ಆ್ಯಪ್ನಗರ

ಲಂಡನ್‌ಗೆ ರೈಲಿನಲ್ಲಿ ಪ್ರಜ್ವಲ್‌ ಪರಾರಿ? ಬಂಧನಕ್ಕೆ ಕೋರ್ಟ್‌ ವಾರಂಟ್‌, ಪಾಸ್‌ಪೋರ್ಟ್‌ ರದ್ದಿಗೂ ಒಪ್ಪಿಗೆ

ಕಳೆದ 22 ದಿನಗಳಿಂದ ವಿದೇಶದಲ್ಲೇ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ ಶನಿವಾರ ವಾರಂಟ್‌ ಜಾರಿ ಮಾಡಿದೆ. ಹಾಗೂ ಅವರ ಪಾಸ್‌ಪೋರ್ಟ್‌ ರದ್ದುಪಡಿಸಲು ಅನುಮತಿ ನೀಡಿದೆ. ಇದರಿಂದ ಎಸ್‌ಐಟಿ ಅಧಿಕಾರಿಗಳು ಸಿಬಿಐ ಮೂಲಕ ಪ್ರಜ್ವಲ್‌ರ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲು ಸಿದ್ಧತೆ ಆರಂಭಿಸಿದ್ದಾರೆ. ಪ್ರಜ್ವಲ್‌ ಬ್ಯಾಂಕ್‌ ಖಾತೆ ಸ್ಥಗಿತಕ್ಕೂ ಎಸ್‌ಐಟಿ ಯತ್ನಿಸುತ್ತಿದೆ.

Curated byಎನ್‌. ಸಚ್ಚಿದಾನಂದ | Vijaya Karnataka 18 May 2024, 11:49 pm

ಹೈಲೈಟ್ಸ್‌:

  • ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಶನಿವಾರ ವಾರಂಟ್‌ ಜಾರಿ ಮಾಡಿದ ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯ
  • ಕಳೆದ 22 ದಿನಗಳಿಂದ ವಿದೇಶದಲ್ಲೇ ತಲೆಮರೆಸಿಕೊಂಡಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ
  • ಪ್ರಜ್ವಲ್‌ ರೇವಣ್ಣ ಅವರ ಪಾಸ್‌ಪೋರ್ಟ್‌ ರದ್ದುಪಡಿಸಲೂ ಅನುಮತಿ ನೀಡಿದ ನ್ಯಾಯಾಲಯ
  • ಸಿಬಿಐ ಮೂಲಕ ಪ್ರಜ್ವಲ್‌ರ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲು ಸಿದ್ಧತೆ ಆರಂಭಿಸಿದ ಎಸ್‌ಐಟಿ
  • ಪ್ರಜ್ವಲ್‌ ಬ್ಯಾಂಕ್‌ ಖಾತೆ ಸ್ಥಗಿತಕ್ಕೂ ಎಸ್‌ಐಟಿ ಯತ್ನ, ರೈಲಿನ ಮೂಲಕ ಎಂಪಿ ಲಂಡನ್‌ಗೆ ಪರಾರಿ ಸಾಧ್ಯತೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Prajwal Revanna (1)
ಬೆಂಗಳೂರು: ಕಳೆದ 22 ದಿನಗಳಿಂದ ವಿದೇಶದಲ್ಲೇ ತಲೆಮರೆಸಿಕೊಂಡಿರುವ ಸಂಸದ ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ನಗರದ 42ನೇ ಎಸಿಎಂಎಂ ನ್ಯಾಯಾಲಯ ವಾರಂಟ್‌ ಜಾರಿ ಮಾಡಿದೆ. ಅಲ್ಲದೆ, ಅವರ ಪಾಸ್‌ಪೋರ್ಟ್‌ ರದ್ದುಪಡಿಸಲು ಅನುಮತಿ ನೀಡಿದೆ. ಇದರೊಂದಿಗೆ ಪ್ರಜ್ವಲ್‌ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ರಾಜ್ಯಕ್ಕೆ ಮರಳದೆ ಕಳ್ಳಾಟವಾಡುತ್ತಿರುವ ಪ್ರಜ್ವಲ್‌ರ ಬಂಧನಕ್ಕೆ ತೀವ್ರ ಕಸರತ್ತು ನಡೆಸಿರುವ ಎಸ್‌ಐಟಿ ಅಧಿಕಾರಿಗಳು, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನಕ್ಕೆ ನ್ಯಾಯಾಲಯದಿಂದ ವಾರಂಟ್‌ ಪಡೆದಿದ್ದಾರೆ.

ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಪ್ರಜ್ವಲ್‌ರ ವಿರುದ್ಧ ಈವರೆಗೆ ಹೊರಡಿಸಿರುವ ನೋಟಿಸ್‌ಗಳ ಕುರಿತು ನ್ಯಾಯಾಲಯ ಎಸ್‌ಐಟಿಯಿಂದ ಮಾಹಿತಿ ಕೇಳಿತ್ತು. ಎಸ್‌ಐಟಿ ಅಧಿಕಾರಿಗಳು, ಪ್ರಜ್ವಲ್‌ರ ವಿರುದ್ಧ ಲುಕ್‌ಔಟ್‌ ನೋಟಿಸ್‌ ಮತ್ತು ಬ್ಲೂಕಾರ್ನರ್‌ ನೋಟಿಸ್‌ ಹೊರಡಿಸಲಾಗಿದೆ. ಆದರೂ ಆರೋಪಿ ವಿಚಾರಣೆಗೆ ಬಂದಿಲ್ಲ. ಹೀಗಾಗಿ, ಅವರ ಬಂಧನಕ್ಕೆ ಜಾಮೀನು ರಹಿತ ವಾರಂಟ್‌ ಜಾರಿ ಮಾಡಬೇಕು ಮತ್ತು ಆರೋಪಿಯ ಪಾಸ್‌ಪೋರ್ಟ್‌ ರದ್ದುಪಡಿಸಲು ಆದೇಶಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಎಸ್‌ಐಟಿಯ ಮನವಿ ಪರಿಗಣಿಸಿದ ನ್ಯಾಯಾಲಯ ಪ್ರಜ್ವಲ್‌ರ ಬಂಧನಕ್ಕೆ ವಾರಂಟ್‌ ಜಾರಿ ಮಾಡಿದೆ ಮತ್ತು ಅವರ ಪಾಸ್‌ಪೋರ್ಟ್‌ ರದ್ದುಪಡಿಸಲು ಅಸ್ತು ಎಂದಿದೆ.

ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಕೇಸ್‌ ಬಗ್ಗೆ ಎಚ್‌ಡಿ ದೇವೇಗೌಡ ಫಸ್ಟ್‌ ರಿಯಾಕ್ಷನ್‌! ಜನ್ಮದಿನದಂದು ಏನೆಲ್ಲಾ ಹೇಳಿದ್ರು?

ರೆಡ್‌ ಕಾರ್ನರ್‌ ನೋಟಿಸ್‌ಗೆ ಸಿದ್ಧತೆ


ರೆಡ್‌ ಕಾರ್ನರ್‌ ನೋಟಿಸ್‌ ಎನ್ನುವುದು ಹಸ್ತಾಂತರ, ಶರಣಾಗತಿ ಅಥವಾ ಕಾನೂನು ಕ್ರಮಕ್ಕೆ ಬಾಕಿ ಇರುವ ವ್ಯಕ್ತಿಯನ್ನು ಪತ್ತೆ ಹಚ್ಚಲು ಹಾಗೂ ತಾತ್ಕಾಲಿಕವಾಗಿ ಬಂಧಿಸುವುದಕ್ಕೆ ಜಾಗತಿಕವಾಗಿ ಕಾನೂನು ಜಾರಿಗೊಳಿಸಲು ಮಾಡುವ ವಿನಂತಿಯಾಗಿದೆ. ನ್ಯಾಯಾಲಯ ಬಂಧನಕ್ಕೆ ವಾರಂಟ್‌ ಹೊರಡಿಸಿರುವ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಸಿಬಿಐ ಮೂಲಕ ಪ್ರಜ್ವಲ್‌ರ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ಹೊರಡಿಸಲು ಸಿದ್ಧತೆ ಆರಂಭಿಸಿದ್ದಾರೆ. ರೆಡ್‌ ಕಾರ್ನರ್‌ ನೋಟಿಸ್‌ ಬಳಿಕ ಪ್ರಜ್ವಲ್‌ರ ಪಾಸ್‌ಪೋರ್ಟ್‌ ರದ್ದಾಗಲಿದೆ. ಇದರಿಂದ ಅವರ ಬಂಧನಕ್ಕೆ ಸಹಾಯವಾಗಲಿದೆ.

ಬೆಂಗಳೂರಿನಿಂದ ಹಣ ರವಾನೆ


ಬಂಧನ ಭೀತಿಯಿಂದಾಗಿ ರಾಜ್ಯಕ್ಕೆ ಮರಳದೆ ವಿದೇಶದಲ್ಲೇ ಉಳಿದಿರುವ ಪ್ರಜ್ವಲ್‌ರ ವಿರುದ್ಧ ಮತ್ತಷ್ಟು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿರುವ ಎಸ್‌ಐಟಿ, ಅವರ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸುವ ಪ್ರಯತ್ನ ಆರಂಭಿಸಿದೆ. ಪ್ರಜ್ವಲ್‌ರ ಬ್ಯಾಂಕ್‌ ಖಾತೆಗೆ ಬೆಂಗಳೂರಿನಿಂದ ಲಕ್ಷಾಂತರ ರೂಪಾಯಿ ಹಣ ವರ್ಗಾವಣೆಯಾಗಿದೆ. ಅವರು ವಿದೇಶಕ್ಕೆ ಪರಾರಿಯಾದ ದಿನದಿಂದಲೂ ಹಲವು ಬ್ಯಾಂಕ್‌ಗಳಿಂದ ಖಾತೆಗೆ ಹಣ ಸಂದಾಯ ಮಾಡಲಾಗಿದೆ. ಹಣ ವರ್ಗಾಯಿಸಿರುವ ವ್ಯಕ್ತಿಗಳ ಮಾಹಿತಿಯನ್ನು ಬ್ಯಾಂಕ್‌ಗಳಿಂದ ಸಂಗ್ರಹಿಸಲಾಗಿದೆ. ಆದರೆ, ತನಿಖೆಯ ಕಾರಣಕ್ಕೆ ಆ ಮಾಹಿತಿ ಬಹಿರಂಗಪಡಿಸುವುದಿಲ್ಲ ಎಂದು ಎಸ್‌ಐಟಿ ಮೂಲಗಳು ಹೇಳಿವೆ.

100 ಕೋಟಿ ಆಫರ್: ದೇವರಾಜೇಗೌಡ ಆರೋಪದಿಂದ ಕಾಂಗ್ರೆಸ್ ನಾಯಕರು ವಿಚಲಿತ! ಬಿಜೆಪಿಗೂ ಸಿಕ್ಕ ಅಸ್ತ್ರ
ಲುಕ್‌ಔಟ್‌ ನೋಟಿಸ್‌ ಮತ್ತು ಬ್ಲೂಕಾರ್ನರ್‌ ನೋಟಿಸ್‌ ಹೊರಡಿಸಿದರೂ ಪ್ರಜ್ವಲ್‌ ವಿಚಾರಣೆಗೆ ಹಾಜರಾಗಿಲ್ಲ. ವಿದೇಶದಲ್ಲೇ ಇರುವ ಅವರಿಗೆ ಹಣಕಾಸಿನ ಹರಿವು ತಡೆಯುವ ನಿಟ್ಟಿನಲ್ಲಿ ಅವರ ಬ್ಯಾಂಕ್‌ ಖಾತೆ ಸ್ಥಗಿತಗೊಳಿಸುವ ಪ್ರಯತ್ನ ಆರಂಭಿಸಿದ್ದೇವೆ. ನ್ಯಾಯಾಲಯದ ಅನುಮತಿ ಪಡೆದು ಬ್ಯಾಂಕ್‌ ಖಾತೆ ಸ್ಥಗಿತಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಲಂಡನ್‌ಗೆ ಪರಾರಿ?


ಪ್ರಜ್ವಲ್‌ ರೇವಣ್ಣ ಲಂಡನ್‌ಗೆ ಪಲಾಯನ ಮಾಡಿರುವ ಬಗ್ಗೆ ಎಸ್‌ಐಟಿ ಅಧಿಕಾರಿಗಳಿಗೆ ಇಂಟರ್‌ಪೋಲ್‌ ಮಾಹಿತಿ ನೀಡಿದೆ. ಇಂಗ್ಲೆಂಡ್‌ನಲ್ಲಿರುವ ಭಾರತ ಮೂಲದ ಉದ್ಯಮಿಯೊಬ್ಬರ ಸಲಹೆಯಂತೆ ಪ್ರಜ್ವಲ್‌ ಲಂಡನ್‌ಗೆ ಹೋಗಿದ್ದಾರೆ. ಆ ಉದ್ಯಮಿಯೇ ಪ್ರಜ್ವಲ್‌ಗೆ ಆಶ್ರಯ ಕಲ್ಪಿಸಿ, ಹಣಕಾಸು ನೆರವು ನೀಡಿದ್ದಾರೆ ಎಂದು ಎಸ್‌ಐಟಿ ಉನ್ನತ ಮೂಲಗಳು ಹೇಳಿವೆ. ವಿಮಾನದಲ್ಲಿ ಪ್ರಯಾಣಿಸಿದರೆ ಸುಳಿವು ಸಿಗಬಹುದೆಂಬ ಕಾರಣಕ್ಕೆ ಲಂಡನ್‌ಗೆ ತೆರಳಲು ರೈಲು ಪ್ರಯಾಣ ಆಯ್ಕೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜ್ವಲ್‌ ತಪ್ಪು ಮಾಡಿರುವುದು ಸಾಬೀತಾದರೆ ಕಾನೂನು ಕ್ರಮ ಜರುಗಿಸಲಿ. ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಸಿಗಬೇಕು. ರೇವಣ್ಣ ವಿರುದ್ಧ ಪ್ರಕರಣ ಸೃಷ್ಟಿಸಲಾಗಿದ್ದು, ಅದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಜೂನ್‌ 4ರ ನಂತರ ಮಾತನಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಶನಿವಾರ ಪ್ರತಿಕ್ರಿಯಿಸಿದ್ದಾರೆ.
ಲೇಖಕರ ಬಗ್ಗೆ
ಎನ್‌. ಸಚ್ಚಿದಾನಂದ
2019ರಿಂದ ವಿಜಯ ಕರ್ನಾಟಕ ವೆಬ್‌ನಲ್ಲಿ ಉಪಸಂಪಾದಕರಾಗಿದ್ದಾರೆ. 2015ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು ಸದ್ಯ ‘ವಿಕ’ ವೆಬ್‌ನ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ