ಆ್ಯಪ್ನಗರ

ಕಯ್ಯೂರಿನಲ್ಲಿ ಬ್ರಿಟಿಷರ ಕಾಲದ ನಾಣ್ಯಗಳು ಪತ್ತೆ

ವಿವಿಧ ಐತಿಹಾಸಿಕ ಕುರುಹುಗಳು ಪತ್ತೆಯಾದ ಜಿಲ್ಲೆಯ ದಕ್ಷಿಣ ಭಾಗದ ಕಯ್ಯೂರಿನಲ್ಲಿ ಬ್ರಿಟಿಷರ ಕಾಲಘಟ್ಟದ ನಾಣ್ಯಗಳು ಪತ್ತೆಯಾಗಿವೆ...

ವಿಕ ಸುದ್ದಿಲೋಕ 11 Aug 2017, 8:10 pm

ಲವೀನ ಪೆರ್ಮುದೆ ಕಾಸರಗೋಡು

ವಿವಿಧ ಐತಿಹಾಸಿಕ ಕುರುಹುಗಳು ಪತ್ತೆಯಾದ ಜಿಲ್ಲೆಯ ದಕ್ಷಿಣ ಭಾಗದ ಕಯ್ಯೂರಿನಲ್ಲಿ ಬ್ರಿಟಿಷರ ಕಾಲಘಟ್ಟದ ನಾಣ್ಯಗಳು ಪತ್ತೆಯಾಗಿವೆ. ಕಯ್ಯೂರು ಸಮೀಪದ ಪಾರಮ್ಮಲ್‌ ದುರ್ಗಾ ಭಗವತೀ ಕ್ಷೇತ್ರ ನವೀಕರಣ ಸಂದರ್ಭ ನಾಣ್ಯಗಳು ಪತ್ತೆಯಾಗಿವೆ.

ಮುಯಕ್ಕೋಂ ನಿವಾಸಿ ವಿ. ಸಜಿತ್‌ ಕುಮಾರ್‌ ಸಂಗ್ರಹಿಸಿದ ಈ ನಾಣ್ಯಗಳು ಈಸ್ಟ್‌ ಇಂಡಿಯಾ ಕಂಪನಿಯ ಕಾಲಘಟ್ಟದಿಂದ ಜಾರ್ಜ್‌ ಆರನೇಯವನವರೆಗಿನ ಕಾಲ ಘಟ್ಟದ ಇತಿಹಾಸವನ್ನು ಸಾರುತ್ತಿವೆ ಎಂದು ಇತಿಹಾಸ ಸಂಶೋಧಕ ನಂದ ಕುಮಾರ್‌ ಕೋರೋತ್‌ ಹೇಳುತ್ತಾರೆ.

ತಾಮ್ರದ ಹೊದಿಕೆ ಇರುವ ಹದಿಮೂರು ನಾಣ್ಯಗಳು ಪತ್ತೆಯಾಗಿವೆ. ಕ್ಷೇತ್ರದ ಮಂದಿರದ ಮೇಲೆ ವರ್ಷಗಳ ಹಿಂದೆ ತಾಮ್ರ ಅಳವಡಿಸಿದಾಗ ಪ್ಲೇಟ್‌ ವಾಷರ್‌ ಆಗಿ ಉಪಯೋಗಿಸಿದ ನಾಣ್ಯಗಳು ಇದಾಗಿವೆ ಎಂದು ನಂದ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ವಾಶರ್‌ ಆಗಿ ಉಪಯೋಗಿಸಲು ಮಧ್ಯ ಭಾಗದಲ್ಲಿ ವೃತ್ತಾಕೃತಿಯಲ್ಲಿ ರಂಧ್ರ ಮಾಡಿ ಬ್ರಿಟಿಷರು ನಾಣ್ಯಗಳಿಗೆ ಈ ರೂಪ ನೀಡಿದ್ದರು. ಕ್ಷೇತ್ರ ನವೀಕರಣ ಸಂದರ್ಭ ನಾಣ್ಯಗಳನ್ನು ಸಂಗ್ರಹಿಸಿದ್ದ ಸಜೀಶ್‌ ಕುಮಾರ್‌ ಅದರ ವಿಶೇಷತೆಗಳನ್ನು ಮನವರಿಕೆ ಮಾಡಿ ಮನೆಗೆ ಕೊಂಡೊಯ್ದು ಸಲ್ಫ್ಯೂರಿಕ್‌ ಆ್ಯಸಿಡ್‌ ಹಾಗೂ ಬ್ರಷ್‌ ಬಳಸಿ ತೊಳೆದು ನಾಣ್ಯಗಳ ರೂಪ ಹಾಗೂ ಅದರಲ್ಲಿರುವ ಬರಹವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದರು.

ಟೆಂಪೋ ಚಾಲಕನಾದ ಸಜೀಶ್‌ ಕುಮಾರ್‌ ನಾಣ್ಯಗಳ ಇತಿಹಾಸವನ್ನು ತಿಳಿಯುವ ಕುತೂಹಲದಿಂದ ಅಂತರ್ಜಾಲದಲ್ಲಿ ತಡಕಾಡಿ ನಾಣ್ಯಗಳ ವಿಶೇಷತೆಯನ್ನು ತಿಳಿದು ಕೊಂಡಿದ್ದರು. ಇದನ್ನು ದೃಢೀಕರಿಸಲು ಕಾಞಂಗಾಡ್‌ ನೆಹರೂ ಕಲಾ ಮತ್ತು ವಿಜ್ಞಾನ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ನಂದ ಕುಮಾರ್‌ ಕೋರೋತ್‌, ಸಿ.ಪಿ. ರಾಜೀವನ್‌ ಅವರನ್ನು ಸಂಪರ್ಕಿಸಿದ್ದರು. ಸಜೀಶ್‌ ಅವರು ತಿಳಿದುಕೊಂಡಂತೆ ಇವು ಚಕ್ರವರ್ತಿ ಜಾರ್ಜ್‌ ಆರನೇಯವನ ಕಾಲಘಟ್ಟದ ಹಾಗೂ ಈಸ್ಟ್‌ ಇಂಡಿಯಾ ಕಂಪನಿಯ ಕಾಲಘಟ್ಟದ ನಾಣ್ಯಗಳಾಗಿವೆ ಎಂಬುದನ್ನು ಇತಿಹಾಸ ಸಂಶೋಧಕರು ಖಚಿತಪಡಿಸಿದ್ದಾರೆ.

ಸಜೀಶ್‌ ಅವರು ಸಂಗ್ರಹಿಸಿದ ನಾಣ್ಯಗಳ ಕಾಲಘಟ್ಟ ಹಾಗೂ ಅಂದಿನ ಉಪಯೋಗವನ್ನು ಇತಿಹಾಸ ಸಂಶೋಧಕರು ಪತ್ತೆಹಚ್ಚಿದ್ದಾರೆ. ಸಂಗ್ರಹಿಸಿದ ನಾಣ್ಯಗಳಲ್ಲಿ ಹೆಚ್ಚಿನವು ಮುಖಾಮುಖಿ ನೋಡುವ ಎರಡು ಸಿಂಹಗಳು, ನಡುವಲ್ಲಿ ಎರಡು ಧ್ವಜಗಳು ಇರುವ ವಿಲಿಯಂ ಬೆನೆಡಿಕ್ಟ್ನ ಕಾಲಘಟ್ಟದಲ್ಲಿ 1835ರಲ್ಲಿ ಹೊರತಂದ ಈಸ್ಟ್‌ ಇಂಡಿಯಾ ಕಂಪನಿಯ ನಾಣ್ಯಗಳಾಗಿವೆ. ಇದರಲ್ಲಿ ರೂಪಾಯಿ ಎಂದು ಪರ್ಷಿಯನ್‌ ಭಾಷೆಯಲ್ಲಿ ಹಾಗೂ ಈಸ್ಟ್‌ ಇಂಡಿಯಾ ಕಂಪನಿ ಎಂದು ಇಂಗ್ಲಿಷಿನಲ್ಲಿ ಬರೆಯಲಾಗಿದೆ. ಇಸವಿಯನ್ನು ಕೂಡ ನಾಣ್ಯದಲ್ಲಿ ಬರೆಯಲಾಗಿದೆ.

ಕೆಲವು ನಾಣ್ಯಗಳು ವಿಕ್ಟೋರಿಯ ರಾಣಿಯ ಕಾಲಘಟ್ಟದಲ್ಲಿ ಚಾಲ್ತಿಯಲ್ಲಿದ್ದ ನಾಣ್ಯಗಳಾಗಿವೆ. ಒಂದು ವಾರದ ಹಿಂದೆ ಕ್ಷೇತ್ರ ಪದಾಧಿಕಾರಿಗಳಿಗೆ ಮಧ್ಯ ಭಾಗದಲ್ಲಿ ರಂಧ್ರಗಳಿಲ್ಲದ 1936ರಲ್ಲಿ ಚಕ್ರವರ್ತಿ ಜಾರ್ಜ್‌ ಆರನೇಯವನ ಕಾಲಾವಧಿಯಲ್ಲಿ ಚಾಲ್ತಿಯಲ್ಲಿದ್ದ ನಾಣ್ಯಗಳು ಲಭಿಸಿದ್ದವು. ಎಲ್ಲ ನಾಣ್ಯಗಳನ್ನು ತಾಮ್ರದಿಂದ ತಯಾರಿಸಲಾಗಿದೆ. ಈ ನಾಣ್ಯಗಳ ಪತ್ತೆಯ ಮೂಲಕ ಪಾರಮ್ಮಲ್‌ ಶ್ರೀ ದುರ್ಗಾ ಭಗವತೀ ಕ್ಷೇತ್ರ ಕಾಸರಗೋಡಿನ ಇತಿಹಾಸದಲ್ಲಿ ಮತ್ತೊಂದು ಪುಟವನ್ನು ಸೇರಲು ಕಾರಣವಾಗಿದೆ.

*ಕಯ್ಯೂರು ಆಸುಪಾಸಿನಲ್ಲಿ ಶತಮಾನಗಳ ಹಿಂದಿನ ಇತಿಹಾಸಕ್ಕೆ ಸಂಬಂಧಿಸಿದ ಅನೇಕ ಕುರುಹುಗಳು ಪತ್ತೆಯಾಗಿದ್ದು, ಇದು ಇತಿಹಾಸ ಪ್ರಸಿದ್ಧ ಪ್ರದೇಶವಾಗಿದೆ. ಸಜೀಶ್‌ ಪತ್ತೆಹಚ್ಚಿದ ನಾಣ್ಯಗಳನ್ನು ಕ್ಷೇತ್ರದ ಮಂದಿರದ ಮೇಲೆ ತಾಮ್ರ ಹಾಸುವಾಗ ಪ್ಲೇಟ್‌ ವಾಶರ್‌ ಆಗಿ ತಾಮ್ರದ ನಾಣ್ಯಗಳನ್ನು ಬಳಸುತ್ತಿದ್ದುದರಿಂದ ಇವುಗಳನ್ನು ಕ್ಷೇತ್ರದಲ್ಲಿ ಉಪಯೋಗಿಸಲು ಕಾರಣವಾಗಿದೆ.

-ನಂದ ಕುಮಾರ್‌ ಕೋರೋತ್‌, ಇತಿಹಾಸ ಸಂಶೋಧಕರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ