Please enable javascript.Vishwanatha Shetty,ಲೋಕಾಯುಕ್ತರಿಗೆ ಇರಿತ: 600 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ - lokayuktha stab case - Vijay Karnataka

ಲೋಕಾಯುಕ್ತರಿಗೆ ಇರಿತ: 600 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ

Vijaya Karnataka 10 Jun 2018, 5:00 am
Subscribe

ಸರಕಾರಿ ಅಧಿಕಾರಿಗಳ ವಿರುದ್ಧ ದಾಖಲಿಸುತ್ತಿದ್ದ ಸುಳ್ಳು ದೂರುಗಳನ್ನು ವಜಾಗೊಳಿಸಿದ್ದರಿಂದ ಕುಪಿತಗೊಂಡ ಆರೋಪಿ ತೇಜ್‌ರಾಜ್‌, ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಿದ್ದ ಎಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ದಾಖಲಿಸಿದ್ದಾರೆ.

viswanatha shetty
ಬೆಂಗಳೂರು: ಸರಕಾರಿ ಅಧಿಕಾರಿಗಳ ವಿರುದ್ಧ ದಾಖಲಿಸುತ್ತಿದ್ದ ಸುಳ್ಳು ದೂರುಗಳನ್ನು ವಜಾಗೊಳಿಸಿದ್ದರಿಂದ ಕುಪಿತಗೊಂಡ ಆರೋಪಿ ತೇಜ್‌ರಾಜ್‌, ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಅವರಿಗೆ ಚಾಕುವಿನಿಂದ ಇರಿದಿದ್ದ ಎಂದು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ದಾಖಲಿಸಿದ್ದಾರೆ.

58 ಸಾಕ್ಷಿಗಳು, 145 ದಾಖಲೆಗಳ ಸಹಿತ 600ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿಯನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಡಿಸಿಪಿ ಜೀನೇಂದ್ರ ಖಣಗಾವಿ 8ನೇ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆರೋಪಿ ತೇಜ್‌ರಾಜ್‌ ತುಮಕೂರಿನ ವಿವಿಧ ಸರಕಾರಿ ಇಲಾಖೆಗಳ ಅಧಿಕಾರಿಗಳ ವಿರುದ್ಧ ಐದು ದೂರುಗಳನ್ನು ದಾಖಲಿಸಿದ್ದ. ಈ ಪೈಕಿ ಮೂರು ಪ್ರಕರಣಗಳ ವಿಚಾರಣೆ ನಡೆದು, ಸಾಕ್ಷ್ಯಾಧಾರಗಳಿಲ್ಲದ್ದರಿಂದ ಮುಕ್ತಾಯಗೊಳಿಸಲಾಗಿತ್ತು. ಸುಳ್ಳು ದೂರು ದಾಖಲಿಸಿ ಸರಕಾರಿ ಅಧಿಕಾರಿಗಳನ್ನು ಸುಲಿಗೆ ಮಾಡಲು ತೇಜ್‌ರಾಜ್‌ ಯತ್ನಿಸುತ್ತಿದ್ದ. ಅದರಂತೆ ಒಬ್ಬರ ಬಳಿ 1.71 ಲಕ್ಷ ರೂ. ಸುಲಿಗೆ ಮಾಡಿದ್ದ. ಲೋಕಾಯುಕ್ತ ಸಂಸ್ಥೆಯಲ್ಲಿ ಪ್ರಕರಣಗಳು ಬಾಕಿ ಉಳಿದಷ್ಟು ದಿನವೂ ತಾನು ಅಧಿಕಾರಿಗಳನ್ನು ಸುಲಿಗೆ ಮಾಡಬಹುದು ಎಂಬ ಸಂಚು ರೂಪಿಸಿದ್ದ. ಆದರೆ, ಮೂರು ಪ್ರಕರಣಗಳು ಮುಕ್ತಾಯಗೊಂಡಿದ್ದ ಕಾರಣ ಲೋಕಾಯುಕ್ತರ ಮೇಲೆ ಕುಪಿತಗೊಂಡಿದ್ದ. ಈ ಕುರಿತು ಲೋಕಾಯುಕ್ತರನ್ನು ಕೇಳಲು ಹೋದಾಗ, '' ಸಾಕ್ಷ್ಯಾಧಾರಗಳು ಇಲ್ಲದಿದ್ದರೆ ಮುಕ್ತಾಯಗೊಳಿಸಲಾಗುತ್ತದೆ. ಅಂತಹ ಬಲವಾದ ಸಾಕ್ಷಿಗಳಿದ್ದರೆ ಒದಗಿಸಿ. ಇಲ್ಲದಿದ್ದರೆ ಸಂಸ್ಥೆಯ ಸಮಯ ವ್ಯರ್ಥ ಮಾಡಬೇಡಿ,''ಎಂದು ಬುದ್ದಿವಾದ ಹೇಳಿದ್ದರು.

ಹೀಗಾಗಿ, ಕುಪಿತಗೊಂಡ ತೇಜ್‌ರಾಜ್‌, ನಗರದ ಸಂಡೇ ಬಜಾರ್‌ನಲ್ಲಿ ಚಾಕು ಖರೀದಿ ಮಾಡಿ ಲೋಕಾಯುಕ್ತಕ್ಕೆ ತೆರಳಿ ನ್ಯಾ.ವಿಶ್ವನಾಥ ಶೆಟ್ಟಿ ಅವರನ್ನು ಕೊಲೆ ಮಾಡಲು ಚಾಕುವಿನಿಂದ ಇರಿದಿದ್ದಎಂದು ಆರೋಪಟಟ್ಟಿಯಲ್ಲಿ ವಿವರಿಸಲಾಗಿದೆ.

ತನಿಖೆ ಬಗ್ಗೆ ಲೋಕಾಯುಕ್ತರ ಅಸಮಾಧಾನ ?

ಪೊಲೀಸರು ನಡೆಸಿರುವ ತನಿಖೆಯ ಬಗ್ಗೆ ಲೋಕಾಯುಕ್ತ ನ್ಯಾ.ವಿಶ್ವನಾಥ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಹೇಳಲಾಗಿದೆ. ಆದರೆ, ಇದನ್ನು ತನಿಖಾಧಿಕಾರಿ ಜೀನೇಂದ್ರ ಖಣಗಾವಿ ಅಲ್ಲಗಳೆದಿದ್ದಾರೆ. ಆರೋಪಪಟ್ಟಿ ಸಿದ್ಧಪಡಿಸಿರುವ ಕುರಿತು ಚರ್ಚೆ ನಡೆಸಲು ಸಿಸಿಬಿ ಅಧಿಕಾರಿಗಳು ಲೋಕಾಯುಕ್ತರನ್ನು ಭೇಟಿ ಮಾಡಿದ್ದರು. ಈ ವೇಳೆ, ''ಆರೋಪಿ ಹೇಳಿದ ಶ್ರೀಕೃಷ್ಣ ಪರಮಾತ್ಮ, ಕಾಗಕ್ಕ, ಕುಬ್ಬಕ್ಕನ ಕಥೆ ಕೇಳಿಕೊಂಡು ಅದನ್ನೇ ನಮೂದಿಸಿದ್ದೀರಿ. ಕೊಲೆ ಯತ್ನದ ಹಿಂದೆ ಬೇರೆ ಶಕ್ತಿಗಳು ಕೆಲಸ ಮಾಡಿರಬಹುದು. ಸುಪಾರಿ ಕೊಟ್ಟು ನನ್ನ ಮೇಲೆ ದಾಳಿ ನಡೆಸಿರಬಹುದು. ಈ ಕೋನದಲ್ಲೂ ನೀವು ತನಿಖೆ ನಡೆಸಬೇಕಿತ್ತು,''ಎಂದು ಲೋಕಾಯುಕ್ತರು ಹೇಳಿದ್ದರೆನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ