲು ಕಳೆದ ಮಂಗಳವಾರ ಮುಂದಾಗಿತ್ತು. ಇದರ ವಿರುದ್ಧ ಶಾಲಾ ಮಕ್ಕಳು, ಶಿಕ್ಷಕರು, ಪೋಷಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಶಾಲೆ ಇರುವ ಜಾಗ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಪ್ರತಿನಿಸುವ ಬೆಂಗಳೂರು ಉತ್ತರ ವಿಧಾನಸಭೆ ಕ್ಷೇತ್ರಕ್ಕೆ ಸೇರಿದ್ದು, ಗೌಡರು ರಕ್ಷಣಾ ಸಚಿವರೊಂದಿಗೆ ಮಾತುಕತೆ ನಡೆಸಿ ಶಾಲೆ ಒಡೆಯುವುದನ್ನು ಸ್ಥಗಿತಗೊಳಿಸಿದ್ದರು. ಜತೆಗೆ ರಾಜ್ಯ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಕೂಡ ಮಧ್ಯಪ್ರವೇಶಿಸಿ ಸೇನಾಕಾರಿಗಳ ಮನವೊಲಿಸಿದ್ದರು.

400 ಎಕರೆ ಪರ್ಯಾಯ ಜಮೀನು

ನಗರದಲ್ಲಿ ವಿವಿಧ ಯೋಜನೆಗಳಿಗಾಗಿ ಸೇನೆಯ 38 ಎಕರೆ 28 ಗುಂಟೆ ಜಮೀನು ನೀಡಲು ಸೇನೆ ಒಪ್ಪಿದೆ. ಅದಕ್ಕೆ ಪರ್ಯಾಯವಾಗಿ ನಗರದ ಹೊರವಲಯದಲ್ಲಿ 400 ಎಕರೆ ಜಮೀನು ನೀಡಲು ರಾಜ್ಯ ಸರಕಾರವೂ ತಾತ್ವಿಕ ಒಪ್ಪಿಗೆ ನೀಡಿದೆ. ಈ ಮೂಲಕ ದಶಕಗಳಿಂದ ಬಾಕಿ ಇದ್ದ ವಿವಾದಗಳು ಹಾಗೂ ಯೋಜನೆ ಕಾರ್ಯಗತಗೊಳಿಸಲು ಇದ್ದ ಅಡ್ಡಿ ಆತಂಕಗಳು ನಿವಾರಣೆಯಾದಂತಾಗಿದೆ.

ಸುಮಾರು ಒಂದು ತಾಸಿಗೂ ಹೆಚ್ಚು ಕಾಲ ನಡೆದ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸದಾನಂದ ಗೌಡ, ‘‘ಹಲವು ದಶಕಗಳಿಂದ ಉಳಿದಿದ್ದ ಹತ್ತು ಹಲವು ಸಮಸ್ಯೆಗಳಿಗೆ ಇಂದು ಪರಿಹಾರ ದೊರಕಿದೆ. ಜೆ.ಸಿ ನಗರದ ಶಾಲೆಯಿಂದ ಹಿಡಿದು ಮೇಲುರಸ್ತೆ, ಸಂಪರ್ಕ ರಸ್ತೆ ಸೇರಿ ನಗರದ ಒಟ್ಟು 20 ಯೋಜನೆಗಳ ಕಾಮಗಾರಿಗೆ ರಕ್ಷಣಾ ಸಚಿವರು ಒಪ್ಪಿಗೆ ಕೊಟ್ಟಿದ್ದಾರೆ. ಅದಕ್ಕೆ ಪರ್ಯಾಯವಾಗಿ ರಾಜ್ಯ ಸರಕಾರವೂ ಜಮೀನು ನೀಡಲು ಒಪ್ಪಿಗೆ ಸೂಚಿಸಿದೆ. ರಾಜ್ಯ ಸರಕಾರದ ಜಮೀನು ನೀಡಲು ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ತೀರ್ಮಾನಿಸಿ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆಯಬೇಕಾಗುತ್ತದೆ. ಅದೇ ರೀತಿ ಸೇನೆಯ ಜಾಗವನ್ನು ಬಿಟ್ಟು ಕೊಡಲು ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಪಡೆಯಬೇಕಾಗುತ್ತದೆ. ಹೀಗಾಗಿ, ಈ ಪ್ರಕ್ರಿಯೆಗಳು ಸ್ವಲ್ಪ ಸಮಯ ಹಿಡಿಯುತ್ತವೆ. ಅಂತಿಮವಾಗಿ ಗೊಂದಲಗಳು ಬಗೆಹರಿದಿವೆ, ’’ ಎಂದು ತಿಳಿಸಿದರು.

ಸಭೆಯಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌, ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್‌, ಸಂಸದ ಪಿ.ಸಿ ಮೋಹನ್‌, ಶಾಸಕರಾದ ವೈ.ಎ.ನಾರಾಯಣಸ್ವಾಮಿ, ಅರವಿಂದ ಲಿಂಬಾವಳಿ, ರಘು, ಮುನಿರಾಜು, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಜಯ್‌ ಸೇಠ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತೆ ಸೌಜನ್ಯ, ವಿಶೇಷ ಜಿಲ್ಲಾಕಾರಿ ಡಾ.ವಾಸಂತಿ ಅಮರ್‌ ಉಪಸ್ಥಿತರಿದ್ದರು.

ಬಿಟ್ಟು ಕೊಡಲು ಒಪ್ಪಿದ ಸೇನೆ ಜಾಗಗಳು

* ಬೈಯಪ್ಪನಹಳ್ಳಿಯಲ್ಲಿ ರಸ್ತೆ ಮೇಲು ಸೇತುವೆ ನಿರ್ಮಾಣ - 9,991 ಚದರಡಿ ಎಂಇಜಿ ಜಾಗ

* ಗಂಗಮ್ಮ ವೃತ್ತದಿಂದ ಜಾಲಹಳ್ಳಿ ವೃತ್ತದವರೆಗಿನ ರಸ್ತೆ ಅಗಲೀಕರಣ - 15 ಎಕರೆ ವಾಯುಸೇನೆ ಜಾಗ

* ಮಾರುತಿ ಸೇವಾ ನಗರದಲ್ಲಿ ರಸ್ತೆ ಮೇಲು ಸೇತುವೆ ವಿಸ್ತರಣೆ - 960 ಚದರಡಿ ಎಂಇಜಿ ಜಾಗ

* ಹಳೇ ಏರ್‌ಪೋಟ್‌ರ್ ರಸ್ತೆ ದೊಮ್ಮಲೂರು ಕಮಾಂಡೆಂಟ್‌ ಕಚೇರಿ ಬಲ ಭಾಗದಲ್ಲಿ ಫುಟ್‌ಪಾತ್‌ ನಿರ್ಮಾಣ - 400 ಚದರಡಿ ಎಎಸ್‌ಸಿ ಜಾಗ

* ಲಷ್ಕರ್‌-ಹೊಸೂರು ರಸ್ತೆ ಅಗಲೀಕರಣ- 11,600 ಚದರಡಿ ಕಾರ್ಫ್ಸ್‌ ಆಫ್‌ ಮಿಲಿಟರಿ ಜಾಗ

* ಹಳೇ ಏರ್‌ಪೊಟ್‌ರ್ ರಸ್ತೆ ಟ್ರಿನಿಟಿ ವೃತ್ತದಿಂದ-ದೊಮ್ಮಲೂರು ಗ್ರಾಮದವರೆಗೆ ರಸ್ತೆ ಅಗಲೀಕರಣ - 19,694 ಚದರಡಿ ಎಂಇಜಿ ಜಾಗ

* ಮರ್ಫಿ ರಸ್ತೆ: ಕೆನ್ಸಿಂಗ್‌ಟನ್‌ ರಸ್ತೆಯಿಂದ ಹಳೇ ಮದ್ರಾಸ್‌ ರಸ್ತೆವರೆಗೆ ರಸ್ತೆ ಅಗಲೀಕರಣ- 10,200 ಚದರಡಿ ಎಂಇಜಿ ಜಾಗ

* ಹಲಸೂರು ರಸ್ತೆ: ಡಿಕನ್ಸನ್‌ರಸ್ತೆಯಿಂದ ಕೆನ್ಸಿಂಗ್‌ಟನ್‌ ರಸ್ತೆವರೆಗೆ ರಸ್ತೆ ಅಗಲೀಕರಣ- 2,090 ಚದರಡಿ, ಎಂಇಜಿ ಜಾಗ

* ವಿಕ್ಟೋರಿಯಾ ರಸ್ತೆ: ಏರ್‌ಪೋಟ್‌ರ್ ರಸ್ತೆಯಿಂದ ಡಿಸೋಜಾ ಸರ್ಕಲ್‌. - 10,441 ಚದರಡಿ, ವಾಯುಸೇನೆ ಜಾಗ

* ಲೋವರ್‌ ಅಗರಂ: ಹೊಸ್‌ಮಾಟ್‌ ಆಸ್ಪತ್ರೆಯಿಂದ - 12,576 ಚದರಡಿ ಎಎಸ್‌ಸಿ ಜಾಗ

* ಈಜಿಪುರ ಒಳವರ್ತುಲ ರಸ್ತೆಯಿಂದ ಸರ್ಜಾಪುರ ಮುಖ್ಯರಸ್ತೆವರೆಗೆ ನೂತನ ರಸ್ತೆ ನಿರ್ಮಾಣ- 18,000 ಚದರಡಿ ಎಎಸ್‌ಸಿ ಜಾಗ

* ಚಲ್ಲಘಟ್ಟದಿಂದ ಕೋರಮಂಗಲ ಒಳವರ್ತುಲ ರಸ್ತೆಗೆ ಅನುಮತಿ

* ಮಂಡೂರು ಬಳಿ ಬೆಂಗಳೂರು ಟೆಸ್ಟಿಂಗ್‌ ರೇಂಜ್‌ನ 15,00 ಚದರಡಿ ಜಾಗ

* ದೊಡ್ಡನೆಕ್ಕುಂದಿಯಲ್ಲಿ ಸ್ಮಶಾನ ಹಾಗೂ ಉದ್ಯಾನಕ್ಕಾಗಿ 2 ಎಕರೆ ಜಾಗ

* ಮಾರತ್‌ಹಳ್ಳಿಯಿಂದ ಫಾರ್ಮ್‌ ರಸ್ತೆ ಹಾಗೂ ಸ್ಮಶಾನ ಜಾಗ

* ಬೇಲೂರು ಅಂಬೇಡ್ಕರ್‌ ನಗರ ರಸ್ತೆ ಅಗಲೀಕರಣಕ್ಕಾಗಿ 4 ಎಕರೆ ಸೇನೆಜಾಗ

* ಮಾರತ್‌ಹಳ್ಳಿ ಮಂಜುನಾಥ ನಗರ ಹಾಗೂ ಬಸ್‌ ನಿಲ್ದಾಣಕ್ಕೆ ಸೇನೆ ಜಾಗ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ