Please enable javascript.ನಂದಿನಿ ಇಲ್ಲದೇ ಕರ್ನಾಟಕದಲ್ಲಿ ಯಾವುದೂ ಪೂರ್ಣವಾಗುವುದಿಲ್ಲ: ಸಿಹಿ ತಿಂದು ಬಿಜೆಪಿಗೆ ಕಾಂಗ್ರೆಸ್ ಟಾಂಗ್ - karnataka victory celebration congress takes dig at bjp with nandini sweet - Vijay Karnataka

ನಂದಿನಿ ಇಲ್ಲದೇ ಕರ್ನಾಟಕದಲ್ಲಿ ಯಾವುದೂ ಪೂರ್ಣವಾಗುವುದಿಲ್ಲ: ಸಿಹಿ ತಿಂದು ಬಿಜೆಪಿಗೆ ಕಾಂಗ್ರೆಸ್ ಟಾಂಗ್

Vijaya Karnataka Web 14 May 2023, 3:44 pm
Subscribe

Karnataka Victory Celebration: ಅಮೂಲ್ ಜೊತೆ ನಂದಿನಿ ವಿಲೀನ ಎಂಬ ಸುದ್ದಿ ಚುನಾವಣೆಗೂ ಮುನ್ನ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರವನ್ನು ಪ್ರತಿಪಕ್ಷಗಳು ದಾಳವಾಗಿ ಬಳಸಿದವು. ಈಗ ಇದೇ ನಂದಿನಿ ಸಿಹಿಯನ್ನು ತಿಂದು, ಬಿಜೆಪಿಗೆ ಸಂದೇಶ ರವಾನಿಸಿದ್ದಾರೆ. ಅಭೂತಪೂರ್ವ ಗೆಲುವಿನ ಸಂಭ್ರಮದಲ್ಲಿರುವ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ನಂದಿನಿ ಸಿಹಿಯನ್ನು ಸವಿದು, ಸಂಭ್ರಮಿಸಿದ್ದಾರೆ. ಕನ್ನಡಿಗರ ಅಸ್ಮಿತೆಯ ತಂಟೆಗೆ ಬಂದರೆ, ಕನ್ನಡಿಗರ ಭಾವನೆ ಕೆರಳಿಸಿದರೆ ಫಲಿತಾಂಶ ಇದೇ ಎಂಬ ಸಂದೇಶವನ್ನು ನೀಡಿದ್ದಾರೆ.

ಹೈಲೈಟ್ಸ್‌:

  • ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್‌ಗೆ ಗೆಲುವು
  • 34 ವರ್ಷಗಳ ಬಳಿಕ ದಾಖಲೆ
  • ನಂದಿನಿ ಸಿಹಿ ತಿನಿಸು ತಿಂದು ಸಂಭ್ರಮಿಸಿದ ಕೈ ನಾಯಕರು
ನಂದಿನಿ ಸಿಹಿ ಹಂಚುತ್ತಿರುವ ಕಾಂಗ್ರೆಸ್ ನಾಯಕರು
ಬೆಂಗಳೂರು (ಮೇ. 14): ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ರಾಜ್ಯ ಕಾಂಗ್ರೆಸ್ 34 ವರ್ಷಗಳ ನಂತರ 136 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ದಾಖಲೆ ಸೃಷ್ಟಿಸಿದೆ. ಕಾಂಗ್ರೆಸ್‌ನಲ್ಲಿ ಸಂತಸ ಮನೆ ಮಾಡಿದ್ದು, ನಂದಿನಿ ಸಿಹಿ ತಿನಿಸನ್ನು ತಿಂದು ನಾಯಕರು, ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಈ ಮೂಲಕ ಸಂದೇಶ ರವಾನಿಸಿದ್ದಾರೆ. 'ನಂದಿನಿ ಇಲ್ಲದೆ ಕರ್ನಾಟಕದಲ್ಲಿ ಯಾವುದೂ ಪೂರ್ಣವಾಗುವುದಿಲ್ಲ. ನಂದಿನಿ ಈಗ ಎಲ್ಲ ಕನ್ನಡಿಗರೊಂದಿಗೆ ಅವರನ್ನು ಮೀರಿಸಿದೆ' ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೇವಾಲ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಚುನಾವಣೆಗೂ ಮುನ್ನ ಗುಜರಾತ್‌ನ ಅಮುಲ್ ಬೆಂಗಳೂರಿನಲ್ಲಿ ತಾಜಾ ಹಾಲು ಮತ್ತು ಮೊಸರನ್ನು ಪ್ರಾರಂಭಿಸುವುದಾಗಿ ಘೋಷಿಸಿದ ನಂತರ ನಂದಿನಿ ರಾಜ್ಯದಲ್ಲಿ ಚುನಾವಣಾ ವಿಷಯವಾಯಿತು. ನಂದಿನಿ V/S ಅಮುಲ್ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ದೊಡ್ಡ ಮಟ್ಟದ ವಾರ್‌ಗೆ ಕಾರಣವಾಯಿತು.

ನಮ್ಮ ರಾಜ್ಯದ ಹೆಮ್ಮೆಯ ಅಸ್ಮಿತೆಯಾದ 'ನಂದಿನಿ' ಯ ಪರವಾಗಿ ಕಾಂಗ್ರೆಸ್ ಬಲವಾಗಿ ನಿಂತರೆ, ರಾಜ್ಯದಲ್ಲಿ ಅಮುಲ್ VS ನಂದಿನಿ ಯುದ್ಧ ಅಲ್ಲ ಇದು. ಕರ್ನಾಟಕದ ಮಾರುಕಟ್ಟೆಯಲ್ಲಿ ನಂದಿನಿಯ ಜೊತೆಗೆ ಅಮುಲ್ ಕೂಡಾ ಇರಲಿದೆ ಎಂದು ಬಿಜೆಪಿ ಪ್ರತಿಪಾದಿಸಿತು. ಈ ವಿಚಾರ ಎರಡೂ ಪಕ್ಷಗಳ ನಾಯಕರ ಪ್ರಚಾರದಲ್ಲಿ ಆಹಾರವಾಯಿತು.
Karnataka Results 2023: ಅಮಿತ ವಿಶ್ವಾಸ, ಬಿಎಸ್‌ವೈ ಕಣ್ಣೀರಿನ ಶಾಪ, ಭ್ರಷ್ಟಾಚಾರ: ಇವೇ ಬಿಜೆಪಿ ಸೋಲಿಗೆ ಕಾರಣ ಎಂದ ಓದುಗರು!

ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಲಕ್ಷಾಂತರ ರೈತರ, ಹೈನು ಉತ್ಪಾದಕರ ಹಿತಾಸಕ್ತಿಯನ್ನು ಕಡೆಗಣಿಸಿ, ಕರ್ನಾಟಕದ ಬ್ರಾಂಡ್ ನಂದಿನಿಯನ್ನು ಲೂಟಿ ಮಾಡಲು ಬಿಜೆಪಿಯವರು ನಿಂತಿದ್ದಾರೆ. ಇದನ್ನು ಜನ ಸಹಿಸುವುದಿಲ್ಲ. ಚುನಾವಣೆಯಲ್ಲಿ ಜನ ಸೋಲಿಸುತ್ತಾರೆ" ಎಂದಿದ್ದರು. ಅದರಂತೆ ಬಿಜೆಪಿಯ ಸೋಲಿಗೆ ನಂದಿನಿ ವಿಚಾರವೂ ಒಂದು ಎಂದರೆ ತಪ್ಪಾಗಲಿಕ್ಕಿಲ್ಲ. ಗುಜರಾತಿನ ಅಮೂಲ್ ಜೊತೆ ನಂದಿನಿಯನ್ನು ವಿಲೀನಗೊಳಿಸಬಹುದು ಎಂಬ ವದಂತಿ, ಸುತ್ತಲಿನ ಬೆಳವಣಿಗೆಯನ್ನು ನಿಭಾಯಿಸಲು ಬಿಜೆಪಿ ನಾಯಕರು ಸೋತಿದ್ದಾರೆ.

ಏನಿದು ನಂದಿನಿ -ಅಮುಲ್ ವಿವಾದ..?

ಕೇಂದ್ರ ಸಹಕಾರ ಸಚಿವ, ಗೃಹ ಮಂತ್ರಿ ಅಮಿತ್ ಶಾ 2022, ಡಿಸಂಬರ್‌ನಲ್ಲಿ ರಾಜ್ಯಕ್ಕೆ ಆಗಮಿಸಿದ್ದರು. ಮಂಡ್ಯದಲ್ಲಿ 260 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮೆಗಾ ಡೈರಿಯನ್ನು ಉದ್ಘಾಟಿಸಿ, ಮಾಡಿದ ಭಾಷಣ ಈ ವಿವಾದಕ್ಕೆ ಕಾರಣವಾಯಿತು.

ರೈತರನ್ನು ಉದ್ದೇಶಿಸಿ ಮಾತನಾಡುತ್ತಾ, "ನಂದಿನಿ ಹಾಗೂ ಅಮುಲ್ ಒಟ್ಟಾಗಿ ಕಾರ್ಯ ನಿರ್ವಹಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಮುಂಬರುವ ವರ್ಷಗಳಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಡೈರಿಗಳು ಇರುತ್ತವೆ. ಈ ನಿಟ್ಟಿನಲ್ಲಿ ಗುಜರಾತ್ ಹಾಗೂ ಕರ್ನಾಟಕ ಒಗ್ಗೂಡಿದರೆ ರೈತರಿಗೆ ಅನುಕೂಲವಾಗಲಿದೆ. ಹೈನು ಉದ್ಯಮ ಹೊಸ ದಿಕ್ಕಿನೆಡೆ ಸಾಗಲಿದೆ" ಎಂದಿದ್ದಾರೆ. ಅಮಿತ್ ಶಾ ಅವರ ಈ ಹೇಳಿಕೆ ಬೇರೆ ಬೇರೆ ಸ್ವರೂಪ ಪಡೆಯಿತು.
Karnataka Results 2023: ಮೊದಲ ಕ್ಯಾಬಿನೆಟ್‌ನಲ್ಲಿಯೇ 5 ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ: ಸಿದ್ದರಾಮಯ್ಯ

ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್, ಇದನ್ನ ಅಸ್ತ್ರವಾಗಿ ಬಳಸಿಕೊಂಡು, ಕನ್ನಡಿಗರ ಭಾವನೆಯನ್ನು ಕೆರಳಿಸಿದರು. ಅಮುಲ್ ಜೊತೆ ನಂದಿನಿ ವಿಲೀನವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿ, ದೊಡ್ಡ ಮಟ್ಟದಲ್ಲಿ ಪರ ವಿರೋಧ ಚರ್ಚೆ ನಡೆಯಿತು. ಲಕ್ಷಾಂತರ ರೈತರು, ಕುಟುಂಬಗಳು ಕೆಎಂಎಫ್‌ ನಂಬಿ ಬದುಕುತ್ತಿವೆ. ಅಮುಲ್ -ನಂದಿನಿ ವಿಲೀನದಿಂದ ಅವರೆಲ್ಲ ಭವಿಷ್ಯವೇನು..? ಎಂಬಂತಹ ಮಾತುಗಳು ಕೇಳಿ ಬಂದಿವು. ಕನ್ನಡಿಗರ ಮೇಲೆ ಗುಜರಾತಿಗಳ ದಬ್ಬಾಳಿಕೆ, ಗುಜರಾತಿ ಸಂಸ್ಕೃತಿ ಹೇರಿಕೆ ಎಂಬ ಮಾತುಗಳು ಕೇಳಿ ಬಂದವು. ಇವೆಲ್ಲವನ್ನು ನಿಭಾಯಿಸಲು, ಸತ್ಯವನ್ನು ಜನರಿಗೆ ಅರ್ಥ ಮಾಡಿಸಲು ಬಿಜೆಪಿ ನಾಯಕರು ವಿಫಲವಾಗಿದ್ದಾರೆ. ಪರಿಣಾಮ ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ