Please enable javascript.ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ಆತಂಕ ಬೇಡ - kasaragod news in kannada - Vijay Karnataka

ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ಆತಂಕ ಬೇಡ

Vijaya Karnataka Web 17 Apr 2017, 9:00 am
Subscribe

ಸರಕಾರ ರಾಜ್ಯದಲ್ಲಿ 10ನೇ ತರಗತಿ ತನಕ ಮಲೆಯಾಳ ಭಾಷೆ ಕಡ್ಡಾಯಗೊಳಿಸುವ ಅಧ್ಯಾದೇಶ ಹೊರಡಿಸಿದೆ. ಆದರೆ ಇದರಿಂದ ಕನ್ನಡ ಭಾಷಾ ಅಲ್ಪಸಂಖ್ಯಾತರು ಯಾವುದೇ ಆತಂಕ ಪಡಬೇಕಾಗಿಲ್ಲ.ಕನ್ನಡ ಶಾಲೆಗಳಲ್ಲಿ ಮಲೆಯಾಳ ಹೇರುವ ಧೋರಣೆ ಸರಕಾರಕ್ಕಿಲ್ಲ. ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷ ಣೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಖುದ್ದಾಗಿ ಚರ್ಚಿಸಿದ್ದೇನೆ ಎಂದು ರಾಜ್ಯ ಉಸ್ತುವಾರಿ ಸಚಿವ, ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್‌ ಸ್ಪಷ್ಟಪಡಿಸಿದ್ದಾರೆ.

kasaragod news in kannada
ಕನ್ನಡ ಭಾಷಾ ಅಲ್ಪಸಂಖ್ಯಾತರಿಗೆ ಆತಂಕ ಬೇಡ

ಕಾಸರಗೋಡು: ಸರಕಾರ ರಾಜ್ಯದಲ್ಲಿ 10ನೇ ತರಗತಿ ತನಕ ಮಲೆಯಾಳ ಭಾಷೆ ಕಡ್ಡಾಯಗೊಳಿಸುವ ಅಧ್ಯಾದೇಶ ಹೊರಡಿಸಿದೆ. ಆದರೆ ಇದರಿಂದ ಕನ್ನಡ ಭಾಷಾ ಅಲ್ಪಸಂಖ್ಯಾತರು ಯಾವುದೇ ಆತಂಕ ಪಡಬೇಕಾಗಿಲ್ಲ.ಕನ್ನಡ ಶಾಲೆಗಳಲ್ಲಿ ಮಲೆಯಾಳ ಹೇರುವ ಧೋರಣೆ ಸರಕಾರಕ್ಕಿಲ್ಲ. ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷ ಣೆ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಖುದ್ದಾಗಿ ಚರ್ಚಿಸಿದ್ದೇನೆ ಎಂದು ರಾಜ್ಯ ಉಸ್ತುವಾರಿ ಸಚಿವ, ಕಂದಾಯ ಖಾತೆ ಸಚಿವ ಇ.ಚಂದ್ರಶೇಖರನ್‌ ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಿಗೆ ಮಲೆಯಾಳ ಕಡ್ಡಾಯ ಹೇರಿಕೆಯ ಆತಂಕದ ಬಗ್ಗೆ ಕನ್ನಡ ಸಂಘಟನೆಯ ನಿಯೋಗ ಅವರನ್ನು ಭಾನುವಾರ ಭೇಟಿ ಮಾಡಿ ಸಚಿವರೊಂದಿಗೆ ಚರ್ಚಿಸಿದಾಗ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದರು.

ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಮಾತೃಭಾಷೆಯನ್ನು ನಿರಂತರ ಅವಗಣಿಸುತ್ತಿದ್ದು, ಆ ಶಾಲೆಗಳಿಗೆ ಕಡಿವಾಣ ಹಾಕುವ ಸಲುವಾಗಿಯೂ, ಶಾಲೆಗಳಲ್ಲಿ ಮಲೆಯಾಳ ಮಾತನಾಡಿದರೆ ಶಿಕ್ಷೆಯನ್ನು ನೀಡುವಂತಹ ಕ್ರಮ ಕೆಲವು ಶಾಲೆಗಳಲ್ಲಿ ನಡೆಯುತ್ತದೆ. ಇದಕ್ಕೆಲ್ಲ ಪರಿಹಾರವೆಂಬಂತೆ 10ನೇ ತರಗತಿ ತನಕ ಮಲೆಯಾಳ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಅಧ್ಯಾದೇಶ ಹೊರಡಿಸಲಾಗಿದೆ. ಭಾಷಾ ಅಲ್ಪಸಂಖ್ಯಾತರನ್ನು ದ್ರೋಹಿಸುವ ಯಾವುದೇ ಕ್ರಮವಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

ಕನ್ನಡ ಶಾಲೆಗಳಲ್ಲಿ ಮಲೆಯಾಳ ಕಡ್ಡಾಯವಲ್ಲ: ಕನ್ನಡ ಶಾಲೆಗಳಲ್ಲಿ ಮಲೆಯಾಳ ಭಾಷೆ ಕಡ್ಡಾಯವಾಗಿ ಕಲಿಸಬೇಕೆಂಬ ನಿಯಮವೇನೂ ಇಲ್ಲ. ಪ್ರಸ್ತುತ ಯಾವ ರೀತಿಯಲ್ಲಿ ಸಂಪೂರ್ಣವಾಗಿ ಕನ್ನಡ ಮಾಧ್ಯಮವಿರುವ ಹಾಗೂ ಕನ್ನಡ ಮತ್ತು ಮಲೆಯಾಳ ಮಾಧ್ಯಮ ಶಾಲೆಗಳಿವೆಯೋ ಅದು ಹಾಗೆಯೇ ಮುಂದುವರಿಯುತ್ತದೆ. ಬದಲಾಗಿ ಕನ್ನಡ ಶಾಲೆಗಳಿರುವ ಆ ಪ್ರದೇಶದಲ್ಲಿ ಮಲೆಯಾಳ ಕಲಿಯುವ ಅನುಪಾತಿಕವಾದ ವಿದ್ಯಾರ್ಥಿಗಳಿದ್ದರೆ ಒಂದನೇ ತರಗತಿಯಿಂದ ಮಲೆಯಾಳ ತರಗತಿಯನ್ನು ಆರಂಭಿಸಲಾಗುವುದು. ಅಲ್ಲದೇ ಕಡ್ಡಾಯವಾಗಿ ಕನ್ನಡ ಶಾಲೆಗಳಲ್ಲಿ ಮಲೆಯಾಳ ತರಗತಿ ಆರಂಭಿಸಬೇಕೆಂಬುದಿಲ್ಲ ಎಂದು ಸಚಿವರು ತಿಳಿಸಿದರು.

ಜಿಲ್ಲಾಧಿಕಾರಿಗೆ ಸೂಚನೆ: ಮಲೆಯಾಳ ಕಡ್ಡಾಯ ಅಧ್ಯಾದೇಶದಿಂದಾಗಿ ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಲ್ಲಿ ತಲೆದೂರಿದ ಆತಂಕಗಳ ನಿವಾರಣೆಗೆ ಜಿಲ್ಲಾಧಿಕಾರಿ ಖುದ್ದಾಗಿ ಸಮಾಲೋಚಿಸಿ ಕ್ರಮ ಕೈಗೊಳ್ಳಬೇಕೆಂದು ಸಚಿವ ಇ.ಚಂದ್ರಶೇಖರನ್‌ ಜಿಲ್ಲಾಧಿಕಾರಿ ಜೀವನ್‌ಬಾಬು ಕೆ. ಅವರಿಗೆ ನಿರ್ದೇಶ ನೀಡಿದ್ದಾರೆ. ಭಾಷಾ ಅಲ್ಪಸಂಖ್ಯಾತರ ಜಿಲ್ಲಾ ಮಟ್ಟದ ಸಭೆ ಸಹಿತ ಎಲ್ಲ ಕಾರ‍್ಯಗಳಲ್ಲಿ ಜಿಲ್ಲಾಧಿಕಾರಿ ಮೇಲುಸ್ತುವಾರಿಯಲ್ಲಿಯೇ ಸಭೆ ನಡೆಯಬೇಕು ಎಂದು ನಿರ್ದೇಶ ನೀಡಿದ್ದಾರೆ. ಇತ್ತೀಚೆಗೆ ನಡೆದ ಭಾಷಾ ಅಲ್ಪಸಂಖ್ಯಾತರ ಜಿಲ್ಲಾಮಟ್ಟದ ಸಭೆ ಜಿಲ್ಲಾಧಿಕಾರಿ ಅನುಪಸ್ಥಿತಿಯಲ್ಲಿ ನಡೆದ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು.

ಮಸೂದೆಯಲ್ಲಿ ತಿದ್ದುಪಡಿ ಮಾಯ: ಕ್ರಮ

ಕೇರಳ ಸರಕಾರ 2015ರಲ್ಲಿ ವಿಧಾನಸಭೆಯಲ್ಲಿ ಮಂಡಿಸಿದ ಮಲೆಯಾಳ ಭಾಷಾ ವಿಧೇಯಕದಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷ ಣೆಯ ಬಗ್ಗೆ ಉಲ್ಲೇಖಿಸಲಾದ ಎರಡು ತಿದ್ದುಪಡಿಗಳು ರಾಷ್ಟ್ರಪತಿಯವರ ಅಂಕಿತಕ್ಕೆ ಕಳುಹಿಸಿಕೊಡುವ ಸಂದರ್ಭದಲ್ಲಿ ಬಿಟ್ಟುಹೋದ ಗಂಭೀರ ವಿಚಾರದ ಬಗ್ಗೆ ಸಚಿವರ ಗಮನಕ್ಕೆ ತರಲಾಯಿತು.ಇದರ ಬಗ್ಗೆ ಪರಿಶೀಲಿಸಲಾಗುವುದು ಎಂದು ಸಚಿವ ಇ. ಚಂದ್ರಶೇಖರನ್‌ ತಿಳಿಸಿದ್ದಾರೆ.

ರಾಜ್ಯದಲ್ಲಿ ಮಲೆಯಾಳ ಕಡ್ಡಾಯ ಅಧ್ಯಾದೇಶದ ಮೂಲಕ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಆಗುವಂತಹ ಸಮಸ್ಯೆಗಳ ಕುರಿತು ಈಗಾಗಲೇ ಕಾಸರಗೋಡು ಶಾಸಕ ಎನ್‌.ಎ. ನೆಲ್ಲಿಕುನ್ನು, ಉದುಮ ಶಾಸಕ ಕೆ. ಕುಂಞಿರಾಮನ್‌ ಮೊದಲಾದವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿದೆ. ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷ ಣೆಯನ್ನು ಮಾಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.

ಈ ಬಗ್ಗೆ ಸಚಿವರನ್ನು ಭೇಟಿಯಾದ ನಿಯೋಗದಲ್ಲಿ ಕರ್ನಾಟಕ ಸಮಿತಿ ಅಧ್ಯಕ್ಷ ಮುರಳೀಧರ ಬಳ್ಳಕ್ಕುರಾಯ, ಕನ್ನಡ ಸಮನ್ವಯ ಸಮಿತಿ ಅಧ್ಯಕ್ಷ ಪುರುಷೋತ್ತಮ ಮಾಸ್ತರ್‌, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್‌.ವಿ. ಭಟ್ಟ, ಜಯರಾಮ ಮಂಜತ್ತಾಯ ಎಡನೀರು, ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧಿಕೃತ ವಕ್ತಾರ ವಿಶಾಲಾಕ್ಷ ಪುತ್ರಕಳ, ಜೋಗಿಂದ್ರನಾಥ್‌ ಮೊದಲಾದವರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ